ಅಮೆರಿಕ ಭಾರತ ಧ್ವಜ
ನ್ಯೂಯಾರ್ಕ್/ ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವೆ ನೇರ ಮಾತುಕತೆಯನ್ನು ಬೆಂಬಲಿಸುವುದಾಗಿ ಅಮೆರಿಕ ಹೇಳಿದೆ.
ಎರಡೂ ಕಡೆಯವರು ಸಂಘರ್ಷ ಬಿಟ್ಟು, ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರನ್ನು ಶ್ಲಾಘಿಸಿರುವುದಾಗಿ ಅದು ಪುನರುಚ್ಚರಿಸಿದೆ.
‘ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ನಾವು ಸ್ವಾಗತಿಸುತ್ತೇವೆ. ಅಧ್ಯಕ್ಷ ಟ್ರಂಪ್ ಹೇಳಿದಂತೆ, ಉಭಯ ದೇಶಗಳ ನಾಯಕರ ನಿರ್ಧಾರವು ಅವರ ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ದೃಢತೆಯನ್ನು ಪ್ರತಿಬಿಂಬಿಸುತ್ತದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಪ್ರಧಾನ ಉಪ ವಕ್ತಾರ ಥಾಮಸ್ ಪಿಗಾಟ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಪ್ರಾದೇಶಿಕ ಸ್ಥಿರತೆಗಾಗಿ ನೇರ ಮಾತುಕತೆ ನಡೆಸುವಂತೆ ನಾವು ಉಭಯತ್ರರನ್ನು ಒತ್ತಾಯಿಸುತ್ತೇವೆ. ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿರುವುದು ಅಮೆರಿಕಕ್ಕೆ ಸಂತಸ ನೀಡಿದೆ. ಟ್ರಂಪ್ ಅವರು ಶಾಂತಿಯ ದೂತ. ಜಗತ್ತಿನ ಎಲ್ಲೆಡೆ ಶಾಂತಿ ಬಯಸಬೇಕೆನ್ನುವುದರಲ್ಲಿ ಅಮೆರಿಕವೇ ಮೊದಲು ಎನ್ನುವುದು ಅವರ ಕಾರ್ಯಸೂಚಿಯ ಭಾಗವಾಗಿದೆ. ವಿವಿಧ ರಾಷ್ಟ್ರಗಳ ನಡುವಿನ ಸಂಘರ್ಷಗಳನ್ನು ಬಗೆಹರಿಸಲು ಅವರು ಕಳೆದ ನೂರು ದಿನಗಳಲ್ಲಿ ನಡೆಸಿರುವ ಪ್ರಯತ್ನಗಳ ಫಲಿತಾಂಶವನ್ನು ನೀವು ಕಾಣುತ್ತಿದ್ದೀರಿ’ ಎಂದು ಪಿಗಾಟ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗಿನ ಮಾತುಕತೆ ವೇಳೆ ಪಾಕಿಸ್ತಾನಿ ನಾಯಕರು ಭಯೋತ್ಪಾದಕ ನೆಲೆಗಳ ಮೂಲಸೌಕರ್ಯ ನಾಶಪಡಿಸಲು ಒಪ್ಪಿದ್ದಾರೆಯೇ ಎಂದು ಕೇಳಲಾದ ಪ್ರಶ್ನೆಗೆ, ‘ಖಾಸಗಿ ರಾಜತಾಂತ್ರಿಕ ಸಂಭಾಷಣೆಗಳ ಬಗ್ಗೆ ಇಲ್ಲಿ ಚರ್ಚಿಸಲು ಬಯಸುವುದಿಲ್ಲ’ ಎಂದು ಪಿಗಾಟ್ ಹೇಳಿದರು.
ಅಣು ವಿಕಿರಣ ಸೋರಿಕೆಯ ವರದಿಗಳಿರುವಾಗ ಅಮೆರಿಕವು ಪಾಕಿಸ್ತಾನದಲ್ಲಿ ಪರಿಶೀಲನೆ ನಡೆಸಲು ತಜ್ಞರ ತಂಡವನ್ನು ಕಳುಹಿಸಿದೆಯೇ ಎಂಬ ಪ್ರಶ್ನೆಗೆ, ‘ಈ ಸಮಯದಲ್ಲಿ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ’ ಎಂದು ಪಿಗಾಟ್ ಸ್ಪಷ್ಟವಾಗಿ ಹೇಳಿದರು.
ನಾಲ್ಕು ದಿನಗಳ ಕಾಲ ನಡೆದ ಗಡಿಯಾಚೆಗಿನ ಭಾರಿ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷ ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಶನಿವಾರ ಕದನ ವಿರಾಮ ಒಪ್ಪಂದ ಮಾಡಿಕೊಂಡಿವೆ.
‘ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಪ್ರಧಾನ ಕಾರ್ಯದರ್ಶಿಗಳ ಮಾತುಕತೆ ವೇಳೆ (ಡಿಜಿಎಂಒಗಳು) ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವುದನ್ನು ತಕ್ಷಣದಿಂದಲೇ ಜಾರಿಗೆ ತರಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಲ್ಲಿ ಮೂರನೇಯವರು ಭಾಗಿಯಾಗಿಲ್ಲ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.