ADVERTISEMENT

ಎಷ್ಟು ಲಕ್ಷ ಶಿಲುಬೆಗಳು...!

ಪ್ರಕಾಶ್ ರೈ
Published 4 ಫೆಬ್ರುವರಿ 2018, 2:38 IST
Last Updated 4 ಫೆಬ್ರುವರಿ 2018, 2:38 IST
ಎಷ್ಟು ಲಕ್ಷ ಶಿಲುಬೆಗಳು...!
ಎಷ್ಟು ಲಕ್ಷ ಶಿಲುಬೆಗಳು...!   

ಫಳ್ಳನೆ ಗಾಜು ಒಡೆದ ಸದ್ದು. ಬಸ್ಸಿನ ಕಿಟಕಿಯ ಗಾಜು ಚೂರಾಗಿತ್ತು. ಬಸ್ಸಿನ ಒಳಗೆ ಪುಟ್ಟ ಮಕ್ಕಳು. ಹಾಡುತ್ತಿದ್ದ ಮಕ್ಕಳು ಒಂದು ಕ್ಷಣ ಸ್ತಬ್ಧವಾದವು. ಅವುಗಳ ಕಣ್ಣಲ್ಲಿ ಹೆಪ್ಪುಗಟ್ಟಿದ ಭಯ ಅವುಗಳ ಬಾಯಿ ಮುಚ್ಚಿಸಿತ್ತು.

ಥಟ್ಟನೆ ಎಚ್ಚರವಾಯಿತು. ಮೊನ್ನೆ ಮೊನ್ನೆ ನಡೆದ ಘಟನೆ ಮನಸ್ಸಿನಾಳದಿಂದ ಮರೆಯಾಗಿರಲಿಲ್ಲ. ಅದರಿಂದಾದ ಗಾಯ ಮಾಸಿರಲಿಲ್ಲ. ಆ ದಿಗ್ಭ್ರಮೆಯಿಂದ ಹೊರಬರಲು ಸಾಧ್ಯವೇ ಆಗಿರಲಿಲ್ಲ. ರಾತ್ರಿಯೆಲ್ಲ ಶೂಟಿಂಗು ಮುಗಿಸಿ, ಬೆಳಗ್ಗೆ ಬೇಗ ಎದ್ದು ವಿಮಾನ ನಿಲ್ದಾಣದ ಕಡೆಗೆ ಹೊರಟಿದ್ದೆ. ಹೈದರಾಬಾದಿನ ವಿಮಾನ ಹತ್ತುವುದಿತ್ತು. ಇದ್ದಕ್ಕಿದ್ದಂತೆ ‘ಕಣ್ಣತ್ತಿಲ್ ಮುತ್ತಮಿಟ್ಟಾಳ್’ ಚಿತ್ರದ ದೃಶ್ಯವೊಂದು ಕಣ್ಮುಂದೆ ಹಾದುಬಂತು.

ವಿಮಾನದಲ್ಲಿ ಹೈದರಾಬಾದಿಗೆ ಒಂದು ಗಂಟೆಯ ಹಾದಿ. ಅದಕ್ಕಿಂತ ಹೆಚ್ಚು ಹೊತ್ತನ್ನು ವಿಮಾನ ನಿಲ್ದಾಣದ ಸೆಕ್ಯುರಿಟಿ ಚೆಕ್ಕಿಂಗಿನಲ್ಲೇ ಕಳೆಯಬೇಕಾದ ಅನಿವಾರ್ಯ. ಅಲ್ಲೊಬ್ಬಳು ತಾಯಿ ತನ್ನ ಪುಟ್ಟ ಮಗುವಿಗೆಂದು ಇಟ್ಟುಕೊಂಡಿದ್ದ ಹಾಲಿನ ಬಾಟಲ್ಲನ್ನೂ ಅಧಿಕಾರಿಗಳು ತೆಗೆದು ಪರಿಶೀಲಿಸುತ್ತಿದ್ದಾರೆ. ಅವರನ್ನು ಅಂಥ ಸ್ಥಿತಿಗೆ ದೂಡಲಾಗಿದೆ. ನಮ್ಮ ನಾಡು ಎಷ್ಟೋ ಪರವಾಗಿಲ್ಲ. ಪರದೇಶಗಳಲ್ಲಿ ಇನ್ನೂ ಘೋರ.

ADVERTISEMENT

ಒಬ್ಬೊಬ್ಬರೇ ಚೆಕಿಂಗ್ ಮುಗಿಸುತ್ತಿರುವುದನ್ನು ಮಿಕ್ಕವರು ನಗುತ್ತಾ ನೋಡುತ್ತಾ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಅದೊಂದು ತಮಾಷೆ ಎಂಬಂತೆ, ತಾವೆಲ್ಲರೂ ಅತೀವ ತಾಳ್ಮೆಯಿಂದ ಕಾಯುತ್ತಿರುವಂತೆ ತೋರ್ಪಡಿಸಿಕೊಳ್ಳುತ್ತಿದ್ದಾರೆ. ಅವೆಲ್ಲವನ್ನೂ ಮೀರಿ ಅವರ ಕಂಗಳಲ್ಲಿ ಭಯ ಹಣಿಕಿಹಾಕುತ್ತಿದೆ. ಯಾಕೆ?

ಈಚೀಚೆಗಂತೂ ವಿಮಾನದಲ್ಲಿ ಪ್ರಯಾಣ ಮಾಡುವುದಕ್ಕೇ ಒಂಥರಾ ಕಿರಿಕಿರಿ. ಮನೆಯಲ್ಲಿ ಸೂಟ್‌ಕೇಸು ಪ್ಯಾಕಿಂಗ್ ಮಾಡುವಾಗಲೇ ಭಯ ಶುರುವಾಗುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳನ್ನೇನೂ ತುಂಬಕೂಡದು. ಸೆಕ್ಯುರಿಟಿ ಚೆಕಿಂಗ್ ಶುರುವಾಗುತ್ತದೆ. ಅದು ಮುಗಿಯುವಷ್ಟರಲ್ಲಿ ಫ್ಲೈಟಿಗೆ ತಡವಾಗುತ್ತದೆ. ಸಿಗರೇಟು ಜೇಬಲ್ಲಿದೆ, ಆದರೆ ಲೈಟರ್ ಒಯ್ಯಬಾರದು. ಅವರ ಕಣ್ಣಲ್ಲಿ ಎಲ್ಲರೂ ತೀವ್ರವಾದಿಗಳೇ. ನೀವು ಗೆಳೆಯನ ಹುಟ್ಟುಹಬ್ಬಕ್ಕೆಂದು ಅವನಿಗೆ ಇಷ್ಟವಾದ ಕಾಣಿಕೆಯೊಂದನ್ನು ಹುಡುಕಿ, ಸುಂದರವಾಗಿ ಪ್ಯಾಕ್ ಮಾಡಿಸಿ ಒಯ್ದರೆ, ಅದನ್ನು ಹರಿದು ಪೋಸ್ಟ್‌ಮಾರ್ಟಮ್ ಮಾಡಲಾಗುತ್ತದೆ. ವಿಮಾನ ನಿಲ್ದಾಣದ ಒಳಗೆ ಬರುವ ಪ್ರತಿಯೊಬ್ಬನ ಒಳಗೂ ಒಬ್ಬ ತೀವ್ರವಾದಿ ಅಡಗಿದ್ದಾನೇನೋ ಎಂಬಂತೆ ಬಂದೂಕುಧಾರಿಗಳ ಕಣ್ಣು ನಮ್ಮ ತಪಾಸಣೆ ಮಾಡುತ್ತಿರುತ್ತದೆ. ಅಷ್ಟಾದರೂ ಎಲ್ಲರನ್ನೂ ಭಯ ಅಟ್ಟಿಸಿಕೊಂಡು ಬರುವಂತೆ ತೋರುತ್ತಿದೆ. ಸ್ವಾತಂತ್ರ್ಯ ದಿನಾಚರಣೆಯ ದಿನ ನೆಮ್ಮದಿಯಾಗಿ ಪ್ರಯಾಣಿಸಲಾಗುವುದಿಲ್ಲ. ಹಬ್ಬ, ಜಾತ್ರೆ, ಮೆರವಣಿಗೆಗಳನ್ನು ಆಚರಿಸುವಾಗಲೂ ಆತಂಕ. ನಮ್ಮ ದೇಶದ ರಾಷ್ಟ್ರಪ್ರಾಣಿ ಹುಲಿ, ರಾಷ್ಟ್ರಪಕ್ಷಿ ನವಿಲು. ರಾಷ್ಟ್ರ ಭಾವ; ಆತಂಕ. ಹೌದೇ?

ಮನುಷ್ಯನ ಮಿದುಳಿನ ಸಾಧ್ಯತೆಗಳನ್ನು ನೆನೆದರೇನೇ ಭಯವಾಗುತ್ತದೆ. ಕುಷ್ರೋಗದಿಂದ ಅರ್ಧ ದೇಹ ಕೊಳೆತು, ಚರಂಡಿಯ ಮೂಲೆಯಲ್ಲಿ ನಾರುತ್ತಾ ಬಿದ್ದ ಮನುಷ್ಯನನ್ನು ಬಾಚಿ ತಬ್ಬಿಕೊಂಡು ಶುಶ್ರೂಷೆ ಮಾಡಿದ ಕೈಗಳು ನಮ್ಮಂಥ ಮನುಷ್ಯರದ್ದೇ ಅಲ್ಲವೇ? ಶಾಲೆಯಿಂದ ಹೊರಟು ಬರುತ್ತಿದ್ದ ಮಕ್ಕಳ ಬಸ್ಸಿನ ಮೇಲೆ ಆಕ್ರಮಣ ಮಾಡಿ, ಆ ಪುಟ್ಟ ಕಂದಮ್ಮಗಳ ಮನಸ್ಸಿನಲ್ಲಿ ಭಯವನ್ನು ಬಿತ್ತುವ ಬುದ್ಧಿ ನಮ್ಮ ಮಿದುಳಿಗೆ ಹೇಗೆ ಹೊಳೆಯಿತು ಎಂದು ಯೋಚಿಸಿದಾಗ ಭಯವಾಗುತ್ತದೆ. ಬದುಕೇ ಭಯ ಎಂದಾಗಿಬಿಟ್ಟಿತೇ?

‘ಕಣ್ಣತ್ತಿಲ್ ಮುತ್ತಮಿಟ್ಟಾಳ್’ ಚಿತ್ರದ ಕ್ಲೈಮ್ಯಾಕ್ಸ್ ಮರೆಯಲು ಸಾಧ್ಯವೇ ಇಲ್ಲ. ಹೋರಾಟಗಾರ್ತಿಯಾದ ಅಮ್ಮನನ್ನು ಯುದ್ಧದಿಂದ ಬಾಧಿತಳಾದ ಅವಳ ಪುಟ್ಟ ಮಗಳು ಅಮುದಾ ಕೇಳುತ್ತಾಳೆ. ಆ ಕಂದನ ಯಾವ ಪ್ರಶ್ನೆಗೂ ಅಮ್ಮನ ಹತ್ತಿರ ಉತ್ತರ ಇಲ್ಲ. ‘ಅಮ್ಮಾ, ನೀನು ಊರಿಗೆ ಬಂದುಬಿಡು. ಅಲ್ಲಿ ಯುದ್ಧ ಇಲ್ಲ, ಸೇನೆಯಿಲ್ಲ, ಕಡಲಿದೆ, ಮರಳಲ್ಲಿ ಆಟ ಆಡಬಹುದು. ಟೀವಿ ನೋಡಬಹುದು. ಸಿನಿಮಾ ನೋಡಬಹುದು, ಹೋಗೋಣ’ ಅಂತ ಅಂಗಲಾಚುವ ಅಮುದಾಳಿಗೆ ಅಮ್ಮ ಹೇಳುತ್ತಾಳೆ; ‘ಎಂದಾದರೊಂದು ದಿನ ಈ ಭೂಮಿ ಯುದ್ಧವಿಲ್ಲದ ನೆಲವಾಗಿ ಬದಲಾಗುತ್ತದೆ. ಶಾಂತಿ ನೆಲೆಸುತ್ತದೆ. ಆಗ ನಾನು ಬರುತ್ತೇನೆ’. ಮಗಳು ಕೇಳುತ್ತಾಳೆ; ‘ಹಾಗಾಗುವುದು ಯಾವಾಗ ಅಮ್ಮಾ...’ ಆ ಪ್ರಶ್ನೆಗೆ ಅವಳಲ್ಲಿ ಉತ್ತರ ಇಲ್ಲ. ಹೋಗಲಿ, ಆ ಪ್ರಶ್ನೆಗೆ ಯಾರಲ್ಲಿ ಉತ್ತರವಿದೆ.

ನನ್ನ ಮಗಳು ನನ್ನನ್ನು ಕೇಳುತ್ತಿದ್ದಾಳೆ. ‘ಅಪ್ಪಾ, ತಪ್ಪು ಮಾಡಿದವರ ಕಣ್ಣನ್ನು ದೇವರು ಚುಚ್ಚುತ್ತಾನೆಂದು ಅಮ್ಮ ಹೇಳುತ್ತಾಳೆ. ಆದರೆ ಮಕ್ಕಳ ಬಸ್ಸಿಗೆ ಕಲ್ಲು ಹೊಡೆದವರ ಕಣ್ಣನ್ನೇಕೆ ದೇವರು ಏನೂ ಮಾಡಿಲ್ಲ. ದೇವರಿಗೆ ಅವರನ್ನು ಕಂಡರೆ ಭಯವೇ?’ ಅವಳ ಹಾಗೂ ನನ್ನ ನಡುವೆ ನಡೆದ ಒಂದು ಮಾತುಕತೆಯನ್ನು ಹಾಗ್ಹಾಗೇ ನಿಮ್ಮ ಮುಂದಿಡುತ್ತೇನೆ. ನಿಮ್ಮಲ್ಲಿ ಉತ್ತರಗಳಿದ್ದರೆ ಹೇಳಿ.

‘ಅಪ್ಪಾ, ಇಂಡಿಯಾದವರೂ ಪಾಕಿಸ್ತಾನದವರೂ ಯಾಕೆ ಶತ್ರುಗಳಾಗಿಯೇ ಇದ್ದಾರೆ?’

‘ಬಾರ್ಡರ್ ಸಮಸ್ಯೆ ಮಗಳೇ’

‘ಬಾರ್ಡರ್ ಅಂದ್ರೆ ಎರಡೂ ದೇಶಗಳ ಮಧ್ಯೆ ಬೇಲಿ ಹಾಕಿದ್ದಾರಲ್ಲ, ಅದಾ? ನಾವು ಆ ಬೇಲೀನ ದಾಟಬಾರದಾ? ದಾಟಿದರೆ ಶೂಟ್ ಮಾಡುತ್ತಾರಾ? ಎಲ್ಲರ ಕೈಯಲ್ಲೂ ಗನ್ ಇರುತ್ತಾ? ನಮ್ಮ ಬಳಿ ಗನ್ ಇಲ್ಲದಿದ್ದರೆ ನಮ್ಮನ್ನು ಬಿಟ್ಟು ಬಿಡ್ತಾರಾ? ಇಲ್ಲಾಂದ್ರೂ ಸುಟ್ಟು ಬಿಡ್ತಾರಾ? ಟೀವೀಲಿ ತೋರಿಸಿದ್ರಲ್ಲ, ಚಿಕ್ಕ ಮಕ್ಕಳ ಮೇಲೆ ಬಾಂಬ್ ಹಾಕಿದ್ದು. ಮಕ್ಕಳನ್ನೆಲ್ಲ ಬಿಳಿ ಬೆಡ್‌ಶೀಟ್ ಹೊದಿಸಿ ಸಾಲಾಗಿ ಮಲಗಿಸಿದ್ರಲ್ಲ. ಆ ಮಕ್ಕಳೆಲ್ಲಾ ಬಾರ್ಡರ್ ದಾಟಿಬಿಟ್ಟಿದ್ರಾ ಅಪ್ಪಾ... ನಾನು ಗಾಳಿಪಟ ಹಾರಿಸುವಾಗ ಗೊತ್ತಾಗದೇ  ಆ ಬಾರ್ಡರ್ ದಾಟಿ ಹಾರಿದ್ರೆ ಏನ್ ಮಾಡ್ತಾರೆ... ಮೊನ್ನೆ ಬಸ್‌ನಲ್ಲಿ ಹೋಗುತ್ತಿದ್ದ ಮಕ್ಕಳ ಮೇಲೆ ಕಲ್ಲು ಹೊಡೆದ್ರಂತಲ್ಲ... ಅಲ್ಲೂ ಬಾರ್ಡರ್ ಇದ್ಯಾ ಅಪ್ಪಾ... ಅದೂ ಇಂಡಿಯಾದಲ್ಲೇ ಇದೆ ತಾನೇ...’

ನನ್ನನ್ನು ಹಿಡಿದು ಕೂರಿಸಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದಾಳೆ ಒಬ್ಬಳು ಪುಟ್ಟ ಹುಡುಗಿ. ಒಬ್ಬ ತಂದೆಯಾಗಿ, ಒಬ್ಬ ಮನುಷ್ಯನಾಗಿ, ಒಬ್ಬ ಹಿರಿಯನಾಗಿ ಏನು ಉತ್ತರ ನೀಡಲಿ? ‘ಅಯ್ಯಾ ದೊಡ್ಡ ಮನುಷ್ಯರೇ, ನಿಮ್ಮ ಸ್ವಾರ್ಥಗಳಿಗೆ ನಮ್ಮನ್ನು ಯಾಕೆ ಬಲಿಯಾಗಿಸುತ್ತಿದ್ದೀರಿ’ ಎಂದು ನಮ್ಮ ಮುಖಕ್ಕೆ ನೇರವಾಗಿ ಕೇಳಲು ಅವಳಿಗೆ ಗೊತ್ತಿಲ್ಲ ಅಷ್ಟೇ.

ಎಲ್ಲಿಯೋ ಓದಿದ ಕತೆಯೊಂದು ನೆನಪಾಗುತ್ತಿದೆ.

‌ಎಲ್ಲರಂತೆ ಅವನೂ ಒಬ್ಬ ಮಧ್ಯಮ ವರ್ಗದ ಅಸಹಾಯಕ ಅಪ್ಪ. ಅವತ್ತು ಅವನ ಮಗುವಿನ ಹುಟ್ಟುಹಬ್ಬ. ಅವತ್ತೇ ಅವನಿಗೆ ವಿಪರೀತ ಕೆಲಸ. ಎಲ್ಲಾ ಕೆಲಸಗಳನ್ನೂ ಮುಗಿಸಿ,
ಮಗುವಿಗೊಂದು ಚೆಂದದ ಗೊಂಬೆ ಕೊಂಡುಕೊಂಡು ಬಸ್ಸು ಹತ್ತಬೇಕು ಅಂದಾಗ ಅವನ ಊರಲ್ಲಿ ಕೋಮುಗಲಭೆ ಶುರುವಾಗುತ್ತದೆ.  ಆ ಊರಲ್ಲಿ ಯಾವುದೋ ದೇವರ ಮೆರವಣಿಗೆ. ಅದು ಸಾಗುತ್ತಿರುವಾಗ ಆ ದೇವರ ಮೇಲೆ ಯಾರೋ ಶೂ ಎಸೆದರು ಎಂದು ರಾದ್ಧಾಂತ.  ಆ ಕೋಮಿನವರು ಎಸೆದರು ಅಂತ ಇವರು. ನಾವು
ಎಸೆಯಲಿಲ್ಲ ಅಂತ ಅವರು. ಮಾತಿಗೆ ಮಾತು ಬೆಳೆದು, ಕೈ ಕೈ ಮಿಲಾಯಿಸಿ, ಬೆಂಕಿ ಹೊತ್ತಿ ದಳ್ಳುರಿ ಎದ್ದು ಊರು ತುಂಬ ರಕ್ತಪಾತ. ಕರ್ಫ್ಯೂ.

ಅವನು ಮನೆಗೆ ಹೋಗಬೇಕು. ಮಗು ಕಾಯುತ್ತಿದೆ. ಹೋಗುವ ದಾರಿ ಮುಚ್ಚಿಹೋಗಿದೆ. ಹೇಗೋ ಒಳದಾರಿಯಲ್ಲಿ ಕಣ್ತಪ್ಪಿಸಿಕೊಂಡು ಕಷ್ಟಪಟ್ಟು ಮನೆಗೆ ಹೋಗುವ ಹೊತ್ತಿಗೆ ನಡುರಾತ್ರಿ. ಅವನ ಮನೆಯ ಎದುರೇ ಮೆರವಣಿಗೆ ಸಾಗಿಹೋಗಿದೆ. ಅದಕ್ಕೆ ಸಾಕ್ಷಿಯಾಗಿ ಬೀದಿಯ ತುಂಬ ಹೂವು, ಸುಟ್ಟ ಟೈರು, ಕಸಕಡ್ಡಿ, ನೆತ್ತರ ಕಲೆ. ಅವನು ಎಚ್ಚರಿಕೆಯಿಂದ ನಾಲ್ಕನೇ ಮಹಡಿಯಲ್ಲಿರುವ ತನ್ನ ಮನೆಯನ್ನು ಸೇರಿ, ಬಾಗಿಲು ದೂಡಿ ಒಳಗೆ ನೋಡಿದರೆ ಮಗು ನಿದ್ದೆ ಹೋಗಿದೆ.

ನೋಡುತ್ತಾನೆ. ಮಗುವಿನ ಒಂದು ಕಾಲಲ್ಲಿ ಶೂ ಇದೆ. ಮತ್ತೊಂದು ಕಾಲಲ್ಲಿ ಇಲ್ಲ. ಮಗು ಆಟವಾಡುತ್ತಾ ಆ ಶೂ ಮಹಡಿಯಿಂದ ಮೆರವಣಿಗೆಯ ಮೇಲೆ ಬಿದ್ದಿರುತ್ತದೆ. ಅದೇ ಗಲಭೆಗೆ ಮೂಲ.

ಸಕಾರಣವೇ ಬೇಕಿಲ್ಲ ನಮಗೆ. ಹೊಡೆದಾಡುವುದಕ್ಕೆ ನೆಪವೊಂದು ಸಿಕ್ಕರೆ ಸಾಕು. ಅದಕ್ಕೇ ಈ ಭಯ, ಭೀತಿ, ಆತಂಕ. ಇದರ ನಡುವೆಯೇ ನಾವು ಹೇಗೆ ಬದುಕುತ್ತಿದ್ದೇವೆ? ಬದುಕುವುದೇ ಒಂದು ಪಾಪವೇ?

ಪಾಪ ಅನ್ನುವುದಾದರೆ ಆ ದೇವರು ಯಾಕೆ ಗಂಡು ಹೆಣ್ಣುಗಳನ್ನು ಸೃಷ್ಟಿಸುತ್ತಿದ್ದ, ನಾವು ಪಯಣಿಸುವ ದಾರಿಯಲ್ಲಿ ದ್ರಾಕ್ಷಿಯ ಗಿಡಗಳನ್ನು ಬೆಳೆಸುತ್ತಿದ್ದ ಎಂದು ಕೇಳುತ್ತಾನೆ ಕವಿ ಕಣ್ಣದಾಸನ್. ಪ್ರೀತಿ ಹಾಗೂ ‘ಮತ್ತು’ ಹಾಗೆ ಬಂದಿದ್ದೇ ಆದರೆ, ಈ ಅಸಹ್ಯದ ಯುದ್ಧವೂ ಹಿಂಸೆಯೂ ಜಾತಿ ಧರ್ಮಗಳ ‘ಮತ್ತು’ ನಮ್ಮ ನಡುವೆ ಹೇಗೆ ಬಂತು? ಅಧಿಕಾರವೂ ಸ್ವಾರ್ಥವೂ ಸೇರಿ ಜಗತ್ತಿನ ಮೊದಲ ಆಯುಧವನ್ನು ಸೃಷ್ಟಿಸಿರಬಹುದೇ? ತುಪಾಕಿಯನ್ನು ಹಿಡಿದ ಪ್ರತಿಯೊಬ್ಬನೂ ಒಂದು ಕಣ್ಣನ್ನು ಮುಚ್ಚಿಕೊಂಡೇ ಗುರಿ ಹಿಡಿಯುತ್ತಾನೆ.  ಅಂದರೆ ಕೊಲ್ಲಲು ನಿರ್ಧರಿಸುವ ಹೊತ್ತಿಗೆ ಅರ್ಧ ಜಗತ್ತು ಅವನ ಕಣ್ಣಿಂದ ಮರೆಯಾಗಿರುತ್ತದೆ. ಅವನ ಇನ್ನೊಂದು ಕಣ್ಣು ಎಲ್ಲವನ್ನೂ ಹಿಂಸೆಯ ಗ್ರಹಿಕೆಯಿಂದಲೇ ನೋಡುತ್ತಿದೆ.

ಎರಡೂ ಕಣ್ಣುಗಳನ್ನು ತೆರೆದು ನೋಡಿದಾಗಲೇ ಮನಸ್ಸು ತೆರೆದುಕೊಳ್ಳುವುದು. ಮಕ್ಕಳು, ಹಿರಿಯರು, ಬಡವಬಲ್ಲಿದರು- ಹೀಗೆ ಎಲ್ಲರ ಬದುಕಿನ ಕುರಿತೂ ನಮಗೆ ಜವಾಬ್ದಾರಿ ಇದೆ ಎಂಬ ಸತ್ಯ ಅರಿವಾಗುವುದು.

ಮರಗಳು ಮನುಷ್ಯರನ್ನು ನೋಡಿ ಹೀಗೆ ಕೇಳಿದವಂತೆ – ನಾವು ಎರಡು ಸಾವಿರ ವರುಷಗಳಿಂದ ಲಕ್ಷಾಂತರ ಶಿಲುಬೆಗಳನ್ನು ಕೊಟ್ಟಿದ್ದೇವೆ. ಆದರೆ ಮನುಷ್ಯರೇ, ನಿಮ್ಮಿಂದ ಒಬ್ಬ ಏಸುವನ್ನು ಕೊಡಲಾಗಲಿಲ್ಲವಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.