ADVERTISEMENT

ಜಪಾನ್‌: ಯೋಶಿಹಿದೆ ಸುಗಾ ನೂತನ ಪ್ರಧಾನಿ?

ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷರಾಗಿ ಆಯ್ಕೆ

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 7:41 IST
Last Updated 14 ಸೆಪ್ಟೆಂಬರ್ 2020, 7:41 IST
ಯೋಶಿಹಿದೆ ಸುಗಾ
ಯೋಶಿಹಿದೆ ಸುಗಾ   

ಟೋಕಿಯೊ: ಜಪಾನ್‌ನ ಆಡಳಿತಾರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷರಾಗಿ ಯೋಶಿಹಿದೆ ಸುಗಾ ಆಯ್ಕೆಯಾಗಿದ್ದಾರೆ. ಇದರಿಂದಾಗಿ, ನೂತನ ಪ್ರಧಾನಿಯಾಗಿ ಆಯ್ಕೆಯಾಗುವ ಸುಗಾ ಅವರ ಹಾದಿ ಸುಗಮವಾಗಿದೆ.

ಸೋಮವಾರ ನಡೆದ ಚುನಾವಣೆಯಲ್ಲಿ ಸುಗಾ ಅವರು 377 ಮತಗಳನ್ನು ಪಡೆದರು. ಇತರ ಇಬ್ಬರು ಪ್ರತಿಸ್ಪರ್ಧಿಗಳು ಒಟ್ಟು 157 ಮತಗಳನ್ನು ಮಾತ್ರ ಪಡೆದರು.

ಅನಾರೋಗ್ಯದ ಕಾರಣ ಶಿಂಜೊ ಅಬೆ ಅವರು ಕಳೆದ ತಿಂಗಳು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರಿಂದ ಉತ್ತರಾಧಿಕಾರಿಯ ಆಯ್ಕೆ ನಡೆಯಿತು. ಪ್ರಸ್ತುತ ಸುಗಾ ಅವರು ಮುಖ್ಯ ಸಂಪುಟ ಕಾರ್ಯದರ್ಶಿಯಾಗಿದ್ದಾರೆ.

ADVERTISEMENT

ಬುಧವಾರ ಸಂಸತ್‌ನಲ್ಲಿ ಪ್ರಧಾನಿ ಆಯ್ಕೆಗೆ ಚುನಾವಣೆ ನಡೆಯಲಿದೆ.ಲಿಬರಲ್‌ ಡೆಮಾಕ್ರಟಿಕ್‌ ಪಕ್ಷ ಸಂಸತ್‌ನಲ್ಲಿ ಬಹುಮತ ಹೊಂದಿರುವುದರಿಂದ ಸುಗಾ ಅವರು ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.

ಶಿಂಜೊ ಅಬೆ ಅವರಿಗೆ ಹಲವು ವರ್ಷಗಳಿಂದ ಆಪ್ತರಾಗಿರುವ ಸುಗಾ ಅವರು, ಸರ್ಕಾರದ ನೀತಿ ನಿರೂಪಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

’ನಾನೊಬ್ಬ ಸುಧಾರಕ. ಅಧಿಕಾರಿಶಾಹಿಯ ತೊಡಕುಗಳನ್ನು ನಿವಾರಿಸಿ ನೀತಿಗಳನ್ನು ಜಾರಿಗೊಳಿಸಲು ಶ್ರಮಿಸಿದ್ದೇನೆ’ ಎಂದು ಸುಗಾ ಹೇಳಿದ್ದಾರೆ.

ತವರಿನಲ್ಲಿ ರಾಜಕೀಯ ಕೌಶಲ ಮೆರೆದಿರುವ ಸುಗಾ ಅವರು ವಿದೇಶಕ್ಕೆ ತೆರಳಿದ್ದು ಕಡಿಮೆ. ಅವರ ರಾಜತಾಂತ್ರಿಕ ಕೌಶಲ ಬಗ್ಗೆಯೂ ಹೆಚ್ಚು ಪರಿಚಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.