ADVERTISEMENT

ಡಾರ್ವಿನ್ ‘ಮಂಗ’ ಮಾಡಿದ!

ಪ್ರಕಾಶ ಶೆಟ್ಟಿ
Published 26 ಜನವರಿ 2018, 19:30 IST
Last Updated 26 ಜನವರಿ 2018, 19:30 IST
ಡಾರ್ವಿನ್ ‘ಮಂಗ’ ಮಾಡಿದ!
ಡಾರ್ವಿನ್ ‘ಮಂಗ’ ಮಾಡಿದ!   

ಸತ್ಯಪಾಲ ಹತ್ತನೆಯ ಕ್ಲಾಸಿನಲ್ಲಿದ್ದ. ಎಲ್ಲಾ ವಿದ್ಯಾರ್ಥಿಗಳೂ ತಿಂಗಳಿಗೊಮ್ಮೆ ನಡೆಯುವ ಭಾಷಣ ಸ್ಪರ್ಧೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕಾಗಿತ್ತು. ಸತ್ಯಪಾಲನ ಸರದಿ ಬಂತು. ವಿಷಯ: ಮಂಗನಿಂದ ಮಾನವನಾದದ್ದು ನಿಜವೇ ಅಥವಾ ಸುಳ್ಳೇ? ಅತೀ ಬುದ್ಧಿವಂತನೆಂದೇ ಸ್ಟಾರ್ ಇಮೇಜ್ ಪಡೆದಿದ್ದ ಸತ್ಯಪಾಲ ‘ಮಂಗನಿಂದ ಮಾನವನಾದದ್ದು ಸುಳ್ಳು’ ಎಂಬ ವಿಷಯದ ಬಗ್ಗೆ ಕೊರೆಯಲು ಎಲ್ಲಾ ಸಿದ್ಧತೆ ಮಾಡಿಕೊಂಡು ಬಂದ. ಶುರುವಾಯಿತು ನೋಡಿ, ಅವನ ಮಾತಿನ ಭರಾಟೆ...

ಎಲ್ಲರಿಗೂ ನಮಸ್ತೆ. ನನ್ನ ಹೆಸರು ಸತ್ಯಪಾಲ. ನನಗೆ ಸತ್ಯ ಮಾತ್ರ ಹೇಳುವುದಕ್ಕೆ ಗೊತ್ತು. ನನಗೆ ಸುಳ್ಳುಗಾರರನ್ನು ಕಂಡರೆ ಆಗದು. ಡಾರ್ವಿನ್ ಒಬ್ಬ ಮಹಾ ಸುಳ್ಳುಗಾರ! ‘ಮಂಗನಿಂದ ಮಾನವ’ ಎಂಬ ಡಾರ್ವಿನ್ ಸಿದ್ಧಾಂತವನ್ನು ನಾನು ಖಂಡಿತ ಒಪ್ಪುವುದಿಲ್ಲ. ನೀವೆಲ್ಲ ನನ್ನನ್ನು ‘ಮಂಗಣ್ಣ’ ಎಂದು ಕರೆದರೂ ಪರವಾಗಿಲ್ಲ, ನನ್ನ ಅಪ್ಪ ಅಮ್ಮ ನನ್ನನ್ನು ಸ್ಥಿರವಾಗಿ ‘ಮಂಗ’ ಎಂದು ಕರೆಯುವುದರಿಂದ ನನಗೊಮ್ಮೆ ಬಲವಾದ ಸಂಶಯ ಬಂತು. ಒಂದು ದಿವಸ ಧೈರ್ಯ ಮಾಡಿ ಅಮ್ಮನಲ್ಲಿ ಕೇಳಿಯೇ ಬಿಟ್ಟೆ ‘ಅಲ್ಲಮ್ಮಾ, ಡಾರ್ವಿನ್ ಹೇಳಿದಂತೆ ನನಗೆ ಮಾನವನಾಗುವುದಕ್ಕೆ ಇನ್ನೆಷ್ಟು ಸಮಯ ಬೇಕಾಗಬಹುದು?’ ಎಂದು. ಅದಕ್ಕೆ ಅಮ್ಮ ‘ಇಲ್ಲ ಸತ್ಯ, ನೀನೇನು ಮಂಗನಾಗಿ ಹುಟ್ಟಿಲ್ಲ. ನಿನ್ನ ಬುದ್ಧಿ ನೋಡಿದರೆ ಹಾಗೆ ಹೇಳಬೇಕೆನಿಸುತ್ತೆ ಅಷ್ಟೇ’ ಎಂದಳು. ಅಂದಿನಿಂದ ನಾನು ಕಟ್ಟಾ ಡಾರ್ವಿನ್ ವಿರೋಧಿಯಾದೆ. ಎಷ್ಟು ವಿರೋಧಿಯಾಗಿದ್ದೆನೆಂದರೆ, ಅಂದೇ ನಾನು ನನ್ನ ಪಠ್ಯಪುಸ್ತಕದಲ್ಲಿದ್ದ ‘ಡಾರ್ವಿನ್ ವಿಕಾಸ ಸಿದ್ಧಾಂತ’ದ ಪುಟಗಳನ್ನು ಹರಿದು ದಾರಿಯಲ್ಲಿ ಕಂಡ ಹಸುವಿಗೆ ‘ತಿನ್ನು’ ಅಂತ ಕೊಟ್ಟಿದ್ದೆ. ನಮ್ಮ ಪ್ರಧಾನ ಮಂತ್ರಿ ಮೋದಿ ಅವರ ಒರಿಜಿನಲ್ ‘ವಿಕಾಸ ಸಿದ್ಧಾಂತ’ ಕೇಳಲಾರಂಭಿಸಿದ ಮೇಲಂತೂ ಈ ಡಾರ್ವಿನ್ ನಮ್ಮನ್ನೆಲ್ಲಾ ಹೇಗೆ ‘ಮಂಗ’ ಮಾಡಿದನಲ್ಲಾ ಎಂದು ಕೋಪ ನೆತ್ತಿಗೇರಿತ್ತು.

ಡಾರ್ವಿನ್ ಸುಳ್ಳುಗಾರ ಅನ್ನುವುದಕ್ಕೆ ರಾಮ, ಸೀತೆ, ಲಕ್ಷ್ಮಣ, ಕೃಷ್ಣ, ಅರ್ಜುನ, ಭೀಮ... ಇವರೇ ಸಾಕ್ಷಿ. ಈ ವಿಕಾಸ ಜ್ಞಾನಿಗೆ ಭಾರತದ ಪುರಾಣದ ಗಂಧಗಾಳಿಯೇ ಇಲ್ಲ. ಹೋಗಲಿ, ನಮ್ಮ ಹನುಮಾನ್ ಮಾನವನಾಗಬೇಕಿತ್ತಲ್ಲವೇ? ಲಂಕೆಗೆ ಸೇತುವೆ ಕಟ್ಟಿದ ವಾನರ ಸೇನೆ ನಂತರ ಮಾನವರಾದರೇ? ಅದೂ ಇಲ್ಲ! ರಾವಣನ ಹತ್ತು ತಲೆಗಳನ್ನು ನೋಡಿದರೆ ‘ಆತ ಹಿಂದೆ ಮಂಗನಾಗಿದ್ದ’ ಎಂದು ಯಾವ ಮೂರ್ಖನೂ ಹೇಳಲಾರ. ನನಗಂತೂ ವಾಲ್ಮೀಕಿಯ ಮೇಲೆ ಹೆಚ್ಚು ನಂಬಿಕೆ. ಹಾಗೆ ನೋಡಿದರೆ ರಾಮನ ಕಾಲದ ರಾಕ್ಷಸರು ಮತ್ತು ರಾಕ್ಷಸಿಯರ ವಂಶಸ್ಥೆಯರು ಮಾನವರ ವೇಷದಲ್ಲಿ ಇಂದಿಗೂ ಕಾಣಸಿಗುತ್ತಾರೆ. ನಮ್ಮ ಪಕ್ಕದ ಮನೆಯ ಹೆಂಗಸನ್ನು ಎಲ್ಲರೂ ‘ಶೂರ್ಪನಖಿ’ ಎಂದೇ ಕರೆಯುತ್ತಾರೆ! ಆಚೆ ಮನೆಯ ಗುಂಡಪ್ಪ ಅಂಕಲ್ ಇಂದಿಗೂ ‘ರಾಕ್ಷಸ’ ಎಂದೇ ಫೇಮಸ್ಸು.

ADVERTISEMENT

ಡಾರ್ವಿನ್ ಸಿದ್ಧಾಂತದ ಮೇಲೆ ನನಗೆ ಮಾತ್ರವಲ್ಲ ನಮ್ಮ ವಿಜ್ಞಾನ ಮೇಷ್ಟ್ರಿಗೇ ನಂಬಿಕೆಯಿಲ್ಲದಂತಿದೆ. ಮನುಷ್ಯನಾಗುವ ಮೊದಲು ಆತ ಕತ್ತೆಯಾಗಿರುತ್ತಾನೆ ಎಂದು ಮೇಷ್ಟ್ರು ಭಾವಿಸಿದಂತಿದೆ. ಯಾಕೆಂದರೆ ಅವರು ಯಾವತ್ತೂ ನಮ್ಮನ್ನು ‘ಕತ್ತೆಗಳಿರಾ’ ಎಂದು ಕರೆಯುವುದನ್ನು ರೂಢಿ ಮಾಡಿಕೊಂಡಿರುವುದು ನಿಮಗೆಲ್ಲಾ ಗೊತ್ತು. ಮೇಷ್ಟ್ರ ಅಮೋಘ ಸಂಶೋಧನೆಯ ಪ್ರಕಾರ ಎಸ್ಎಸ್ಎಲ್‌ಸಿವರೆಗಿನ ಎಲ್ಲಾ ಮಕ್ಕಳು ಕತ್ತೆಗಳು! ನಂತರ ಕಾಲೇಜಿಗೆ ಹೋದ ಮೇಲಾದರೂ ಈ ಕತ್ತೆಗಳು ಮಾನವರಾಗುತ್ತಾರೆಯೇ ಎಂಬುದರ ಬಗ್ಗೆ ಅವರಿನ್ನೂ ಸಂಶೋಧನೆ ಮುಂದುವರಿಸಿದಂತಿಲ್ಲ. ನಾಳೆ ಒಂದು ವೇಳೆ ನಮ್ಮ ವಿಜ್ಞಾನ ಮೇಷ್ಟ್ರು ‘ಕತ್ತೆಯಿಂದ ಮಾನವ’ ಎಂಬ ಸಿದ್ಧಾಂತವನ್ನು ಪ್ರಪಂಚದ ಮುಂದಿಟ್ಟರೆ ನಾನಂತೂ ಖಂಡಿತ ಒಪ್ಪಲಿಕ್ಕಿಲ್ಲ. ಈ ನಡುವೆ ಕೆಲವು ವಿಚಾರವಾದಿಗಳು ವಿಕಾಸವಾದಿಗಳಂತೆ ಮಾತನಾಡುತ್ತಿದ್ದಾರೆ. ಅವರ ಪ್ರಕಾರ ನಾವೆಲ್ಲಾ ಕಾಲೇಜು ಮುಗಿಯುವವರೆಗೂ ಕುರಿಗಳೇ. ನಂತರವಷ್ಟೇ ಮಾನವರು ಎಂದು ನಮಗೆ ಜ್ಞಾನೋದಯವಾಗುತ್ತದೆಯಂತೆ! ಅಂದರೆ ಈ ವಿಕಾಸವಾದಿಗಳು ‘ಕುರಿಯಿಂದ ಮಾನವ’ ಎಂಬುದೇ ಸರಿ ಎಂದು ಹೇಳಿಕೊಂಡಂತಾಯಿತಲ್ಲವೇ?

ಗೊಂದಲ ಇಷ್ಟಕ್ಕೇ ಮುಗಿದಿಲ್ಲ. ನಾಯಿ ಮತ್ತು ಗೂಬೆ ಕೂಡಾ ಬೈಗುಳ ಪದಗಳಾಗಿ ಅತ್ಯಂತ ಜನಪ್ರಿಯವಾಗಿರುವುದರಿಂದ, ಮಾನವನ ವಿಕಾಸವು ನಾಯಿಯಿಂದ ಆರಂಭವಾಗುತ್ತೋ ಇಲ್ಲ ಗೂಬೆಯಿಂದ ಆರಂಭವಾಗುತ್ತೋ ಎಂದು ಅನೇಕರು ತಲೆಕೆಡಿಸಿಕೊಳ್ಳುತ್ತಿದ್ದಾರೆ.

ಈ ಎಲ್ಲಾ ಗೊಂದಲಗಳಿಗೆ ಕಾರಣ ಏನಪ್ಪಾ ಅಂದರೆ, ಸರಿಯಾಗಿ ಪುರಾವೆಗಳು ಇಲ್ಲದೇ ಇರುವುದು. ಹಾಗೆ ನೋಡಿದರೆ ‘ಮಾನವನಿಂದ ದೇವರು’ ಎಂಬ ಹೊಸ ವಿಕಾಸ ಸಿದ್ಧಾಂತವನ್ನು ಯಾರಾದರೂ ತೆರೆದಿಟ್ಟರೆ, ಸಾಕಷ್ಟು ಪುರಾವೆಗಳನ್ನು ತೋರಿಸಬಹುದು. ನಮ್ಮ ದೇಶದಲ್ಲಿರುವ ಸಾವಿರಾರು ಮಂದಿ ದೇವಮಾನವರನ್ನು ಸಾಲಾಗಿ ನಿಲ್ಲಿಸಿದರಾಯಿತು!

ನಮ್ಮದು ದೇವರುಗಳ ದೇಶ. ಇಂತಹ ದೇಶದಲ್ಲಿದ್ದುಕೊಂಡು ಮನುಷ್ಯರು ದೇವರ ಸೃಷ್ಟಿ ಎಂದು ತಿಳಿದುಕೊಳ್ಳದಿದ್ದರೆ ಹೇಗೆ ಹೇಳಿ! ಆದ್ದರಿಂದ ಇನ್ನಾದರೂ ಕೇಂದ್ರ ಸರ್ಕಾರ ಎಲ್ಲಾ ಪಠ್ಯಪುಸ್ತಕಗಳಿಂದ ‘ಡಾರ್ವಿನ್ ಸಿದ್ಧಾಂತ’ವನ್ನು ತೆಗೆದು ಹಾಕಬೇಕು. ಅದರ ಬದಲು ದೇವರು ಸೃಷ್ಟಿ ಮಾಡಿದ್ದ ಮೊಟ್ಟ ಮೊದಲ ಗಂಡು- ಹೆಣ್ಣು ‘ಆಡಮ್ ಮತ್ತು ಈವ್’ ಬಗ್ಗೆ ಪಾಠ ಆರಂಭಿಸಲಿ.

ಡಾರ್ವಿನ್‌ಗೆ ಧಿಕ್ಕಾರ! ಜೈ ಹಿಂದ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.