ADVERTISEMENT

‘ಯಾರೋ ಜೋಕಾಲಿಯನ್ನು ಜೀಕಿ ಹೋದಂತೆ...’

ಪ್ರಕಾಶ್ ರೈ
Published 14 ಏಪ್ರಿಲ್ 2018, 19:30 IST
Last Updated 14 ಏಪ್ರಿಲ್ 2018, 19:30 IST
ಚಿತ್ರ: ರಾಮಕೃಷ್ಣ ಸಿದ್ರಪಾಲ
ಚಿತ್ರ: ರಾಮಕೃಷ್ಣ ಸಿದ್ರಪಾಲ   

ಮೈ ಸೂರು ಅನಂತಸ್ವಾಮಿ ಹಾಡಿದ, ಸಂಗೀತ ನೀಡಿದ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಆ ಹಾಡುಗಳೆಲ್ಲ ನನ್ನೊಳಗೇ ಇವೆ. ಎಷ್ಟೆಷ್ಟೋ ಹೊತ್ತಿಗೆ ನೆನಪಾಗುತ್ತವೆ. ತುಂಬ ಹೊತ್ತು ನನ್ನ ಜೊತೆಗೇ ಉಳಿಯುತ್ತವೆ. ಅದೇ ಕಾರಣಕ್ಕೆ ನನಗೆ ಯಾವತ್ತೂ ಏಕಾಂಗಿತನ ಕಾಡಿಯೇ ಇಲ್ಲ. ಹಾಡುಗಳ ವಿಚಾರದಲ್ಲಿ ಕೂಡ ನಾನು ಅಪ್ಪಟ ಶ್ರೀಮಂತ.

ಅನಂತಸ್ವಾಮಿ ಗೀತೆಗಳನ್ನು ಕೇಳುತ್ತಿರುವಾಗ ಅನ್ನಿಸಿತು. ಕನ್ನಡದ ಭಾವಗೀತೆಗಳ ಅತ್ಯುತ್ತಮ ವಿಮರ್ಶಕ ಎಂದರೆ ಮೈಸೂರು ಅನಂತಸ್ವಾಮಿ. ಯಾಕೆಂದರೆ ಅವರು ನನ್ನ ಮಣ್ಣಿನ ಕವಿಗಳ ಭಾಷೆಯಲ್ಲಿದ್ದ ಸಂಗೀತವನ್ನು ಹುಡುಕಿ ಹೊರತೆಗೆದ ಗಣಿಧಣಿ. ಸುಮ್ಮನೆ ಅವರ ಹಾಡುಗಳನ್ನು ಕೇಳುತ್ತಾ ಹೋಗಿ;

‘ಆವು ಈವಿನ ನಾವು ನೀವಿಗೆ
ಆನು ತಾನದ ತನನನಾs
ನಾನು ನೀನಿನ ಈ ನಿನಾನಿಗೆ
ಬೇನೆ ಏನೋ? ಜಾಣಿ ನಾs’

ADVERTISEMENT

ದ.ರಾ. ಬೇಂದ್ರೆ ಅವರ ಈ ಸಾಲುಗಳನ್ನು ಸುಮ್ಮನೆ ಓದಿದರೆ ಏನೂ ಅನಿಸುವುದಿಲ್ಲ. ಇದರ ಅರ್ಥವನ್ನು ಹುಡುಕಬೇಕಿದ್ದರೆ ಕೊಂಚ ಪಾಂಡಿತ್ಯವೂ ಬೇಕಾಗುತ್ತದೆ. ಆದರೆ ಅನಂತಸ್ವಾಮಿ ಹಾಡಿದ್ದನ್ನು ಕೇಳಿದರೆ ಅರ್ಥ ತಾನೇತಾನಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

‘ಚಿತ್ತೀಮಳಿ ತತ್ತೀ ಹಾಕತಿತ್ತು
ಸ್ವಾತಿ ಮುತ್ತಿನೊಳಗ
ಸತ್ಯೋ ಮಗನs ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು ಕೂಡಿ’

ಇಲ್ಲಿ ಪ್ರಾಸ ಬಯಸುವವರಿಗೆ ಪ್ರಾಸವಿದೆ. ಅರ್ಥ ಬೇಕಾದವರಿಗೆ ಅರ್ಥವಿದೆ. ಕನ್ನಡ ಭಾಷೆಯ ವೈಭವವಿದೆ. ಅವೆಲ್ಲವನ್ನೂ ಒಂದು ರಾಗದಲ್ಲಿ ಬಂಧಿಸಿ, ಅರ್ಥವನ್ನು ಬಿಡುಗಡೆ ಮಾಡುತ್ತಾರೆ ಅನಂತಸ್ವಾಮಿ. ಹೀಗಾಗಿಯೇ ಅನಂತಸ್ವಾಮಿ ನನಗೆ ಕವಿತೆಯನ್ನು ಅರ್ಥಮಾಡಿಸುವ ಅತಿದೊಡ್ಡ ವಿಮರ್ಶಕರಂತೆ ಭಾಸವಾಗುತ್ತಾರೆ.

ಅವರೊಬ್ಬರೇ ಅಲ್ಲ. ಕವಿತೆಯೊಳಗಿನ ಸಂಗೀತವನ್ನು ಹೊರತೆಗೆದ ಎಲ್ಲರೂ ವಿಮರ್ಶಕರೇ, ಮೇಷ್ಟ್ರುಗಳೇ. ಎಲ್ಲರೂ ಕಾವ್ಯ ಪಾಠ ಹೇಳಿದವರೇ. ಕವಿಯು ಭಾವವನ್ನು ಗ್ರಹಿಸಿ, ಅದನ್ನು ಕರಾರುವಾಕ್ಕಾಗಿ ಬರೆದರೆ, ಆ ಸಾಲುಗಳ ಅರ್ಥವನ್ನು ಗ್ರಹಿಸಿ ಅದರೊಳಗಿರುವ ಸಂಗೀತವನ್ನು ಎಳೆದು, ಕಾವ್ಯದ ಲಯವನ್ನು ನಮಗೆ ಕೊಟ್ಟು, ಕಾವ್ಯ ನಮ್ಮ ಮನಸ್ಸಿನೊಳಗೆ ಧ್ವನಿಸುವಂತೆ ಮಾಡುವುದು ಸಣ್ಣ ಕೆಲಸ ಅಲ್ಲ. ವಿಮರ್ಶಕರೆಲ್ಲ ವ್ಯಾಕರಣ ಶುದ್ಧಿ, ಛಂದಸ್ಸು ಅಂತ ಹೇಳುತ್ತಿದ್ದರೆ ಕವಿಯ ಧ್ವನಿಯನ್ನು ನಮಗೆ ಕೇಳಿಸುವವರು ಯಾರು?

‘ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು
ತಾಯಮೊಲೆಯಲ್ಲಿ ಕರು ತುಟಿಯಿಟ್ಟು ಚಿಮ್ಮಿಸಿದ
ಹಾಲಲ್ಲಿ ನಿನ್ನ ಹೆಸರು...’

ಎಂಬ ಕೆ.ಎಸ್.ನ ಅವರ ಸಾಲುಗಳು ಅಶ್ವಥ್ ಸಂಗೀತದಲ್ಲಿ, ಸಂಗೀತದ ಉಯ್ಯಾಲೆಯಾಗಿ ನಮ್ಮನ್ನು ತಲುಪುವ ಸೊಗಸೇ ಬೇರೆ. ‘ಸಪ್ತಸಾಗರದಾಚೆಯೆಲ್ಲೋ ಸುಪ್ತಸಾಗರ ಕಾದಿದೆ’ ಎಂಬ ಅಡಿಗರ ಸಾಲುಗಳ ಒಳಗೆ ಅಡಗಿರುವ ಲಯ, ಧ್ವನಿ ಮತ್ತು ಅರ್ಥವನ್ನು ಒಂದೇಟಿಗೆ ನಮ್ಮ ಎದೆಗೆ ಹಾಯಿಸಿದ್ದು ಅನಂತಸ್ವಾಮಿ ಸಂಗೀತ, ರತ್ನಮಾಲಾ ಪ್ರಕಾಶ್ ಗಾಯನ ಅಲ್ಲವೇ?

ಇವತ್ತು ಸಂಗೀತಕ್ಕೆ ಮಾತು ಬರೆಯುವ ಕಾಲ. ಆದರೆ ಮಾತಿಗೇ ಇರುವ ಸಂಗೀತವನ್ನು ಹುಡುಕುವುದು ಮಹಾನ್ ಪ್ರತಿಭೆ. ಅದನ್ನು ಹುಡುಕಿದವರು ಕನ್ನಡದ ಭಾವಗೀತೆಗಳಿಗೆ ಸಂಗೀತ ನೀಡಿದವರು. ಕಾವ್ಯ ಅಂದರೆ ಸಂಧಿ, ಸಮಾಸ, ಛಂದಸ್ಸು ಅಲ್ಲ. ಹೀಗಾಗಿ ಮೈಸೂರು ಅನಂತಸ್ವಾಮಿಯವರ ಭಾವಗೀತೆಯ ಪರಂಪರೆಯನ್ನು ಇಟ್ಟುಕೊಂಡು ಕಾವ್ಯವನ್ನು ಅರ್ಥೈಸಬೇಕಲ್ಲವೇ ನಾವು?

ಇದೊಂದು ಉದಾಹರಣೆ ಮಾತ್ರ. ಇಳಿಸಂಜೆಗಳಲ್ಲಿ ಬೇಡವೆಂದರೂ ಬಂದು ಕಾಡುತ್ತವೆ ಎಂದೋ ಕಲಿತ ಹಾಡುಗಳು. ನೆನಪಾಗಿ, ಗುಂಗಾಗಿ, ಜೀವವನ್ನೇ ಜಾಲಿಸಿಬಿಡುವ ಮಧುರ ಅನುಭವವಾಗಿ ನಾವು ಯಾವತ್ತೋ ಹಾಡಿದ ಹಾಡುಗಳು ಮತ್ತೆ ಮುಖಾಮುಖಿಯಾಗುತ್ತವೆ. ಹಾಡುಗಳಿಗೆ ವಿಚಿತ್ರವಾದ ಶಕ್ತಿಯಿದೆ. ಅವು ಅವಮಾನದ ಹಾಗೆ ಎಷ್ಟು ವರ್ಷಗಳಾದರೂ ಮರೆಯದೇ ಉಳಿದುಬಿಡುತ್ತವೆ.

ಹಾಡು, ನಾವು ಕೇಳಿದ ರಾಗದಿಂದಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಆದರೆ ಕವಿತೆ ಅದರ ಭಾವದಿಂದಾಗಿ ನಮ್ಮದಾಗುತ್ತದೆ. ನಾನು ಓದಿದ ಮೊದಲ ಗಂಭೀರ ಕವನವನ್ನು ನೆನಪಿಸಿಕೊಳ್ಳುತ್ತೇನೆ. ನನ್ನ ಗುರುಗಳಾಗಿದ್ದ ಎಚ್. ಎಸ್. ವೆಂಕಟೇಶಮೂರ್ತಿ ಒಂದು ಕವಿತೆಯನ್ನು ಕೈಗಿಟ್ಟು ‘ಇದರ ಬಗ್ಗೆ ಒಂದು ಟಿಪ್ಪಣಿ ಬರೆದುಕೊಂಡು ಬಾ’ ಎಂಬ ಶಿಕ್ಷೆ ಕೊಟ್ಟರು.

ಆ ಕವಿತೆ ಓದುತ್ತಲೇ ನಾನು ಬೆಚ್ಚಿಬಿದ್ದಿದ್ದೆ. ಒಂದು ಪದ್ಯ ಹಾಗೆಲ್ಲ ನಮ್ಮನ್ನು ಆವರಿಸಿಕೊಳ್ಳುತ್ತದೆ ಅನ್ನುವುದು ನನಗೆ ಗೊತ್ತಿರಲಿಲ್ಲ. ಸುಖವಾಗಿ ಹಾಡಿಕೊಂಡಿರಬಹುದಾದ ಹಾಡೊಂದು ನಮ್ಮೊಳಗೆ ದುಂಬಿಯಂತೆ ಹೊಕ್ಕು, ನಮ್ಮ ಅಹಂಕಾರವನ್ನೇ ಕೊರೆಯುತ್ತಾ ಹೋಗುವ ಪರಿಗೆ ನಾನು ಬೆರಗಾಗಿ ಹೋಗಿದ್ದೆ. ಆ ಪದ್ಯ ಈಗಲೂ ಪೂರ್ತಿ ನೆನಪಿದೆ.

‘ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ
ತೊಡಿಸದಿರು ಚಂದ್ರಕಿರೀಟವನು
ಕೊರಳಿಗೆ ಭಾರ ನನಗೆ ನಕ್ಷತ್ರ ಮಾಲಿಕೆ
ನಾನೊಲ್ಲೆ ದೊರೆತನವನು’.

ಇಂಥ ಅಹಂಕಾರ ಮತ್ತು ವಿನಯ ಏಕಕಾಲದಲ್ಲಿ ಸಾಧ್ಯವಾಗುವುದಾದರೆ, ಎಷ್ಟು ಚೆಂದ ಅನ್ನಿಸಿಬಿಟ್ಟಿತ್ತು. ಕೆ.ಎಸ್. ನರಸಿಂಹಸ್ವಾಮಿ ಈ ಪದ್ಯವನ್ನು ಅದು ಹೇಗೆ ಬರೆಯಲು ಸಾಧ್ಯವಾಯಿತು? ನನ್ನದೇ ಭಾಷೆ, ನನ್ನಲ್ಲಿರುವ ಕನ್ನಡ ಅಕ್ಷರ ಮಾಲೆ, ನನಗೆ ಗೊತ್ತಿರುವ ವ್ಯಾಕರಣ, ಅದೇ ಲಿಪಿ. ಆದರೆ ಹುಟ್ಟಿದ್ದು ಮಾತ್ರ ಬೇರೆಯೇ ಭಾವ. ಈಗ ಭಾವಾಂತರದ ಮುಂದೆ ಯಾವ ಭಾಷಾಂತರ ನಿಂತೀತು ಹೇಳಿ?
ಈ ಪದ್ಯ ಮುಂದುವರಿಯುತ್ತದೆ:

‘ತಾಯಿ ಹೇಳಿದಳು; ನೀನೆಂದೋ ಸೋಕಿದೆಯಂತೆ
ಅವಳ ಮೋಹನ ಭುಜವನು
ನಾನಾಗ ಅಚ್ಚರಿಯ ನಡುವೆ ಹುಟ್ಟಿದೆನಂತೆ
ಮುತ್ತಿಡುವ ಭೂ-ಧ್ವಜವನು’

ಈ ಸಾಲುಗಳಲ್ಲಿರುವ ಎದೆಗಾರಿಕೆಯನ್ನೂ ಅದು ನನ್ನಲ್ಲಿ ಹುಟ್ಟಿಸಿದ ಮೌನವನ್ನೂ ಸಂಭ್ರಮಿಸುತ್ತಾ ಇದ್ದೇನೆ. ಈಗಲೂ ಗೆಳೆಯರು ಸಿಕ್ಕರೆ ಈ ಕವಿತೆ ಮತ್ತೆ ನನ್ನೊಳಗೆ ಅರಳುತ್ತದೆ. ಮಾತಿನ ನಡುವೆ ಮೆಲ್ಲನೆ ನುಸುಳುತ್ತದೆ. ಅರ್ಥವಿರದ ಅಬ್ಬರದ ಮಾತುಗಳ ನಡುವೆ ಈ ಅರ್ಥಪೂರ್ಣ ಕವಿತೆ ಧುತ್ತನೆ ಆವರಿಸಿ ಇಡೀ ಸಂಜೆಯನ್ನು ಬೆಳಗಿಬಿಡುತ್ತದೆ. ಈ ಪದ್ಯದ ಮಾಯೆ ಇಲ್ಲಿಗೇ ಮುಗಿಯುವುದಿಲ್ಲ.

‘ನಿನ್ನ ಹಂಗಿಲ್ಲದೆಯೇ ಬಾಳುವುದ ಕಲಿಸು
ನೊಂದು ಮಾಗಲಿ ಜೀವ ಎಂದು ಹರಸು
ನಿನ್ನ ಕುರಿಯದ ನನ್ನ ದಾರಿಗೆಡರನು ನಿಲಿಸು
ನಡೆದಂತೆ ದಾರಿಯನು ಬಿಚ್ಚಿ ಬೆಳೆಸು’

ನನ್ನ ಬದುಕಿನಲ್ಲಿ ಆದದ್ದು ಥೇಟ್ ಇದೇ. ಯಾರ ಹಂಗೂ ಇಲ್ಲದೆಯೇ ಬಾಳುವುದನ್ನು ನನ್ನ ತಾಯಿಯೂ ಕಲಿಸಿದಳು, ನನ್ನ ತಾಯಿನುಡಿಯೂ ಕಲಿಸಿತು, ನೊಂದು ಮಾಗಿದ್ದಕ್ಕೆ ಕೊನೆಮೊದಲಿಲ್ಲ. ಪ್ರೀತಿಯಲ್ಲೂ ಸ್ನೇಹದಲ್ಲೂ ಏಕಾಂತದಲ್ಲೂ ನೊಂದಿದ್ದೇನೆ. ನೊಂದ ಕಾರಣಕ್ಕೇ ಮಾಗಿದ್ದೇನೆ. ನಿನ್ನನ್ನು ಮರೆತ ದಿನ ನನ್ನ ದಾರಿಗೆ ಎಡರು ತೊಡರು ಎದುರಾಗಲಿ ಅಂತ ನಾನು ಕೇಳಿಕೊಂಡಿಲ್ಲ. ಅದಕ್ಕೇ ಯಾವ ಅಡ್ಡಿಯೂ ಇನ್ನೂ ಎದುರಾಗಿಲ್ಲ. ಆದರೆ ನಡೆದಂತೆ ದಾರಿ ಬಿಚ್ಚಿಕೊಳ್ಳುತ್ತಾ ಹೋಗಿದೆ. ನನ್ನ ಪಯಣವನ್ನು ನಾನು ನಿರ್ಧರಿಸುವ ಬದಲು, ನನ್ನ ಪಯಣವೇ ನನ್ನನ್ನು ನಿರ್ಧರಿಸಿದೆ. ಅಲ್ಲಿಗೆ ಕವಿತೆಯ ಸಾಲು ‘ನಡೆದಂತೆ ದಾರಿಯನು ಬಿಚ್ಚಿ ಬೆಳೆಸು’ ನಿಜವಾಗಿದೆ.

ಆದರೆ ಈ ಎಲ್ಲ ಸಾಲುಗಳನ್ನು ಮೀರಿಸುವ ಮತ್ತೊಂದು ಸಾಲು ಹೃದಯವನ್ನು ನೇಗಿಲಿನ ಹಾಗೆ ಮೀಟುತ್ತಲೇ ಇರುತ್ತದೆ. ಮನಸ್ಸು ಕುದಿಯುವಂತೆ ತಣಿಯುವಂತೆ ಮಾಡುತ್ತದೆ. ನಮ್ಮ ದಾರಿಯ ಕೊನೆಯನ್ನು ಹೇಳುತ್ತಲೇ ದಾರಿಗೆ ಕೊನೆಯಿಲ್ಲ ಅನ್ನುವುದನ್ನೂ ಅರ್ಥಮಾಡಿಸುತ್ತದೆ.

‘ಬಂದ ಬಾಗಿಲು ಮಣ್ಣು; ಬಿಡುವ ಬಾಗಿಲು ಮಣ್ಣು
ನಡುವೆ ಕಾಪಾಡುವುದು ತಾಯ ಕಣ್ಣು
ಈ ಕಣ್ಣ ಸೆರೆಯ ಕಲ್ ಕೋಟೆಯೆಲ್ಲ ಹೊನ್ನು
ನನ್ನ ಕೈ ಬಿಡುವುದೇ ನಿನ್ನ ಚೆನ್ನು’

ಅದಕ್ಕೆ ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ ಎಂಬ ಸಾಲಿಗೆ ವಿಶೇಷ ಅರ್ಥ ಬರುವುದು. ಒಂದು ಬದುಕಿನಂತೆ ಬೆಳೆಯುತ್ತಾ ಹೋಗುವ ಈ ಪದ್ಯ ಕೊನೆಯಲ್ಲಿ ಮೊದಲ ಸಾಲಿನ ಸಿದ್ಧಾಂತಕ್ಕೇ ಬಂದು ನಿಲ್ಲುತ್ತದೆ. ವೆಂಕಟೇಶಮೂರ್ತಿ ಈ ಕವಿತೆಯನ್ನು ನನಗೆ ಕೊಟ್ಟು ಶಿಕ್ಷೆ ಕೊಟ್ಟರು ಅಂದೆನಲ್ಲ. ಶಿಕ್ಷೆ ಅಂದರೆ ಶಿಕ್ಷಣ. ಶಿಕ್ಷಣ ಅಂದರೆ ಬೆಳಕು. ಬೆಳಕು ಅಂದರೆ ಬದುಕು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.