

ನ್ಯಾಶ್‌ವಿಲ್ಲೆ: ಅಮೆರಿಕದಲ್ಲಿ ಭಾರಿ ಹಿಮಪಾತ ಹಾಗೂ ಶೀತಗಾಳಿಯಿಂದಾಗಿ ಹಲವಾರು ವಿಮಾನಗಳ ಹಾರಾಟವನ್ನು ಭಾನುವಾರ ರದ್ದುಗೊಳಿಸಲಾಯಿತು. ಅನೇಕ ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯಯ ಉಂಟಾಯಿತು.
ಸುಮಾರು 10,800 ವಿಮಾನಗಳ ಹಾರಾಟವನ್ನು ಭಾನುವಾರ ರದ್ದುಗೊಳಿಸಲಾಯಿತು ಎಂದು ‘ಫ್ಲೈಟ್‌ಅವೇರ್’ ಸಂಸ್ಥೆ ಹೇಳಿದೆ. ಅಂದು ನಿಗದಿಯಾಗಿದ್ದ ತಮ್ಮ ನೂರಾರು ವಿಮಾನಗಳನ್ನು ವಿಮಾನಯಾನ ಸಂಸ್ಥೆಗಳು ರದ್ದುಗೊಳಿಸಿದವು. ಇದರಿಂದ ಪ್ರಯಾಣಿಕರಿಗೆ ತೊಂದರೆಯುಂಟಾಯಿತು.
ಪ್ರಮುಖ ನಗರಗಳಲ್ಲಿರುವ ಹೆಚ್ಚಿನ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಅಧಿಕ ಸಂಖ್ಯೆಯ ವಿಮಾನಗಳ ಸಂಚಾರ ರದ್ದುಗೊಳಿಸಲಾಯಿತು. ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣವನ್ನು ಮಧ್ಯಾಹ್ನದ ಬಳಿಕ ಬಂದ್ ಮಾಡಲಾಗಿತ್ತು ಎಂದು ವಿಮಾನಯಾನ ಆಡಳಿತವು ತಿಳಿಸಿತು.
ನ್ಯೂಯಾರ್ಕ್‌ನ ಲಾಗಾರ್ಡಿಯ ವಿಮಾನ ನಿಲ್ದಾಣದಲ್ಲಿ 433, ಜಾನ್. ಎಫ್. ಕೆನಡಿಯಲ್ಲಿ 460 ಹಾಗೂ ಫಿಲಾಡೆಲ್ಫಿಯಾ ನಿಲ್ದಾಣದಲ್ಲಿ 326 ವಿಮಾನಗಳನ್ನು ರದ್ದುಗೊಳಿಸಲಾಯಿತು.