ADVERTISEMENT

ಮಸೂದ್‌ ಜಾಗತಿಕ ಉಗ್ರ ಪಟ್ಟಿ ಸೇರಿದ ಶ್ರೇಯ ಮುಡಿಗೇರಿಸಿಕೊಂಡ ಅಮೆರಿಕ!

​ಪ್ರಜಾವಾಣಿ ವಾರ್ತೆ
Published 2 ಮೇ 2019, 7:06 IST
Last Updated 2 ಮೇ 2019, 7:06 IST
   

ವಾಷಿಂಗ್ಟನ್‌:ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರಗಾಮಿ ಪಟ್ಟಿಗೆ ಸೇರಿಸಿದ್ದು ಅಮೆರಿಕದ ರಾಜತಾಂತ್ರಿಕತೆಗೆ ಸಿಕ್ಕ ಗೆಲುವು ಎಂದು ಅಮೆರಿಕ ಗೃಹ ಕಾರ್ಯದರ್ಶಿ ಮೈಕ್‌ ಪಾಂಪೆ ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ‘ ಜೆಇಎಂನ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರಗಾಮಿ ಎಂದು ಘೋಷಿಸಲು ವಿಶ್ವಸಂಸ್ಥೆಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ಅಮೆರಿಕಾದ ಪ್ರತಿನಿಧಿಗಳಿಗೆ ಅಭಿನಂದನೆಗಳು. ಇದು ಅಮೆರಿಕದ ರಾಜತಾಂತ್ರಿಕತೆ ಸಿಕ್ಕ ಯಶಸ್ಸು. ಅಲ್ಲದೆ, ಭಯೋತ್ಪಾದನೆ ವಿರುದ್ಧ ಮತ್ತು ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯತ್ತ ನಮಗೆ ಸಿಕ್ಕ ಜಯ,‘ ಎಂದು ಅವರು ಬರೆದುಕೊಂಡಿದ್ದಾರೆ.

ಪುಲ್ವಾಮದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಬಾಂಬ್‌ ದಾಳಿ ನಡೆದ ನಂತರದ ದಿನಗಳಲ್ಲಿ ಭಾರತವು ಮಸೂದ್‌ ಅಜರ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಬೇಕು ಎಂಬುದರ ನಿಟ್ಟಿನಲ್ಲಿ ವಿಶ್ವಸಂಸ್ಥೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡಿತ್ತು. ಆದರೆ, ಇದನ್ನು ವಿಶ್ವಸಂಸ್ಥೆಯಲ್ಲಿ ವಿರೋಧಿಸಿದ್ದ ಚೀನಾ ಇತ್ತೀಚೆಗಷ್ಟೇ ತನ್ನ ನಿಲುವು ಬದಲಿಸಿತ್ತು. ಮಸೂದ್‌ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ತನ್ನದೇನೂ ತಕರಾರಿಲ್ಲ ಎಂದು ಹೇಳಿತ್ತು. ಇದೇ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮಸೂದ್‌ ಅಜರ್‌ನನ್ನು ಬುಧವಾರ ಜಾಗತಿಕ ಉಗ್ರಗಾಮಿ ಎಂದು ಘೋಷಿಸಿತ್ತು.

ADVERTISEMENT

ಇದಕ್ಕೂ ಹಿಮದೆ ಟ್ವೀಟ್‌ ಮಾಡಿದ್ದ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಮತ್ತು ವಿಶ್ವಸಂಸ್ಥೆಯ ಕಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ‘ಎಲ್ಲರೂ ಕೈಜೋಡಿಸಿದ್ದರಿಂದ ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಸಾಧ್ಯವಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು’ ಎಂದು ಬರೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.