ADVERTISEMENT

ಅಫ್ಗಾನಿಸ್ತಾನದಲ್ಲಿ ಸಂಘರ್ಷ: 20 ವರ್ಷ ಬಳಿಕ ಹೀನಾಯ ನಿರ್ಗಮನ

ರಾಯಿಟರ್ಸ್
Published 31 ಆಗಸ್ಟ್ 2021, 19:45 IST
Last Updated 31 ಆಗಸ್ಟ್ 2021, 19:45 IST
ಅಮೆರಿಕವು ಅಫ್ಗಾನಿಸ್ತಾನವನ್ನು ತೊರೆದ ಬಳಿಕ ತಾಲಿಬಾನ್‌ ಸೈನಿಕರು ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಮಂಗಳವಾರ ಠಳಾಯಿಸಿದರು. -ರಾಯಿಟರ್ಸ್‌ ಚಿತ್ರ
ಅಮೆರಿಕವು ಅಫ್ಗಾನಿಸ್ತಾನವನ್ನು ತೊರೆದ ಬಳಿಕ ತಾಲಿಬಾನ್‌ ಸೈನಿಕರು ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಮಂಗಳವಾರ ಠಳಾಯಿಸಿದರು. -ರಾಯಿಟರ್ಸ್‌ ಚಿತ್ರ   

ಕಾಬೂಲ್‌:ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಂತ್ರಣವನ್ನು ಮಂಗಳವಾರ ನಸುಕಿಗೂ ಮುನ್ನವೇ ತಾಲಿಬಾನ್‌ ಕೈಗೆತ್ತಿಕೊಂಡಿದೆ.

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ತಾಲಿಬಾನ್‌ ಸೈನಿಕರು ಸಂಭ್ರಮ ಆಚರಿಸಿದ್ಧಾರೆ. ಇದರೊಂದಿಗೆ, 2001ರಿಂದ ಅಫ್ಗಾನಿಸ್ತಾನದಲ್ಲಿ ಅಮೆರಿಕವು ನಡೆಸುತ್ತಿದ್ದ ಯುದ್ಧವು ಕೊನೆಗೊಂಡಿದೆ.

ಅಮೆರಿಕದ ಸೈನಿಕರು ಕೊನೆಯ ಸಿ–17 ವಿಮಾನದಲ್ಲಿ ಕಾಬೂಲ್‌ ತೊರೆದ ಬಳಿಕ, ತನ್ನ ಸೈನಿಕರು ವಿಮಾನ ನಿಲ್ದಾಣ ಪ್ರವೇಶಿಸುವ ಅಸ್ಪಷ್ಟ ವಿಡಿಯೊವನ್ನು ತಾಲಿಬಾನ್‌ ಮಂಗಳವಾರ ಬಿಡುಗಡೆ ಮಾಡಿದೆ.

ADVERTISEMENT

ಅಮೆರಿಕದ ಕೊನೆಯ ವಿಮಾನವು ಸೋಮವಾರ ರಾತ್ರಿ 12 ಗಂಟೆಗೆ ಮೊದಲೇ ಕಾಬೂಲ್‌ ಬಿಟ್ಟಿತು. ಇದು, ಅಮೆರಿಕ ಮತ್ತು ನ್ಯಾಟೊ ಮಿತ್ರಕೂಟಕ್ಕೆ ಹೀನಾಯ ಸೋಲು ಎಂದೇ ಹೇಳಲಾಗುತ್ತಿದೆ.

‘ಇದು ಚಾರಿತ್ರಿಕ ದಿನ ಮತ್ತು ಕ್ಷಣ’ ಎಂದು ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್‌ ಹೇಳಿದ್ದಾರೆ.

‘ಈ ಕ್ಷಣದ ಬಗ್ಗೆ ನಮಗೆ ಹೆಮ್ಮೆ ಇದೆ. ದೊಡ್ಡ ಶಕ್ತಿಯೊಂದರ ಕೈಯಿಂದ ದೇಶವನ್ನು ನಾವು ಬಿಡುಗಡೆಗೊಳಿಸಿದ್ದೇವೆ’ ಎಂದು ಅವರು ಅಭಿಪ‍್ರಾಯಪಟ್ಟಿದ್ದಾರೆ.

ಅಫ್ಗಾನಿಸ್ತಾನವನ್ನು ಅಲ್‌ ಕೈದಾ ಉಗ್ರ ಸಂಘಟನೆಯು ತನ್ನ ನೆಲೆಯಾಗಿ ಬಳಸುವುದನ್ನು ಎರಡು ದಶಕಗಳ ಯುದ್ಧವು ತಡೆದಿತ್ತು. ಆದರೆ, ಈಗ ತಾಲಿಬಾನ್‌ ಸಂಘಟನೆಯು ಕಳೆದ ಬಾರಿ ಇದ್ದುದಕ್ಕಿಂತ ಹೆಚ್ಚು ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ.

ತೆರವು ಕಾರ್ಯಾಚರಣೆಯು ಮುಕ್ತಾಯಗೊಂಡ ಬಳಿಕವೂ ಅಫ್ಗಾನಿಸ್ತಾನದಲ್ಲಿ ಅಮೆರಿಕ, ಬ್ರಿಟನ್‌ ಮತ್ತು ಇತರ ಕೆಲವು ದೇಶಗಳ ನಾಗರಿಕರು ಉಳಿದಿದ್ದಾರೆ. ಸುಮಾರು ನೂರು ಮಂದಿ ಅಮೆರಿಕ ಪ್ರಜೆಗಳು ಅಫ್ಗಾನಿಸ್ತಾನದಲ್ಲಿ ಇರಬಹುದು ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್‌ ಹೇಳಿದ್ದಾರೆ.

ಬ್ರಿಟನ್‌ನ ಸುಮಾರು ನೂರು ಮಂದಿ ಇನ್ನೂ ಉಳಿದಿರಬಹುದು ಎಂದು ಆ ದೇಶದ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್‌ ರಾಬ್‌ ಹೇಳಿದ್ದಾರೆ.

‘ತೆರವಿಗೆ ಸಂಬಂಧಿಸಿ ಬಹಳ ನೋವು ಇದೆ. ನಾವು ಹೊರಗೆ ಕರೆತರಬೇಕು ಎಂದು ಬಯಸಿದ್ದ ಎಲ್ಲರನ್ನೂ ಕರೆತರಲು ಆಗಿಲ್ಲ, ಇನ್ನೂ ಹತ್ತು ದಿನ ಸಿಕ್ಕಿದ್ದರೆ ಎಲ್ಲವೂ ಸಾಧ್ಯವಾಗುತ್ತಿತ್ತು’ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್‌ನ ಕಮಾಂಡರ್‌ ಫ್ರಾಂಕ್‌ ಮೆಕೆನ್ಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.