ಮೊಹಮ್ಮದ್ ಯೂನುಸ್
–ಪಿಟಿಐ ಚಿತ್ರ
ಢಾಕಾ: ಬಾಂಗ್ಲಾದೇಶ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರರಾಗಿ ಮೊಹಮ್ಮದ್ ಯೂನುಸ್ ಅವರೇ ಮುಂದುವರಿಯಲಿದ್ದಾರೆ ಎಂದು ಸಚಿವ ಸಂಪುಟದ ಸಲಹೆಗಾರರೊಬ್ಬರು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಯೂನುಸ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಎರಡು ದಿನಗಳ ಹಿಂದೆ ಅವರ ಆಪ್ತರೊಬ್ಬರು ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
‘ಅವರು(ಯೂನುಸ್) ಎಂದಿಗೂ ಹುದ್ದೆ ತ್ಯಜಿಸುವುದಾಗಿ ತಿಳಿಸಿರಲಿಲ್ಲ. ನಮಗೆ ವಹಿಸಿದ ಜವಾಬ್ದಾರಿಯಲ್ಲಿ ಹಲವು ಅಡೆತಡೆಗಳು ಎದುರಾಗಿದ್ದರೂ ಕೂಡ ಅದನ್ನು ನಿವಾರಿಸಿ ಮುನ್ನಡೆಯಲಿದ್ದೇವೆ’ ಎಂದು ಸರ್ಕಾರದ ಯೋಜನಾ ಸಲಹೆಗಾರ ವಾಹಿದುದ್ದೀನ್ ಮಹಮ್ಮುದ್ ತಿಳಿಸಿದ್ದಾರೆ.
‘ಯೂನುಸ್ ಅವರು ಖಂಡಿತವಾಗಿಯೂ ಆ ಹುದ್ದೆಯಲ್ಲಿ ಉಳಿಯಲಿದ್ದಾರೆ’ ಎಂದು ಮಹಮ್ಮುದ್ ಸ್ಪಷ್ಟಪಡಿಸಿದರು.
‘ಸರ್ಕಾರದಲ್ಲಿರುವ ಪ್ರತಿಯೊಬ್ಬ ಸಲಹೆಗಾರರಿಗೂ ವಹಿಸಿರುವ ಜವಾಬ್ದಾರಿ ಮಹತ್ವದ್ದಾಗಿದೆ. ನಾವು ಯಾವುದೇ ಕಾರಣಕ್ಕೂ ಈ ಕರ್ತವ್ಯವನ್ನು ತ್ಯಜಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
‘ಈಗಿನ ಪರಿಸ್ಥಿತಿಯಲ್ಲಿ ಯೂನುಸ್ ಅವರು ಕೆಲಸ ಮಾಡಲು ಸಾಧ್ಯವಿಲ್ಲ, ಹೀಗಾಗಿ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ’ ಎಂದು ವಿದ್ಯಾರ್ಥಿಗಳ ನೇತೃತ್ವ ಹೊಂದಿರುವ ನ್ಯಾಷನಲ್ ಸಿಟಿಜನ್ ಪಕ್ಷದ ನಾಯಕರು ಎರಡು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.