ADVERTISEMENT

ಎಚ್‌1–ಬಿ ವೀಸಾ ಶುಲ್ಕ ಹೆಚ್ಚಳ: ಪೂರ್ವಗ್ರಹ ಪೀಡಿತ; ಸೇವಾ ಸಂಸ್ಥೆಗಳು

ಪಿಟಿಐ
Published 23 ಸೆಪ್ಟೆಂಬರ್ 2025, 15:54 IST
Last Updated 23 ಸೆಪ್ಟೆಂಬರ್ 2025, 15:54 IST
...
...   

ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ವಿದೇಶಿಗರ ಮೇಲೆ ಹೊಂದಿರುವ ಪೂರ್ವಗ್ರಹ ಪೀಡಿತ ಮನಃಸ್ಥಿತಿಯಿಂದಾಗಿ ವಲಸೆ ನೀತಿಯನ್ನು ಅಸ್ತ್ರವಾಗಿಸಿಕೊಂಡು ಎಚ್‌–1ಬಿ ವೀಸಾಗಳ ಮೇಲಿನ ಶುಲ್ಕ ಹೆಚ್ಚಿಸಿದ್ದಾರೆ ಎಂದು ಕೆಲವು ವಲಸೆ ಸೇವಾ ಸಂಸ್ಥೆಗಳವರು ಮತ್ತು ತಜ್ಞರು ದೂರಿದ್ದಾರೆ.

ಎಚ್–1ಬಿ ವೀಸಾದ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿರುವುದಾಗಿ ಟ್ರಂಪ್‌ ಆಡಳಿತವು ಇತ್ತೀಚೆಗಷ್ಟೇ ಘೋಷಿಸಿತು.

ಈ ನಿರ್ಧಾರವನ್ನು ಇಂಡಿಯನ್‌ ಅಮೆರಿಕನ್‌ ಇಂಪ್ಯಾಕ್ಟ್ ಎಂಬ ಸಂಸ್ಥೆಯು ತೀವ್ರವಾಗಿ ವಿರೋಧಿಸಿದೆ. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಚಿಂತನ್‌ ಪಟೇಲ್‌ ಈ ಕುರಿತು ಮಾತನಾಡಿ, ‘ಟ್ರಂಪ್‌ ಸರ್ಕಾರದ ಅಸಂಬದ್ಧ ನೀತಿಯು ಅಮೆರಿಕದ ಉದ್ಯೋಗ ವ್ಯವಸ್ಥೆಯನ್ನು ರಕ್ಷಿಸುವ ಉದ್ದೇಶವನ್ನು ಹೊಂದಿಲ್ಲ. ಬದಲಿಗೆ ವಿದೇಶಿಗರನ್ನು ಅನ್ಯರಂತೆ ಭಾವಿಸುವ ಟ್ರಂಪ್‌ ಅವರ ಕಾರ್ಯಸೂಚಿಯನ್ನು ಮತ್ತಷ್ಟು ಬಲಗೊಳಿಸುತ್ತಿದೆ’ ಎಂದಿದ್ದಾರೆ. 

ADVERTISEMENT

ಅಲ್ಲದೇ, ‘ಈ ಕ್ರಮವು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು, ಆರೋಗ್ಯ ತುರ್ತು ಕಾರಣಕ್ಕೆ ಕುಟುಂಬವನ್ನು ಭೇಟಿ ಮಾಡಲು ಹೋಗಿರುವವರನ್ನೂ ಆತಂಕಕ್ಕೆ ದೂಡಿದೆ’ ಎಂದೂ ಆರೋಪಿಸಿದ್ದಾರೆ.

ವಕೀಲ ನವನೀತ್‌ ಎಂಬವರೂ ಈ ಬಗ್ಗೆ ಮಾತನಾಡಿ, ‘ಎಚ್–1ಬಿ ವೀಸಾದಾರರ ಪೈಕಿ ಶೇ72 ಮಂದಿ ಭಾರತೀಯರಾಗಿದ್ದಾರೆ. ಅಮೆರಿಕದ ಆರ್ಥಿಕತೆಗೆ ಬೆನ್ನೆಲುಬಿನಂತಿರುವ ಈ ಸಮುದಾಯದ ವೃತ್ತಿಪರರನ್ನು ಟ್ರಂಪ್‌ ಸರ್ಕಾರದ ಕ್ರಮವು ಸಂಕಷ್ಟಕ್ಕೆ ದೂಡುತ್ತಿದೆ’ ಎಂದಿದ್ದಾರೆ.

ಅಲ್ಲದೇ, ‘ಅಮೆರಿಕ ತನ್ನ ವಲಸೆ ನೀತಿಗಳ ಮೂಲಕ ಕೌಶಲ ಸಮುದಾಯವನ್ನು ಕಳೆದುಕೊಳ್ಳಲಿದೆ. ಇತ್ತ ಚೀನಾ ಇದರ ಉಪಯೋಗ ಪಡೆದು, ಮಾನವ ಶಕ್ತಿಯು ಎಷ್ಟು ದೊಡ್ಡ ಕಾಯತಂತ್ರ ಬಂಡವಾಳ ಎಂಬುದನ್ನು ಅರಿತು ಕೌಶಲಯುತ ವೃತ್ತಿಪರರನ್ನು ತನ್ನತ್ತ ಆಕರ್ಷಿಸುವ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ’ ಎಂದೂ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.