ADVERTISEMENT

ಉಕ್ರೇನ್‌–ರಷ್ಯಾ ಯುದ್ಧ ಕೊನೆಗೊಳಿಸಲು ಭಾರತವು ಮಹತ್ವದ ಪಾತ್ರ ವಹಿಸಬೇಕು: ಅಮೆರಿಕ

ಪಿಟಿಐ
Published 3 ಮಾರ್ಚ್ 2023, 11:40 IST
Last Updated 3 ಮಾರ್ಚ್ 2023, 11:40 IST
ನೆಡ್ ಪ್ರೈಸ್
ನೆಡ್ ಪ್ರೈಸ್   

ವಾಷಿಂಗ್ಟನ್: ‘ಭಾರತವು ರಷ್ಯಾದೊಂದಿಗೆ ಹಿಂದಿನಿಂದಲೂ ಉತ್ತಮ ಸಂಬಂಧ ಹೊಂದಿದೆ. ಈಗ, ಜಿ–20 ಗುಂಪಿನ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವ ಭಾರತವು ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಬೇಕಿದೆ’ ಎಂದು ಅಮೆರಿಕ ಹೇಳಿದೆ.

‘ಈ ನಿಟ್ಟಿನಲ್ಲಿ ಅಮೆರಿಕವು ಭಾರತದೊಂದಿಗೆ ಕಾರ್ಯ ನಿರ್ವಹಿಸಲು ಉತ್ಸುಕವಾಗಿದೆ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್‌ ಪ್ರೈಸ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರೈಸ್, ‘ಜಿ–20 ಗುಂಪಿನ ಅಧ್ಯಕ್ಷ ಸ್ಥಾನದಲ್ಲಿರುವ ಭಾರತ ಸರಿಯಾದ ದಿಕ್ಕಿನಲ್ಲಿಯೇ ತನ್ನ ಕಾರ್ಯ ಆರಂಭಿಸಿದೆ. ರಷ್ಯಾದೊಂದಿಗೆ ಅಮೆರಿಕ ಹೊಂದಿರುವ ಸಂಬಂಧಕ್ಕಿಂತ ವಿಶಿಷ್ಟವಾದ ಬಾಂಧವ್ಯವನ್ನು ಭಾರತವು ಹೊಂದಿದೆ. ಹೀಗಾಗಿ, ಉಕ್ರೇನ್‌ ಬಿಕ್ಕಟ್ಟನ್ನು ನಿವಾರಿಸುವ ಸಾಮರ್ಥ್ಯ ಭಾರತಕ್ಕೆ ಇದೆ’ ಎಂದು ಹೇಳಿದರು.

ADVERTISEMENT

‘ಇದು ಯುದ್ಧದ ಕಾಲವಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಹೇಳಿದ್ದರು. ಅವರ ಈ ಮಾತಿಗೆ ಇಡಿ ವಿಶ್ವವೇ ಕಿವಿಗೊಟ್ಟಿತ್ತು. ಅವರ ಮಾತುಗಳು ಅಮೆರಿಕ, ರಷ್ಯಾಕ್ಕೆ ಮಾತ್ರವಲ್ಲ, ಎಲ್ಲ ರಾಷ್ಟ್ರಗಳಿಗೂ ಅನ್ವಯಿಸುವಂಥವಾಗಿದ್ದವು’ ಎಂದು ಪ್ರೈಸ್‌ ಹೇಳಿದರು.

ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳ ಸಂಬಂಧದಲ್ಲಿ ಒಡಕು ಮೂಡಿದೆ. ಈ ಕಾರಣಕ್ಕಾಗಿ, ಭಾರತದಲ್ಲಿ ಗುರುವಾರ ನಡೆದ ಜಿ–20 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯು ಉಕ್ರೇನ್‌ ಬಿಕ್ಕಟ್ಟಿನ ಕುರಿತು ಜಂಟಿ ಹೇಳಿಕೆ ಹೇಳಿಕೆ ಬಿಡುಗಡೆ ಮಾಡುವಲ್ಲಿ ವಿಫಲವಾಯಿತು. ಹೀಗಾಗಿ ಅಮೆರಿಕ ಇಂಥ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.