ADVERTISEMENT

ನಿಕ್ಕಿ ಹ್ಯಾಲೆ ಅಧಿಕೃತ ನಿವಾಸಕ್ಕೆ ದುಬಾರಿ ಕಿಟಕಿ ಪರದೆ!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 12:33 IST
Last Updated 14 ಸೆಪ್ಟೆಂಬರ್ 2018, 12:33 IST
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ   

ನ್ಯೂಯಾರ್ಕ್‌(ಪಿಟಿಐ): ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಅವರ ಅಧಿಕೃತ ನಿವಾಸಕ್ಕೆ ಕಿಟಕಿ ಪರದೆ ಅಳವಡಿಸಲು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ವರ್ಷ ₹37.87 ಲಕ್ಷ (52,701 ಅಮೆರಿಕ ಡಾಲರ್‌) ವೆಚ್ಚ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಚಿವಾಲಯವು ವೆಚ್ಚ ಕಡಿತಕ್ಕೆ ಮುಂದಾಗಿದ್ದ ಸಂದರ್ಭದಲ್ಲೂ ಅತ್ಯಾಧುನಿಕ ಮತ್ತು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವ ಕಿಟಕಿ ಪರದೆಗಳನ್ನು ಅಳವಡಿಸಲಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹ್ಯಾಲೆ ಅವರು ಅಧಿಕೃತ ನಿವಾಸದಲ್ಲಿ ವಾಸಿಸುತ್ತಿರುವ ಅಮೆರಿಕದ ಮೊದಲ ರಾಯಭಾರಿಯಾಗಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಪಕ್ಕದ ಕಟ್ಟಡದಲ್ಲೇ ಅವರ ನಿವಾಸವಿದೆ ಎಂದೂ ಹೇಳಿದೆ.

ADVERTISEMENT

‘ಕಿಟಕಿ ಪರದೆಗಳನ್ನು ಖರೀದಿಸಲು ಹ್ಯಾಲೆ ಅವರು ಸೂಚಿಸಿರಲಿಲ್ಲ. 2016ರಲ್ಲಿ ಬರಾಕ್‌ ಒಬಾಮ ಅವರ ಆಡಳಿತದ ಸಂದರ್ಭದಲ್ಲೇ ಖರೀದಿಗೆ ತೀರ್ಮಾನಿಸಲಾಗಿತ್ತು’ ಎಂದು ಹ್ಯಾಲೆ ಅವರ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಕಿಟಕಿ ಪರದೆಗಳ ಬೆಲೆ ಸುಮಾರು ₹21.48 ಲಕ್ಷ (29,900 ಅಮೆರಿಕ ಡಾಲರ್‌) ಹಾಗೂ ಸ್ವಯಂಚಾಲಿತ ವ್ಯವಸ್ಥೆಗಾಗಿ ಬಳಸುವ ಮೋಟಾರ್‌ ಮತ್ತು ಇತರ ಉಪಕರಣಗಳಿಗೆ ಸುಮಾರು ₹16.38 ಲಕ್ಷ (22,801ಅಮೆರಿಕ ಡಾಲರ್‌) ವೆಚ್ಚ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಮಾರ್ಚ್‌ನಿಂದ ಆಗಸ್ಟ್‌ ತಿಂಗಳ ನಡುವೆ ಕಿಟಕಿ ಪರದೆಗಳನ್ನು ಅಳವಡಿಸುವ ಕಾರ್ಯ ನಡೆದಿದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.