
ನಮಸ್ತೆ ಸರ್, ನನ್ನ ವಯಸ್ಸು 40. ಹೆರಿಗೆಯಾದ ಮೇಲೆ ಸನ್ನಿ ಆಗಿತ್ತು. ನಾನು 10ನೇ ತರಗತಿಯಲ್ಲಿ ಇದ್ದಾಗ ಶಿಕ್ಷಕರೊಬ್ಬರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ಅದರ ಕಹಿ ನೆನಪು ಹೇಗಿತ್ತೆಂದರೆ, ಮಗುವಿಗೆ ಹಾಲೂಡಿಸುವಾಗ ಅದು ನೆನಪಿಗೆ ಬಂದು, ವಿಚಿತ್ರವಾದ ಆವೇಶ ಉಂಟಾಗುತ್ತಿತ್ತು. ಆಗ ಮಗುವನ್ನು ಎತ್ತಿ ಎಸೆಯುವಷ್ಟು ಕೆಟ್ಟ ಆಲೋಚನೆ ಬರುತ್ತಿತ್ತು. ಇದಕ್ಕಾಗಿ ಚಿಕಿತ್ಸೆಯನ್ನೂ ಪಡೆದುಕೊಂಡೆ. ಮಗನಿಗೆ ಈಗ 10 ವರ್ಷ. ಅವನನ್ನು ನೋಡಿದಾಗಲೆಲ್ಲ ತಾಯಿಯಾಗಿ ಪಾಪಪ್ರಜ್ಞೆ ಕಾಡುತ್ತದೆ. ದೇಹ ಹಾಗೂ ಮನಸ್ಸಿನ ಮೇಲಾದ ಗಾಯದಿಂದ ಹೊರಬರಲಾಗದೆ ಒದ್ದಾಡುತ್ತಿದ್ದೇನೆ. ಇದಕ್ಕೆ ಪರಿಹಾರವೇನು?
ಹೆಸರು ತಿಳಿಸಿಲ್ಲ, ರಾಮನಗರ
ಕೆಲವು ಘಟನೆಗಳಿಗೆ ನಾವು ಕಾರಣರಾಗಿರದಿದ್ದರೂ ಅದರ ಕಹಿ ಪರಿಣಾಮಗಳ ಬಲಿಪಶುಗಳಾಗಿರುತ್ತೇವೆ, ತಪ್ಪಿತಸ್ಥ ಮನೋಭಾವಕ್ಕೂ ಒಳಗಾಗುತ್ತೇವೆ. ಆಮೇಲೆ, ಎಲ್ಲ ಜವಾಬ್ದಾರಿ
ಯನ್ನೂ ನಮ್ಮ ಮೇಲೇ ಹಾಕಿಕೊಂಡು ಕೊರಗುತ್ತೇವೆ. ಮಾತ್ರವಲ್ಲ, ಆ ಕಹಿ ಘಟನೆಯ ಗಾಯ ಆಗಾಗ ನಮ್ಮನ್ನು ತಿವಿಯುತ್ತಿದ್ದರೂ ಯಾರಲ್ಲೂ ಹೇಳಿಕೊಳ್ಳಲಾಗದೆ ಚಡಪಡಿಸುತ್ತಿರುತ್ತೇವೆ.
ಅಂಕಿ- ಅಂಶಗಳ ಪ್ರಕಾರ, ಭಾರತದಲ್ಲಷ್ಟೇ ಅಲ್ಲ ವಿಶ್ವದೆಲ್ಲೆಡೆ ಆಗುವಂತಹ ಶೇಕಡ 80ರಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಲೈಂಗಿಕ ಪರಭಕ್ಷಕರು ಗೊತ್ತಿರುವವರೇ ಆಗಿರುತ್ತಾರೆ. ಲೈಂಗಿಕ ದೌರ್ಜನ್ಯ ಎನ್ನುವುದು ವ್ಯಕ್ತಿಗಳ ಮೇಲೆ ಭೀಕರವಾದ ಪರಿಣಾಮ ಬೀರುತ್ತದೆ. ಮೊದಲನೆಯದು, ಅದು ಅವರ ‘ಪರ್ಸನಲ್ ಸ್ಪೇಸ್’ನ ಉಲ್ಲಂಘನೆಯಾಗಿರುತ್ತದೆ. ಪ್ರಪಂಚದ ಕುರಿತು ತೀವ್ರವಾದ ಭಯವನ್ನು ಉಂಟುಮಾಡುತ್ತದೆ. ಗಂಡಸರೆಲ್ಲಾ ಕೆಟ್ಟವರು, ದಾನವರಂತೆ ವರ್ತಿಸುವವರು ಅನ್ನುವಂತಹ ಮನೋಭಾವ ಬೆಳೆಯುತ್ತದೆ. ಎಷ್ಟೋ ಮಂದಿಗೆ ತಮ್ಮ ಶರೀರದ ಬಗ್ಗೆಯೇ ಹೇಸಿಗೆ ಎನಿಸಲಾರಂಭಿಸುತ್ತದೆ. ಇನ್ನೊಂದಷ್ಟು ಜನ ಹೊರಗಿನ ಪ್ರಪಂಚದ ಉಸಾಬರಿಯೇ ಬೇಡ ಅನ್ನುವ ರೀತಿಯಲ್ಲಿ ಇದ್ದು
ಬಿಡುತ್ತಾರೆ. ಮಾತ್ರವಲ್ಲ, ಮನಸ್ಸಿನಲ್ಲಿ ತೀವ್ರವಾದ ಭಯ ಮತ್ತು ಅಭದ್ರತೆಯನ್ನು ಅನುಭವಿಸುತ್ತಾರೆ.
ಇಂತಹ ಕಹಿ ಘಟನೆಗಳು ನಡೆದಾಗ, ಅನೇಕರು ಅದನ್ನು ಹಿರಿಯರ ಬಳಿ ಹೇಳುವುದಿಲ್ಲ. ಯಾಕೆಂದರೆ, ಮೊದಲನೆಯ ಪ್ರಶ್ನೆ ‘ಹೇಗೆ ಹೇಳುವುದು?’ ಎಂಬುದು. ಎರಡನೆಯದು, ನಮ್ಮ ಸಮಾಜದಲ್ಲಿ ಶೋಷಿತೆಯನ್ನೇ ಆರೋಪಕ್ಕೆ ಒಳಪಡಿಸುವ ಮನಃಸ್ಥಿತಿ ಇರುವುದು. ಅಂದರೆ, ಬಲಾತ್ಕಾರ ಮಾಡಿದವನ ತಪ್ಪಿಗಿಂತ, ‘ನೀನು ಯಾಕೆ ಅಲ್ಲಿ ಹೋದೆ, ನೀನು ಯಾಕೆ ಆ ರೀತಿಯ ಬಟ್ಟೆಯನ್ನು ಹಾಕಿಕೊಂಡಿದ್ದೆ ಅಥವಾ ನಿನಗೆ ಎಚ್ಚರ ಇರಬೇಕಿತ್ತಲ್ಲಾ ಎಂಬಂತಹ ಪ್ರಶ್ನೆಗಳನ್ನೇ ಕೇಳುತ್ತಾರೆ. ಹಾಗಾಗಿ, ಹೆಚ್ಚಿನವರು ಮುಚ್ಚಿಡುತ್ತಾರೆ. ಬಾಹ್ಯಪ್ರಪಂಚದಿಂದ ಮುಚ್ಚಿಡಬಹುದು, ಆದರೆ ಆಂತರಿಕ ಪ್ರಪಂಚದಿಂದ ಮುಚ್ಚಿಡಲು ಸಾಧ್ಯವಿಲ್ಲವಲ್ಲಾ? ನಮಗಾದ ಕಹಿ ಅನುಭವ ನಮ್ಮ ಮನಸ್ಸಿನಲ್ಲೂ ದೇಹದಲ್ಲೂ ನೆನಪಾಗಿ ಉಳಿದಿರುತ್ತದೆ. ಶರೀರದಲ್ಲಿ ಆಗುವ ಸಂವೇದನೆಗಳಿಗೆ ಕಾರಣ ‘ಸೆಲ್ಯುಲಾರ್ ಮೆಮೊರಿ’ ಅಂದರೆ, ನಮ್ಮ ಜೀವಕೋಶಗಳ ಸ್ತರದಲ್ಲಿ ಉಳಿದಿರುವಂತಹ ನೆನಪು. ಇದು, ಬಹುಶಃ ನೀವು ನಿಮ್ಮ ಮಗನಿಗೆ ಹಾಲೂಡಿಸುವಾಗ ಅಡ್ಡಿಪಡಿಸುತ್ತಿದ್ದುದು. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅನೇಕರು ಮದುವೆಯಾಗುವುದಕ್ಕೂ ಅಳುಕುತ್ತಾರೆ. ಯಾಕೆಂದರೆ, ಪುರುಷನ ಸ್ಪರ್ಶವೂ ಅವರಿಗೆ ಎಷ್ಟೋ ಬಾರಿ ದೌರ್ಜನ್ಯದ ಕರಾಳ ಅನುಭವವನ್ನು ನೆನಪಿಸಿ ಬಿಡುತ್ತದೆ.
ಹಾಗಿದ್ದರೆ ಇದಕ್ಕೆ ಪರಿಹಾರವೇ ಇಲ್ಲವೇ? ಖಂಡಿತವಾಗಿಯೂ ಇದೆ. ಮನಃಶಾಸ್ತ್ರೀಯವಾಗಿ ಇಂತಹ ಪ್ರಕರಣಗಳಿಂದ ಮನಸ್ಸಿನ ಮೇಲೆ ಆಗುವ ಪರಿಣಾಮವನ್ನು ‘ಟ್ರಾಮಾ’ ಎಂದು ಕರೆಯುತ್ತೇವೆ. ಅದನ್ನು ನಿವಾರಿಸುವುದಕ್ಕೆ ಬೇರೆ ಬೇರೆ ರೀತಿಯ ಥೆರಪಿಯ ವಿಧಾನಗಳಿವೆ. ನನಗೆ ಹೆಚ್ಚು ಸಮಂಜಸವಾಗಿ ಕಂಡಿರುವುದು ‘ಇನ್ನರ್ ಚೈಲ್ಡ್ ಹೀಲಿಂಗ್’. ಯಾಕೆಂದರೆ ಇದು ಮಾನಸಿಕ ಮತ್ತು ದೈಹಿಕ ಟ್ರಾಮಾಗಳೆರಡನ್ನೂ ಜೊತೆಗೆ ತೆಗೆಯುವಲ್ಲಿ ಸಹಾಯ ಮಾಡುತ್ತದೆ.
ಈ ಥೆರಪಿಯಲ್ಲಿ ಏನಾಗುತ್ತದೆ? : ಹಿಂದೆ ನಡೆದ ಘಟನೆಯನ್ನು ಮರೆಯಲು ಸಾಧ್ಯವಿಲ್ಲ. ಆದರೆ, ಅದು ಉಂಟುಮಾಡಿದ ನೋವು ಮತ್ತು ಗಾಯವನ್ನು ವಾಸಿಮಾಡುವ ಮೂಲಕ, ನಮ್ಮ ಭಾವನೆಗಳ ಭಾರವನ್ನು ಇಳಿಸಬಹುದು. ತನ್ಮೂಲಕ ನಾವು ಮುಂದಿನ ಜೀವನವನ್ನು ಹಗುರವಾಗಿಸಿಕೊಳ್ಳಬಹುದು. ಹೊಸ ಸಾಧ್ಯತೆಗಳನ್ನು ಹುಡುಕಬಹುದು.
ನಿಮ್ಮನ್ನು ನೀವು ವಾಸಿ ಮಾಡಿಕೊಂಡು, ಮಗನಿಗೆ ಭಾವನಾತ್ಮಕ ಬೆಂಬಲವನ್ನು ಕೊಟ್ಟುಕೊಂಡು, ಸ್ತ್ರೀಯರನ್ನು ಭೋಗದ ವಸ್ತುವಿನಂತೆ ನೋಡದೆ ಗೌರವಿಸುವಂತಹ ಉತ್ತಮ ವ್ಯಕ್ತಿಯನ್ನಾಗಿ ಆತನನ್ನು ರೂಪಿಸುವುದೇ ನಿಮಗೆ ಕಾಡುತ್ತಿರುವ ಪಾಪಪ್ರಜ್ಞೆಗೆ ಪರಿಹಾರ ಎಂಬುದು ನನ್ನ ಅಭಿಪ್ರಾಯ. ಎಲ್ಲ ಹೆತ್ತವರೂ ತಮ್ಮ ಗಂಡುಮಕ್ಕಳನ್ನು ಈ ರೀತಿಯಲ್ಲಿ ಬೆಳೆಸಿದರೆ, ಸುರಕ್ಷಿತ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.