ADVERTISEMENT

ವಿಶ್ವದಾದ್ಯಂತ 8ನೇ ವರ್ಷದ ಯೋಗ ದಿನದ ಸಂಭ್ರಮಾಚರಣೆ

ವಿವಿಧ ದೇಶಗಳ ರಾಜಧಾನಿಗಳಲ್ಲಿ ಭಾರತದ ಹೈಕಮಿಷನ್ ವತಿಯಿಂದ ಕಾರ್ಯಕ್ರಮ

ಪಿಟಿಐ
Published 21 ಜೂನ್ 2022, 11:23 IST
Last Updated 21 ಜೂನ್ 2022, 11:23 IST
8ನೇ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ಯಾಲೆಸ್ತೇನ್‌ನಲ್ಲಿ ಯುವಕರು ಯೋಗಾಸನಗಳನ್ನು ಮಾಡಿದರು -ಎಎಫ್‌ಪಿ ಚಿತ್ರ
8ನೇ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಪ್ಯಾಲೆಸ್ತೇನ್‌ನಲ್ಲಿ ಯುವಕರು ಯೋಗಾಸನಗಳನ್ನು ಮಾಡಿದರು -ಎಎಫ್‌ಪಿ ಚಿತ್ರ   

ಲಂಡನ್/ಬೀಜಿಂಗ್: 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವದಾದ್ಯಂತ ಸಾವಿರಾರು ಜನರು ಉತ್ಸುಕತೆಯಿಂದಲೇ ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ 2 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಾಮೂಹಿಕ ಯೋಗ ದಿನಾಚರಣೆ ಆಚರಿಸಲಾಯಿತು.

ಈ ಪ್ರಯುಕ್ತ ಬ್ರಿಟನ್‌ನ ಹಲವು ಭಾಗಗಳಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಇನ್ನು ಲಂಡನ್‌ನಲ್ಲಿ ಭಾರತದ ಹೈಕಮಿಷನ್ ಮೂಲಕ ಕಳೆದೊಂದು ವಾರದಿಂದಲೂ ಯೋಗ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಂಗಳವಾರ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದಲ್ಲಿ 8ನೇ ಯೋಗ ದಿನವನ್ನು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು.

ಅಲ್ಲದೆ, ನೇಪಾಳ ರಾಜಧಾನಿ ಕಠ್ಮಂಡು, ಚೀನಾ ರಾಜಧಾನಿ ಬೀಜಿಂಗ್, ಆಸ್ಟ್ರೇಲಿಯಾ ರಾಜಧಾನಿ ಕ್ಯಾನ್‌ಬೆರಾ ಹಾಗೂ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಸೇರಿದಂತೆ ವಿವಿಧ ದೇಶಗಳ ರಾಜಧಾನಿಗಳಲ್ಲಿ ಭಾರತದ ಹೈಕಮಿಷನ್ ನೇತೃತ್ವದಲ್ಲಿ ಯೋಗ ದಿನವನ್ನು ಆಯೋಜಿಸಲಾಗಿತ್ತು. ಇನ್ನು ಕೊಲಂಬೊದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಪ್ರಧಾನಿ ರಾನೀಲ್ ವಿಕ್ರಮಸಿಂಘೆ ಸೇರಿದಂತೆ ಹಲವು ಗಣ್ಯರು ಯೋಗಾಸನಗಳನ್ನು ಮಾಡಿದರು.

ADVERTISEMENT

ಯೋಗದ ಶಕ್ತಿಯೇ ಏಕತೆ: ವಿಶ್ವಸಂಸ್ಥೆ

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಮುಖ್ಯ ಕಚೇರಿ ಇರುವ ನಾರ್ಥ್ ಲಾನ್‌ನಲ್ಲಿ ಏರ್ಪಡಿಸಲಾಗಿದ್ದ 8ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ವಿಶ್ವಸಂಸ್ಥೆಯ ಗಣ್ಯರು, ರಾಯಭಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗಿಯಾದರು.

ಯೋಗ ದಿನಾಚರಣೆ ಉದ್ದೇಶಿಸಿ‘ನಮಸ್ತೆ’ ಎಂದು ಭಾಷಣ ಆರಂಭಿಸಿದ ವಿಶ್ವಸಂಸ್ಥೆಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹೀದ್ ಅವರು, ‘ಯೋಗ ಎಂದರೆ ಏಕತೆ, ಬೌದ್ಧಿಕ ಸಾಮರ್ಥ್ಯ, ದೇಹ ಮತ್ತು ಆಧ್ಯಾತ್ಮಿಕತೆಗೆ ಸಂಪರ್ಕಿಸುವ ಮಾರ್ಗವಾಗಿದೆ’ ಎಂದು ಹೇಳಿದರು.

ಯೋಗದ ಶಕ್ತಿಯು ಎಲ್ಲರಿಗೂ ಆರೋಗ್ಯಕರ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಏಕತೆಯ ಶಕ್ತಿಯಾಗಿದೆ. ಕೊರೊನಾ ಪರಿಣಾಮದಿಂದ ಇಡೀ ವಿಶ್ವವೇ ಆತಂಕ ಮತ್ತು ಖಿನ್ನತೆಗೆ ಒಳಗಾಗಿರುವ ಈ ಸಂದರ್ಭದಲ್ಲಿ ಯೋಗದ ಅಭ್ಯಾಸವು ಮಹತ್ವದ್ದಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.