ಹ್ಯೂಸ್ಟನ್: ತಾಂತ್ರಿಕ ಅಡಚಣೆಯಿಂದಾಗಿ ಅಮೆರಿಕದ ಯುನೈಟೆಡ್ ಏರ್‌ಲೈನ್ಸ್‌ನ 800ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಬುಧವಾರ ತಡರಾತ್ರಿ ರದ್ದುಗೊಳಿಸಲಾಯಿತು. 100ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವಿಳಂಬ ಉಂಟಾಯಿತು.
ಹ್ಯೂಸ್ಟನ್‌ನ ಜಾರ್ಜ್ ಬುಷ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಐಎಎಚ್) ಯುನೈಟೆಡ್ ಏರ್‌ಲೈನ್ಸ್‌ನ ಕಾರ್ಯಾಚರಣೆಯ ಕೇಂದ್ರ ಸ್ಥಾನವಾಗಿದೆ. ಇಲ್ಲಿಂದ ಹಾರಾಟ ನಡೆಸುವ ಸಂಸ್ಥೆಯ ಎಲ್ಲ ದೇಶೀಯ, ಅಂತರರಾಷ್ಟ್ರೀಯ ವಿಮಾನಗಳು ರದ್ದುಗೊಂಡಿದ್ದರಿಂದ ಪ್ರಯಾಣಿಕರು ಪರದಾಡಿದರು. ಟರ್ಮಿನಲ್‌ನಲ್ಲಿ ಪ್ರಯಾಣಿಕರ ಉದ್ದನೆಯ ಸರತಿ ಸಾಲು ಕಂಡು ಬಂತು.
‘ತಾಂತ್ರಿಕ ಸಮಸ್ಯೆಯಿಂದ ಯುನೈಟೆಡ್ ಏರ್‌ಲೈನ್ಸ್‌ನ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಈ ಕುರಿತು ನಿಗಾ ವಹಿಸಲಾಗಿದೆ’ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ಹೇಳಿದೆ.
‘ಈ ಸಮಸ್ಯೆ ಯಾವಾಗ ಬಗೆಹರಿಯುತ್ತದೆಯೋ ತಿಳಿದಿಲ್ಲ.ಇಲ್ಲಿನ ಸಿಬ್ಬಂದಿ ಕೂಡ ಸಮರ್ಪಕ ಉತ್ತರ ನೀಡುತ್ತಿಲ್ಲ. ಟೋಕಿಯೊಗೆ ಪ್ರಯಾಣಿಸಬೇಕಿದ್ದ ನಾನು ಹ್ಯೂಸ್ಟನ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದೇನೆ’ ಎಂದು ಪ್ರಯಾಣಿಕ ಮೈಕಲ್ ಟ್ರಾನ್ ಬೇಸರ ವ್ಯಕ್ತಪಡಿಸಿದರು.
ನೇವಾರ್ಕ್ ಮತ್ತು ಷಿಕಾಗೊ ವಿಮಾನ ನಿಲ್ದಾಣಗಳಿಂದ ದೆಹಲಿ, ಮುಂಬೈಗೆ ಬರಬೇಕಿದ್ದ ಯುನೈಟೆಡ್ ಏರ್‌ಲೈನ್ಸ್‌ನ ವಿಮಾನಗಳು ಹಲವು ಗಂಟೆಗಳು ವಿಳಂಬವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.