ADVERTISEMENT

ದಿನನಿತ್ಯದ ಕೋವಿಡ್‌ ಮಾಹಿತಿ ಹಂಚಿಕೊಳ್ಳಿ: ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯ

ಪಿಟಿಐ
Published 31 ಡಿಸೆಂಬರ್ 2022, 1:50 IST
Last Updated 31 ಡಿಸೆಂಬರ್ 2022, 1:50 IST
ದೆಹಲಿಯ ಖಾನ್‌ ಮಾರ್ಕೆಟ್‌ನಲ್ಲಿ ಮಾಸ್ಕ್‌ ಧರಿಸಿ ಓಡಾಡುತ್ತಿರುವ ಜನ | ಪಿಟಿಐ
ದೆಹಲಿಯ ಖಾನ್‌ ಮಾರ್ಕೆಟ್‌ನಲ್ಲಿ ಮಾಸ್ಕ್‌ ಧರಿಸಿ ಓಡಾಡುತ್ತಿರುವ ಜನ | ಪಿಟಿಐ   

ವಿಶ್ವಸಂಸ್ಥೆ: ಪ್ರತಿನಿತ್ಯದ ಕೋವಿಡ್‌ ಪ್ರಕರಣಗಳ ನಿರ್ದಿಷ್ಟ ಮಾಹಿತಿ ಹಂಚಿಕೊಳ್ಳುವಂತೆ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ಪುನಃ ಒತ್ತಾಯಿಸಿದೆ. ರಾಷ್ಟ್ರದಲ್ಲಿನ ಪ್ರಸ್ತುತ ಕೋವಿಡ್‌ ಸನ್ನಿವೇಶದ ಕುರಿತು ಮಾಹಿತಿ ನೀಡುವಂತೆ ಹೇಳಿದೆ.

'ಝೀರೋ ಕೋವಿಡ್‌' ಕಠಿಣ ನಿಯಮವನ್ನು ಚೀನಾ ಸಡಿಲಿಸಿದ ಬೆನ್ನಲ್ಲೇ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಗೊಂಡಿದೆ. ಈ ಹಿನ್ನೆಲೆ ಜಾಗತಿಕ ಆರೋಗ್ಯ ಏಜೆನ್ಸಿಯು ಚೀನಾದ ಆರೋಗ್ಯ ಅಧಿಕಾರಿಗಳಿಗೆ ಸೋಂಕಿನ ಆನುವಂಶಿಕ ಅನುಕ್ರಮ, ಆಸ್ಪತ್ರೆಗೆ ದಾಖಲಾಗಿರುವವರ ಸಂಖ್ಯೆ, ಸಾವುಗಳು ಮತ್ತು ಲಸಿಕಾಕರಣ, ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಮಾಹಿತಿ ಹಂಚಿಕೊಳ್ಳುವಂತೆ ಆಗ್ರಹಿಸಿದೆ.

ಕೋವಿಡ್‌-19 ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಡಬ್ಳ್ಯುಎಚ್‌ಒ ಮತ್ತು ಚೀನಾ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಲಸಿಕೀಕರಣದ ಮಹತ್ವ, ಬೂಸ್ಟರ್‌ ಡೋಸ್‌ನ ಅಗತ್ಯತೆ ಕುರಿತು ಡಬ್ಳ್ಯುಎಚ್‌ಒ ಸಲಹೆ ನೀಡಿದೆ.

ADVERTISEMENT

ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ ಕೋವಿಡ್‌ ನಿಯಂತ್ರಣ ಕಾರ್ಯತಂತ್ರದಲ್ಲಿ ನಿಕಟವರ್ತಿಗಳಾಗಿ ಭಾಗಿಯಾಗುವಂತೆ ಚೀನಾದ ವಿಜ್ಞಾನಿಗಳಿಗೆ ಆಹ್ವಾನ ನೀಡಿದೆ. ಈ ವಿಚಾರವಾಗಿ
'ಟೆಕ್ನಿಕಲ್‌ ಅಡ್ವೈಸರಿ ಗ್ರೂಪ್‌' ಜನವರಿ 3ರಂದು ಹಮ್ಮಿಕೊಂಡಿರುವ ಸಭೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದೆ.

ಜನವರಿ 22ಕ್ಕೆ ಚೀನಾದ ಹೊಸ ವರ್ಷಾಚರಣೆ. ಈ ಹಿನ್ನೆಲೆ ಚೀನಾ ಜನವರಿ 8ರಿಂದ ರಾಷ್ಟ್ರದಲ್ಲಿನ ಎಲ್ಲ ಮಾದರಿಯ ಸಂಚಾರ ನಿಯಮಗಳನ್ನು ಸಡಿಲಗೊಳಿಸುವ ನಿರ್ಧಾರ ಮಾಡಿದೆ. ಇದು ವಿಶ್ವಕ್ಕೆ ಕಳವಳವನ್ನುಂಟು ಮಾಡಿದೆ. ಲಕ್ಷಾಂತರ ಚೀನಾದ ಜನರು ಹೊಸ ವರ್ಷದ ರಜೆಯ ಸಂದರ್ಭ ವಿಶ್ವದಾದ್ಯಂತ ಹಲವಾರು ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.