ADVERTISEMENT

ವಿದೇಶಿ ವಿಶ್ವವಿದ್ಯಾಲಯಗಳ ಕ್ಯಾಂಪಸ್‌: ಭಾರತದ ಶಿಕ್ಷಣ ನೀತಿಗೆ ಅಮೆರಿಕ ಸ್ವಾಗತ

ಏಜೆನ್ಸೀಸ್
Published 4 ಆಗಸ್ಟ್ 2020, 1:48 IST
Last Updated 4 ಆಗಸ್ಟ್ 2020, 1:48 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ವಾಷಿಂಗ್ಟನ್: ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ಗಳನ್ನು ತೆರೆಯಲು ಅವಕಾಶ ಕಲ್ಪಿಸಿರುವ ಭಾರತದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಮೆರಿಕ ಸ್ವಾಗತಿಸಿದೆ.

ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲೂ ಕ್ಯಾಂಪಸ್‌ಗಳನ್ನು ತೆರೆಯಬಹುದು ಹಾಗೂ ಭಾರತೀಯ ವಿಶ್ವವಿದ್ಯಾಲಯಗಳು ವಿದೇಶಗಳಲ್ಲಿ ತನ್ನ ಕೇಂದ್ರಗಳನ್ನು ತೆರೆಯಬಹುದಾಗಿದೆ. ಇದರಿಂದ ಜಾಗತಿಕಮಟ್ಟದಲ್ಲಿ ಜ್ಞಾನ ವಿಸ್ತಾರವಾಗುವುದರ ಜೊತೆಗೆ ತಿಳುವಳಿಕೆ ವಿನಿಮಯಗೊಳ್ಳಲಿದೆ. ಅಮೆರಿಕ ಮತ್ತು ಭಾರತೀಯ ವಿಶ್ವವಿದ್ಯಾಲಯಗಳು ಸಂಶೋಧನೆಯಲ್ಲಿ ಪಾಲುದಾರರಾಗಬೇಕೆಂದು ನಾವು ಎದುರು ನೋಡುತ್ತಿದ್ದೇವೆ ಎಂದು ಅಮೆರಿಕದ ಶಿಕ್ಷಣ ಇಲಾಖೆ ಟ್ವೀಟ್‌ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಜುಲೈ 29ರಂದು ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ 2020) ಅನುಮೋದನೆ ನೀಡಿದ್ದು, ಶಾಲಾ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆಗಳಿಗೆ ದಾರಿಯಾಗಲಿದೆ ಎಂದು ಅಮೆರಿಕ ಅಧಿಕೃತವಾಗಿ ತಿಳಿಸಿದೆ.

ADVERTISEMENT

ಭಾರತದ ಈ ಕ್ರಮದಿಂದಾಗಿ ಗುಣಮಟ್ಟದ ಶಿಕ್ಷಣ, ಪರಿಣಾಮಕಾರಿ ಭೋದನೆಗೆ ಅವಕಾಶ ದೊರೆಯಲಿದೆ. ಇದರಿಂದ ಜಗತ್ತಿನ ಅತ್ಯುತ್ತಮ ಶ್ರೇಣಿಯ ವಿಶ್ವವಿದ್ಯಾಲಯಗಳು ಭಾರತದಲ್ಲಿ ಪ್ರವೇಶ ಪಡೆಯುವುದರಿಂದವಿದೇಶಗಳಿಗೆ ತೆರಳಿ ಶಿಕ್ಷಣ ಪಡೆಯುವ ಭಾರತೀಯರ ಸಂಖ್ಯೆಯೂ ಕಡಿಮೆಯಾಗಲಿದೆ ಎಂದು ಅಮೆರಿಕ ಹೇಳಿದೆ.

ನೂತನ ಶಿಕ್ಷಣ ಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಿಕ್ಷಣ ಕೇಂದ್ರಗಳನ್ನು ತೆರೆಯುವ ಪ್ರಸ್ತಾವನೆಗಳಿವೆ. ಔಪಚಾರಿಕ ಮತ್ತು ಅನೌಪಚಾರಿಕ ಕಲಿಕೆಯ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು, 10 ಮತ್ತು 12ನೇ ತರಗತಿಯಲ್ಲಿ ವೃತ್ತಿಪರ ಕೋರ್ಸ್‌ಗಳಿಗೆ ಆದ್ಯತೆ ನೀಡುವ ಪ್ರಸ್ತಾಪಗಳಿವೆ.

ಶಾಲೆಗಳಿಂದ ಹೊರಗೆ ಉಳಿದಿರುವ ಸುಮಾರು 2 ಕೋಟಿ ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದು ನೂತನ ಶಿಕ್ಷಣ ನೀತಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.