ADVERTISEMENT

ಅಸಮಾತೋಲನ ನಿವಾರಣೆಗೆ ₹ ₹43,914 ಕೋಟಿ: ಪ್ರೊ.ಎಂ.ಗೋವಿಂದರಾವ್‌ ಸಮಿತಿ ವರದಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 23:15 IST
Last Updated 31 ಜನವರಿ 2026, 23:15 IST
ಪ್ರೊ.ಎಂ.ಗೋವಿಂದರಾವ್‌ ಅವರು ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಿದರು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇದ್ದರು
ಪ್ರೊ.ಎಂ.ಗೋವಿಂದರಾವ್‌ ಅವರು ಸಿದ್ದರಾಮಯ್ಯ ಅವರಿಗೆ ವರದಿಯನ್ನು ಸಲ್ಲಿಸಿದರು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇದ್ದರು   

ಬೆಂಗಳೂರು: ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವರಿಯಾಗಿ  ₹43,914 ಕೋಟಿ ವಿನಿಯೋಗಿಸಬೇಕು ಎಂದು ಈ ಕುರಿತು ರಚಿಸಿದ್ದ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಅಸಮತೋಲನ ನಿವಾರಣೆಗೆ ಪರಿಹಾರ ಕಂಡುಕೊಳ್ಳಲು ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್‌ ಅಧ್ಯಕ್ಷತೆಯ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ವರದಿ ಸಲ್ಲಿಸಿತು.

ಸರ್ಕಾರದ 11 ಇಲಾಖೆಗಳಿಗೆ ಹೆಚ್ಚುವರಿ ಹಣವನ್ನು ಹಂಚಿಕೆ ಮಾಡಿ, ಮೂಲ ಸೌಕರ್ಯ ಅಭಿವೃದ್ಧಿ, ಆರ್ಥಿಕ ಚಟುವಟಿಕೆಗಳು ಹಾಗೂ ಸುಸ್ಥಿರ ಬೆಳವಣಿಗೆಗೆ ವಿನಿಯೋಗಿಸುವಂತೆ ಸೂಚಿಸಿದ್ದು, ಹಿಂದಿಳಿದಿರುವಿಕೆಯ ಸೂಚ್ಯಂಕವನ್ನು ಆಧರಿಸಿ ಆಯಾ ಜಿಲ್ಲೆಗಳಿಗೆ ಅನುದಾನ ಹಂಚಿಕೆ ಮಾಡುವಂತೆ ವರದಿ ಹೇಳಿದೆ. 

ADVERTISEMENT

ಕೃಷಿ ಆಧಾರಿತ ಪ್ರದೇಶಗಳಲ್ಲಿ ಮಳೆ ನೀರು ಕೊಯ್ಲು, ಸೂಕ್ಷ್ಮ ನೀರಾವರಿ, ಕೆರೆ ಪುನರುಜ್ಜೀವನ, ಮಾರುಕಟ್ಟೆ ವಿಸ್ತರಣೆ, ಶೈತ್ಯಾಗಾರ, ಕೃಷಿ ಉತ್ಪಾದನಾ ಕೇಂದ್ರ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.

ಕೆಲ ಮಂಡಳಿಗಳ ವಿಸರ್ಜಿಸಿ:

ವಿವಿಧ ಪ್ರದೇಶಾಭಿವೃದ್ಧಿ ಮಂಡಳಿಗಳ ಕಾರ್ಯವೈಖರಿ ಪರಿಶೀಲಿಸಿರುವ ಸಮಿತಿ, ಅವುಗಳ ವಿಸರ್ಜನೆಗೆ ಸಲಹೆ ನೀಡಿದೆ. ಮಲೆನಾಡು ಅಭಿವೃದ್ಧಿ ಮಂಡಳಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಕರಾವಳಿ ಅಭಿವೃದ್ಧಿ ಮಂಡಳಿ, ಗಡಿ ಅಭಿವೃದ್ಧಿ ಪ್ರಾಧಿಕಾರಗಳ ಕಾರ್ಯನಿರ್ವಹಣೆ ಹಾಗೂ ಅನುದಾನ ಹಂಚಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ಹಿಂದುಳಿವಿಕೆ ಹೋಗಲಾಡಿಸುವಲ್ಲಿ ಈ ಸಂಸ್ಥೆಗಳು ವಿಫಲವಾಗಿವೆ ಎಂದು ಹೇಳಿದೆ. 

ಯಾವುದಕ್ಕೆ ಎಷ್ಟು ಹಂಚಿಕೆ

(₹ಕೋಟಿಗಳಲ್ಲಿ) ಕೃಷಿ;₹2000  ನೀರಾವರಿ;10000 ಕೈಗಾರಿಕೆ;2000 ಹೊಸ ಶಾಲೆ ಶಿಕ್ಷಕರ ನೇಮಕ;12444 ಉನ್ನತ ಶಿಕ್ಷಣ;500 ಕೌಶಲಾಭಿವೃದ್ಧಿ;250 ಆರೋಗ್ಯ ಕ್ಷೇತ್ರ;11770 ಪೌಷ್ಟಿಕಾಂಶಗಳ ಪೂರೈಕೆ;1000 ಪ್ರವಾಸೋದ್ಯಮ;1000  ನಗರಾಭಿವೃದ್ಧಿ;1450 ರಸ್ತೆ ಸಂಪರ್ಕ;1500 

ಅತ್ಯಂತ ಹಿಂದುಳಿದ ಜಿಲ್ಲೆಗಳು 8

ಅಭಿವೃದ್ಧಿ ಮಾನದಂಡಗಳ ಆಧಾರದ ಮೇಲೆ ಕಲಬುರಗಿ ವಿಭಾಗದಲ್ಲಿ 6 ಬೆಳಗಾವಿ ವಿಭಾಗದಲ್ಲಿ 2 ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ ಎಂದು ಸಮಿತಿ ಗುರುತಿಸಿದೆ. ಒಟ್ಟು 23 ಹಿಂದುಳಿದ ಜಿಲ್ಲೆಗಳಲ್ಲಿ 14 ಉತ್ತರ ಕರ್ನಾಟಕದಲ್ಲಿ 9 ದಕ್ಷಿಣ ಕರ್ನಾಟಕ ಭಾಗದಲ್ಲಿದೆ. ಅಭಿವೃದ್ಧಿ ಹೊಂದಿದ ಜಿಲ್ಲೆಗಳು ಎಂಟು ಮಾತ್ರ ಇದ್ದು ಐದು ಮೈಸೂರು ವಿಭಾಗದಲ್ಲಿ ಮೂರು ಬೆಂಗಳೂರು ವಿಭಾಗದಲ್ಲಿ ಕೇಂದ್ರೀಕೃತವಾಗಿದೆ. ಉತ್ತರ ಕರ್ನಾಟಕದ ಒಂದೇ ಒಂದು ಜಿಲ್ಲೆಯನ್ನು ಅಭಿವೃದ್ಧಿ ಹೊಂದಿದ ಜಿಲ್ಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ. ವರದಿ ಪ್ರಕಾರ ಕಲಬುರಗಿ ವಿಭಾಗದ 51 ತಾಲ್ಲೂಕುಗಳಲ್ಲಿ 39 ಅತ್ಯಂತ ಹಿಂದುಳಿದ 9 ಅತಿ ಹಿಂದುಳಿದ ಬೆಳಗಾವಿ ವಿಭಾಗದದಲ್ಲಿ 20 ಅತ್ಯಂತ ಹಿಂದುಳಿದ 34 ಅತಿ ಹಿಂದುಳಿದ 14 ಹಿಂದುಳಿದ ಹಾಗೂ ನಾಲ್ಕು ಮಾತ್ರ ಅಭಿವೃದ್ಧಿ ಹೊಂದಿದ ತಾಲ್ಲೂಕು. ಮೈಸೂರು ವಿಭಾಗದಲ್ಲಿ 35 ಬೆಂಗಳೂರು ವಿಭಾಗದಲ್ಲಿ 20 ಅಭಿವೃದ್ಧಿ ಹೊಂದಿದ ತಾಲ್ಲೂಕುಗಳಿವೆ.

1160 ಕೆಪಿಎಸ್‌ ಶಾಲೆಗೆ ಶಿಫಾರಸು

ಕಲಬುರಗಿ ಬೆಳಗಾವಿ ಮೈಸೂರು ಹಾಗೂ ಬೆಂಗಳೂರು ವಿಭಾಗದಲ್ಲಿ 1160 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳ ಮಾದರಿಯಲ್ಲಿ ಅಭಿವೃದ್ಧಿಪಡಿಸುವಂತೆ ವರದಿ ಶಿಫಾರಸು ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಈಗ ನೀಡುತ್ತಿರುವ ₹5000 ಕೋಟಿ  ವಾರ್ಷಿಕ ಅನುದಾನವನ್ನು 2030-31ರ ಹೊತ್ತಿಗೆ ₹6380 ಕೋಟಿಗೆ ಹೆಚ್ಚಳ ಮಾಡುವಂತೆ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.