ADVERTISEMENT

ವಿದೇಶ ಪ್ರವಾಸ: ಹೆಚ್ಚು ಜಾಗರೂಕತೆ ವಹಿಸಲು ತನ್ನ ಪ್ರಜೆಗಳಿಗೆ ಅಮೆರಿಕದ ಎಚ್ಚರಿಕೆ

ಅಲ್‌ಕೈದಾ ಬೆಂಬಲಿಗರಿಂದ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಸೂಚನೆ

ಪಿಟಿಐ
Published 3 ಆಗಸ್ಟ್ 2022, 14:08 IST
Last Updated 3 ಆಗಸ್ಟ್ 2022, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಅಲ್‌ಕೈದಾ ಬೆಂಬಲಿಗರು ದೇಶದ ಪ್ರಜೆಗಳು, ಕಚೇರಿಗಳ ಸಿಬ್ಬಂದಿ ಅಥವಾ ಸ್ವತ್ತುಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ, ವಿದೇಶಗಳಿಗೆ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಹೆಚ್ಚು ಜಾಗರೂಕತೆ ಅಗತ್ಯ ಎಂದು ಅಮೆರಿಕ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

ಅಲ್‌ಕೈದಾ ಸಂಘಟನೆ ಮುಖ್ಯಸ್ಥ ಅಯ್ಮನ್ ಅಲ್‌ ಜವಾಹಿರಿಯನ್ನು ಹತ್ಯೆ ಮಾಡಿದ ಮರುದಿನವೇ ಅಮೆರಿಕ ಈ ಎಚ್ಚರಿಕೆ ನೀಡಿದೆ.

‘ಭಯೋತ್ಪಾದಕರು ಹೆಚ್ಚಿನ ಸಂದರ್ಭಗಳಲ್ಲಿ ಏಕಾಏಕಿ ದಾಳಿಯನ್ನೇ ನಡೆಸುತ್ತಾರೆ. ಹೀಗಾಗಿ, ವಿದೇಶಗಳಿಗೆ ಪ್ರಯಾಣಿಸುವ ವೇಳೆಯಲ್ಲಿ ಹೆಚ್ಚು ಜಾಗರೂಕತೆಯಿಂದ ಇರುವುದು ಅಗತ್ಯ. ಪರಿಸ್ಥಿತಿಗೆ ಅನುಗುಣವಾಗಿ ಹೇಗೆ ವರ್ತಿಸಬೇಕು ಎಂಬ ಬಗ್ಗೆಯೂ ಸಿದ್ಧತೆ ಬೇಕು’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

‘ಬೇರೆ ದೇಶಗಳಲ್ಲಿದ್ದಾಗ, ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳತ್ತ ಗಮನ ಹರಿಸಬೇಕು. ಹತ್ತಿರದ ರಾಯಭಾರಿ ಅಥವಾ ಕಾನ್ಸುಲೆಟ್ ಕಚೇರಿಯೊಂದಿಗೆ ಸಂಪರ್ಕದಲ್ಲಿರಬೇಕು’ ಎಂದೂ ತಿಳಿಸಲಾಗಿದೆ.

ಜವಾಹಿರಿ ವಾಸಸ್ಥಾನದ ಬಗ್ಗೆ ಮಾಹಿತಿ ಇರಲಿಲ್ಲ: ವಿಶ್ವಸಂಸ್ಥೆ

ವಿಶ್ವಸಂಸ್ಥೆ: ‘ಅಲ್‌ಕೈದಾ ಮುಖ್ಯಸ್ಥ ಅಯ್ಮನ್ ಅಲ್‌ ಜವಾಹಿರಿ ಎಲ್ಲಿದ್ದ ಎಂಬ ಬಗ್ಗೆ ವಿಶ್ವಸಂಸ್ಥೆಗೆ ಮಾಹಿತಿಯೇ ಇರಲಿಲ್ಲ’ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ದುಜಾರಿಕ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ವಿಶ್ವಸಂಸ್ಥೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಜಾಗತಿಕ ಸಹಕಾರವನ್ನು ಬಲಪಡಿಸಲು ಶ್ರಮಿಸಲಿದೆ’ ಎಂದು ಹೇಳಿದರು.

‘ಬಾಲ್ಕನಿಯಲ್ಲಿ ಒಬ್ಬನೇ ಓದುತ್ತಿದ್ದಾಗ ಜವಾಹಿರಿ ಹತ್ಯೆ’

ನ್ಯೂಯಾರ್ಕ್: ಅಲ್‌ಕೈದಾ ಮುಖ್ಯಸ್ಥ ಅಯ್ಮನ್‌ ಅಲ್‌ ಜವಾಹಿರಿ ಕಾಬೂಲ್‌ನ ತನ್ನ ‘ಸುರಕ್ಷಿತ ಬಂಗಲೆ’ಯ ಬಾಲ್ಕನಿಯಲ್ಲಿ ಮುಂಜಾನೆ ವೇಳೆ ಒಬ್ಬನೇ ಓದುತ್ತಾ ಕುಳಿತುಕೊಳ್ಳುವುದನ್ನು ಇಷ್ಟಪಡುತ್ತಿದ್ದ. ಇದೇ ಸಂದರ್ಭವನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಿದ ಸಿಐಎ, ನಿಖರ ದಾಳಿ ನಡೆಸುವ ಕ್ಷಿಪಣಿ ಬಳಸಿ ಆತನನ್ನು ಹತ್ಯೆ ಮಾಡಿತು ಎಂದು ವರದಿಗಳು ಹೇಳಿವೆ.

ಈ ಬಗ್ಗೆ ನ್ಯೂಯಾರ್ಕ್‌ ಟೈಮ್ಸ್ ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿದೆ.

‘ಕ್ಷಿಪಣಿಯಿಂದ ನಡೆಸುವ ದಾಳಿ ನಿಖರವಾಗಿ ಗುರಿಯನ್ನು ತಲುಪುವಂತಿರಬೇಕು ಹಾಗೂ ಸುತ್ತಮುತ್ತಲು ಇರುವ ವ್ಯಕ್ತಿಗಳಿಗೆ/ ಸ್ವತ್ತುಗಳಿಗೆ ಹಾನಿಯಾಗಬಾರದು. ಇಂಥ ಸಂದರ್ಭಗಳನ್ನೇ ಹುಡುಕಿ ಸಿಐಎ ಕಾರ್ಯಾಚರಣೆ ನಡೆಸುತ್ತದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇಡೀ ಕಾರ್ಯಾಚರಣೆ ನಡೆದ ಬಗೆ ಹಾಗೂ ಕಾರ್ಯಾಚರಣೆಗಾಗಿ ಹೆಣೆದ ತಂತ್ರಗಳನ್ನು ಸಹ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.