ADVERTISEMENT

ಇರಾನ್‌ ಜತೆ ವ್ಯವಹರಿಸಿದರೆ ನಿರ್ಬಂಧ: ಪಾಕಿಸ್ತಾನಕ್ಕೂ ಎಚ್ಚರಿಕೆ ನೀಡಿದ ಅಮೆರಿಕ

ಪಿಟಿಐ
Published 24 ಏಪ್ರಿಲ್ 2024, 13:42 IST
Last Updated 24 ಏಪ್ರಿಲ್ 2024, 13:42 IST
<div class="paragraphs"><p>ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಸೋಮವಾರ ಭೇಟಿ ನೀಡಿದ್ದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಧಾನಿ ನಿವಾಸದ ಆವರಣದಲ್ಲಿ ಗಿಡ ನೆಟ್ಟು ಪ್ರಾರ್ಥನೆ ಸಲ್ಲಿಸಿದರು. ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಜತೆಗಿದ್ದರು–</p></div>

ಪಾಕಿಸ್ತಾನದ ಇಸ್ಲಾಮಾಬಾದ್‌ಗೆ ಸೋಮವಾರ ಭೇಟಿ ನೀಡಿದ್ದ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಧಾನಿ ನಿವಾಸದ ಆವರಣದಲ್ಲಿ ಗಿಡ ನೆಟ್ಟು ಪ್ರಾರ್ಥನೆ ಸಲ್ಲಿಸಿದರು. ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಜತೆಗಿದ್ದರು–

   

ಪಿಟಿಐ ಚಿತ್ರ  

ವಾಷಿಂಗ್ಟನ್‌: ಇರಾನ್‌ ಜತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಯಾವುದೇ ರಾಷ್ಟ್ರ ಸಂಭವನೀಯ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ADVERTISEMENT

ಇರಾನ್‌ ಅಧ್ಯಕ್ಷ ಸೆಯ್ಯದ್‌ ಇಬ್ರಾಹಿಂ ರೈಸಿ ಅವರ ಚೊಚ್ಚಲ ಇಸ್ಲಾಮಾಬಾದ್ ಭೇಟಿಯ ಸಂದರ್ಭ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಪಾಕಿಸ್ತಾನ ಮತ್ತು ಇರಾನ್ ಹಲವು ಒಪ್ಪಂದಗಳಿಗೆ ಸಹಿ ಹಾಕಿದ ಬೆನ್ನಲ್ಲೇ ಅಮೆರಿಕ ಈ ಸಂದೇಶ ನೀಡಿದೆ.

ಚೀನಾದ ಮೂರು ಕಂಪನಿಗಳು ಸೇರಿದಂತೆ ಪಾಕಿಸ್ತಾನದ ‘ಗುರಿ ನಿರ್ದೇಶಿತ ಕ್ಷಿಪಣಿ’ ಯೋಜನೆಗೆ ನೆರವಾಗುತ್ತಿರುವವರ ಮೇಲೆ ನಿರ್ಬಂಧಗಳನ್ನು ವಿಧಿಸಿದ ಕೆಲವು ದಿನಗಳ ನಂತರ ಈ ಹೊಸ ಎಚ್ಚರಿಕೆಯನ್ನು ಅಮೆರಿಕ ನೀಡಿದೆ. ಆದಾಗ್ಯೂ ಅಮೆರಿಕ ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಪಾಕಿಸ್ತಾನವನ್ನು ಈ ಪ್ರದೇಶದಲ್ಲಿ ಪ್ರಮುಖ ಭದ್ರತಾ ಪಾಲುದಾರ ಎಂದೇ ಪರಿಗಣಿಸಿದೆ. 

ಬುಧವಾರ ಮುಕ್ತಾಯಗೊಂಡ ರೈಸಿಯವರ ಮೂರು ದಿನಗಳ ಭೇಟಿಯ ಸಮಯದಲ್ಲಿ, ಇರಾನ್ ಮತ್ತು ಪಾಕಿಸ್ತಾನ ಎಂಟು ಒಪ್ಪಂದಗಳಿಗೆ ಸಹಿ ಹಾಕಿದ್ದು, ಮುಂಬರುವ ವರ್ಷಗಳಲ್ಲಿ ವ್ಯಾಪಾರವನ್ನು 10 ಶತಕೋಟಿ ಡಾಲರ್‌ಗೆ (₹84 ಸಾವಿರ ಕೋಟಿ) ಹೆಚ್ಚಿಸುವ ಪ್ರತಿಜ್ಞೆ ಮಾಡಿವೆ. 

ರೈಸಿಯವರ ಭೇಟಿ ವೇಳೆ ಆಗಿರುವ ಒಪ್ಪಂದಗಳ ಬಗ್ಗೆ ಪ್ರಶ್ನಿಸಿದಾಗ, ಅಮೆರಿಕದ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ ಪಟೇಲ್‌, ಪಾಕಿಸ್ತಾನ– ಇರಾನ್‌ ನಡುವೆ ಅನಿಲ ಕೊಳವೆ ಮಾರ್ಗ ನಿರ್ಮಾಣದ ಮೇಲೆ ನಿರ್ಬಂಧದ ಹೇರುವುದರಿಂದ ವಿನಾಯಿತಿ ಇರಲಿದೆ ಎನ್ನಲಾಗದು ಎಂದು ಪ್ರತಿಕ್ರಿಯಿಸಿದ್ದಾರೆ.  

‘ನಾನು ವಿಸ್ತೃತವಾಗಿ ಹೇಳುತ್ತಿರುವೆ, ಇರಾನ್‌ನೊಂದಿಗೆ ವ್ಯಾಪಾರ ವ್ಯವಹಾರಗಳನ್ನು ನಡೆಸುವ ಯಾರೇ ಆಗಲಿ ನಿರ್ಬಂಧಗಳಿಗೆ ಗುರಿಯಾಗಬೇಕಾದ ಸಂಭವನೀಯ ಅಪಾಯದ ಬಗ್ಗೆ ಅರಿತುಕೊಳ್ಳಲು ನಾವು ಸಲಹೆ ನೀಡುತ್ತೇವೆ’ ಎಂದು ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

‘ಇದು ಪಾಕಿಸ್ತಾನದೊಳಗೆ ನಿರ್ಮಿಸಲಾಗುತ್ತಿರುವ ಪೈಪ್‌ಲೈನ್‌ನ ಒಂದು ಭಾಗ. ಈ ಹಂತದಲ್ಲಿ ಮೂರನೆಯವರ ಜತೆ ಚರ್ಚಿಸಬೇಕಾದ ಅಥವಾ ಇದಕ್ಕೆ ಯಾವುದೇ ನಿರ್ಬಂಧದ ವಿನಾಯಿತಿಯ ಅವಶ್ಯಕತೆ ಬೇಕಿದೆ ಎಂದು ನಮಗೆ ಅನಿಸಿಲ್ಲ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮುಮ್ತಾಜ್ ಜಹ್ರಾ ಬಲೋಚ್ ಸುದ್ದಿಗೋಷ್ಠಿಯಲ್ಲಿ ಹೇಳಿರುವುದಾಗಿ ‘ಇರಾನ್‌ವೈರ್‌ ಡಾಟ್‌ ಕಾಮ್‌’ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.