ADVERTISEMENT

ಲಿಬಿಯಾ: ಹುಟ್ಟೂರಲ್ಲೇ ಶೋಷಣೆ, ಕನಸು ಹೊತ್ತು ತೆರಳಿದ ನಾಡಲ್ಲಂತೂ ‘ನರಕ’

ವೇಶ್ಯಾವಾಟಿಕೆ ಕೂಪಕ್ಕೆ ಸಿಲುಕಿದ್ದ ಯುವತಿಯ ಮನಮಿಡಿಯುವ ಕಥೆ

ಏಜೆನ್ಸೀಸ್
Published 22 ಜೂನ್ 2021, 4:45 IST
Last Updated 22 ಜೂನ್ 2021, 4:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಡಿನೈನ್‌ (ಟ್ಯುನೇಷಿಯಾ): ಲೈಂಗಿಕ ಗುಲಾಮಗಿರಿ, ವೇಶ್ಯಾವಾಟಿಕೆ ಬಗೆಗಿನ ವರದಿಗಳನ್ನು ಟಿ.ವಿ ವಾಹಿನಿಗಳಲ್ಲಷ್ಟೇ ನೋಡಿದ್ದ ಯುವತಿಯೊಬ್ಬಳು ತನಗೆ ಅರಿವಿಲ್ಲದೆ ಲಿಬಿಯಾದಲ್ಲಿ ಈ ವೇಶ್ಯಾವಾಟಿಕೆಯ ಜಾಲದ ಕೂಪಕ್ಕೆ ಸಿಲುಕಿ ಲೈಂಗಿಕ ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಕರುಣಾಜನಕ ಕಥೆಯಿದು.

ಆಕೆಯ ಹೆಸರು ಆಯಿಷಾ. ಪಶ್ಚಿಮ ಆಫ್ರಿಕಾದ ಗಿನಿಯಾ ಮೂಲದವಳು. ಹೋಟೆಲ್‌ ಮ್ಯಾನೇಜ್‌ಮೆಂಟ್‌ ಪದವೀಧರೆಯಾದ ಆಕೆ ತನ್ನ ಸಂಬಂಧಿಗಳು ಮತ್ತು ನೆರೆ ಹೊರೆಯವರಿಂದಲೇ ಲೈಂಗಿಕ ಶೋಷಣೆಗೆ ಒಳಗಾಗಿದ್ದ ನತದೃಷ್ಟೆ. ಇದರ ಪರಿಣಾಮ ಆಕೆಗೆ ಐದು ಬಾರಿ ಗರ್ಭಪಾತವಾಗಿತ್ತು. ಮಧುಮೇಹಿಯೂ ಆಗಿದ್ದಳು.

ಸಂಬಂಧಿಕರ ಬಲೆಯಿಂದ ತಪ್ಪಿಸಿಕೊಂಡ ಆಕೆ, ಸಿಲುಕಿದ್ದು ಇನ್ನಷ್ಟು ಭಯಂಕರವಾದ ವೇಶ್ಯಾವಾಟಿಕೆಯ ಕೂಪವನ್ನು!!

ADVERTISEMENT

ತನ್ನ ತಾಯ್ನಾಡನ್ನು ತೊರೆಯಲೇಬೇಕು ಎಂದು ನಿರ್ಧರಿಸಿದ್ದ ಆಯಿಷಾ, ನೆರೆಯ ಲಿಬಿಯಾದಲ್ಲಿದ್ದ ತನ್ನ ಮಾಜಿ ಸಹಪಾಠಿಯನ್ನು ಸಂಪರ್ಕಿಸಿ, ಆಕೆಯ ನೆರವಿನಿಂದ ಲಿಬಿಯಾಕ್ಕೆ ಬಂದಳು.

‘ನಾನು ಲಿಬಿಯಾಕ್ಕೆ ಬರುತ್ತಿದ್ದಂತೆಯೇ ನನ್ನ ಸ್ನೇಹಿತೆಯೇ ನನ್ನ ಬಳಿ ಪುರುಷರನ್ನು ಬಿಟ್ಟು ಲೈಂಗಿಕ ದೌರ್ಜನ್ಯ ಎಸಗಲು ಕಾರಣಳಾದಳು’ ಎಂದು ಕಣ್ಣೀರು ಹಾಕುತ್ತಾರೆ ಆಯಿಷಾ.

‘ನನ್ನನ್ನು ಕೋಣೆಯೊಂದರಲ್ಲಿ ಕೂಡಿಹಾಕಿದ್ದ ಸ್ನೇಹಿತೆ, ನಾಯಿಗೆ ನೀಡುವಂತೆ ಊಟ ನೀಡುತ್ತಿದ್ದಳು. ನಂತರ ಕೋಣೆಗೆ ಮದ್ಯಪಾನ ಮಾಡಿದ ಪುರುಷ ಬರುತ್ತಿದ್ದ. ಬಳಿಕದ್ದು ನನಗೆ ನೆನಪಿಲ್ಲ’ ಎಂದು ನಡುಗುತ್ತ, ಗದ್ಗದಿತರಾಗಿ ಹೇಳುತ್ತಾರೆ.

ಮೂರು ತಿಂಗಳು ವೇಶ್ಯಾವಾಟಿಕೆಯ ಕೂಪದಲ್ಲಿದ್ದ ಆಯಿಷಾ ಮೇಲೆ ವ್ಯಕ್ತಿಯೊಬ್ಬ ಕರುಣೆ ತೋರಿದ. ಆಕೆಯನ್ನು ಬಂಧಿಸಿದ್ದ ವ್ಯಕ್ತಿಗೆ ಬೆದರಿಕೆ ಹಾಕಿ ಆಯಿಷಾಳನ್ನು ಬಿಡಿಸಿದ ಆತ, ಹಣಕಾಸಿನ ನೆರವನ್ನೂ ನೀಡಿ ಆಕೆಯನ್ನು ಟ್ಯುನೇಶಿಯಾಗೆ ಕಳುಹಿಸಿಕೊಟ್ಟ.

ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿರುವ ಆಯಿಷಾ, ಕಳೆದ ವರ್ಷದ ಕೊನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಯುರೋಪಿನಲ್ಲಿ ಜೀವನ ಕಳೆಯುವ ಕನಸು ಕಾಣುತ್ತಿದ್ದಾರೆ. ‘ನನಗೆ ಎದುರಾದಂತಹ ಕಷ್ಟಗಳು ನನ್ನ ವೈರಿಗೂ ಬರಬಾರದು’ಎಂದು ಹೇಳುತ್ತಾರೆ.

ಎರಡು ವರ್ಷಗಳಿಂದ, ಅವರು ದಕ್ಷಿಣ ಟ್ಯುನೇಷಿಯಾದ ಮೆಡೆನೈನ್‌ನಲ್ಲಿ ಇತರ ವಲಸೆ ಮಹಿಳೆಯರೊಂದಿಗೆ ವಾಸಿಸುತ್ತಿದ್ದಾರೆ. ಆಯಿಷಾ ಅವರಂತೆ ಇಲ್ಲಿನ ಲೈಂಗಿಕ ಗುಲಾಮಗಿರಿ ಕೂಪದಲ್ಲಿ ಸಿಲುಕಿದ ಬಹುತೇಕ ಮಹಿಳೆಯರದ್ದೂ ವಿಭಿನ್ನ ಕಥೆಗಳಿವೆ.

ಲಿಬಿಯಾದಲ್ಲಿ ಒಂಟಿ ಮಹಿಳೆಯರ ಮೇಲೆ ಈ ರೀತಿಯ ದೌರ್ಜನ್ಯಗಳು ಹೆಚ್ಚು. ಹೆಚ್ಚಿನವರು ವೇಶ್ಯಾವಾಟಿಕೆ, ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ ಎಂದು ಸ್ಥಳೀಯ ರೆಡ್ ಕ್ರೆಸೆಂಟ್ ಮುಖ್ಯಸ್ಥ ಮೊಂಗಿ ಸ್ಲಿಮ್ ಹೇಳುತ್ತಾರೆ.

ವಲಸೆ ಮಾರ್ಗಗಳಲ್ಲಿ, ಬಂಧನ ಕೇಂದ್ರಗಳಲ್ಲಿ, ಕಾರಾಗೃಹಗಳಲ್ಲಿ ವಲಸಿಗರ ವಿರುದ್ಧ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ವಿಶ್ವಸಂಸ್ಥೆ–2019ರ ವರದಿ ತಿಳಿಸಿದೆ. ಇಂಥ ಅಪರಾಧ ಕೃತ್ಯಗಳು ಲಿಬಿಯಾದಲ್ಲಿ 2014ರಿಂದಲೂ ಹೆಚ್ಚಿದೆ.

ಲಿಬಿಯಾದಲ್ಲಿ ಮೂರು ವಲಸೆಗಾರರ ಬಂಧನ ಕೇಂದ್ರಗಳನ್ನು 2019ರ ಮಧ್ಯದಲ್ಲಿ ಮುಚ್ಚಲಾಯಿತ್ತು. ಲೈಂಗಿಕ ಅಪರಾಧಗಳನ್ನು ಎದುರಿಸಲು ರಕ್ಷಣಾ ಅಧಿಕಾರಿಗಳನ್ನು ನಿಯೋಜಿಸಲು ವಿಶ್ವಸಂಸ್ಥೆ ಕಳೆದ ವರ್ಷ ನಿರ್ಧರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.