ADVERTISEMENT

ಲಸಿಕೆ ನೀಡಿಕೆ: ಹಿಂದೆಯೇ ಉಳಿದ ಶ್ರೀಮಂತ ರಾಷ್ಟ್ರಗಳು

ಏಜೆನ್ಸೀಸ್
Published 13 ಮೇ 2021, 8:23 IST
Last Updated 13 ಮೇ 2021, 8:23 IST
ಕೋವಿಡ್‌ ಲಸಿಕೆ–ಸಾಂದರ್ಭಿಕ ಚಿತ್ರ
ಕೋವಿಡ್‌ ಲಸಿಕೆ–ಸಾಂದರ್ಭಿಕ ಚಿತ್ರ   

ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಕಳೆದ ವರ್ಷ ಕೋವಿಡ್‌–19 ನಿಯಂತ್ರಿಸಿದ್ದಕ್ಕಾಗಿ ಹೆಚ್ಚು ಪ್ರಶಂಸಿಸಲ್ಪಟ್ಟಿದ್ದ ಕೆಲ ಶ್ರೀಮಂತ ರಾಷ್ಟ್ರಗಳು ಈಗ ತಮ್ಮ ಜನರಿಗೆ ಲಸಿಕೆ ಹಾಕಿಸುವಲ್ಲಿ ಹಿಂದುಳಿದಿವೆ.

ಜಪಾನ್, ದಕ್ಷಿಣ ಕೊರಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ಲಸಿಕೆ ನೀಡಿಕೆ ಪ್ರಮಾಣ ಒಂದೇ ರೀತಿಯಲ್ಲಿ ಕುಸಿಯುತ್ತಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಮೆರಿಕದಲ್ಲಿ ಸುಮಾರು ಅರ್ಧದಷ್ಟು ಜನರು ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದಿದ್ದಾರೆ. ಬ್ರಿಟನ್‌, ಇಸ್ರೇಲ್‌ನಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚಿದೆ.

ಲಸಿಕೆ ನೀಡುವಿಕೆಯಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿಯೇ ಈ ಮೂರು ಪೆಸಿಫಿಕ್‌ ರಾಷ್ಟ್ರಗಳು ಅತ್ಯಂತ ಹಿಂದುಳಿದಿವೆ. ಅಷ್ಟೇ ಅಲ್ಲ ಅಭಿವೃದ್ಧಿ ಹೊಂದುತ್ತಿರುವ ಬ್ರೆಜಿಲ್‌ ಮತ್ತು ಭಾರತಕ್ಕಿಂತಲೂ ಹಿಂದಿವೆ ಎಂಬುದು ದತ್ತಾಂಶಗಳಿಂದ ಗೊತ್ತಾಗುತ್ತದೆ. ಲಸಿಕೆ ನೀಡುವುದರಲ್ಲಿ ಆಸ್ಟ್ರೇಲಿಯಾದ್ದೂ ಕಳಪೆ ಸಾಧನೆಯೇ ಆಗಿದೆ.

ADVERTISEMENT

ಈ ಹಿಂದೆ ಸಮರ್ಥವಾಗಿ ವೈರಸ್‌ ಅನ್ನು ಎದುರಿಸಿದ್ದ ದೇಶಗಳೀಗ ಮತ್ತೆ ವೈರಸ್‌ಗೆ ಒಡ್ಡಿಕೊಳ್ಳುತ್ತಿವೆ. ಜಪಾನ್‌ ತನ್ನ ಜನಸಂಖ್ಯೆ ಶೇ 1ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿದೆ. ಈಗಾಗಲೇ ವಿಳಂಬವಾಗಿರುವ ಒಲಿಂಪಿಕ್‌ ಕ್ರೀಡಾಕೂಟ 10 ವಾರಗಳಲ್ಲಿ ಅಲ್ಲಿ ಆರಂಭವಾಗಬೇಕಿದೆ.

ವ್ಯಾಕ್ಸಿನ್‌ ಪೂರೈಕೆಯಲ್ಲಿ ಎದುರಾಗಿರುವ ಕೊರತೆ, ವ್ಯಾಕ್ಸಿನ್‌ಗಾಗಿ ಅಮೆರಿಕ, ಯುರೋಪ್‌ ಮತ್ತು ಭಾರತವನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಈ ಶ್ರೀಮಂತ ದೇಶಗಳಲ್ಲಿ ಲಸಿಕೆ ಅಭಿಯಾನ ಹಿಂದುಳಿದಿದೆ.

ಅಮೆರಿಕ, ಯುರೋಪ್‌ ಮತ್ತು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌–19 ವ್ಯಾಪಿಸುತ್ತಿರುವುದರಿಂದ ಈ ದೇಶಗಳು ತಮ್ಮ ಪ್ರಜೆಗಳಿಗೆ ಲಸಿಕೆ ನೀಡಲು ಆದ್ಯತೆ ನೀಡುತ್ತಿವೆ. ಹೀಗಾಗಿ ಇತರ ದೇಶಗಳಿಗೆ ವ್ಯಾಕ್ಸಿನ್‌ ಪೂರೈಕೆ ಆಗುತ್ತಿಲ್ಲ ಎಂದು ಶ್ರೀಮಂತ ರಾಷ್ಟ್ರಗಳು ಆರೋಪಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.