ಭಾರತ ಮತ್ತು ಪಾಕಿಸ್ತಾನ
ಐಸ್ಟೋಕ್ ಸಂಗ್ರಹ ಚಿತ್ರ
ನ್ಯೂಯಾರ್ಕ್/ ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಕುರಿತು ಅಮೆರಿಕವು ಬ್ರಿಟನ್ ಜತೆ ಚರ್ಚೆ ನಡೆಸಿದ್ದು, ನೆರೆಹೊರೆಯ ಎರಡೂ ರಾಷ್ಟ್ರಗಳು ‘ಕದನ ವಿರಾಮ’ ಒಪ್ಪಂದವನ್ನು ಕಾಯ್ದುಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದೆ.
ಭಾರತ ಮತ್ತು ಪಾಕಿಸ್ತಾನವು ಶನಿವಾರದಿಂದ ಅನ್ವಯ ಆಗುವಂತೆ ಕದನ ವಿರಾಮವನ್ನು ಜಾರಿಗೆ ತಂದಿವೆ. ಭಾರತ–ಪಾಕ್ ನಡುವಿನ ಈಗಿನ ಪರಿಸ್ಥಿತಿಯ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರೆ ಟ್ಯಾಮಿ ಬ್ರೂಸ್ ಭಾನುವಾರ ತಿಳಿಸಿದ್ದಾರೆ.
‘ಭಾರತ ಮತ್ತು ಪಾಕಿಸ್ತಾನವು ಕದನ ವಿರಾಮ ಒಪ್ಪಂದವನ್ನು ಕಾಯ್ದುಕೊಳ್ಳುವ ಮತ್ತು ಮಾತುಕತೆಯನ್ನು ಮುಂದುವರಿಸುವ ಅಗತ್ಯವನ್ನು ರುಬಿಯೊ ಹಾಗೂ ಲ್ಯಾಮಿ ಒತ್ತಿ ಹೇಳಿದರು. ಭಾರತ – ಪಾಕಿಸ್ತಾನದ ನಡುವಿನ ನೇರ ಮಾತುಕತೆಯನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ರುಬಿಯೊ ಈ ವೇಳೆ ಹೇಳಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.
ರಷ್ಯಾ-ಉಕ್ರೇನ್ ಯುದ್ಧ ಕುರಿತಂತೆ ಅಮೆರಿಕದ ನಿಲುವನ್ನು ರುಬಿಯೊ ಪುನರುಚ್ಚರಿಸಿದ್ದಾರೆ. ‘ಹೋರಾಟವನ್ನು ಕೊನೆಗೊಳಿಸುವುದು ಮತ್ತು ತಕ್ಷಣ ಕದನ ವಿರಾಮ ಜಾರಿಗೆ ತರುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.