ADVERTISEMENT

ತ್ವರಿತ ಆಗಮನ...ಬಹು ಸಂಕೀರ್ಣ!

ಡಾ.ಆಶಾ ಬೆನಕಪ್ಪ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST
ತ್ವರಿತ ಆಗಮನ...ಬಹು ಸಂಕೀರ್ಣ!
ತ್ವರಿತ ಆಗಮನ...ಬಹು ಸಂಕೀರ್ಣ!   

ನವಜಾತ ಶಿಶು ವೈದ್ಯಶಾಸ್ತ್ರ ಒಂದು ಸಂಕೀರ್ಣವಾದ ಕಾರ್ಯ ಕ್ಷೇತ್ರ. ನಾನದನ್ನು ಕಲಿತದ್ದು ಷಿಕಾಗೊದ ಇಲ್ಲಿನೊಯಿಸ್ ವಿಶ್ವವಿದ್ಯಾಲಯದ ಪ್ರೊ. ಸುಮಾ ಪ್ಯಾಟಿ ಅವರ ಬಳಿ. ನವಜಾತ ಶಿಶುಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುತ್ತವೆ (ಜನಿಸಿದಾಗ ಅವುಗಳ ತೂಕ ಕೆಲವೇ ಗ್ರಾಮ್‌ಗಳು) ಮತ್ತು ಪ್ರಸವದ ಅವಧಿಗಿಂತಲೂ (ತಾಯ ಗರ್ಭದಲ್ಲಿರುವ ವಾರಗಳು) ಮೊದಲೇ ಜನಿಸುತ್ತವೆ .
 
ಈ ವಿಶೇಷ ಶಿಶುಗಳ ಬಗ್ಗೆ, ಅವುಗಳನ್ನು ರಕ್ಷಿಸುವ ಮತ್ತು ವಿವಿಧ ಸಮಸ್ಯೆಗಳಿಂದ ಕಾಪಾಡುವ ಬಗ್ಗೆ- ಹೀಗೆ, ಅನೇಕ ವಿಷಯಗಳ ಬಗ್ಗೆ ಹಲವು ಸಂಗತಿಗಳನ್ನು ಪ್ರೊ. ಸುಮಾ ಪ್ಯಾಟಿ ಅವರು ನಮಗೆ ಯಾವಾಗಲೂ ಹೇಳುತ್ತಿದ್ದರು.

ನನ್ನ ಆತ್ಮೀಯರು ಮತ್ತು ಮಾರ್ಗದರ್ಶಿಯೊಬ್ಬರ ಕೊನೆಯ ಮಗನಿಗೆ 10 ವರ್ಷಗಳ ಹಿಂದೆ ಮದುವೆಯಾಗಿತ್ತು. 76ರ ಹರೆಯದ ಅವರನ್ನು ನಾನು ಭೇಟಿ ಮಾಡಿದಾಗಲೆಲ್ಲಾ ತಮ್ಮ ಸೊಸೆಗೆ ಮಗುವಾಗುವ ವರವನ್ನು ದೇವರು ಯಾಕಿನ್ನೂ ಕರುಣಿಸಿಲ್ಲ ಎಂದು ಬೇಸರದಿಂದ ಗೊಣಗುತ್ತಿದ್ದರು.

ಬೆಂಗಳೂರು, ಮುಂಬೈನಂತಹ ನಗರಗಳಲ್ಲಿನ ಅನೇಕ ವೈದ್ಯರುಗಳನ್ನು ಈ ದಂಪತಿ ಭೇಟಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ವೈದ್ಯಕೀಯದ ಪರ್ಯಾಯ ಪದ್ಧತಿಗಳಾದ ಆಯುರ್ವೇದ, ಹೋಮಿಯೋಪಥಿ ತಜ್ಞವೈದ್ಯರಲ್ಲಿ ಔಷಧ ತೆಗೆದುಕೊಂಡಿದ್ದರೂ ಆಕೆ ಗರ್ಭಿಣಿಯಾಗಿರಲಿಲ್ಲ. ಕೊನೆಗವರು ವಿಶೇಷ ಪೂಜೆ, ಹೋಮಗಳನ್ನು ನಡೆಸಿದರು. ಮನೆ ದೇವರು ಕುಕ್ಕೆ ಸುಬ್ರಹ್ಮಣ್ಯಕ್ಕೂ ಹೋಗಿ ಬಂದರು.

ಹತ್ತು ವರ್ಷದ ನಂತರ ಒಂದು ದಿನ (ಕಳೆದ 2011ರಲ್ಲಿ) `ತಮ್ಮ ಸೊಸೆ ಕಡೆಗೂ ಗರ್ಭಿಣಿಯಾದಳು~ ಎಂಬ ಸಿಹಿ ಸುದ್ದಿಯನ್ನು ಅಂಕಲ್  ನೀಡಿದರು. ಅಂದಿನಿಂದ ಆ ಕುಟುಂಬ ಹೆಚ್ಚೂ ಕಡಿಮೆ ನನ್ನ ವಿಸ್ತೃತವಾದ ಕುಟುಂಬವಾಯಿತು. ನಾವೆಲ್ಲರೂ ಸಂಭ್ರಮಾಚರಣೆಯಲ್ಲಿ ಮುಳುಗಿದೆವು. ತಿಂಗಳು, ವಾರ, ದಿನಗಳನ್ನು ಎಣಿಸತೊಡಗಿದೆವು...

ಗುರ್ಗಾವ್‌ನಲ್ಲಿದ್ದ ದಂಪತಿ ತಮ್ಮ ಮಗುವಿನ ಜನನ ತಮ್ಮ ಹುಟ್ಟೂರಾದ ಬೆಂಗಳೂರಿನಲ್ಲೇ ಆಗಬೇಕೆಂದು ನಿರ್ಧರಿಸಿದರು. ಹೀಗಾಗಿ 2011ರ ನವೆಂಬರ್‌ನಲ್ಲಿ ಮಗ ಸೊಸೆ ಬೆಂಗಳೂರಿಗೆ ಬಂದಿಳಿದರು. ಕಾತರಗೊಂಡಿದ್ದ ನಮ್ಮ ಮಾತುಗಳು ಆಕೆಯ ಸೀಮಂತ, ಆಕೆಯನ್ನು ಯಾರು ಮೊದಲು ಆಹ್ವಾನಿಸಬೇಕು, ಯಾವ ಬಳೆ ಖರೀದಿಸಬೇಕು ಮತ್ತು ಅವಳ ಮೆಚ್ಚಿನ ತಿಂಡಿತಿನಿಸುಗಳೇನು ಎಂಬುದರ ಸುತ್ತಲೇ ಮುಳುಗಿತ್ತು.

ಅಂಕಲ್ ಅವರ ಏಳು ತಿಂಗಳ ಗರ್ಭಿಣಿ ಸೊಸೆಯ ಹೊಟ್ಟೆಯನ್ನು ಮೊದಲ ಬಾರಿಗೆ ನೋಡಿದಾಗ ನನ್ನಲ್ಲಿ ಒಂದು ರೀತಿಯ ತಳಮಳ ಉಂಟಾಗಿ ಬಿಳುಚಿಕೊಂಡಂತಾದೆ. ಅದನ್ನು ಅಂಕಲ್ ಸಹ ಗಮನಿಸಿದರು. ಆ ಸಂದರ್ಭದಲ್ಲಿ ನಾನು ಮಾತನಾಡುವ ಗೋಜಿಗೆ ಹೋಗಲಿಲ್ಲ. ನೆಪವೊಂದನ್ನು ಹೇಳಿ ಮನೆಗೆ ಹಿಂದಿರುಗಿದೆ. ಮನೆಯಲ್ಲಿನ ಗದ್ದಲ ಕಡಿಮೆಯಾದ ಬಳಿಕ ದಂಪತಿಯನ್ನು ಕೂರಿಸಿಕೊಂಡು `ಪರಿಸ್ಥಿತಿ ಸರಿಯಿದ್ದಂತೆ ತೋರುತ್ತಿಲ್ಲ~ ಎಂದು ನಿಧಾನವಾಗಿ ವಿವರಿಸಿದೆ.

ಗುರ್ಗಾವ್‌ನಲ್ಲಿನ ಪ್ರಸಿದ್ಧ ಕಾರ್ಪೋರೆಟ್ ಆಸ್ಪತ್ರೆಯಲ್ಲಿನ ಅತ್ಯುತ್ತಮ ವೈದ್ಯರ ಬಳಿ ಪರೀಕ್ಷೆ ಮಾಡಿಸಿದ್ದೇವೆ ಎಂಬ ವಾದವನ್ನು ಇಬ್ಬರೂ ಮುಂದುವರೆಸಿದರು. ಇಲ್ಲಿಯೂ ಅವರಿಗೆ `ಸಪ್ತತಾರಾ~ ಕಾರ್ಪೋರೆಟ್ ಆಸ್ಪತ್ರೆಯೇ ಬೇಕಾಗಿತ್ತು. ದುಡ್ಡು ಅವರಿಗೆ ಮುಖ್ಯ ವಿಷಯವಾಗಿರಲಿಲ್ಲ. ಬೆಂಗಳೂರಿನ ದಕ್ಷಿಣ ಭಾಗವನ್ನೆಲ್ಲಾ ಸುತ್ತುಹಾಕಿದ ದಂಪತಿ, ಕಾರ್ಪೋರೆಟ್ ಆಸ್ಪತ್ರೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡರು.

ಎಂಆರ್‌ಸಿಓಜಿ ವೈದ್ಯರೊಬ್ಬರಿಂದ ಮತ್ತು ವಾಣಿ ವಿಲಾಸ ಆಸ್ಪತ್ರೆಯಲ್ಲಿರುವ ನನ್ನ ಸ್ನೇಹಿತ ಡಾ. ಶ್ರೀನಿವಾಸ್ ಅವರಿಂದ ಎರಡನೇ ಮತ್ತು ಮೂರನೇ ಅಭಿಪ್ರಾಯಗಳನ್ನು ಪಡೆದುಕೊಂಡರು. ನಾವು ಶ್ರವಣಾತೀತ ಧ್ವನಿತರಂಗ ಪರೀಕ್ಷೆಯನ್ನು ತ್ವರಿತವಾಗಿ ನಡೆಸಬೇಕಾಗಿತ್ತು. ಅದಕ್ಕೆ `ಶ್ರೀನಿವಾಸ ಅಲ್ಟ್ರಾಸೌಂಡ್~ನ ಡಾ. ರಾಮಮೂರ್ತಿ (ಭಾರತದ ಅತ್ಯುತ್ತಮ ಸೊನೊಲಾಜಿಸ್ಟ್) ಅವರ ಸಮಯವನ್ನು ವಾರಗಳ ಮಟ್ಟಿಗೆ ಪಡೆದುಕೊಳ್ಳಲಾಯಿತು. ನನ್ನ ಬಾಲ್ಯದ ಸ್ನೇಹಿತನಾಗಿದ್ದ ಅವರು ಅಂದೇ ಸ್ಕ್ಯಾನಿಂಗ್ ನಡೆಸುವಂತೆ ಸೂಚಿಸಿದರು.

ಸ್ಕ್ಯಾನ್ ಮಾಡಿದ ನಂತರ, ಆ ಮಗುವಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಯಿತು. ತಾಯಗರ್ಭದೊಳಗೆ ತೀವ್ರ ಪ್ರಮಾಣದ ಸ್ರವಿಸುವಿಕೆ (ಪಾಲಿಹೈಡ್ರೊಮ್ನಿಯಾಸ್- ಗರ್ಭವೇಷ್ಟನೆ ಸ್ರವಿಕೆ ತೀವ್ರದ ಹೆಚ್ಚಳ) ಆಗುತ್ತಿತ್ತು. “ಟ್ರ್ಯಾಷಿಯೊ- ಈಸಾಫಜಿಯಾಲ್ ಫಿಸ್ತುಲಾ ವಿಥ್ ಅಟ್ರೆಸಿಯಾ” ಎಂಬ ಸಮಸ್ಯೆಯ ಕಾರಣದಿಂದ ಆ ಮಗುವಿಗೆ ಆಹಾರ ನುಂಗುವುದೇ ಸಾಧ್ಯವಾಗುತ್ತಿರಲಿಲ್ಲ. ಪಾಲಿಹೈಡ್ರೊಮ್ನಿಯಾಸ್ ಒಂದು ರೀತಿ ಟೈಮ್ ಬಾಂಬ್ ಇದ್ದಂತೆ- ನೀರು ತುಂಬಿಕೊಂಡಿರುವ ಚೀಲ ಯಾವ ಕ್ಷಣದಲ್ಲಿ ಬೇಕಾದರೂ ಒಡೆದುಹೋಗಬಹುದು!

ಡಿಸೆಂಬರ್ 2, 2011ರ ತಡರಾತ್ರಿ ನನ್ನನ್ನು ಎಬ್ಬಿಸಿದ ಪತಿ, ಅಂಕಲ್‌ರ ಸೊಸೆಯ ಗರ್ಭಕೋಶದ ನೀರಿನ ಚೀಲ ಒಡೆದುಹೋಗಿದ್ದು ತುರ್ತು ಚಿಕಿತ್ಸೆ ಮಾಡಬೇಕಾಗಿದೆ ಎಂಬ ವಿಷಯ ತಿಳಿಸಿದರು. ಕೂಡಲೇ ಡಾ. ಶ್ರೀನಿವಾಸ್ ಅವರಿಗೆ ಫೋನ್ ಮಾಡಿ ಎಬ್ಬಿಸಿದೆ. ಆಕೆಯನ್ನು ತುರ್ತು ಸಿಸೇರಿಯನ್ ನಡೆಸಲು ಆಸ್ಪತ್ರೆಯೊಂದಕ್ಕೆ ತಕ್ಷಣವೇ ವರ್ಗಾಯಿಸುವಂತೆ ಮತ್ತು ಶಿಶು ತಜ್ಞರಿಂದ ಮಗುವನ್ನು ಹೊರತೆಗೆದ ಕೂಡಲೇ ಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಒಂದು ಕ್ಷಣ ಗಾಬರಿಗೊಳಗಾದ ನಾನು, ಅವರು ಹೇಳಿದಂತೆ ಪ್ರತಿಯೊಂದನ್ನೂ ಕಾರ್ಪೋರೆಟ್ ಆಸ್ಪತ್ರೆಯೊಂದರಲ್ಲಿ (ದಂಪತಿ ಆಯ್ಕೆ ಮಾಡಿಕೊಂಡಿದ್ದ ಆಸ್ಪತ್ರೆಯಲ್ಲ) ವ್ಯವಸ್ಥೆ ಮಾಡಿಸುವಲ್ಲಿ ಯಶಸ್ವಿಯಾದೆ. 2011ರ ಡಿಸೆಂಬರ್ 2ರಂದು ಮಗುವನ್ನು ಹೊರಗೆ ತೆಗೆಯಲಾಯಿತು. ಮಗುವಿನ ಮುಚ್ಚಿಹೋಗಿದ್ದ ಅನ್ನನಾಳ (ಉದರಕ್ಕೆ ಸಂಪರ್ಕ ಹೊಂದಿರದೆ) ಮತ್ತು ಶ್ವಾಸಕೋಶದ ಮೇಲೆ ಉಕ್ಕಿ ಹರಿದಿದ್ದ ಲಾಲಾರಸ ಮಗುವಿನ ಉಸಿರಾಟಕ್ಕೆ ತೊಡಕಾಗಿತ್ತು. ಕೂಡಲೇ ಅದನ್ನು ಮುಖ್ಯ ಶಸ್ತ್ರಚಿಕಿತ್ಸೆಗಾಗಿ ಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಯಿತು.

ಏಳು ತಿಂಗಳೂ ತುಂಬದ ಮತ್ತು ಕೇವಲ ಒಂದು ಸಾವಿರ ಗ್ರಾಂ ತೂಗುತ್ತಿದ್ದ ಮಗುವನ್ನು ಐಜಿಐಸಿಎಚ್‌ನ ಶಿಶುವೈದ್ಯ ಡಾ. ರಮೇಶ್ ಎಸ್. ಶಸ್ತ್ರಚಿಕಿತ್ಸೆಗೆ ಒಳಪಡಿಸಿದರು. ಅಂಕಲ್ ಮತ್ತು ನಾನು ಅದರ ಹಿಂದೆಯೇ ಚಿಕಿತ್ಸೆ ಯಶಸ್ವಿಯಾಗಲಿ ಎಂದು ಪ್ರಾರ್ಥನೆ ಮೇಲೆ ಪ್ರಾರ್ಥನೆ ಸಲ್ಲಿಸಿದೆವು. ಈ ಕಾಯುವಿಕೆ ದೀರ್ಘಕಾಲದ್ದು. ಅಂದರೆ 24/7. ಏಳು ದಿನಗಳ ಬಳಿಕ ನಮಗೆ ಶಸ್ತ್ರಚಿಕಿತ್ಸೆ ನಂತರದ ಸಮಸ್ಯೆಗಳು ಎದುರಾದವು.
 
ಸಮಸ್ಯೆಗಳಿನ್ನೂ ಪರಿಹಾರಗೊಂಡಿಲ್ಲ ಎಂದು ದಂಪತಿಯಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಸಿದ್ಧಳಾಗುತ್ತಿದ್ದೆ. ಆದರೆ ಆ ಮಗುವಿನ ಪೋಷಕರು ಸಂತೋಷ ಮತ್ತು ವಿಶ್ವಾಸದಿಂದ ತುಂಬಿಕೊಂಡಿದ್ದರು.

ಶಸ್ತ್ರಚಿಕಿತ್ಸೆಯ ಬಳಿಕ ಮಗುವನ್ನು `ನವಜಾತ ಶಿಶು ತೀವ್ರ ನಿಗಾ ಘಟಕ~ದ ಇನ್‌ಕ್ಯುಬೇಟರ್‌ಗೆ (ಕೃತಕ ಶಾಖೋಪಕರಣ) ವರ್ಗಾಯಿಸಲಾಯಿತು. ಮಗು ಬಹಳ ಬೇಗನೆ ಜನಿಸಿದ್ದರಿಂದ ಅದರ ಶ್ವಾಸಕೋಶಗಳು ತುಂಬಾ ಬಿಗಿಯಾಗಿದ್ದವು. ಹೀಗಾಗಿ ಅದನ್ನು ವೆಂಟಿಲೇಟರ್ (ಕೃತಕ ಶ್ವಾಸಕೋಶ)ದಲ್ಲಿ ಇರಿಸುವುದು ಅಗತ್ಯವಾಗಿತ್ತು ಮತ್ತು `ಸರ್ಫಾಕ್ಟಂಟ್~ ಎಂಬ ಔಷಧ ನೀಡಿ ಶ್ವಾಸಕೋಶವನ್ನು ಚೇತನಗೊಳಿಸಬೇಕಾಗಿತ್ತು.

ಶ್ವಾಸಕೋಶ ಮತ್ತು ಅನ್ನನಾಳ ನಿಧಾನವಾಗಿ ದೇಹದಲ್ಲಿ ಕಾರ್ಯಾಚರಣೆಗೆ ಹೊಂದಿಕೊಳ್ಳಲು ಪ್ರಾರಂಭಿಸುತ್ತಿರುವಂತೆ, ಹತ್ತನೇ ದಿನದಂದು ಮಗುವಿನ ಹೃದಯ ಸಮಸ್ಯೆ ನೀಡಲಾರಂಭಿಸಿತು. `ಪೇಟೆಂಟ್ ಡಾಕ್ಟಸ್ ಆರ‌್ಟೆರಿಯಸಸ್~ ಗರ್ಭದಲ್ಲಿರುವ ಕಾರ್ಯಾಚರಣೆ ನಡೆಸದ ಶ್ವಾಸಕೋಶಗಳಿಗೆ ರಕ್ತವನ್ನು ಬೇರೆ ಮಾರ್ಗದ ಮೂಲಕ ಹರಿಸುವ ಕಾಲುವೆ ಗರ್ಭದೊಳಗೆ ತೆರೆದುಕೊಂಡಿರುತ್ತದೆ.

ಮಗು ಹುಟ್ಟಿದ ನಂತರ ಶ್ವಾಸಕೋಶಗಳು ತೆರೆದುಕೊಂಡು ಈ ಕಾಲುವೆ ಮುಚ್ಚಿಕೊಳ್ಳುತ್ತದೆ. ಆದರೆ ಈ ನತದೃಷ್ಟ ಮಗು ಸೃಷ್ಟಿಯ ದೇಹದಲ್ಲಿದ್ದ ಕಾಲುವೆ ಮುಚ್ಚಿಕೊಂಡಿರಲಿಲ್ಲ. ಅವಳು ಹುಟ್ಟುವಾಗ ಅತಿ ಚಿಕ್ಕದಾಗಿದ್ದು ಚಿಕಿತ್ಸೆ ಮಾಡುತ್ತಿದ್ದ ಶಿಶುವೈದ್ಯರು ದ್ರವರೂಪದ ಔಷಧಗಳ ಮೂಲಕ ಅದನ್ನು ಮುಚ್ಚಲು ಪ್ರಯತ್ನಿಸಿದ್ದರು. ಅದಕ್ಕೆ ದೇಹ ಪ್ರತಿಸ್ಪಂದಿಸಿದಂತೆ ಕಂಡಿತ್ತು.

ಇನ್‌ಕ್ಯುಬೇಟರ್ ಒಳಗಿದ್ದಷ್ಟೂ ಕಾಲ ಮಗುವಿಗೆ ದ್ರವ ಔಷಧ ಮತ್ತು ಆಮ್ಲಜನಕ ನೀಡಲಾಗುತ್ತಿತ್ತು; ಅಲ್ಲದೆ ಆ ಮಗುವಿಗೆ ಹಲವು ಬಗೆಯ ಸೋಂಕುಗಳೂ ತಗುಲಿದ್ದವು. ಈ ರೀತಿಯ ಶಿಶುಗಳಲ್ಲಿ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯವಿರುವುದಿಲ್ಲ. ಪ್ರತಿ ಸೋಂಕನ್ನೂ ಅತಿ ಹೆಚ್ಚಿನ ಮತ್ತಷ್ಟು ಅಧಿಕ ಪ್ರತಿಜೀವಕಗಳ ಮೂಲಕ ಎದುರಿಸಲು ಪ್ರಯತ್ನಿಸಲಾಯಿತು.

ಎದೆಹಾಲಿನ ಶಕ್ತಿಯ ಬಗ್ಗೆ ದೃಢ ನಂಬಿಕೆಯುಳ್ಳ ನಾನು, ಆ ತಾಯಿಗೆ ಎದೆಹಾಲನ್ನು ಹೇಗೆ ಹೊರಗೆ ಹಾಕುವುದು ಮತ್ತು ಮಗುವಿನ ಹೊಟ್ಟೆಗೆ ಹಾಲನ್ನು ಕೊಳವೆ ಮೂಲಕ ಉಣಿಸುವ ಕ್ರಮವನ್ನು ಹೇಳಿಕೊಟ್ಟೆ. ಎದೆಹಾಲಿನಿಂದಾಗಿ ಮಗುವಿನ ತೂಕ ನಿಧಾನ ಮತ್ತು ಸ್ಥಿರವಾಗಿ ಹೆಚ್ಚತೊಡಗಿ 1500 ಗ್ರಾಂಗೆ ಮುಟ್ಟಿತು. ಮಗುವನ್ನು ಮನೆಗೆ ಕರೆದುಕೊಂಡು ಹೋಗುವುದರ ಬಗ್ಗೆಯೂ ನಾವು ಚಿಂತಿಸಿದ್ದೆವು. ಆಸ್ಪತ್ರೆ ವೆಚ್ಚ ಲಕ್ಷಗಳನ್ನು ದಾಟಿತ್ತು. ಈ ಮಧ್ಯೆ ಮಗುವಿನ ತಂದೆ ದಾನ ಮಾಡಿದ 500 ರೂನಲ್ಲಿ ವಾಣಿವಿಲಾಸದ ಎನ್‌ಐಸಿಯುಗೆ ಡಿಜಿಟಲ್ ಥರ್ಮಾಮೀಟರ್ ಅನ್ನು ನಾನು ಕೊಂಡುಕೊಂಡೆ.

ಈ ಪೋಷಕರು ಅತಿ ನಿರೀಕ್ಷೆ ಹೊತ್ತಿದ್ದ `ಪುಟಾಣಿ ಮಗಳ~ನ್ನು ನೋಡಿ ತೀವ್ರ ಬೇಸರಗೊಂಡಿದ್ದರು. ಆಭರಣಗಳನ್ನು ತೊಡಬೇಕಿದ್ದ ಮಗಳು ಹಲವು ಕೊಳವೆ ಮತ್ತು ಯಂತ್ರೋಪಕರಣಗಳಿಂದ ಅಲಂಕೃತಳಾಗಿದ್ದಳು. ಗುಲಾಬಿ ಹೂ ಹಾಸಿಗೆಯಲ್ಲಿ ಅಥವಾ ಬೆಳ್ಳಿ ತೊಟ್ಟಿಲಲ್ಲಿ ಮಲಗಬೇಕಿದ್ದ ಮಗಳು `ಗಾಜಿನ ಕೋಣೆ~ಯೊಳಗಿದ್ದಾಳೆ ಎಂದು ಆ ತಂದೆ ಹಲವು ಬಾರಿ ದುಃಖದಿಂದ ಹೇಳಿದ್ದರು.

ವೈದ್ಯರೊಂದಿಗೆ ಬೆಳಿಗ್ಗೆ ಮತ್ತು ಸಂಜೆ ನಡೆಯುವ ಆಪ್ತಸಮಾಲೋಚನೆಗಾಗಿ ಅವರು ಕಾತರದಿಂದ ಎದುರು ನೋಡುತ್ತಿದ್ದರು. ಒಂದು ಬೆಳಿಗ್ಗೆ ಆಶಾದಾಯಕವಾಗಿದ್ದರೆ ಮತ್ತೊಂದು ಸಂಜೆ ಕಳವಳಕಾರಿಯಾಗಿರುತ್ತಿತ್ತು. ಅವರು ಆ ಅರವತ್ತು ದಿನಗಳನ್ನೂ ಒತ್ತಡದಲ್ಲಿಯೇ ಕಳೆದರು. ಒಮ್ಮೆ ನಾಲ್ಕು ವಾರಗಳ ಸೃಷ್ಟಿ ಮಿದುಳಿನ ರಕ್ತಸ್ರಾವಕ್ಕೆ ತುತ್ತಾಗಿ, ಮತ್ತೆ ವೆಂಟಿಲೇಟರ್ ಒಳಗೆ ಇರಿಸುವಂತಾಯಿತು.

ಅಂಕಲ್ ಮನೆಯಲ್ಲಿ ಆತಂಕ ಇನ್ನಷ್ಟು ದಟ್ಟವಾಗುತ್ತಿದ್ದಂತೆ ಅವರ ಕುಟುಂಬ `ದೈವಿಕ ಹಸ್ತಕ್ಷೇಪ~ದಲ್ಲಿ ಅತಿಯಾದ ನಂಬಿಕೆ ಹೊಂದತೊಡಗಿತು. ಪ್ರತಿದಿನವೂ ವಿಶೇಷ ಪೂಜೆಗಳನ್ನು ನಡೆಸಿದರು, ಸ್ನೇಹಿತರು- ಸಂಬಂಧಿಕರು ಕೊಟ್ಟ ಸಲಹೆಗಳನ್ನೆಲ್ಲ ಅನುಸರಿಸಿದರು. ಮಗು ತೂಕ 1500 ಗ್ರಾಂಗೆ ಹೆಚ್ಚಾದಾಗ ತಂದೆ ಕೆಲಸಕ್ಕಾಗಿ ಹೊರಟರು.
 

ಆದರೆ ಈಗ ಯಾವುದೂ ಸರಿ ಇಲ್ಲ ಎಂದು ಮತ್ತೆ ಅವರನ್ನು ವಾಪಸ್ ಕರೆಸಲಾಯಿತು. ಮಿದುಳಿನೊಳಗೆ ರಕ್ತ ಸ್ರವಿಸುವ ಸಮಸ್ಯೆ ನಿಧಾನವಾಗಿ ಸರಿಯಾಗತೊಡಗಿತು- ಆದರೆ ಮಿದುಳಿನ ಕುಳಿಯ ಗಾತ್ರ ವಿಸ್ತರಿಸತೊಡಗಿತು (ಜಲಮಸ್ತಿಷ್ಕ ರೋಗ). ಮಗುವನ್ನು ಈ ಸ್ಥಿತಿಯಲ್ಲಿ ನೋಡಿದಾಗ ನನ್ನ ಪ್ರೊಫೆಸರ್ ಸುಮಾ ಪ್ಯಾಟಿ ನೆನಪಿಗೆ ಬಂದರು.

ಈ ಮಗುವನ್ನು ನಾವು ಉಳಿಸಲು ಸಾಧ್ಯವೇ? ಪ್ರಶ್ನೆ ಜಟಿಲವಾಗತೊಡಗಿತು. ಆ ಮಗುವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಸಿದ್ಧರಿಲ್ಲದ ಆ ಕುಟುಂಬದ ಸದಸ್ಯರ ಜೊತೆ ನಾನು ಚರ್ಚಿಸಿದೆ (ಆಗ ಆಸ್ಪತ್ರೆ ವೆಚ್ಚ 10 ಲಕ್ಷ ರೂ ದಾಟಿತ್ತು).

ರಕ್ತ ಪರೀಕ್ಷೆ ಮತ್ತು ಮಿದುಳಿನ ಶ್ರವಣಾತೀತ ಧ್ವನಿ (ರಕ್ತಸ್ರಾವ ಮತ್ತು ಮಿದುಳು ಗೂಡು ವಿಸ್ತಾರಗೊಂಡಿರುವುದನ್ನು ಪತ್ತೆಹಚ್ಚಲು) ಮುಂತಾದ ಕಾರಣಗಳಿಗೆ ಮಗುವಿನ ದೇಹದಿಂದ ಹಲವು ಬಾರಿ ರಕ್ತವನ್ನು ಹೊರತೆಗೆಯಲಾಗುತ್ತಿತ್ತು. ಮೊದಲ ನಾಲ್ಕು ವಾರದ ಅವಧಿಯಲ್ಲಿ ಮಗುವನ್ನು ಜಾಂಡೀಸ್ ಆವರಿಸಿತ್ತು.
 
ಜಾಂಡೀಸ್‌ನ ವರ್ಣ ಅಪಕ್ವ ಮಿದುಳಿಗೆ ಹಾನಿ ಮಾಡುವ ಸಂಭವವಿದ್ದದರಿಂದ ಅದಕ್ಕೆ ಬೆಳಕಿನ ಮೂಲಕ (ಫೋಟೋಥೆರಪಿ) ಚಿಕಿತ್ಸೆ ನಡೆಸಬೇಕಿತ್ತು. ಅಲ್ಪ ಕಾಲದ ಚೇತರಿಕೆಯ ಬಳಿಕ ಮಗುವಿನಲ್ಲಿ ಕಿಬ್ಬೊಟ್ಟೆ ಊತ ಕಾಣಿಸಿಕೊಂಡಿತು. ಆಹಾರವನ್ನೆಲ್ಲಾ ವಾಂತಿ ಮಾಡಿಕೊಳ್ಳುತ್ತಿತ್ತು. ಈಗ ಮಗುವಿನಲ್ಲಿ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿತು. ಅಕಾಲಿಕ ಜನನದ ಮಗುವಿಗೆ ಕರುಳಿನ ಸೋಂಕು (ನೆಕ್ರೊಟೈಸಿಂಗ್ ಎಂಟರೊಕಾಲೊಟಿಸ್) ಉಂಟಾಯಿತು.

ಆಹಾರಕ್ಕಾಗಿ ಜೋಡಿಸಲಾಗಿದ್ದ ಕೊಳವೆ (ಈ ಮೊದಲು ಚಿಕಿತ್ಸೆ ನಡೆಸಿ ಅಳವಡಿಸಿದ್ದು) ಉದರ ಭಾಗದಲ್ಲಿ ಇರುವ ಬದಲು ಎದೆಯ ಭಾಗಕ್ಕೆ ಚಲಿಸಿತು.ಇದೆಲ್ಲವೂ ಒಂದರ ಮೇಲೊಂದರಂತೆ ನಡೆಯುತ್ತಿದ್ದಾಗ, ಸೃಷ್ಟಿ ಇದ್ದಕ್ಕಿದ್ದಂತೆ ಪಪ್ಪುಸದ ರಕ್ತಸ್ರಾವಕ್ಕೆ (ಶ್ವಾಸಕೋಶದೊಳಗೆ ರಕ್ತ ಒಸರುವುದು) ತುತ್ತಾದಳು.

ಪೇಟೆಂಟ್ ಡಕ್ಟಸ್ ಆರ್ಟಿರಿಯಸ್ (ಕಾಲುವೆ) ಮತ್ತೆ ತೆರೆದುಕೊಂಡು ಆ ಎಳೆಕಂದಮ್ಮನ ರಕ್ತನಾಳಗಳ ಮೇಲೆ ಅತೀವ ಒತ್ತಡ ಬೀಳತೊಡಗಿತು. ಈಗ ಕುಟುಂಬ ಮತ್ತು ಸ್ನೇಹಿತರು (ನನ್ನನ್ನೂ ಸೇರಿಸಿ) ಎರಡು ಗುಂಪುಗಳಾಗಿ ಒಡೆದುಕೊಂಡವು. ಒಂದು ಗುಂಪು ಮಗುವಿನ ಉಳಿವಿಗಾಗಿ ಏನನ್ನು ಬೇಕಾದರೂ ಮಾಡಲು ಹೋರಾಟಕ್ಕೆ ಸಿದ್ಧರಾಗಿ ದೈವದ ಪರವಾಗಿ ವಾದಿಸುವವರು, ಮತ್ತೊಂದು ಗುಂಪು ಹೆಚ್ಚು ವೈಜ್ಞಾನಿಕವಾಗಿ ಚಿಂತಿಸುವವರದ್ದು.

ಇದು ಹೆಚ್ಚೂ ಕಡಿಮೆ ವಿಜ್ಞಾನ ಮತ್ತು ದೈವಿಕ ಹಸ್ತಕ್ಷೇಪದ ನಡುವಿನ ಪಂದ್ಯದಂತೆ ಕಾಣುತ್ತಿತ್ತು. ನಾನು ಒಂದು ಹಂತದಲ್ಲಿ ಅದರಿಂದ ಹೊರಬಂದುಬಿಟ್ಟೆ! ಬಳಿಕ ಆ ಕುಟುಂಬ ಬಹು ಪ್ರಸಿದ್ಧ ಸಂಸ್ಥೆಯೊಂದರ ಹೃದ್ರೋಗ ತಜ್ಞರನ್ನು ಸಂಪರ್ಕಿಸಿತು. ಮಗುವನ್ನು (ಈಗ ತೂಕ ಕಳೆದುಕೊಂಡು ಸುಮಾರು 1200 ಗ್ರಾಂ ತೂಗುತ್ತಿತ್ತು) ಹೃದ್ರೋಗ ಚಿಕಿತ್ಸೆಗೆ ಒಳಪಡಿಸಲಾಯಿತು. ಹೃದ್ರೋಗ ಶಸ್ತ್ರಚಿಕಿತ್ಸೆಯ ಬೆನ್ನಲ್ಲೇ ಮಗುವಿಗೆ ಹಲವಾರು ಬಗೆಯ ಸಮಸ್ಯೆಗಳು ಆವರಿಸಿಕೊಂಡವು. ಅಂತಿಮವಾಗಿ ಅದು 2012ರ ಜನವರಿ 2ರಂದು ತನ್ನ ಕೊನೆ ಉಸಿರು ಎಳೆಯಿತು. ಆಗ ಮಗುವಿನ ಅಮ್ಮ ತನ್ನ ಮಗುವಿನ ಎರಡನೇ ತಿಂಗಳ ಜನ್ಮದಿನಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು.

ಅವಧಿಗೂ ಮುನ್ನವೇ ಜನಿಸುವ ಮಕ್ಕಳ ತಾಯಂದಿರು ಅವುಗಳ ಜನ್ಮದಿನವನ್ನು ತಿಂಗಳ ಆಧಾರದಲ್ಲಿ ಆಚರಿಸುತ್ತಾರೆ. ನವಜಾತ ಶಿಶು ತೀವ್ರ ನಿಗಾ ಘಟಕದಿಂದ ಮಗು ಸೃಷ್ಟಿಯ ಅಂತ್ಯಸಂಸ್ಕಾರ ಚಿತಾಗಾರದಲ್ಲಿ ನಡೆಯಿತು. ಅವಳು ಮತ್ತೆ ಮನೆಗೆ ಬರಲಾರಳು, ಮನೆಯೆಂದರೆ ಆಕೆಯ ತಂದೆತಾಯಿ ಅತಿಸೂಕ್ಷ್ಮವಾಗಿ ಸಿದ್ಧಪಡಿಸಿದ್ದು. ಮಗುವಿಗೆ ಅಪಾಯವಾಗಬಹುದೆಂದು ಮನೆಯಲ್ಲಿದ್ದ ಎಲ್ಲಾ ಚೂಪಾದ ವಸ್ತುಗಳನ್ನು ಮತ್ತು ಗಾಜುಗಳನ್ನು ತೆಗೆಸಿದ್ದರು, ಜೊತೆಗೆ ಮಗುವಿನ ತಂದೆತಾಯಿಯ ಜವಾಬ್ದಾರಿಯ ಸೂಕ್ಷ್ಮತೆಗಳನ್ನು ತಿಳಿದುಕೊಳ್ಳುತ್ತಿದ್ದರು.

ತಮ್ಮ ಮಗಳು ಬದುಕಲು ಹೋರಾಟ ನಡೆಸಲು ಪ್ರಾರಂಭಿಸಿದ್ದಾಗಿನಿಂದಲೂ ಅವರು ಆಕೆ ಗೆಲ್ಲುತ್ತಾಳೆ ಎಂದು ವಿಶ್ವಾಸ ಹೊಂದಿದ್ದರು. ಎರಡನೇ ಸರ್ಜರಿ ನಂತರ ಸೃಷ್ಟಿ ಅಪಾಯದಿಂದ ಪಾರಾಗಿದ್ದರೆ ಆಕೆಯ ದೇಹದಲ್ಲಿದ್ದ ಆಹಾರ ಕೊಳವೆ (ಅದು ಎದೆ ಭಾಗಕ್ಕೆ ಚಲಿಸಿದ್ದರಿಂದ)ಯನ್ನು ಸರಿ ಜಾಗದಲ್ಲಿ ಇರಿಸಲು ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲು ಯೋಜಿಸಲಾಗಿತ್ತು. ಮಿದುಳಿನ ಕುಳಿಭಾಗದ ವಿಸ್ತಾರವನ್ನು ಕಡಿಮೆ ಮಾಡಲು ನಾಲ್ಕನೇ ಸರ್ಜರಿಗೆ ಆಕೆಯನ್ನು ಒಳಪಡಿಸಬೇಕಿತ್ತು- ಇವೆಲ್ಲವೂ ಅತ್ಯಂತ ಪ್ರಮುಖ ಶಸ್ತ್ರಚಿಕಿತ್ಸೆಗಳಾಗಿದ್ದವು.

ಏಳು ತಿಂಗಳು ತುಂಬುವ ಮೊದಲೇ ಭೂಮಿಗೆ ಬಂದು, ಕೇವಲ 1000 ಗ್ರಾಂ ತೂಗುತ್ತಿದ್ದ ಆ ಮಗು ಎರಡು ದೊಡ್ಡ ಶಸ್ತ್ರಚಿಕಿತ್ಸೆಗಳು ಮತ್ತು ಪ್ರತಿನಿತ್ಯದ ಹಲವು ವಿವಿಧ ಚಿಕಿತ್ಸೆಗಳ ನಡುವೆಯೂ ಬದುಕುವುದಕ್ಕಾಗಿ 60 ದಿನ ಹೋರಾಡಿತು! ಗರ್ಭದೊಳಗಿಂದ ಶಸ್ತ್ರಚಿಕಿತ್ಸೆಯ ಕೊಠಡಿಯೊಳಗೆ ವರ್ಗಾಯಿಸುವ ಸಂದರ್ಭದ ಹೊರತಾಗಿ ತಮ್ಮ ಪ್ರೀತಿಯ ಮೊಮ್ಮಗಳ ಮುಖವನ್ನು ನೋಡಲು ಸಹ ಸಾಧ್ಯವಾಗಲಿಲ್ಲ ಎಂದು ಅಂಕಲ್ ದುಃಖದಿಂದ ಹೇಳಿಕೊಂಡರು.
 
ಅವರ ಪಾಲಿಗೆ ಅತ್ಯಮೂಲ್ಯ ಜೀವವಾಗಿದ್ದ `ಸೃಷ್ಟಿ~ಯ ಒಂದು ಛಾಯಾಚಿತ್ರ ಸಹ ಅವರು ಇಟ್ಟುಕೊಂಡಿರಲಿಲ್ಲ. ಅದರ ಪಕ್ಕದ ಇನ್‌ಕ್ಯೂಬೇಟರ್‌ನಲ್ಲಿದ್ದ ಮಗುವಿನ ಚಿತ್ರ ಬಹುತೇಕ ಸೃಷ್ಟಿಯ ಮುಖವನ್ನೇ ಹೋಲುತ್ತಿತ್ತು. ಹೀಗಾಗಿ ಆ ಮಗುವಿನ ಫೋಟೋಗಾಗಿ ಅದರ ತಾಯಿಯನ್ನು ಸಂಪರ್ಕಿಸಲು ಸೃಷ್ಟಿಯ ತಂದೆತಾಯಿಗಳು ಪ್ರಯತ್ನಿಸುತ್ತಿದ್ದಾರೆ.

ಸಾಫ್ಟ್‌ವೇರ್ ಕಂಪೆನಿ ವೃತ್ತಿಯಲ್ಲಿರುವ ಸರೋಜಾ ಎಂಬುವವರ ಮಗಳಾದ 11 ವರ್ಷದ ನೇಹಾ ಹುಟ್ಟುವಾಗ ಅತಿ ಚಿಕ್ಕದಾಗಿದ್ದಳು (1200 ಗ್ರಾಂ) ಮತ್ತು ಆಕೆ ಇಂದಿಗೂ ನನ್ನ ಆರೈಕೆಯಲ್ಲಿ ಬೆಳೆಯುತ್ತಿದ್ದಾಳೆ ಹಾಗೂ ಆರೋಗ್ಯಪೂರ್ಣವಾಗಿದ್ದಾಳೆ.

ವಾಣಿವಿಲಾಸ ಆಸ್ಪತ್ರೆಯ ಎನ್‌ಐಸಿಯುನಲ್ಲಿ ಮೂರು ತಿಂಗಳಿದ್ದ ವಿಜಯಲಕ್ಷ್ಮಿ ಎಂಬ 700 ಗ್ರಾಂ ತೂಕದ ಮಗುವಿನ ಕಥೆ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತಿದೆ. ಆಕೆ ಏಳನೇ ಭಾರಿ ಗರ್ಭಿಣಿಯಾಗಿದ್ದ ತಾಯಿಯ ಮಗಳು (ಅತಿ ಚಿಕ್ಕವಯಸ್ಸಿನಲ್ಲೇ ಗರ್ಭಿಣಿಯಾದ ಪರಿಣಾಮವಾಗಿ ಯಾವ ಮಕ್ಕಳೂ ಉಳಿದಿರಲಿಲ್ಲ). ಆ ಮಗುವಿಗೆ ಐದು ವರ್ಷ ತುಂಬುವವರೆಗೂ ಐಸ್‌ಕ್ಯಾಂಡಿ ವ್ಯಾಪಾರ ಮಾಡುತ್ತಿದ್ದ ಆಕೆಯ ಬಡ ತಂದೆ ಎನ್‌ಐಸಿಯುಗೆ ಬಂದು ನಮಗೆಲ್ಲರಿಗೂ ಐಸ್‌ಕ್ಯಾಂಡಿ ನೀಡಿ ಜನ್ಮದಿನ ಆಚರಿಸುತ್ತಿದ್ದ.

ವಿಜ್ಞಾನದ ಪ್ರಕಾರ ಈ ಬಗೆಯ ಮಕ್ಕಳು ಹಲವಾರು ಬಗೆಯ ಅಂಗವೈಕಲ್ಯಗಳನ್ನು ಎದುರಿಸುತ್ತವೆ. ಅತಿ ಚಿಕ್ಕ ಗಾತ್ರದ ದೇಹಿಗಳಾಗಿ ಜನಿಸುವುದು ಮತ್ತು ವಿವಿಧ ಚಿಕಿತ್ಸೆಗಳಿಗೆ ಜನಿಸಿದ ತಕ್ಷಣವೇ ಒಳಗಾಗುವುದು ದೃಷ್ಟಿ, ಶ್ರವಣ ಸಮಸ್ಯೆ, ದೈಹಿಕ ವಿಕಸನದ ಸಾಮರ್ಥ್ಯದ ಕೊರತೆ ಮತ್ತು ಮಾನಸಿಕ ಬೆಳವಣಿಗೆಯ ಕುಂಠಿತ ಮುಂತಾದ ಹಲವು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

ಒಂದು ವೇಳೆ ಸೃಷ್ಟಿ ಬದುಕಿದ್ದರೆ ಆಕೆ ಎಲ್ಲರಂತೆ ಸಹಜವಾಗಿ ಬದುಕಲು ಸಾಧ್ಯವಾಗುತ್ತಿತ್ತೇ? ನೆನಪಿರಲಿ, ವಿನ್ಸ್‌ಟನ್ ಚರ್ಚಿಲ್ ಸಹ ಬಹುಬೇಗನೇ ಭೂಮಿಗೆ ಬಂದವರು. ಅವರು ಸುದೀರ್ಘ ಕಾಲ ಬದುಕಿದ್ದರು (ಮರಣ ಹೊಂದಿದ್ದು 91ನೇ ವಯಸ್ಸಿನಲ್ಲಿ).

ashabenakappa@yahoo.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT