ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ವಾಷಿಂಗ್ಟನ್/ಫ್ಲಾರಿಡಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಬೆನ್ನಲ್ಲೇ ಎಲ್ಲ ಆಮದುಗಳ ಮೇಲೆ ಶೇ 10ರಷ್ಟು ಕಸ್ಟಮ್ಸ್ ಸುಂಕವನ್ನು ಅಮೆರಿಕದ ಏಜೆಂಟರು ಶನಿವಾರದಿಂದ ಏಕಪಕ್ಷೀಯವಾಗಿ ಸಂಗ್ರಹಿಸಲು ಆರಂಭಿಸಿದ್ದಾರೆ. ಮುಂದಿನ ವಾರದಿಂದ 57 ದೊಡ್ಡ ವ್ಯಾಪಾರ ಪಾಲುದಾರ ದೇಶಗಳಿಂದ ಸರಕುಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಸೂಲಿ ಮಾಡಲಾಗುತ್ತದೆ.
ಅಮೆರಿಕದ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಕಸ್ಟಮ್ಸ್ ಗೋದಾಮುಗಳಲ್ಲಿ ಶನಿವಾರ ಮಧ್ಯರಾತ್ರಿ 12:01ರಿಂದ ಸುಂಕ ವಸೂಲಿ ಜಾರಿಗೆ ಬಂದಿದೆ. ಈ ಮೂಲಕ ಟ್ರಂಪ್ ಎರಡನೇ ಮಹಾಯುದ್ಧದ ನಂತರ ಪರಸ್ಪರ ಜಾಗತಿಕ ಒಪ್ಪಿತ ಸುಂಕ ದರಗಳ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗಿದೆ.
ಇದು ನಮ್ಮ ಜೀವಿತಾವಧಿಯ ಏಕೈಕ ಅತಿದೊಡ್ಡ ವ್ಯಾಪಾರ ಕ್ರಮವಾಗಿದೆ ಎಂದು ಹೊಗನ್ ಲೊವೆಲ್ಸ್‌ನ ವ್ಯಾಪಾರ ವಕೀಲರು ಮತ್ತು ಟ್ರಂಪ್ ಅವರ ಮೊದಲ ಅವಧಿಯಲ್ಲಿ ಶ್ವೇತಭವನದ ವ್ಯಾಪಾರ ಸಲಹೆಗಾರರಾಗಿದ್ದ ಕೆಲ್ಲಿ ಆನ್ ಶಾ ಹೇಳಿದ್ದಾರೆ.
ಸುಂಕ ತಗ್ಗಿಸುವಂತೆ ವಿವಿಧ ದೇಶಗಳು ಮಾತುಕತೆ ನಡೆಸಲು ಆರಂಭಿಸಿದ ಕಾಲಾನಂತರದಲ್ಲಿ ಸುಂಕದ ದರ ಬದಲಾಗುವ ನಿರೀಕ್ಷೆ ಇದೆ ಎಂದೂ ಶಾ ಬ್ರೂಕಿಂಗ್ಸ್ ಇನ್‌ಸ್ಟಿಟ್ಯೂಷನ್ ಕಾರ್ಯಕ್ರಮಕ್ಕೆ ತಿಳಿಸಿದ್ದಾರೆ.
ಟ್ರಂಪ್ ಅವರ ಬುಧವಾರದ ಸುಂಕ ಘೋಷಣೆಯು ಜಾಗತಿಕ ಷೇರು ಮಾರುಕಟ್ಟೆಗಳನ್ನು ಬೆಚ್ಚಿಬೀಳಿಸಿದೆ. ಶುಕ್ರವಾರದ ಮುಕ್ತಾಯದ ವೇಳೆಗೆ ಅಮೆರಿಕದ ಎಸ್ ಅಂಡ್ ಪಿ 500 ಸೂಚ್ಯಂಕದ ಕಂಪನಿಗಳ ಮೌಲ್ಯ 5 ಟ್ರಿಲಿಯನ್ ಡಾನರ್‌ನಷ್ಟು ಕುಸಿದಿತ್ತು. ಇದು ಎರಡು ದಿನಗಳ ದಾಖಲೆಯ ಕುಸಿತವಾಗಿದೆ. ಆರ್ಥಿಕ ಹಿಂಜರಿತದ ಭಯದಿಂದಾಗಿ, ತೈಲ ಮತ್ತು ಸರಕುಗಳ ಬೆಲೆಗಳು ಕುಸಿದಿವೆ.
ಶನಿವಾರ ಮಧ್ಯರಾತ್ರಿ 12:01ರ ಮೊದಲು ಲೋಡ್ ಮಾಡಲಾದ ಅಥವಾ ಅಮೆರಿಕಕ್ಕೆ ಸಾಗಿಸಲಾದ ಸರಕುಗಳಿಗೆ ಅಮೆರಿಕದ ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣಾ ವಿಭಾಗವು 51 ದಿನಗಳ ಗ್ರೇಸ್ ಅವಧಿಯನ್ನು ಒದಗಿಸಿದೆ. ಈ ಸರಕುಗಳು ಶೇ 10 ರಷ್ಟು ಸುಂಕವನ್ನು ತಪ್ಪಿಸಲು ಮೇ 27ರೊಳಗೆ ತಲುಪಬೇಕಾಗುತ್ತದೆ.
ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೊಸದಾಗಿ ವಿಧಿಸಿರುವ ಶೇ 11ರಿಂದ 50ರಷ್ಟು ಪ್ರತೀಕಾರ ಸುಂಕವು ಬುಧವಾರ ಮಧ್ಯರಾತ್ರಿ 12:01ರಿಂದ ಜಾರಿಗೆ ಬರಲಿದೆ. ಭಾರತದ ಸರಕುಗಳ ಮೇಲೆ ಶೇ 27ರಷ್ಟು, ಯುರೋಪಿಯನ್ ಒಕ್ಕೂಟದ ಆಮದುಗಳ ಮೇಲೆ ಶೇ 20ರಷ್ಟು, ಚೀನಾದ ಸರಕುಗಳ ಮೇಲೆ ಶೇ 34ರಷ್ಟು ಹೊದ ಸುಂಕವನ್ನು ವಿಧಿಸಲಾಗಿದೆ. ಚೀನಾದ ಮೇಲಿನ ಒಟ್ಟು ಸುಂಕ ಶೇ 54ರಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.