ಪ್ರಾತಿನಿಧಿಕ ಚಿತ್ರ
ನನಗೆ ಅಪ್ಪ ಇಲ್ಲ, ಅಮ್ಮ ಇದ್ದರೂ ಬಂಧುಗಳ ನೆರಳಿನಲ್ಲಿಯೇ ಬೆಳೆದೆ. ಎಲ್ಲರ ಋಣದಲ್ಲಿ ಬದುಕಿದ್ದರಿಂದ, ಆತ್ಮವಿಶ್ವಾಸದಿಂದ ಬದುಕಲು ಸಾಧ್ಯವಾಗುತ್ತಿಲ್ಲ. ಹೆಜ್ಜೆ ಹೆಜ್ಜೆಗೂ ಟೀಕೆಗಳನ್ನೇ ಕೇಳಿ ಬೆಳೆದಿದ್ದರಿಂದ ಈಗೀಗ ಟೀಕಿಸುವವರನ್ನು ನೋಡಿದರೆ ಆಕ್ರೋಶವೇ ಉಕ್ಕುತ್ತದೆ. ಬದುಕಿನಲ್ಲಿ ಆತ್ಮವಿಶ್ವಾಸವನ್ನು ರೂಢಿಸಿಕೊಳ್ಳುವುದು ಹೇಗೆ?
ನಾವು ಜೀವನದಲ್ಲಿ ಅರ್ಥಮಾಡಿಕೊಳ್ಳಬೇಕಿರುವ ಒಂದು ಮೂಲ ತತ್ವವೇನೆಂದರೆ, ನಾವು ಇವತ್ತು ಏನಾಗಿದ್ದೇವೋ ಅದಕ್ಕೆ ನಮ್ಮ ಭೂತಕಾಲದ ನಿರ್ಧಾರಗಳು ಅಥವಾ ಸನ್ನಿವೇಶಗಳು ಕಾರಣ. ಆದರೆ ನಮ್ಮ ಭವಿಷ್ಯವು ನಿಂತಿರುವುದು ನಮ್ಮ ಇಂದಿನ ನಡೆಗಳು ಅಥವಾ ನಿರ್ಧಾರಗಳ ಮೇಲೆ. ಹಾಗಾಗಿ ಭವಿಷ್ಯದ ಕುರಿತು ಆಲೋಚಿಸಿ ಅದನ್ನು ರೂಪಿಸುವತ್ತ ನಮ್ಮ ಗಮನವನ್ನು ನೆಡಬೇಕು. ಜನ ಟೀಕೆ ಮಾಡುವುದಕ್ಕೆ ಬಹಳಷ್ಟು ಕಾರಣಗಳಿರಬಹುದು. ಅದನ್ನು ನೀವು ನಿಮ್ಮ ಅಪ್ಪ - ಅಮ್ಮನನ್ನು ಕಳೆದುಕೊಂಡ ಕಾರಣವೇ ಅಂತ ಅಂದುಕೊಳ್ಳಬೇಕಾಗಿಲ್ಲ. ಜನರು ಟೀಕೆ ಮಾಡುತ್ತಾರೆ ಅಂದ ಮಾತ್ರಕ್ಕೆ ನೀವು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳಬೇಕಿಲ್ಲ. ಟೀಕಿಸುವುದು ಅವರ ಕೆಲಸ. ಆದರೆ ಆ ಟೀಕೆಯನ್ನು ಸ್ವೀಕರಿಸುವುದು ನಿಮ್ಮ ಆಯ್ಕೆ.
ಒಂದು ಬಾರಿ ಬುದ್ಧನ ಬಳಿ ಬಂದು ಒಬ್ಬ ಆತನನ್ನು ಹೀನಾಯವಾಗಿ ಬೈದ. ಹೀಯಾಳಿಸಿದ. ಬುದ್ಧ ಶಾಂತಚಿತ್ತನಾಗಿ ಕುಳಿತಿದ್ದ. ಆ ವ್ಯಕ್ತಿಯ ಬೈಗುಳವೆಲ್ಲ ಆದ ಮೇಲೆ ಬುದ್ಧ ಹೇಳಿದ ‘ನೀನು ಬೈದದ್ದನ್ನು ನಾನು ಸ್ವೀಕರಿಸಿಲ್ಲ’. ಅದರರ್ಥ ಏನಾಯ್ತು? ಒಬ್ಬ ವ್ಯಕ್ತಿ ನಮಗೇನೋ ಕೊಟ್ಟಾಗ ನಾವು ಸ್ವೀಕರಿಸದಿದ್ದರೆ, ಅದು ಯಾರಲ್ಲಿ ಉಳಿದುಕೊಳ್ಳುತ್ತದೆ? ಅದು ಕೊಡಲು ಹೊರಟವನ ಬಳಿಯೇ ಉಳಿದುಕೊಳ್ಳುತ್ತದೆ. ಹಾಗೆಯೇ ನಿಮ್ಮನ್ನು ಟೀಕಿಸುವವರ ಟೀಕೆಗಳನ್ನು ನೀವು ಯಾವಾಗ ಸ್ವೀಕರಿಸುವುದನ್ನು ನಿಲ್ಲಿಸುತ್ತೀರೋ, ಆವಾಗ ಅದು ಅವರಲ್ಲೇ ಉಳಿದುಕೊಳ್ಳುತ್ತದೆ.
ಟೀಕೆಗಳ ಕುರಿತು ಪುರಂದರದಾಸರು ಒಂದು ಬಹಳ ಉತ್ತಮವಾದ ಕೀರ್ತನೆಯನ್ನು ಬರೆದಿದ್ದಾರೆ. ‘ನಿಂದಕರಿರಬೇಕು, ಹಂದಿಯಿದ್ದರೆ ಕೇರಿ ಹೇಗೆ ಶುದ್ಧಿಯೋ ಹಾಂಗೆ’ಎಂದು. ಅದರರ್ಥವೇನೆಂದರೆ ನಿಮ್ಮ ಜೀವನದಲ್ಲಿರುವ ಎಲ್ಲಾ ನಿಂದಕರುಗಳನ್ನು ನಿಮ್ಮಲ್ಲಿರುವ ಕೊಳಕನ್ನು ಸ್ವಚ್ಛ ಮಾಡುವ ವ್ಯಕ್ತಿಗಳನ್ನಾಗಿ ನೋಡಿ. ಆವಾಗ ನಿಮಗೆ ಅವರ ನಿಂದನೆ ನೋವನ್ನುಂಟುಮಾಡುವ ಬದಲು, ಹೊಸ ನಾವೀನ್ಯವನ್ನು ಕೊಡಬಹುದು. ಮಾತ್ರವಲ್ಲ, ನಿಮ್ಮನ್ನು ಹಗುರವಾಗಿಸಬಹುದು.
ನಿಂದನೆಗಳನ್ನು ಹೇಗೆ ಸ್ವೀಕರಿಸಬೇಕು ಎನ್ನುವುದಕ್ಕೆ ಈ ಇನ್ನೊಂದು ಕಥೆಯೂ ಬಹಳ ಉತ್ತಮವಾದ ಒಂದು ಕಾಣ್ಕೆಯನ್ನು ಕೊಡುತ್ತದೆ. ಒಂದು ಬಾರಿ ಒಂದು ಕತ್ತೆ ಒಣಗಿ ಹೋಗಿದ್ದ ಬಾವಿಗೆ ಬಿದ್ದಿತಂತೆ. ಅದನ್ನು ನೋಡಿದ ಜನರು, ಹೇಗಾದರೂ ಬಾವಿಯೂ ಒಣಗಿ ಹೋಗಿದೆ ಮತ್ತು ಕತ್ತೆ ಅದರೊಳಗೆ ಬಿದ್ದಿದೆ. ಹಾಗಾಗಿ ಅದನ್ನು ಮೇಲೆತ್ತುವ ಪ್ರಯತ್ನ ಮಾಡುವ ಬದಲು, ಅಲ್ಲೇ ಮಣ್ಣು ಹಾಕಿ ಮುಚ್ಚಿ ಬಿಡೋಣ ಎಂದು ಅಂದುಕೊಂಡರಂತೆ. ಹಾಗೆ ಜನರು ಬಾವಿಯ ಒಳಗೆ ಮಣ್ಣು ಸುರಿಯಲಾರಂಭಿಸಿದರು. ಆದರೆ ಹಾಗೆ ಸುರಿದ ಮಣ್ಣು ತನ್ನನ್ನು ಮಣ್ಣು ಮಾಡಲು ಎಂದು ತಿಳಿಯುವ ಬದಲು, ಕತ್ತೆಯು ಆ ಮಣ್ಣಿನ ರಾಶಿಯ ಮೇಲೆ ಹೆಜ್ಜೆ ಇಡುತ್ತಾ, ಮಣ್ಣಿನ ಪ್ರಮಾಣ ಹೆಚ್ಚಿದಂತೆ, ಅದು ಎತ್ತರಕ್ಕೆ ಏರುತ್ತಾ ಮೇಲೇರಿ ಬಂತು. ಹಾಗೆಯೇ, ನಮ್ಮ ಮೇಲೆ ಆಗುವ ನಿಂದನೆಗಳನ್ನು ನಾವು ನಮ್ಮ ಬೆಳವಣಿಗೆಯ ಮೆಟ್ಟಿಲುಗಳನ್ನಾಗಿಸಿದಾಗ, ಸಾಫಲ್ಯವನ್ನು ಕಾಣಬಹುದು. ಆತ್ಮವಿಶ್ವಾಸದಿಂದ ಬದುಕಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.