
ವಿಯೆಟ್ನಾಂನಲ್ಲಿ ರಕ್ಷಣಾ ತಂಡಗಳು ಪ್ರವಾಹದಲ್ಲಿ ಸಿಲುಕಿರುವ ಜನರನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು
–ಎಎಫ್‌ಪಿ ಚಿತ್ರ
ಹನೋಯಿ: ಕೇಂದ್ರ ವಿಯೆಟ್ನಾಂನಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 90 ಮಂದಿ ಮೃತಪಟ್ಟಿದ್ದಾರೆ ಎಂದು ವಿಕೋಪ ನಿಯಂತ್ರಣ ಸಂಸ್ಥೆ ನೀಡಿದ ಮಾಹಿತಿ ಆಧರಿಸಿ ಇಲ್ಲಿನ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ದಾಖಲೆ ಪ್ರಮಾಣದ ಮಳೆ ಮತ್ತು ಪ್ರಬಲ ‘ಕಾಲ್‌ಮೇಗಿ’ ಚಂಡಮಾರುತದಿಂದಾದ ಮಹಾಪ್ರವಾಹ ಭಾರಿ ಹಾನಿ ಉಂಟು ಮಾಡಿದೆ. ವಿಯೆಟ್ನಾಂನ ಸೆಂಟ್ರಲ್ ಹೈಲ್ಯಾಂಡ್‌ನ ರಸ್ತೆಗಳು, ರೈಲು ಹಳಿಗಳು ಹಲವೆಡೆ ಭೂಕುಸಿತದಿಂದ ನಾಶವಾಗಿದ್ದರೆ, ಮತ್ತೆ ಕೆಲವೆಡೆ ಜಲಾವೃತವಾಗಿವೆ. ಸಾವಿರಾರು ಜನರು ಪ್ರವಾಹದಲ್ಲಿ ಸಿಲುಕಿ ಪರದಾಡಿದರು.
ಜಗತ್ತಿನ ಅತ್ಯಂತ ಪ್ರವಾಹ ಪೀಡಿತ ದೇಶಗಳಲ್ಲಿ ಒಂದಾಗಿರುವ ವಿಯೆಟ್ನಾಂನ ಅರ್ಧದಷ್ಟು ಜನರು ಆತಂಕದಲ್ಲೇ ಜೀವನ ನಡೆಸುತ್ತಾರೆ. ಹವಾಮಾನ ವೈಪರೀತ್ಯದಿಂದಾಗಿ ಆಗ್ನೇಯ ಏಷ್ಯಾ ಭಾಗದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿಯಲಿದೆ. ಭೂಕುಸಿತ, ಪ್ರವಾಹ ಸಂಕಷ್ಟ ತರಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.