ADVERTISEMENT

ಗೆಲುವಿನ ಕುರೂಪ ಮತ್ತು ಉಳಿಪೆಟ್ಟಿನ ಸೌಂದರ್ಯ

ಪ್ರಕಾಶ್ ರೈ
Published 9 ಜೂನ್ 2018, 19:30 IST
Last Updated 9 ಜೂನ್ 2018, 19:30 IST
ಗೆಲುವಿನ ಕುರೂಪ ಮತ್ತು ಉಳಿಪೆಟ್ಟಿನ ಸೌಂದರ್ಯ
ಗೆಲುವಿನ ಕುರೂಪ ಮತ್ತು ಉಳಿಪೆಟ್ಟಿನ ಸೌಂದರ್ಯ   

ರಾಜಮಂಡ್ರಿಯ ಹತ್ತಿರದಲ್ಲಿರುವ ಅಮಲಾಪುರಂನಲ್ಲಿ ಚಿತ್ರೀಕರಣ ಮುಗಿಸಿ ಇಳಿಸಂಜೆಯಲ್ಲಿ ನಾನು ತಂಗಿದ್ದ ಹೋಟೆಲ್‌ನತ್ತ ಕಾರು ಹೊರಟಿತ್ತು. ಮುಂದಿದ್ದ ರಸ್ತೆ ಕಾಣದಷ್ಟು ಧಾರಾಕಾರವಾಗಿ ಮುಂಗಾರುಮಳೆ ಸುರಿಯುತ್ತಿತ್ತು. ರಸ್ತೆಯುದ್ದಕ್ಕೂ, ಪಕ್ಕದಲ್ಲಿ ಗೋದಾವರಿ ನೀರನ್ನು ದೂರದೂರದ ಹಳ್ಳಿಗಳಿಗೆ ಹರಿಸುತ್ತಿದ್ದ ನಾಲೆಗಳು. ಬ್ರಿಟಿಷ್‌ರವನಾದ ಆರ್ಥರ್ ಕಾಟನ್ ಈಗ ಇವರಿಗೆ ಕಾಟನ್ ದೊರೆ ಎಂದು ಪೂಜಿಸಲ್ಪಡುವ ದೇವರು. ಈ ನೀರಾವರಿ ಯೋಜನೆಯ ರೂವಾರಿ ಆತ. ಆದರೆ ಇದನ್ನು ಎಲ್ಲರಿಗೂ ತಿಳಿಹೇಳಲು ಅವನು ಪಟ್ಟ ಪಾಡು ಒಂದು ದೊಡ್ಡ ಕಥೆ, ಇರಲಿ.

ನನ್ನ ಬದುಕಿನ ಇತ್ತೀಚೆಗಿನ ದಿನಗಳು ಕಣ್ಣಮುಂದೆ ಬಂದವು. ಕೋಮು ರಾಜಕೀಯವನ್ನು ಮಾಡುವ ರಾಜಕೀಯ ಪಕ್ಷವನ್ನು ಪ್ರಶ್ನಿಸಿದ್ದಕ್ಕೆ ‘ಜೀವವಿರೋಧಿ, ಪಾಕಿಸ್ತಾನಕ್ಕೆ ಹೋಗು’ ಎಂದರು, ‘ದೇಶದ್ರೋಹಿ’ ಎಂಬ ಪಟ್ಟಕಟ್ಟಿದವರು; ಕೆಲವೇ ದಿನಗಳಲ್ಲಿ ಗೆದ್ದು ಸರ್ಕಾರ ರಚಿಸಿದ ಎರಡು ರಾಜಕೀಯ ಪಕ್ಷಗಳು ಕೆಲಸ ಮಾಡದೇ ಇರುವುದನ್ನು ಕಂಡು ಅವರನ್ನೂ ಟೀಕಿಸಿ, ಪ್ರಶ್ನಿಸತೊಡಗಿದಾಗ ಇವನನ್ನು ಹೇಗೆ ಬೈಯುವುದು ಎಂದು ತಿಳಿಯದೇ ಸುಮ್ಮನಾಗಿದ್ದರು. ಆದರೆ ಮೊನ್ನೆ ನೀರಿನ ವಿವಾದದಲ್ಲಿ ನಟನೊಬ್ಬನ ಹೇಳಿಕೆಯನ್ನು ಕಂಡು ಅವನು ನಟಿಸಿದ ಚಿತ್ರವನ್ನು ಬಹಿಷ್ಕರಿಸಬೇಕೆಂದು ಕೆಲವರು ಮುಗಿಬಿದ್ದಾಗ  ‘ಅದು ತಪ್ಪು. ಆ ನಟನ ಹೇಳಿಕೆಯ ವಿರುದ್ಧ ನಿಮ್ಮ ಹೋರಾಟ ಇರಬೇಕೇ ಹೊರತು ಆ ಹೇಳಿಕೆಗೆ ಸಂಬಂಧವಿಲ್ಲದ– ಆ ಚಿತ್ರಕ್ಕಾಗಿ ದುಡಿದವರ ಮೇಲಲ್ಲ’ ಎಂದಿದ್ದಕ್ಕೆ ‘ನೀನು ಕನ್ನಡಿಗನೇ ಅಲ್ಲ’ ‘ಕರ್ನಾಟಕವನ್ನು ಬಿಟ್ಟು ಹೋಗು’ ‘ಕನ್ನಡದ್ರೋಹಿ’ ಎಂದು ಮತ್ತೆ ಪಟ್ಟಕಟ್ಟಲು ತುಡಿಯುತ್ತಿರುವವರನ್ನು ನೋಡಿ ಮನದಲ್ಲಿಯೇ ನಕ್ಕೆ.

ಇವರಾರಿಗೂ ನಾನೇನು ಹೇಳುತ್ತಿದ್ದೇನೆ, ಏಕೆ ಹೇಳುತ್ತಿದ್ದೇನೆ ಎನ್ನುವುದು ಗೊತ್ತಿಲ್ಲ. ಇವರಂದುಕೊಂಡಂತೆ ನಾನು ಇಲ್ಲ ಎನ್ನುವುದಷ್ಟೇ ಅವರ ಸಮಸ್ಯೆ.

ADVERTISEMENT

ಕಾರಿನಲ್ಲಿ ಯಾವಾಗಲೂ ಇರುತ್ತಿದ್ದ ನನ್ನ ಸಹಾಯಕ ಏನೋ ಯೋಚಿಸುತ್ತ ಕೂತಿದ್ದ. ‘ಲೇ ಸುರೇಶ, ನೀನು ಶ್ರೀಮಂತನಾ ನಾನು ಶ್ರೀಮಂತನಾ?’ ಎಂದು ಪ್ರಶ್ನೆ ಕೇಳಿದೆ. ಅವನು ಮಾತನಾಡದೆ ನಕ್ಕು ಸುಮ್ಮನಾದ. ‘ಲೇ... ಸೀರಿಯಸ್ಸಾಗಿ ಕೇಳ್ತಾ ಇದ್ದೀನಿ. ಹೇಳೋ ಜಾಣ’ ಎಂದು ಮತ್ತೆ ಕೇಳಿದೆ. ‘ತಮಾಷೆ ಮಾಡ್ಬೇಡಿ ಸಾರ್... ನಿಮ್ಮತ್ರ ಕೈಚಾಚಿ ಸಂಬಳ ತಗೋಳ್ತಾ ಇರೋನು ನಾನು. ಹೇಗೆ ನಿಮಗಿಂತ ಶ್ರೀಮಂತ ಆಗೋಕೆ ಸಾಧ್ಯ?’ ಎಂದು ಪ್ರಶ್ನೆಯನ್ನೇ ಉತ್ತರವಾಗಿ ಹೇಳಿದ. ನಾನು ನಕ್ಕೆ.

‘ನಿನಗೆ ಸಾಲ ಎಷ್ಟಿದ್ಯೋ?’ ಎಂದು ಕೇಳಿದೆ. ‘ಅಯ್ಯಯ್ಯೋ... ಸಾಲ ಗೀಲ ಏನೂ ಇಲ್ಲ ಸಾರ್’ ಎಂದ.

‘ಸ್ವಲ್ಪನಾದ್ರೂ ಹಣ ಕೂಡಿಸಿಟ್ಟಿದ್ದೀಯಾ?’ ‘ಒಂದೆರಡು ಲಕ್ಷ ಇರಬೇಕು ಸಾರ್ ಬ್ಯಾಂಕಿನಲ್ಲಿ’ ಎಂದು ಸಂತೋಷದಿಂದ ಹೇಳಿದ. ಆಗ ‘ನಾನು ಅಂದ್ಕೊಂಡಿದ್ದು ಸರಿ ಕಣೋ ಜಾಣ.. ನನಗಿಂತ ನೀನೇ ಶ್ರೀಮಂತ ಹೋಗು’ ಎಂದೆ.

ನನಗೀಗ ಎರಡು ಕೋಟಿಗೂ ಮೀರಿ ಸಾಲವಿದೆ. ಪ್ರಕಾಶ್ ರಾಜ್‌ ಪ್ರೊಡಕ್ಷನ್ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಎರಡು ಚಿತ್ರಗಳು ತಯಾರಿಕೆಯ ಹಂತದಲ್ಲಿವೆ. ಒಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದು ಬಿಡುಗಡೆಯಾಗಿ ಗೆದ್ದರೆ ಸಾಲ ತೀರುತ್ತದೆ. ಆದರೆ ನಾನು ಎಂದೂ ಕೋಟಿಗಟ್ಟಲೆ ಹಣ ಸಂಪಾದಿಸಬೇಕು ಎಂದುಕೊಳ್ಳುವ ನಿರ್ಮಾಪಕ ಅಲ್ಲ. ಒಳ್ಳೆಯ, ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವುದರಿಂದ ಸಿಗುವ ಗೌರವ, ಸಂತೋಷ, ತೃಪ್ತಿಯೇ ಮುಖ್ಯ ಅಂದುಕೊಳ್ಳುವವನು. ಹಲವು ಸಿನಿಮಾಗಳು ಗೆದ್ದಿವೆ, ಹಲವು ಸೋತಿವೆ. ಬೇಡಿಕೆಯ ನಟನೂ ಆಗಿರುವುದರಿಂದ ನಷ್ಟವನ್ನು ತುಂಬುವ ದುಡಿಮೆಯಿದೆ. ಆದರೂ ಚಿತ್ರ ನಿರ್ಮಾಣಕ್ಕಾಗಿ, ಫೈನಾನ್ಶಿಯರ್‌ಗಳು ಚಾಚಿದ ಕಾಗದದ ಮೇಲೆ ಸಹಿ ಹಾಕಿ ಪಡೆದುಕೊಂಡ ಸಾಲಕ್ಕೆ ಅವರು ಹೇಳಿದ ತಾರೀಖಿಗೆ ಬಡ್ಡಿ ತಲುಪಿಸಲೇಬೇಕು. ಸಿನಿಮಾ ಸೋತರೆ ಸ್ವಂತ ದುಡಿಮೆಯಿಂದ ಸಾಲ ತೀರಿಸಲೇಬೇಕು. ಇಲ್ಲವೆಂದರೆ ಜಾತಿ, ಮತ, ಹೆಸರು, ಭಾಷೆ, ಗೌರವ ಇದ್ಯಾವುದರ ಮುಲಾಜೂ ನೋಡದೆ ನನ್ನ ಮಾನ ಕಂಡಲ್ಲೇ ಹರಾಜಾಗುವುದು ಖಚಿತ. ಏಕೆಂದರೆ ನಾನು ಸಾಲಗಾರ.

ಬೆಂಗಳೂರಿನಿಂದ ನೂರಿಪ್ಪತ್ತು ರೂಪಾಯಿಗಳೊಂದಿಗೆ ದಶಕಗಳ ಹಿಂದ ಚೆನ್ನೈ ಮಹಾನಗರದಲ್ಲಿ ಕಾಲಿಟ್ಟ ಆ ರಾತ್ರಿ ಇನ್ನೂ ನೆನಪಿದೆ. ಊಟಕ್ಕೆ ಏನು ಮಾಡುವುದು ಎಂದು ನನಗೆ ಗೊತ್ತಿರಲಿಲ್ಲ. ಎಲ್ಲಿ ಉಳಿದುಕೊಳ್ಳುವುದೆಂದೂ ಗೊತ್ತಿರಲಿಲ್ಲ. ಮೊದಲ ಚಿತ್ರ ಒಳ್ಳೆಯ ಹೆಸರು ತಂದರೂ ಚಿತ್ರಮಂದಿರಗಳಲ್ಲಿ ಸೋತಿತ್ತು. ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಲಾರಂಭಿಸಿದೆ. ಹತ್ತು ಸಾವಿರ ರೂಪಾಯಿ ಸಂಭಾವನೆ ನಿಗದಿಯಾಗಿರುತ್ತಿತ್ತು. ಆದರೆ ಅವಸರಕ್ಕೆ ಐದುಸಾವಿರ ಬೇಕಾದ ಪರಿಸ್ಥಿತಿ. ತಕ್ಷಣವೇ ಸಿಂಗಲ್ ಪೇಮೆಂಟ್ ಐದು ಸಾವಿರ ಕೊಟ್ಟರೆ ಉಳಿದ ಐದು ಸಾವಿರ ಬೇಡ ಎಂದು ಹೇಳುವ ಒತ್ತಡದಲ್ಲಿ ಸಿಲುಕಿದ್ದೇನೆ, ನಲುಗಿದ್ದೇನೆ. ಹಾಗಿದ್ದವನನ್ನು ನಂಬಿ ಇಂದು ಎರಡು ಕೋಟಿ ಸಾಲ ಕೊಡುವವರಿದ್ದಾರೆಂದರೆ ಈ ಬೆಳವಣಿಗೆ ನನ್ನ ಗೆಲುವೇ?

ಈಗ ನನ್ನ ಅವಶ್ಯಕತೆಗಳು ಹೆಚ್ಚಾಗಿವೆ. ಚೆನ್ನೈ, ಹೈದರಾಬಾದ್, ಬೆಂಗಳೂರು, ಮುಂಬೈ ಹೀಗೆ ಎಲ್ಲೆಡೆ ನನ್ನ ಬಳಿ ಕೆಲಸ ಮಾಡುವವರ ಸಂಖ್ಯೆ ನಲ್ವತ್ತಕ್ಕೂ ಮೀರಿದೆ. ಅಲ್ಲಲ್ಲಿ ತೋಟಗಳನ್ನೂ ಮನೆಗಳನ್ನೂ ಪ್ರೀತಿಯಿಂದ ಕಟ್ಟಿದ್ದೇನೆ. ಯಥೇಚ್ಛ ಗಿಡಮರಗಳು. ಆದರೆ ಹೆಂಡತಿ ಮಕ್ಕಳೊಡನೆ ಪ್ರತಿದಿನ ಬದುಕುವುದು ಬಾಡಿಗೆ ಮನೆಯಲ್ಲಿಯೇ.

ಜೀವನದಲ್ಲಿ ಎಲ್ಲರೂ ಗೆಲ್ಲುವುದಕ್ಕಾಗಿ ಓಡುತ್ತಲೇ ಇದ್ದೇವೆ. ಆದರೆ ಗೆದ್ದೆವೇ? ಯಾವುದು ಗೆಲುವು? ಯಾವುದು ಸೋಲು? ಗೆಲುವು ಒಬ್ಬರನ್ನು ಸುಂದರವಾಗಿಸುತ್ತದೆಯೇ ಅಥವಾ ಕುರೂಪಗೊಳಿಸುತ್ತದೆಯೇ?

‘ಕೂಲ್ ಹ್ಯಾಂಡ್ ಲೂಕ್’ ಎನ್ನುವ ಸಿನಿಮಾ. ಎಲ್ಲರನ್ನೂ ಎಲ್ಲವನ್ನೂ ಪ್ರಶ್ನಿಸುವ ನಾಯಕ. ಆತನ ನೇರ ನಿಷ್ಠುರ ಬದುಕಿಗೆ ಸವಾಲಾಗಿರುವ ಸಮಾಜ. ಎಲ್ಲರಿಗೂ ಇಷ್ಟವಾಗುವ, ಒಪ್ಪಿಕೊಳ್ಳುವ ಸುಳ್ಳುಗಳನ್ನು ಹೇಳುತ್ತಾ, ಅವರನ್ನೂ ತನ್ನನ್ನೂ ಮೋಸಮಾಡಿ ಬದುಕುವುದು ಹೇಗೆ ಎಂದು ಚಿಂತಿಸುತ್ತಿದ್ದಾಗ ದಿಢೀರೆಂದು ಜೈಲಿನ ನೆನಪಾಗುತ್ತದೆ. ಯಾವುದಾದರೂ ಸಣ್ಣ ತಪ್ಪೊಂದನ್ನು ಮಾಡಿ ಜೈಲಿಗೆ ಹೋಗಿಬಿಟ್ಟರೆ ಈ ಸಮಾಜದ ಸಹವಾಸವಿಲ್ಲದೆ ಯಾರಿಗೂ ಸುಳ್ಳು ಹೇಳಬೇಕಾದ ಮೋಸ ಮಾಡಬೇಕಾದ ಅವಶ್ಯಕತೆ ಇಲ್ಲದೆ ಬದುಕಬಹುದು. ಊಟದ, ವಸತಿಯ ಚಿಂತೆ ಇಲ್ಲ ಎನ್ನುವುದೇ ನೆಮ್ಮದಿ ತರುವಂತಿದೆ.

ರಸ್ತೆ ಬದಿಯ ದೀಪದ ಕಂಬಗಳ ಬಲ್ಬುಗಳಿಗೆ ಕಲ್ಲು ಹೊಡೆಯುತ್ತ ಪೊಲೀಸರಿಂದ ಕೈದಾಗಿ ಜೈಲಿಗೆ ಸೇರುತ್ತಾನೆ. ಆದರೆ ಜೈಲು ತಾನಂದುಕೊಂಡಂತಿಲ್ಲ. ಆ ಜೈಲಿನಲ್ಲಿ ತನ್ನದೇ ಆದ ಹಲವು ಅಲಿಖಿತ ನೀತಿ ನಿಯಮಗಳಿವೆ. ಹಿರಿಯ ಅಪರಾಧಿಗಳಿಗೆ ಅಲ್ಲಿ ಬಂದು ಸೇರುವ ಹೊಸ ಅಪರಾಧಿಗಳು ಸೇವೆ ಮಾಡಬೇಕು. ಅಲ್ಲಿರುವ ಏಳೆಂಟು ದಾದಾಗಳು ಹೇಳಿದ್ದೇ ನಿಯಮ. ಆದರೆ ನಮ್ಮ ನಾಯಕ ಯಾರ ಮಾತನ್ನೂ ಕೇಳದವನು. ಎಷ್ಟೇ ಬೆದರಿಸಿದರೂ ಇವನು ಬಗ್ಗುವವನಲ್ಲ. ಆವರೆಗಿನ ಒಂದು ವ್ಯವಸ್ಥೆ
ಯನ್ನು ಒಪ್ಪಿಕೊಳ್ಳದ ನಮ್ಮ ನಾಯಕನ ಬಗ್ಗೆ ಅಲ್ಲಿರುವ ಎಲ್ಲರಿಗೂ ಕೋಪ.

ಅಲ್ಲಿಯ ಜೈಲಿನ ವಾರ್ಡನ್‌ಗೆ ಇವೆಲ್ಲವೂ ಗೊತ್ತು. ಎಲ್ಲಿ ಪರಿಸ್ಥಿತಿ ಹತೋಟಿ ತಪ್ಪುತ್ತದೆಯೋ ಎಂದು ವಿಶೇಷ ನಿಯಮವೊಂದನ್ನು ಜಾರಿಮಾಡಿರುತ್ತಾನೆ. ಅದೇನೆಂದರೆ, ಕೈದಿಗಳೊಂದಿಗೆ ಎಷ್ಟೇ ವೈಮನಸ್ಸು ಇದ್ದರೂ ವಾರದ ಆರು ದಿನ ಒಬ್ಬರು ಇನ್ನೊಬ್ಬರೊಂದಿಗೆ ಜಗಳವಾಗಲಿ, ಹೊಡೆದಾಟವಾಗಲಿ ಮಾಡುವಂತಿಲ್ಲ. ಆದರೆ ಏಳನೇ ದಿನ ತಮ್ಮ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು. ಯಾರು ಯಾರೊಂದಿಗಾದರೂ ಜಗಳಕ್ಕಿಳಿಯಬಹುದು. ಏಟು ತಿನ್ನುವವನು ತಪ್ಪಾಯಿತು ಎಂದು ಒಪ್ಪಿಕೊಂಡರೆ ಸುಮ್ಮನಾಗಬೇಕು. ಆ ನಿಗದಿತ ದಿನಕ್ಕಾಗಿ ಎಲ್ಲ ಕೈದಿಗಳು ಹಲ್ಲುಮಸೆಯುತ್ತಾ ಕಾಯುತ್ತಾರೆ. ‌

ಆ ದಿನ ಅವರಲ್ಲಿ ಕಟ್ಟು ಮಸ್ತಾದ ಬಾಕ್ಸಿಂಗ್‌ ಗೊತ್ತಿರುವವನೊಬ್ಬನನ್ನು ನಮ್ಮ ನಾಯಕನ ಮುಂದೆ ನಿಲ್ಲಿಸಿ ಎಲ್ಲರೂ ಸುತ್ತುವರಿದು ನಿಲ್ಲುತ್ತಾರೆ. ಬಾಕ್ಸರ್ ಗೆದ್ದೇ ತೀರುತ್ತಾನೆ ಎಂದು ಎಲ್ಲರಿಗೂ ಗೊತ್ತು. ಪಂದ್ಯ ಆರಂಭವಾಗುವ ಮುನ್ನ ತಪ್ಪೊಪ್ಪಿಕೊಂಡು ಶರಣಾಗುವಂತೆ ನಮ್ಮ ನಾಯಕನಿಗೆ ವಾರ್ಡನ್ ಹೇಳಿದರೂ ಆತ ಹಠವಾದಿ, ಒಪ್ಪುವುದಿಲ್ಲ. ಪಂದ್ಯ ಶುರುವಾಗುತ್ತದೆ.

ಆ ದೈತ್ಯ ಬಾಕ್ಸರ್ ಹತ್ತು ಏಟು ಕೊಟ್ಟರೆ ಒಂದು ಏಟು ತಿರುಗಿಸಿ ಕೊಡುವುದಷ್ಟೇ ಇವನಿಗೆ ಸಾಧ್ಯವಾಗುತ್ತಿದೆ. ಬಾಕ್ಸರ್ ಹಿಗ್ಗಾಮುಗ್ಗಾ ಥಳಿಸುತ್ತಿದ್ದಾನೆ. ಸಿಡಿಲಿನಂತೆ ಬೀಳುತ್ತಿದೆ ಒಂದೊಂದು ಹೊಡೆತ. ಆದರೂ ಸೋಲನ್ನೊಪ್ಪದ ನಾಯಕ ಕಷ್ಟವಾದರೂ ಮತ್ತೆ ಮತ್ತೆ ಎದ್ದುನಿಲ್ಲುತ್ತಿದ್ದಾನೆ. ಮುಖ ಮೂತಿಯೆಲ್ಲ ರಕ್ತಕಾರುತ್ತಿದೆ. ಒಂದು ಹಂತದಲ್ಲಿ ‘ಅವನನ್ನು ಹೊಡಿ ಬಡಿ ಕಚ್ಚು’ ಎಂದು ಸುತ್ತ ನಿಂತು ಕೂಗುತ್ತಿದ್ದವರಿಗೂ ಅವನ ಮೇಲೆ ಅನುಕಂಪ ಹುಟ್ಟುತ್ತದೆ. ‘ಸೋಲನ್ನು ಒಪ್ಪಿಕೊಂಡು ಶರಣಾಗು’ ಎಂದು ಬೇಡಿಕೊಳ್ಳುತ್ತಾರೆ. ಆದರೂ ಒಪ್ಪದೆ ತಡಮಾಡುತ್ತ ಎದ್ದುನಿಲ್ಲುತ್ತಿದ್ದಾನೆ ಅವನು. ಕೊನೆಗೆ ಬೇಸತ್ತ ಅವರೆಲ್ಲರೂ ಹೊರಟುಹೋಗುತ್ತಾರೆ. ಹೊಡೆಯುತ್ತಿದ್ದ ದೈತ್ಯನಿಗೂ ಆಯಾಸವಾಗಿ ಇನ್ನು ಮುಂದೆ ಹೊಡೆಯಲಾಗದೆ ಕೆಳಗೆ ಬೀಳುವ ಸ್ಥಿತಿಗೆ ತಲುಪುತ್ತಾನೆ. ಅವನೂ ಅಲ್ಲಿಂದ ಹೊರಟುಬಿಡುತ್ತಾನೆ.

ಯಾರೂ ಇಲ್ಲದ ಬಯಲಿನಲ್ಲಿ ಇವನು ನಿಧಾನವಾಗಿ ತನ್ನ ಸುತ್ತಲಿನ ಗಾಳಿಯನ್ನು ಕೈಬೀಸಿ ಗುದ್ದುತ್ತ ಎದ್ದು ನಿಲ್ಲುತ್ತಾನೆ. ಇನ್ನೂ ಇನ್ನೂ ಪ್ರಹಾರಗಳನ್ನು ಭರಿಸುವ ಶಕ್ತಿ, ಹುಮ್ಮಸ್ಸು ಇದೆ ಅವನಲ್ಲಿ. ಆದರೆ ಪ್ರಹಾರ ಮಾಡಲು ಯಾರೂ ಇಲ್ಲ. ಇಲ್ಲಿ ಗೆದ್ದವರು ಯಾರು ಎಂಬ ಪ್ರಶ್ನೆಗೆ ಯಾವುದೇ ಉತ್ತರ ಕೊಡದೆ ಸನ್ನಿವೇಶ ಮುಗಿಯುತ್ತದೆ. ಹೊಡೆದವರು ಗೆದ್ದರೇ? ಹೊಡೆತ ತಿಂದವರು ಗೆದ್ದರೇ?

ಎರಡು ಉಳಿಯೇಟನ್ನೂ ತಾಳಲಾರದೆ ನೆಲಕ್ಕೊರಗುವ ಕಲ್ಲು ಎಲ್ಲರೂ ತುಳಿಯುವ ಮೆಟ್ಟಿಲಾಗುತ್ತದೆ. ಆದರೆ ಸಾವಿರಾರು ಉಳಿಯೇಟನ್ನು ಭರಿಸುವ ಬಂಡೆ... ಕಣ್ಣಿನ ವಿನ್ಯಾ
ಸಕ್ಕೆ ನೂರೇಟು, ಮೂಗಿಗೆ ಎರಡು ಸಾವಿರ ಏಟು, ತುಟಿಯ ಕಿರುನಗೆಗೆ ಹತ್ತುಸಾವಿರ ಉಳಿಯೇಟು, ಹುಬ್ಬಿಗೊಂದಷ್ಟು, ಕೆನ್ನೆಗೊಂದಷ್ಟು ಹೀಗೆ ಎಲ್ಲವನ್ನೂ ಭರಿಸುತ್ತ ಭರಿಸುತ್ತ ರೂಪುಗೊಳ್ಳುತ್ತ ಕೊನೆಗೆ ಎಲ್ಲರೂ ಕೈಯೆತ್ತಿ ನಮಸ್ಕರಿಸುವ ಶಿಲೆಯಾಗಿ ಗರ್ಭಗುಡಿಯನ್ನು ಸೇರುತ್ತದೆ. ಗೆಲುವನ್ನು ಸಂಭ್ರಮಿಸುವಾಗ ಸೋತುಹೋದವರ ಬಗ್ಗೆ ಯಾರೂ ಯೋಚಿಸುವುದಿಲ್ಲ. ಆ ಕ್ಷಣಗಳಲ್ಲಿ ನಾವು ಕುರೂಪಗೊಳ್ಳುತ್ತೇವೆ. ಹೇಗಾದರೂ ನಾವು ಗೆಲ್ಲುವುದೇ ಮುಖ್ಯವೆಂದುಕೊಳ್ಳುವ ಹಡಾಹುಡಿಯಲ್ಲಿ, ವಾದ ವಿವಾದಗಳಲ್ಲಿ ಸೂಕ್ಷ್ಮತೆಯನ್ನು ಕಳೆದುಕೊಂಡು ಎಷ್ಟು ಜನರನ್ನು ತುಳಿಯುತ್ತೇವೆ, ಯಾವುದನ್ನು ನಾಶಪಡಿಸುತ್ತೇವೆ ಎಂದು ಅರಿಯಲಾರದಷ್ಟು ಅಸುರರಾಗುತ್ತೇವೆ.

‘ಪ್ರಕಾಶ್, ಜೀವನದಲ್ಲಿ ನೀನು ಗೆದ್ದೆ ಕಣೋ’ ಎಂದು ಗೆಳೆಯನೊಬ್ಬ ಹೇಳಿದಾಗ ನಾನು ನನ್ನೊಳಗೇ ಯೋಚಿಸತೊಡಗಿದೆ. ‘ಗೆಳೆಯ ನನ್ನ ಶ್ರೀಮಂತಿಕೆಯನ್ನು ನನ್ನ ಹಣದಿಂದ ಅಳೆದನೋ, ಗಳಿಸಿದ ಹೆಸರಿನಿಂದ ಅಳೆದನೋ? ಇತ್ತೀಚೆಗಿನ ನನ್ನ ನೇರ ನಿಷ್ಠುರ ನಿಲುವುಗಳಿಂದ ಅಳೆದನೋ ಗೊತ್ತಿಲ್ಲ. ಗೆಲುವಿನ– ಸೋಲಿನ ಶ್ರೀಮಂತಿಕೆಯ ಬಡತನದ ಹಲವು ರೂಪಗಳನ್ನು ಆಯಾಮಗಳನ್ನು ಕಂಡಿದ್ದೇನೆ. ಹತ್ತು ಹಲವು ಪ್ರಹಾರಗಳ ಉಳಿಯೇಟಿನಿಂದ ರೂಪುಗೊಂಡಿದ್ದೇನೆ. ಈ ಎಲ್ಲವೂ ನನ್ನನ್ನು ಕುರೂಪಗೊಳಿಸಲಿಲ್ಲ; ಸ್ವಲ್ಪಮಟ್ಟಿಗೆ ಅಂದವಾಗಿಸಿದೆ.

ನನಗೆ ಹೀಗನಿಸುತ್ತಿದೆ. ನಿಮಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.