ADVERTISEMENT

ಮುಗ್ಗರಿಸುತ್ತಿರುವ ರೂಪಾಯಿಗೆ ಕಡಿವಾಣ ಅಗತ್ಯ

ಡಿ.ಮರಳೀಧರ
Published 22 ಮೇ 2012, 19:35 IST
Last Updated 22 ಮೇ 2012, 19:35 IST

ಡಾಲರ್ ಎದುರು ರೂಪಾಯಿ ಅಪ ಮೌಲ್ಯದ ಕುರಿತು ಎಂಟು ತಿಂಗಳ ಹಿಂದೆ ಇದೇ ಅಂಕಣದಲ್ಲಿ ನಾನು ಲೇಖನ ಬರೆದಿದ್ದೆ. ಆಗ ರೂಪಾಯಿ ಬೆಲೆ ಪ್ರತಿಡಾಲರ್‌ಗೆ ರೂ 44ರಿಂದ ರೂ 50ಕ್ಕೆ ಕುಸಿದಿರುವುದು ಕಂಡೇ ನನಗೆ ಆಘಾತವಾಗಿತ್ತು. ಈಗ ನೋಡಿದರೆ ಮತ್ತೆ ರೂಪಾಯಿ ಬೆಲೆ ಇನ್ನಷ್ಟು ಕುಸಿತವಾಗಿ ಶೇ 10ರಷ್ಟು ಅಪಮೌಲ್ಯಗೊಂಡಿದೆ.

ಎಂಟು ತಿಂಗಳಲ್ಲಿ ರೂಪಾಯಿ  ಮೌಲ್ಯವು ಶೇ 24ರಷ್ಟು ಕುಸಿತ ದಾಖಲಿಸಿರುವುದು ಇನ್ನಷ್ಟು ಆಘಾತಕಾರಿ ಸಂಗತಿ. ಆರ್ಥಿಕ ಉದಾರೀಕರಣ ನೀತಿ ಅಳವಡಿಸಿಕೊಂಡ ನಂತರದ ವರ್ಷಗಳಲ್ಲಿ ರೂಪಾಯಿ ಮೌಲ್ಯವು ಇಷ್ಟು ಗಮನಾರ್ಹ ಪ್ರಮಾಣದಲ್ಲಿ ಅಪಮೌಲ್ಯಗೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

ನನಗೆ ನೆನಪು ಇರುವಂತೆ, 1966ರಲ್ಲಿ ಕೇಂದ್ರ ಸರ್ಕಾರವು ಸ್ವರೂಪ ಹೊಂದಾಣಿಕೆ ಉದ್ದೇಶಕ್ಕೆ ರೂಪಾಯಿ ಅಪಮೌಲ್ಯಗೊಳಿಸಿತ್ತು. ಅದರ ಪರಿಣಾಮಗಳನ್ನು ತಡೆದುಕೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದರಿಂದ ಈ ಅಪಮೌಲ್ಯವು ದೇಶದ ಅರ್ಥ ವ್ಯವಸ್ಥೆ ಮೇಲೆ ತೀವ್ರ ಸ್ವರೂಪದ ಪರಿಣಾಮವನ್ನೇನೂ ಬೀರಿರಲಿಲ್ಲ.

2012ರ ಕಾಲಘಟ್ಟದಲ್ಲಿ, ಪರಿಸ್ಥಿತಿ ಈ ಹಿಂದಿನಂತಿಲ್ಲ. ದೇಶಿ ಅರ್ಥ ವ್ಯವಸ್ಥೆಯು ಜಾಗತಿಕ ಅರ್ಥ ವ್ಯವಸ್ಥೆ ಜತೆ ತಳಕು ಹಾಕಿಕೊಂಡಿದೆ. ರೂಪಾಯಿ ಮೌಲ್ಯದಲ್ಲಿನ ಯಾವುದೇ ಬದಲಾವಣೆಯು ಈಗ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೆಯೂ ಪರಿಣಾಮ ಬೀರುತ್ತದೆ.   ವ್ಯಕ್ತಿಯ ಆದಾಯ ಮಟ್ಟ ಯಾವುದೇ ಇರಲಿ ಆತ ಇಂತಹ  ಪ್ರಭಾವದಿಂದ ತಪ್ಪಿಸಿಕೊಳ್ಳುವಂತಿಲ್ಲ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳು ದೇಶದ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಮತ್ತು ತ್ವರಿತ ಬಗೆಯ ಬದಲಾವಣೆಗಳಿಗೆ ಕಾರಣವಾಗುತ್ತಿದೆ. ಇದರಿಂದ  ಸಮಷ್ಟಿ ಪರಿಣಾಮಗಳೂ ಕಂಡು ಬರುತ್ತಿವೆ. ಹೀಗಾಗಿ ದೇಶಿ ಕರೆನ್ಸಿ ವಿನಿಮಯ ಮಾರುಕಟ್ಟೆಯು ನಿಯಂತ್ರಣಕ್ಕೆ ಸಿಗದೆ ಯರ‌್ರಾಬಿರ‌್ರಿಯಾಗಿ ವರ್ತಿಸುತ್ತಿದೆ.

ಹಲವಾರು ಕಾರಣಗಳಿಗಾಗಿ ದೇಶಿ ಹಣಕಾಸು ಮಾರುಕಟ್ಟೆಯಲ್ಲಿಯೂ ಉತ್ಸಾಹ ಉಡುಗಿದೆ. ಬಜೆಟ್ ಮತ್ತು ವ್ಯಾಪಾರ ಕೊರತೆಯು ಯಾವುದೇ ಬಗೆಯ ನಿಯಂತ್ರಣಕ್ಕೆ ಸಿಗದೇ ಹೆಚ್ಚುತ್ತಲೇ ಸಾಗಿವೆ. ಹಣದುಬ್ಬರವು ಎರಡಂಕಿ ಮಟ್ಟ ತಲುಪಿದೆ.
 
ಬ್ಯಾಂಕ್ ಬಡ್ಡಿ ದರಗಳು ಈಗಲೂ ದುಬಾರಿ ಮಟ್ಟದಲ್ಲಿಯೇ ಇವೆ. ಆರ್ಥಿಕ ವೃದ್ಧಿ ದರ ಕಡಿಮೆ ಆಗುತ್ತಿದೆ. ಷೇರುಪೇಟೆಯಲ್ಲಿಯೂ   ನಿರುತ್ಸಾಹ ಮನೆ ಮಾಡಿದೆ. ಹಣಕಾಸು ಮಾರುಕಟ್ಟೆಯಲ್ಲಿನ ಬಂಡವಾಳ ಹೂಡಿಕೆ ಪ್ರಮಾಣವೂ ತುಂಬ ನಿಧಾನವಾಗಿದೆ. 

ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತಿದ್ದ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ),  ಈಗ ಹನಿ ಹನಿಯಾಗಿ ತೊಟ್ಟಿಕ್ಕುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಏನು ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ನಿಜವಾಗಿ ಹೇಳಬೇಕೆಂದರೆ, ಈ ಪರಿಸ್ಥಿತಿ ಉದ್ಭವಗೊಳ್ಳಲು ಸ್ವಯಂಕೃತಾಪರಾಧದ ಪಾತ್ರವೇ ಹೆಚ್ಚು.

ಕೇಂದ್ರ ಸರ್ಕಾರವು ಸೂಕ್ತ ಸಮಯದಲ್ಲಿ ಕಾರ್ಯಪ್ರವೃತ್ತವಾಗಿದ್ದರೆ, ಪರಿಸ್ಥಿತಿ ಖಂಡಿತವಾಗಿಯೂ ಈಗಿನಕ್ಕಿಂತ ಭಿನ್ನವಾಗಿರುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ ಎಂದೇ ಹೇಳಬಹುದು. ಸರ್ಕಾರ ತ್ವರಿತವಾಗಿ ಕಾರ್ಯಾಚರಣೆಗೆ ಇಳಿದರೆ ಸದ್ಯಕ್ಕೆ ಉದ್ಭವಿಸಿರುವ ಬಿಕ್ಕಟ್ಟನ್ನು ತಹಬಂದಿಗೆ ತರಬಹುದು.

ರೂಪಾಯಿ ಇನ್ನಷ್ಟು ಮೌಲ್ಯ ಕಳೆದುಕೊಳ್ಳುವುದನ್ನು ತಡೆಯಲು, ಸಬ್ಸಿಡಿಗಳನ್ನು ಅದರಲ್ಲೂ ವಿಶೇಷವಾಗಿ ತೈಲೋತ್ಪನ್ನ ಮತ್ತು ರಸಗೊಬ್ಬರಗಳಿಗೆ ನೀಡಲಾಗುತ್ತಿರುವ ಸಬ್ಸಿಡಿಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಮೆ ಮಾಡಬೇಕು. ಯೋಜನೇತರ ವೆಚ್ಚಗಳಿಗೂ ಕಡ್ಡಾಯವಾಗಿ ಕಡಿವಾಣವನ್ನೂ ಹಾಕಬೇಕಾಗಿದೆ.

ವಿದೇಶಿ ಹೂಡಿಕೆದಾರರು ತೆರಿಗೆ ಪಾವತಿ ತಪ್ಪಿಸುವುದನ್ನು ನಿರ್ಬಂಧಿಸುವ ಉದ್ದೇಶದ ಮತ್ತು ಅದರಿಂದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿರುವ, `ಜನರಲ್ ಆ್ಯಂಟಿ ಅವಾಯ್ಡನ್ಸ್ ರೂಲ್ಸ್ (ಜಿಎಎಆರ್) ಜಾರಿಗೆ ತರುವುದನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಬೇಕು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಆದಾಯ ತೆರಿಗೆ ನೀತಿ ಸಂಹಿತೆ  (ಡಿಟಿಸಿ) ಜತೆಗೆ, ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ವಿವಿಧ ವಲಯಗಳಲ್ಲಿನ ಆರ್ಥಿಕ ಸುಧಾರಣಾ ಕ್ರಮಗಳನ್ನು ಆದ್ಯತೆ ಮೇರೆಗೆ ಜಾರಿಗೆ ತರಬೇಕು. ಪೂರ್ವಾನ್ವಯಗೊಳಿಸಿ ಜಾರಿಗೆ ತರುವ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡಬೇಕು.

ಭಾರತೀಯ ರಿಸರ್ವ್ ಬ್ಯಾಂಕ್, ರೂಪಾಯಿ ಮೌಲ್ಯ ಕುಸಿತ ತಡೆಗಟ್ಟಲು ವಿದೇಶಿ ವಿನಿಮಯ ಮಾರುಕಟ್ಟೆ ವಹಿವಾಟಿನಲ್ಲಿ ಮಧ್ಯಪ್ರವೇಶಿಸಬೇಕು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಆರ್‌ಬಿಐ, ಈಗ ಈ ನಿಟ್ಟಿನಲ್ಲಿ ಹೆಚ್ಚು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದೆ. ಅದು ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳು ಸದ್ಯಕ್ಕೆ ಕಡಿಮೆ ಇರುವುದು ಮಾತ್ರ ಚರ್ಚಾಸ್ಪದ.

ಸಂಪತ್ತು ವೃದ್ಧಿಯಾಗುವುದಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಬೇಕಾಗಿದೆ. ಈ ಉದ್ದೇಶ ಗಮನದಲ್ಲಿ ಇಟ್ಟುಕೊಂಡೇ ತೆರಿಗೆ ವಿಧಿಸಿ ಅದನ್ನು ಸೂಕ್ತ ರೀತಿಯಲ್ಲಿ ವಿತರಿಸುವುದರ ಕಡೆಗೂ ಗಮನ ನೀಡಬೇಕು. ಆದರೆ, ವಿವೇಚನೆ ಕಳೆದುಕೊಂಡಿರುವ ಸರ್ಕಾರ ಈ ವಾಸ್ತವ ಸಂಗತಿ ಬಗ್ಗೆ ಜಾಣ ಕುರುಡನಂತೆ ವರ್ತಿಸುತ್ತಿದೆ.

ಐರೋಪ್ಯ ಒಕ್ಕೂಟದಲ್ಲಿ ಗ್ರೀಸ್ ದೇಶದ ಆರ್ಥಿಕ ಬಿಕ್ಕಟ್ಟು ಸಾಕಷ್ಟು ಕಳವಳಕ್ಕೆ ಎಡೆ ಮಾಡಿಕೊಟ್ಟಿದ್ದು ವಿಶ್ವದಾದ್ಯಂತ ತಲ್ಲಣ ಮೂಡಿಸಿದೆ. ಈಗಾಗಲೇ ನಡೆದ ಚುನಾವಣೆಯು ಸ್ಪಷ್ಟ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ, ಈಗ ಗ್ರೀಸ್ ಮತ್ತೊಮ್ಮೆ ಚುನಾವಣೆ ಹೊಸ್ತಿಲಲ್ಲಿ ಇದೆ.

ಚುನಾವಣಾ ಫಲಿತಾಂಶವು, ಯೂರೋಪ್ ಒಕ್ಕೂಟದಿಂದ ಗ್ರೀಸ್ ಹೊರ ನಡೆಯುವುದರ ಹಣೆಬರಹ ನಿರ್ಧರಿಸಲಿದೆ. ಆದರೆ, ಇಲ್ಲಿ ಗ್ರೀಸ್ ಎದುರು ಸೀಮಿತ ಆಯ್ಕೆಗಳು ಇವೆ ಎನ್ನುವುದನ್ನೂ ಮರೆಯಬಾರದು.

ಮೂರು ವರ್ಷಗಳ ಮಿತವ್ಯಯ ಕ್ರಮಗಳ ನಂತರವೂ, ಗ್ರೀಕ್ ಜನತೆ ಸರ್ಕಾರದ ವೆಚ್ಚ ಕಡಿತ ನೀತಿ ಸಹಿಸಿಕೊಂಡಿಲ್ಲ. ಹೀಗಾಗಿ ನಿರೀಕ್ಷಿತ ಫಲಿತಾಂಶವು ಗ್ರಹಿಕೆಗೇ ನಿಲುಕುತ್ತಿಲ್ಲ. ಇಂತಹ   ಪರಿಸ್ಥಿತಿಯಲ್ಲಿ, ಜಾಗತಿಕ ಅರ್ಥ ವ್ಯವಸ್ಥೆಗೆ  ಅಂಟಿಕೊಂಡಿರುವ ಬಿಕ್ಕಟ್ಟಿನ ಸೋಂಕು, ಎಲ್ಲರ ಪಾಲಿಗೆ ವಿನಾಶಕಾರಿಯಾಗಿ ಪರಿಣಮಿಸಲಿದೆ.

ಇದರ ಫಲವಾಗಿಯೇ ಹೆಚ್ಚು ಸುರಕ್ಷಿತವಾದ ಅಮೆರಿಕದ ಡಾಲರ್‌ನತ್ತ ಹೂಡಿಕೆ / ನಿಧಿಗಳು ಪ್ರವಾಹದೋಪಾದಿಯಲ್ಲಿ ಹರಿದು ಹೋಗುತ್ತಿವೆ. ಹೀಗಾಗಿ ವಿಶ್ವದ ಕರೆನ್ಸಿ ಮಾರುಕಟ್ಟೆಯಲ್ಲಿ ಗೊಂದಲ - ಅನಿಶ್ಚಿತತೆಗಳು ಮೂಡಿವೆ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಭಾರತದ ಅರ್ಥ ವ್ಯವಸ್ಥೆ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಊಹಿಸುವುದೂ ಕಷ್ಟವಾಗಿದೆ. 

ಫ್ರಾನ್ಸ್‌ನ ಹೊಸ ಅಧ್ಯಕ್ಷ ಫ್ರಾಂಕಾಯ್ಸ ಹಾಲನ್, ಈ ಮೊದಲಿನ ಆರ್ಥಿಕ ಮಿತವ್ಯಯ ಕ್ರಮಗಳನ್ನು ವಿರೋಧಿಸಿದ್ದು, ಬಿಕ್ಕಟ್ಟಿಗೆ ಹೊಸ ಪರಿಹಾರ ಕಂಡುಕೊಳ್ಳುವುದಾಗಿ ಪ್ರಕಟಿಸಿದ್ದಾರೆ. ಜರ್ಮನಿ ಮತ್ತು ಫ್ರಾನ್ಸ್ ಮುಖಂಡರ ಭೇಟಿಯ ಫಲಶ್ರುತಿಯು ಕೂಡ ಐರೋಪ್ಯ ಒಕ್ಕೂಟದ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಲಿದೆ.

ಒಂದು ವೇಳೆ ಗ್ರೀಸ್, ಐರೋಪ್ಯ ಒಕ್ಕೂಟದಿಂದ ಹೊರ ನಡೆದರೆ,        ಅದರಿಂದಾಗಲಿರುವ ಪರಿಣಾಮಗಳು ಇತರ ದೇಶಗಳಿಗೆ ಪಾಠವಾಗಲಿವೆ. ಹಣಕಾಸಿನ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವ ಒಕ್ಕೂಟದ ಇತರ ದೇಶಗಳು, ಗ್ರೀಸ್ ತುಳಿಯಲಿರುವ ಹೊಸ ಹಾದಿ ಮತ್ತು ಅದರಿಂದಾಗಲಿರುವ ಪರಿಣಾಮಗಳನ್ನು ಕುತೂಹಲದಿಂದ ಎದುರು ನೋಡುತ್ತಿದ್ದು, ಅಂತಿಮವಾಗಿ ಗೆದ್ದೆತ್ತಿನ ಬಾಲ ಹಿಡಿಯಲಿವೆ. ಆದರೆ, ಇದರ ಒಟ್ಟಾರೆ ಪರಿಣಾಮಗಳು ಜಾಗತಿಕ ಅರ್ಥವ್ಯವಸ್ಥೆ ಮೇಲೆ ವಿನಾಶಕಾರಿ ಪರಿಣಾಮ ಬೀರಲಿವೆ.

ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ  ನೇತೃತ್ವದಲ್ಲಿ ಸಭೆ ಸೇರಿದ್ದ `ಜಿ-8~ ದೇಶಗಳು, ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿವೆ. ಮಿತವ್ಯಯ ಕ್ರಮಗಳ ಬದಲಿಗೆ ಆರ್ಥಿಕ ವೃದ್ಧಿಗೆ ಹೆಚ್ಚು ಗಮನ ನೀಡಿ, ಗ್ರೀಸ್‌ಗೆ ಒತ್ತಾಸೆಯಾಗಿ ನಿಲ್ಲಲು ನಿರ್ಧರಿಸಿವೆ.
 
ಈ ವಿದ್ಯಮಾನವು ಐರೋಪ್ಯ ಒಕ್ಕೂಟ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಲ್ಲಿ ಹೊಸ ಬೆಳವಣಿಗೆಯಾಗಿದ್ದು, ತಾತ್ಕಾಲಿಕ ಪರಿಹಾರ ಒದಗಿಸುವ ನಿರೀಕ್ಷೆ ಇದೆ.

ಯೂರೋಪ್ ದೇಶಗಳಲ್ಲಿನ ಸದ್ಯದ ಬಿಕ್ಕಟ್ಟಿಗೆ, `ಹಾಸಿಗೆ ಇದ್ದಷ್ಟು ಕಾಲ ಚಾಚದ~ ಜನರ ಐಷಾರಾಮಿ ಜೀವನ ವಿಧಾನವೇ ಮುಖ್ಯ ಕಾರಣ ಎನ್ನುವುದನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.

ಸಾಲ ಮಾಡಿ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ವೆಚ್ಚ ಮಾಡುವ  ಸರ್ಕಾರಗಳ ದೂರದೃಷ್ಟಿ ಇಲ್ಲದ ವಿವೇಚನಾರಹಿತ ಕ್ರಮಗಳೇ ಸದ್ಯದ ಬಿಕ್ಕಟ್ಟಿನ ಮೂಲ ಕಾರಣ.

ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚಳವು ಸದಾ ಕಾಲವೂ ಇರುವುದಿಲ್ಲ ಎನ್ನುವುದನ್ನು ಸರ್ಕಾರಗಳು ಯಾವತ್ತೂ ಮರೆಯಬಾರದು. ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ದೇಶಗಳ ಜನರು, ದುಬಾರಿ ಜೀವನ ಮಟ್ಟವನ್ನು ಸ್ವತಃ ಗಳಿಸಿಕೊಳ್ಳಬೇಕೆ ಹೊರತು, ಸರ್ಕಾರದ ಉಚಿತ ಕೊಡುಗೆಗಳಿಂದ ಅಲ್ಲ ಎನ್ನುವ ಕಟು ಸತ್ಯವನ್ನೂ ಅಲ್ಲಿಯ ಜನರು ಮನದಟ್ಟು ಮಾಡಿಕೊಳ್ಳಬೇಕು.

ಅಭಿವೃದ್ಧಿಶೀಲ ದೇಶಗಳಿಗೆಲ್ಲ ಇಲ್ಲಿ ಕಲಿಯಲು ಹಲವಾರು ಪಾಠಗಳಿವೆ. ಯಾವುದೇ ಒಂದು ವಿವೇಚನಾಶೀಲ ಸರ್ಕಾರವು ಕೊನೆಮೊದಲಿಲ್ಲದ ಸಾಲ ಪಡೆಯುವ ಮತ್ತು ಎಗ್ಗಿಲ್ಲದೇ ವೆಚ್ಚ ಮಾಡುವ ಪ್ರವೃತ್ತಿಗೆ ಕೊನೆ ಹಾಡಬೇಕು.
 
ಇಲ್ಲದಿದ್ದರೆ ನಾವು ಈಗ ಕಾಣುತ್ತಿರುವ ಬಿಕ್ಕಟ್ಟನ್ನು ಭವಿಷ್ಯದಲ್ಲಿ ಮತ್ತೆ ಮತ್ತೆ ಎದುರಿಸಬೇಕಾಗುತ್ತದೆ. ಯೂರೋಪ್ ದೇಶಗಳು ಎದುರಿಸುತ್ತಿರುವ ಈ ಹಣಕಾಸು ಸಂಕಷ್ಟವು ನಮ್ಮ ಸರ್ಕಾರಕ್ಕೂ ಎಚ್ಚರಿಕೆಯ ಗಂಟೆಯಾಗಬೇಕು.

ನಮ್ಮ ಕರೆನ್ಸಿ (ರೂಪಾಯಿ) ಮಾರುಕಟ್ಟೆಯಲ್ಲಿ ದೇಶಿ ಮತ್ತು ವಿದೇಶಿ ಘಟನೆಗಳು ಪರಿಣಾಮ ಬೀರುತ್ತಿರುವುದಕ್ಕೆ ನಾವುಗಳೆಲ್ಲ ಸಾಕ್ಷಿಯಾಗುತ್ತಿದ್ದೇವೆ. ಜಾಗತಿಕ ಘಟನಾವಳಿಗಳ ಮೇಲೆ ನಮಗೆ ಯಾವುದೇ ನಿಯಂತ್ರಣ ಇಲ್ಲದಿರುವಾಗ, ನಾವು ಸ್ಥಳೀಯವಾಗಿ ಸೂಕ್ತವಾದ ಆರ್ಥಿಕ ಧೋರಣೆ ತಳೆಯುವ ಮೂಲಕವೇ ಬಿಕ್ಕಟ್ಟಿನ ಪರಿಣಾಮಗಳ ತೀವ್ರತೆಗೆ ಕಡಿವಾಣ ವಿಧಿಸಲು ಸಾಧ್ಯವಿದೆ.

ಕೇಂದ್ರ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ರೂಪಾಯಿ ಅಪಮೌಲ್ಯ ತಡೆಗೆ ಮುಂದಾಗಬೇಕು. ಒಂದು ವೇಳೆ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಲು ಹಿಂಜರಿದರೆ, ರೂಪಾಯಿ ವಿನಿಮಯ ದರ ಇನ್ನಷ್ಟು ಪಾತಾಳಕ್ಕೆ ಇಳಿಯುವುದನ್ನು ನಾವೆಲ್ಲ ಅಸಹಾಯಕರಾಗಿ ನೋಡುತ್ತ ನಿಲ್ಲಬೇಕಾಗುತ್ತದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT