ADVERTISEMENT

ಅಂತರಂಗ: ಅಕ್ಷರ ದಾಮ್ಲೆ ಅಂಕಣ– ಕೋಪಿಷ್ಠ ಗಂಡನನ್ನು ಸಂಭಾಳಿಸೋದು ಹೇಗೆ?

ಅಕ್ಷರ ದಾಮ್ಲೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 1:06 IST
Last Updated 15 ಫೆಬ್ರುವರಿ 2025, 1:06 IST
<div class="paragraphs"><p>ಅಂತರಂಗ: ಅಕ್ಷರ ದಾಮ್ಲೆ ಅಂಕಣ– ಕೋಪಿಷ್ಠ ಗಂಡನನ್ನು ಸಂಭಾಳಿಸೋದು ಹೇಗೆ?</p></div>

ಅಂತರಂಗ: ಅಕ್ಷರ ದಾಮ್ಲೆ ಅಂಕಣ– ಕೋಪಿಷ್ಠ ಗಂಡನನ್ನು ಸಂಭಾಳಿಸೋದು ಹೇಗೆ?

   

ಕೋಪಿಷ್ಠ, ಸಂವೇದನಾರಹಿತ  ಮನಸ್ಥಿತಿಯ ಗಂಡನನ್ನು ಸಂಭಾಳಿಸೋದು ಹೇಗೆ? ದಯವಿಟ್ಟು ತಿಳಿಸಿ ಸರ್. 


–ಕೆಲವೊಂದು ಬಾರಿ ಜೀವನದಲ್ಲಿ ಯಾಕೆ ಹೀಗೆ ಎನ್ನುವುದಕ್ಕೆ ಉತ್ತರಗಳು ಸಿಗುವುದಿಲ್ಲ. ನಾವೆಲ್ಲಾ ಒಳ್ಳೆಯದನ್ನೇ ಮಾಡಿದ್ದರೂ, ಯಾಕೆ ನಮಗೇ ಕಷ್ಟಗಳು ಬರುತ್ತವೆ? ನಾವು ಎಲ್ಲರನ್ನೂ ಅರ್ಥಮಾಡಿಕೊಳ್ಳುವವರಾದರೂ, ಯಾಕೆ ನಮ್ಮ ಜೊತೆ ಇರುವವರು ನಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ? ನಾವು ಎಷ್ಟೇ ಸಮಾಧಾನದಿಂದ ಇದ್ದರೂ, ಯಾಕೆ ನಮ್ಮ ಜೊತೆಗಿರುವವರು ಅದನ್ನೇ ನಮ್ಮ ದೌರ್ಬಲ್ಯ ಅಂತ ಅಂದುಕೊಂಡು ಮತ್ತೆ ಮತ್ತೆ ತಮ್ಮ ಕೋಪವನ್ನು ನಮ್ಮ ಮೇಲೆ ತೋರ್ಪಡಿಸುತ್ತಿರುತ್ತಾರೆ?

ADVERTISEMENT

ಹೀಗೆ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ, ಒಂದರ ನಂತರ ಒಂದರಂತೆ ಮುಗಿಯದ ಸರಮಾಲೆಯಾಗುತ್ತದೆ. ಆದರೆ, ನಾವು ಜೀವನದಲ್ಲಿ ಒಂದು ಅರ್ಥಮಾಡಿಕೊಳ್ಳಬೇಕಾದದ್ದು ಏನೆಂದರೆ, ನಾವು ಸಮಸ್ಯೆಯ ಬಲಿಪಶುಗಳಾಗಬೇಕಾ? ಅಥವಾ ಸಮಸ್ಯೆಗಳನ್ನು ಮೀರಿ ನಿಂತು ಹಾರಾಡಬೇಕಾ?!

ಗಂಡ ಯಾವತ್ತೂ ಕೋಪಿಷ್ಠನಾದರೆ, ಅಥವಾ ಭಾವನಾತ್ಮಕವಾಗಿ ಅರ್ಥಮಾಡಿಕೊಳ್ಳದವನಾದರೆ, ಅದು ಒಂದು ರೀತಿಯಲ್ಲಿ ಉಸಿರುಗಟ್ಟಿಸುವ ಪರಿಸ್ಥಿತಿಯನ್ನು ಉಂಟುಮಾಡಬಹುದು. ಮಾತ್ರವಲ್ಲ ಅದರಿಂದಾಗಿ ಅಸಹಾಯಕತೆಯೂ ಉಂಟಾಗಬಹುದು. ಯಾಕೆಂದರೆ, ಜೀವನವನ್ನು ಹಂಚಿಕೊಂಡು ಬಾಳಿ ಬದುಕುವ ಉದ್ದೇಶದೊಂದಿಗೆ ಮದುವೆಯಾಗಿ, ಆಮೇಲೆ ಆ ಸಂಬಂಧದಿಂದ ಮೂಲಭೂತವಾಗಿ ಸಿಗಬೇಕಾದ ಮತ್ತು ಸಹಜವಾಗಿಯೇ ಬಯಸುವ ಬೆಸುಗೆ ಸಿಗದಿದ್ದಾಗ ಮೈಪರಚಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಆದರೆ ಪ್ರಶ್ನೆ ಇರುವುದು ‘ಅಂತಹ ಪರಿಸ್ಥಿತಿಗೆ ಬಲಿಪಶುಗಳಾಗಬೇಕೇ ಅಥವಾ ಅದನ್ನು ಮೆಟ್ಟಿ ನಿಲ್ಲಬೇಕೇ?’

ಬಲಿಪಶುಗಳಾಗಿ ಜೀವನದಲ್ಲಿ ದುಃಖವನ್ನೇ ಅನುಭವಿಸುವ ಬದಲು, ಮೆಟ್ಟಿ ನಿಲ್ಲುವುದು ಒಳ್ಳೆಯ ಮಾರ್ಗ. ಆದರೆ, ಅಷ್ಟೇ ಕಷ್ಟದ ಮಾರ್ಗ ಕೂಡಾ. ಯಾಕೆಂದರೆ, ಈ ಎರಡು ವಿಚಾರಗಳ ಕುರಿತು ನೀವು ಗಂಡನೊಡನೆ ಸಂಭಾಷಣೆಗೆ ತೊಡಗಿದರೂ, ಅದು ಸಂಭಾಷಣೆಯಾಗಿ ಉಳಿಯದೆ, ಜಗಳ ಅಥವಾ ವಾದ ವಿವಾದಗಳಾಗುವ ಸಾಧ್ಯತೆಯೇ ಜಾಸ್ತಿ. ಆದರೆ, ಅದನ್ನು ಎದುರಿಸುವ ಧೈರ್ಯವನ್ನು ನೀವು ಮಾಡಿದರೆ, ಪರಿಸ್ಥಿತಿಯನ್ನು ಹತೋಟಿಗೆ ತರಬಹುದು. ಮಾತ್ರವಲ್ಲ, ಅದರಿಂದ, ನಿಮ್ಮ ಜೀವನ ಸುಂದರವಾಗಬಹುದು. ದೇಹದಲ್ಲಿ ಏನಾದರೂ ದೊಡ್ಡ ಸಮಸ್ಯೆಯಾದಾಗ, ಶಸ್ತ್ರಚಿಕಿತ್ಸೆಯ ಅಗತ್ಯ ಬಂದಲ್ಲಿ, ಒಂದು ಬಾರಿ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಬಹಳ ನೋವಿನಿಂದ ಕೂಡಿರುತ್ತದೆ. ಆದರೆ, ಅದರಿಂದ ಸಮಸ್ಯೆ ಪರಿಹಾರವಾಗುತ್ತದೆ.

ಅದೇ ರೀತಿ ನಿಮ್ಮ ಸಂಬಂಧದಲ್ಲಿ ಇರುವಂತಹ ಸಮಸ್ಯೆಗೆ ಸರ್ಜರಿಯ ಅಗತ್ಯವಿದೆ. ಹೇಗೆ ಮಾಡಬಹುದು?
1. ಮೊದಲನೆಯದಾಗಿ ನಿಮ್ಮ ಗಂಡ ಕೋಪಗೊಂಡಂಥ ಸಂದರ್ಭದಲ್ಲಿ ಅದು ನಿಮಗೆ ಹೇಗೆ ಮಾನಸಿಕವಾಗಿ ತೊಂದರೆ ಕೊಡುತ್ತದೆ ಎಂಬುದನ್ನು ತಿಳಿಸಿ.
2. ಆಮೇಲೆ, ಕೋಪಗೊಳ್ಳುವುದರ ಬದಲು, ಅವರು ಅದೇ ವಿಚಾರಗಳನ್ನು ಹೇಗೆ ನಿಮಗೆ ತಿಳಿಸಬಹುದು ಎಂಬುವುದನ್ನು ವಿವರಿಸಿ.
3. ನಿಮ್ಮಲ್ಲಾಗುತ್ತಿರುವ ಭಾವನಾತ್ಮಕ ತುಮುಲಗಳನ್ನು ಅವರೊಡನೆ ಹಂಚಿಕೊಳ್ಳಿ.
4. ಕೆಲವೊಂದು ವಿಚಾರಗಳನ್ನು ನೀವು ನೇರವಾಗಿ ಮತ್ತು ಸ್ಪಷ್ಟವಾಗಿ ಹೇಳಬೇಕಾಗಬಹುದು. ಅವರೇ ಅರ್ಥಮಾಡಿಕೊಳ್ಳಲಿ ಎಂದು ಅಪೇಕ್ಷಿಸಬೇಡಿ. ಯಾಕೆಂದರೆ, ಬಹುಷಃ ಅವರಿಗೆ ನಿಮ್ಮ ಭಾವನಾತ್ಮಕ ಅಭಿವ್ಯಕ್ತಿಗಳು ಅರ್ಥವಾಗದೇ ಹೋಗಬಹುದು.
5. ಇನ್ನು ಏನಾದರೂ ಭಿನ್ನಾಭಿಪ್ರಾಯಗಳಿದ್ದರೆ, ಅವುಗಳನ್ನು ಸಮಾಲೋಚಿಸಿ ದೂರಮಾಡಿ ಅಥವಾ ಯಾವುದಾದರೂ ಒಂದು ಒಪ್ಪಂದಕ್ಕೆ ಬನ್ನಿ.

ಹೀಗೆ ಮಾಡಿದರೆ, ನಿಮ್ಮ ಜೀವನದಲ್ಲಿ ಉತ್ತಮವಾದಂತಹ ಬೆಸುಗೆ ಉಂಟಾಗುವುದಕ್ಕೆ ಸಾಧ್ಯ. ಮಾತ್ರವಲ್ಲ, ಅದರಿಂದ ನೀವಿಬ್ಬರೂ ಸಂತೋಷವಾಗಿರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.