ADVERTISEMENT

ಯುದ್ಧಾಪರಾಧ: ವಿಶೇಷ ನ್ಯಾಯಮಂಡಳಿ ರಚನೆಗೆ ಝೆಲೆನ್‌ಸ್ಕಿ ಒಪ್ಪಿಗೆ

ಎಪಿ
Published 26 ಜೂನ್ 2025, 14:54 IST
Last Updated 26 ಜೂನ್ 2025, 14:54 IST
Volodymyr Zelenskyy
Volodymyr Zelenskyy   

ದಿ ಹೇಗ್‌: ಉಕ್ರೇನ್‌ ವಿರುದ್ಧದ ಯುದ್ಧಾಪರಾಧದಲ್ಲಿ ಭಾಗಿಯಾಗಿರುವ ರಷ್ಯಾದ ಮುಖಂಡರು, ಹಿರಿಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿ, ಶಿಕ್ಷಿಸಲು ಅಂತರರಾಷ್ಟ್ರೀಯ ನ್ಯಾಯಮಂಡಳಿ ಸ್ಥಾಪಿಸುವ ಯೋಜನೆಗೆ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅಧಿಕೃತ ಒಪ್ಪಿಗೆ ನೀಡಿದ್ದಾರೆ. 

ಉಕ್ರೇನ್‌ ಮತ್ತು ಯೂರೋಪ್‌ ಖಂಡದ ಅತ್ಯುನ್ನತ ಮಾನವ ಹಕ್ಕುಗಳ ಸಂಸ್ಥೆಯಾಗಿರುವ ಯೂರೋಪ್‌ ಕೌನ್ಸಿಲ್ ನಡುವಿನ ಒಪ್ಪಂದದಂತೆ ಅಂತರರಾಷ್ಟ್ರೀಯ ನ್ಯಾಯಮಂಡಳಿ ರಚನೆಗೊಳ್ಳಲಿದೆ. ‘ದಿ ಹೇಗ್‌’ನಲ್ಲೇ ನ್ಯಾಯಾಲಯ ಸ್ಥಾಪನೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಆದರೆ, ಸ್ಥಳ ಇನ್ನೂ ನಿಗದಿಯಾಗಿಲ್ಲ. 

ಉಕ್ರೇನ್‌ನ ಜನವಸತಿ ಪ್ರದೇಶಗಳ ಮೇಲೆ ಬಾಂಬ್‌ ದಾಳಿ ನಡೆಸಿ ಅಪಾರ ಸಂಖ್ಯೆಯ ಜನರ ಸಾವಿಗೆ ಕಾರಣವಾಗಿರುವುದು, ಮೂಲಸೌಕರ್ಯ ಧ್ವಂಸಗೊಳಿಸಿರುವುದು, ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಚಿತ್ರಹಿಂಸೆ ನೀಡಿರುವುದು ಸೇರಿದಂತೆ ರಷ್ಯಾದ ಅಧಿಕಾರಿಗಳ ವಿರುದ್ಧ ಹಲವು ಗಂಭೀರ ಯುದ್ದಾಪರಾಧ ಆರೋಪಗಳನ್ನು ಉಕ್ರೇನ್‌ ಮಾಡಿದೆ. ಆದರೆ, ರಷ್ಯಾ ಈ ಆರೋಪಗಳನ್ನು ಅಲ್ಲಗಳೆದಿದೆ.

ADVERTISEMENT

ಅಂತರರಾಷ್ಟ್ರೀಯ ನ್ಯಾಯಾಲಯ ಸ್ಥಾಪಿಸುವ ಯೋಜನೆಯನ್ನು ನೆದರ್‌ಲೆಂಡ್‌, ಜಪಾನ್‌, ಕೆನಡಾ ಬೆಂಬಲಿಸಿವೆ. ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್‌ ಈ ಯೋಜನೆಯನ್ನು ಬೆಂಬಲಿಸಿದ್ದರು. ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತವು ಇದನ್ನು ಬೆಂಬಲಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.