
ಒಸ್ಲೊ: ವೆನಿಜುವೆಲಾದ ವಿರೋಧ ಪಕ್ಷದ ನಾಯಕಿ, ನೊಬೆಲ್ ಶಾಂತಿ ಪುರಸ್ಕಾರ ಪುರಸ್ಕೃತೆ ಮಾರಿಯಾ ಕೊರಿನಾ ಮಚಾದೊ ಅವರು ಬುಧವಾರ ಇಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ತಪ್ಪಿಸಿಕೊಂಡಿದ್ದಾರೆ ಎಂದು ನಾರ್ವೆಯ ನೊಬೆಲ್ ಸಮಿತಿ ಹೇಳಿದೆ.
ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಮಾರಿಯಾ 11 ತಿಂಗಳ ಹಿಂದೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಜ್ಞಾತವಾಸದಲ್ಲಿರುವ ಅವರ ಪರವಾಗಿ ಅವರ ಪುತ್ರಿ ನೊಬೆಲ್ ಶಾಂತಿ ಪುರಸ್ಕಾರ ಸ್ವೀಕರಿಸಿದ್ದಾರೆ ಎಂದು ನೊಬೆಲ್ ಸಂಸ್ಥೆಯ ನಿರ್ದೇಶಕ ಕ್ರಿಶ್ಚಿಯನ್ ಬರ್ಗ್ ಹಾರ್ಪ್ವಿಕೆನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
‘ಬುಧವಾರದ ಕಾರ್ಯಕ್ರಮದಲ್ಲಿ ಮಾರಿಯಾ ಭಾಗಿಯಾಗಿಲ್ಲ. ಆದರೆ, ನೊಬೆಲ್ ಪ್ರಶಸ್ತಿ ಪ್ರದಾನ ನಡೆಯಲಿರುವ ಇನ್ನುಳಿದ ದಿನಗಳಲ್ಲಿ ಅವರ ಉಪಸ್ಥಿತಿಯನ್ನು ನಿರೀಕ್ಷಿಸಹುದು’ ಎಂದು ಮಾರಿಯಾ ಮಚಾದೊ ಅವರ ವಕ್ತಾರೆ ಕ್ಲಾಡಿಯಾ ಮಸೆರೊ ತಿಳಿಸಿದ್ದಾರೆ. ಸದ್ಯ ಮಾರಿಯಾ ಅವರು ಇರುವ ಸ್ಥಳವನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ.
ಸರ್ವಾಧಿಕಾರದಿಂದ ಪ್ರಜಾಪ್ರಭುತ್ವದೆಡೆಗೆ ಶಾಂತಿಯುತವಾಗಿ ದೇಶವನ್ನು ಕೊಂಡೊಯ್ಯಲು ನಡೆಸಿದ ಹೋರಾಟಗಳಿಗಾಗಿ ಮಾರಿಯಾ (58) ಅವರಿಗೆ ಅಕ್ಟೋಬರ್ 10ರಂದು ನೊಬೆಲ್ ಶಾಂತಿ ಪುರಸ್ಕಾರ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.