ಸ್ಯಾನ್‌ಫ್ರಾನ್ಸಿಸ್ಕೊ:ಅಮೆರಿಕದ ಹಿಂದಿನ ಅಧ್ಯಕ್ಷೀಯಚುನಾವಣೆಯಲ್ಲಿ (2016) ನಡೆದ ದತ್ತಾಂಶ ಸೋರಿಕೆಮತ್ತು ತಪ್ಪು ಮಾಹಿತಿಗಳನ್ನು ಹರಡುವ ಪ್ರಯತ್ನಗಳು ಈ ಬಾರಿಯ ಚುನಾವಣೆಯಲ್ಲಿ ನಡೆಯದಂತೆ ತಡೆಯಲು ಫೇಸ್‌ಬುಕ್ ಮುಂದಾಗಿದೆ.
ನಾಲ್ಕು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅಭಿಯಾನಕ್ಕೆ ರಷ್ಯಾ ಸೇರಿದಂತೆ ವಿವಿಧ ವಿದೇಶಗಳ ನೆರವಿನೊಂದಿಗೆ ಲಕ್ಷಾಂತರ ಸಂಖ್ಯೆಯ ಅಮೆರಿಕನ್ನರ ವೈಯಕ್ತಿಕ ದತ್ತಾಂಶಗಳನ್ನು ಅಪಹರಿಸಿದ ‘ಕೇಂಬ್ರಿಡ್ಜ್ ಅನಾಲಿಟಿಕಾ ಹಗರಣ‘ದಲ್ಲಿ ತೀವ್ರ ಟೀಕೆಗೊಳಗಾಗಿದ್ದ ಫೇಸ್‌ಬುಕ್, ಈ ಚುನಾವಣೆಯಲ್ಲಿ ಆ ತಪ್ಪುಗಳಾಗದಂತೆ ಎಚ್ಚರವಹಿಸುತ್ತಿದೆ.
2016ರಲ್ಲಾದ ತಪ್ಪುಗಳು ಪುನರಾವರ್ತನೆಯಾಗದಂತೆ ತಪ್ಪಿಸಲು ಮತ್ತು ಅಧಿಕೃತ ಮಾಹಿತಿಯನ್ನು ತಲುಪಿಸಲು ಫೇಸ್‌ಬುಕ್ ಕೈಗೊಂಡ ಕೆಲವು ಕ್ರಮಗಳು ಇಲ್ಲಿವೆ:
* ಈ ವರ್ಷಾಂತ್ಯದ ಹೊತ್ತಿಗೆ ಕನಿಷ್ಠ 40 ಲಕ್ಷ ಮತದಾರರನ್ನು ನೋಂದಾಯಿಸಲು ಸಹಾಯ ಮಾಡುವ ಗುರಿಯನ್ನು ಫೇಸ್‌ಬುಕ್ ಹೊಂದಿದ್ದು, ಸೋಮವಾರದ ಹೊತ್ತಿಗೆ 44 ಲಕ್ಷದಷ್ಟು ನೋಂದಣಿ ದಾಟಿದೆ.
* 20 ಕೋಟಿಗೂ ಹೆಚ್ಚು ಅಮೆರಿಕನ್ನರು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದು, ಅಷ್ಟೂ ಜನರಿಗೆ ಮನವಿಯನ್ನು ತಲುಪಿಸಲಾಗುತ್ತಿದೆ. ಚುನಾವಣೆಯಲ್ಲಿ, ಹೇಗೆ, ಎಲ್ಲ ಮತ ಚಲಾಯಿಸಬೇಕೆಂಬ ವಿವರಗಳನ್ನು ಫೇಸ್‌ಬುಕ್ ತಲುಪಿಸುತ್ತಿದೆ.
* ‘ಕೊರೊನಾ ವೈರಸ್ ಸೋಂಕಿನಿಂದ ಮತದಾನ ಕೇಂದ್ರಗಳು ಅಪಾಯಕಾರಿ‘ ಎಂದು ತಪ್ಪು ಮಾಹಿತಿ ನೀಡುವ ಮೂಲಕ ಮತದಾನಕ್ಕೆ ಹೋಗುವವರಿಗೆ ನಿರಾಸೆ ಮೂಡಿಸುವಂತಹ ಪೋಸ್ಟ್‌ಗಳನ್ನು ಫೇಸ್‌ಬುಕ್ ತೆಗೆದು ಹಾಕುತ್ತಿದೆ.
* ಮತದಾರರನ್ನು ಬೆದರಿಸಲು ಪ್ರಯತ್ನಿಸುವ ಪೋಸ್ಟ್‌ಗಳನ್ನು ತೆಗೆದುಹಾಕುವುದಾಗಿಯೂ ಫೇಸ್‌ಬುಕ್ ವಾಗ್ದಾನ ಮಾಡಿದೆ. ಜತೆಗೆ, ‘ಮತಗಟ್ಟೆಗಳನ್ನು ರಕ್ಷಿಸಿ' ಎಂದು ಸ್ವಯಂ ಸೇವಕರಿಗೆ ಕರೆ ನೀಡಿರುವ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವೀಡಿಯೊವನ್ನು ಫೇಸ್‌ಬುಕ್ ತೆಗೆದು ಹಾಕಿದೆ.
* ಮತದಾನದ ಮೇಲೆ ಪರಿಣಾಮ ಬೀರಬಹುದಾದ ಸುಳ್ಳು ಮಾಹಿತಿಯನ್ನು ಬೇರು ಸಹಿತ ಕಿತ್ತು ಹಾಕಲು ಫೇಸ್‌ಬುಕ್ ಹೆಚ್ಚು ಶ್ರಮ ವ್ಯಯಿಸಿದೆ.
* ಎಎಫ್‌ಪಿ ಸೇರಿದಂತೆಸುದ್ದಿಯಲ್ಲಿರುವ ಸತ್ಯಾಂಶ ಪರಿಶೀಲಿಸುವ (ಫ್ಯಾಕ್ಟ್ ಚೆಕ್) ಹತ್ತು ಹಲವು ಮಾಧ್ಯಮಗಳ ಸಹಭಾಗಿತ್ವ ಪಡೆದಿದೆ.
* ಆರ್ಥಿಕವಾಗಿ ಮತ್ತು ಸಂಪಾದಕೀಯ ವಿಚಾರವಾಗಿ ಸರ್ಕಾರದ ನಿಯಂತ್ರಣದಲ್ಲಿರುವ ಮಾಧ್ಯಮಗಳನ್ನು ಪಟ್ಟಿ ಮಾಡಿ, ಇವುಅಮೆರಿಕರನ್ನು ಗುರಿಯಾಗಿಸಿಕೊಂಡು ಜಾಹಿರಾತು ಪೋಸ್ಟ್ ಮಾಡುವುದನ್ನು ತಪ್ಪಿಸಲು ಫೇಸ್‌ಬುಕ್ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.