ADVERTISEMENT

ಇದು ಯುದ್ಧದ ಸಮಯವಲ್ಲ: ಮೋದಿ ಹೇಳಿಕೆಯನ್ನು ಸ್ವಾಗತಿಸಿದ ಅಮೆರಿಕ

ರಾಯಿಟರ್ಸ್
Published 21 ಸೆಪ್ಟೆಂಬರ್ 2022, 10:37 IST
Last Updated 21 ಸೆಪ್ಟೆಂಬರ್ 2022, 10:37 IST
ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್: ಪಿಟಿಐ ಚಿತ್ರ
ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್: ಪಿಟಿಐ ಚಿತ್ರ   

ವಾಷಿಂಗ್ಟನ್: ಇದು ಯುದ್ಧದ ಸಮಯವಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನು ಅಮೆರಿಕ ಸ್ವಾಗತಿಸಿದೆ.

'ಪ್ರಧಾನಿ ಮೋದಿ ಅವರು ಹೇಳಿದ್ದು ಸರಿ ಎಂದು ನಾನು ಭಾವಿಸುತ್ತೇನೆ. ಅಮೆರಿಕವೂ ಇದನ್ನು ಸ್ವಾಗತಿಸುತ್ತದೆ’ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ವಿಶ್ವದ ಪ್ರತಿಯೊಂದು ದೇಶವೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ನಾವು ಬಯಸುತ್ತೇವೆ’ಎಂದು ಅವರು ಹೇಳಿದರು.

ADVERTISEMENT

‘ಅವರು ಬಯಸಿದರೆ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಅದನ್ನು ಮಾಡಬಹುದು. ಆದರೆ, ಈ ಸಮಯದಲ್ಲಿ ರಷ್ಯಾಗೆ ಸ್ಪಷ್ಟವಾದ ಮತ್ತು ನಿಸ್ಸಂದೇಹವಾದ ಸಂದೇಶವನ್ನು ಕಳುಹಿಸುವುದು ಶಾಂತಿಗಾಗಿ ನಾವು ಮಾಡಬಹುದಾದ ಪ್ರಯತ್ನವಾಗಿದೆ’ಎಂದು ಅವರು ಹೇಳಿದರು.

ಶುಕ್ರವಾರ ಉಜ್ಬೇಕಿಸ್ತಾನದಲ್ಲಿ ನಡೆದ ಸಮಾವೇಶದ ಸಂದರ್ಭ ಮೋದಿ, ಪುಟಿನ್ ಅವರಿಗೆ ‘ಇಂದಿನ ಯುಗ ಯುದ್ಧದ ಯುಗವಲ್ಲ, ಈ ಬಗ್ಗೆ ನಿಮ್ಮೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದೇನೆ" ಎಂದು ಹೇಳಿದ್ದರು. ಪ್ರಜಾಪ್ರಭುತ್ವ, ರಾಜತಾಂತ್ರಿಕತೆ ಮತ್ತು ಮಾತುಕತೆಯ ಮಹತ್ವವನ್ನು ಒತ್ತಿ ಹೇಳಿದ್ದರು.

ಉಕ್ರೇನ್ ಮೇಲೆ ರಷ್ಯಾ ಯುದ್ಧ ಪ್ರಾರಂಭವಾದಾಗಿನಿಂದ ಅಮೆರಿಕದ ಅನೇಕ ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ. ರಷ್ಯಾದಿಂದ ಅಂತರ ಕಾಯ್ದುಕೊಳ್ಳುವಂತೆ ಭಾರತದ ಮನವೊಲಿಸಲು ಅವರು ಪ್ರಯತ್ನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸಹ ಹಲವು ಬಾರಿ ದೂರವಾಣಿ ಸಂಭಾಷಣೆ ಮೂಲಕ ಪುಟಿನ್ ಮನವೊಲಿಸಲು ಯತ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.