ADVERTISEMENT

ಆ.31ರಂದು ಅಫ್ಗನ್‌ನಿಂದ ಅಮೆರಿಕ ಸೇನೆ ವಾಪಸ್ ಪೂರ್ಣ: ಜೋ ಬೈಡನ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 6:59 IST
Last Updated 9 ಜುಲೈ 2021, 6:59 IST
ಅಮೆರಿಕ ಅಧ್ಯಕ್ಷ ಜೋ ಬೈಡನ್
ಅಮೆರಿಕ ಅಧ್ಯಕ್ಷ ಜೋ ಬೈಡನ್   

ವಾಷಿಂಗ್ಟನ್:ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಯೋಜನೆ ಆಗಸ್ಟ್ 31ರಂದು ಪೂರ್ಣಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಈ ಕುರಿತು ಮಹತ್ವದ ಭಾಷಣ ಮಾಡಿರುವ ಬೈಡನ್, ಅಫ್ಗಾನಿಸ್ತಾನದಲ್ಲಿ ಅಮೆರಿಕ ತನ್ನ ಗುರಿ ಸಾಧಿಸಿದ್ದು, ಸೇನೆ ಹಿಂತೆಗೆದುಕೊಳ್ಳಲು ಇದು ಸೂಕ್ತ ಸಮಯ ಎಂದಿದ್ದಾರೆ.

'ಅಫ್ಗಾನಿಸ್ತಾನದಲ್ಲಿ ನಮ್ಮ 'ಮಿಲಿಟರಿ ಮಿಷನ್' ಆಗಸ್ಟ್ 31ರಂದು ಪೂರ್ಣಗೊಳ್ಳಲಿದೆ. ಸೇನೆ ಹಿಂತೆಗೆದುಕೊಳ್ಳುವ ನೀತಿಯು ಸುರಕ್ಷಿತ ಹಾಗೂ ಕ್ರಮಬದ್ಧ ರೀತಿಯಲ್ಲಿ ಮುಂದುವರಿಯುತ್ತಿದೆ. ನಮ್ಮ ಸೈನಿಕರ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ' ಎಂದು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಅಮೆರಿಕದ ಎಲ್ಲ ಪಡೆಗಳನ್ನು ಹಿಂತೆಗೆದುಕೊಳ್ಳುವುದರಿಂದ ಅಫ್ಗಾನಿಸ್ತಾನ ಮತ್ತೊಮ್ಮೆ ತಾಲಿಬಾನಿ ಉಗ್ರರ ವಶವಾಗಲಿದೆ ಎಂಬುದನ್ನು ಬೈಡನ್ ನಿರಾಕರಿಸಿದರು.

'ಅಫ್ಗಾನ್ ಸರ್ಕಾರ ಹಾಗೂ ಅಲ್ಲಿನ ನಾಯಕತ್ವ ಒಗ್ಗಟ್ಟಾಗಬೇಕಿದೆ. ಅವರು ಸರ್ಕಾರವನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಗೆ ಸಾಮರ್ಥ್ಯವಿದೆಯೇ ಎಂಬುದು ಪ್ರಶ್ನೆಯಲ್ಲ. ಅವರ ಬಳಿ ಸೈನ್ಯ, ಉಪಕರಣಗಳಿವೆ. ಅವರು ಜೊತೆಗೂಡಿ ಅದನ್ನು ಸಾಧಿಸುವರೇ ಎಂಬುದು ಪ್ರಶ್ನೆಯಾಗಿದೆ. ಅಫ್ಗನ್‌ಗೆ ಬೇಕಾದ ಎಲ್ಲ ಅಗತ್ಯ ನೆರವನ್ನು ನಾವು ಖಚಿತಪಡಿಸಲಿದ್ದೇವೆ' ಎಂದರು.

'ಅಫ್ಗಾನಿಸ್ತಾನಕ್ಕೆ ನಾವು ದೇಶ ನಿರ್ಮಾಣಕ್ಕಾಗಿ ಹೋಗಿಲ್ಲ. ಅಮೆರಿಕ ಸೇರಿದಂತೆ ಜಗತ್ತಿಗೆ ಮಾರಕವಾಗಿರುವ ಉಗ್ರರ ನಿರ್ಮೂಲನೆ ಮಾಡುವುದು ನಮ್ಮ ಗುರಿಯಾಗಿತ್ತು. ಅಫ್ಗನ್ ಭವಿಷ್ಯವನ್ನು ರೂಪಿಸುವುದು ಮತ್ತು ದೇಶವನ್ನು ಹೇಗೆ ನಡೆಸಬೇಕೆಂದು ನಿರ್ಧರಿಸುವುದು ಆ ದೇಶದ ಜನರ ಹಕ್ಕು ಮತ್ತು ಹೊಣೆಯಾಗಿದೆ' ಎಂದರು.

ಈ ಹಿಂದೆ ಏಪ್ರಿಲ್‌ನಲ್ಲಿ ಅಫ್ಗಾನಿಸ್ತಾನದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವುದಾಗಿ ಜೋ ಬೈಡನ್ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.