ADVERTISEMENT

ನನ್ನ ಭಾವಗಳ ಏರಿಳಿತ

ದ್ವಾರಕೀಶ್
Published 29 ಸೆಪ್ಟೆಂಬರ್ 2012, 19:30 IST
Last Updated 29 ಸೆಪ್ಟೆಂಬರ್ 2012, 19:30 IST

`ಕುಳ್ಳ ಕುಳ್ಳಿ~ ಚಿತ್ರೀಕರಣ ಶುರುವಾಯಿತು. ಜಯಚಿತ್ರಾ ಮಾತಿಗೆ ತಕ್ಕಂತೆ ನಡೆದುಕೊಂಡರು. ಎಂದೂ ಚಿತ್ರೀಕರಣಕ್ಕೆ ತಡವಾಗಿ ಬರಲಿಲ್ಲ. ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಬರುತ್ತಿದ್ದರು. ಹೇಳಿದ ದೃಶ್ಯವನ್ನು ಅರ್ಥೈಸಿಕೊಂಡು ಅಗತ್ಯಕ್ಕೆ ಸ್ಪಂದಿಸುತ್ತಾ ನಟನೆ ಮಾಡಿದರು.

ಅವರ ಅಶಿಸ್ತಿನ ಕುರಿತು ನನ್ನ ಕಿವಿಗೆ ಯಾರ‌್ಯಾರೋ ಊದಿದ್ದ ಗಾಳಿಮಾತುಗಳೆಲ್ಲಾ ಸುಳ್ಳೆಂದು ಸ್ಪಷ್ಟವಾಯಿತು. ಕೊನೆಗೆ ಅವರು ಎಲ್ಲಾ ಸುದ್ದಿಗಾರರ ಎದುರು ಗೋಷ್ಠಿಯಲ್ಲಿ ನಿಂತು, `ದ್ವಾರಕೀಶ್ ನಾನು ಕಂಡ ಉತ್ತಮ ನಿರ್ಮಾಪಕರಲ್ಲಿ ಒಬ್ಬರು~ ಎಂದಾಗ ನನ್ನ ಎದೆತುಂಬಿ ಬಂದಿತು.
 
ಕೇವಲ ಮೂವತ್ತೈದು ನಲವತ್ತು ದಿನಗಳಲ್ಲಿ ಸತತವಾಗಿ ಚಿತ್ರೀಕರಣ ನಡೆಸಿ ಸಿನಿಮಾ ಮುಗಿಸಿದೆವು. ಹಾಗೆ ನೋಡಿದರೆ, ನಾನು ಜಯಚಿತ್ರಾ ಅವರನ್ನು ನಾಯಕಿಯಾಗಿ ಆರಿಸಿದ್ದು ಅವರು ದೊಡ್ಡ ದೊಡ್ಡ ನಟರ ನಾಯಕಿ ಎಂಬ ಕಾರಣಕ್ಕಲ್ಲ; `ಹುಲಿಯ ಹಾಲಿನ ಮೇವು~ ಚಿತ್ರ ನೋಡಿದ ಮೇಲೆ ನಾನು ಖುದ್ದು ಅವರ ಅಭಿಮಾನಿಯಾಗಿದ್ದೆ. ತಮ್ಮ ಅಭಿಮಾನಿಯೊಬ್ಬನ ಮೊರೆಗೆ ಓಗೊಟ್ಟು, ಅವರು `ಕುಳ್ಳ ಕುಳ್ಳಿ~ಯಲ್ಲಿ ನಾಯಕಿಯಾಗಿ ನಟಿಸಿದರೆಂದೇ ನನ್ನ ಭಾವನೆ.

ಮೊದಲು ಜಯಚಿತ್ರಾ ಅವರನ್ನು ನಾಯಕಿಯಾಗಿ ಇಟ್ಟುಕೊಂಡು ಅದು ಹೇಗೆ ಸಿನಿಮಾ ಮಾಡುತ್ತಾನೋ ಎಂದು ಕೆಲವರು ಪ್ರಶ್ನಾರ್ಥಕ ನೋಟ ಬೀರಿದ್ದರು. ಭಾರ್ಗವನಿಗೆ ಚಿತ್ರದ ನಿರ್ದೇಶನದ ಜವಾಬ್ದಾರಿ ಕೊಟ್ಟಮೇಲೆ ಇನ್ನು ಕೆಲವರು, ತಂಗಿಯ ಗಂಡ ಎಂಬ ಕಾರಣಕ್ಕೆ ಅವಕಾಶ ಕೊಟ್ಟಿದ್ದೇನೆ ಎಂದು ಮಾತನಾಡಿದರು.

ಭಾರ್ಗವ ನನ್ನ ತಂಗಿಯ ಗಂಡ ಆಗಿದ್ದರೂ ಚಿತ್ರರಂಗದಲ್ಲಿ ತನ್ನದೇ ಆದ ಅನುಭವ ಕಟ್ಟಿಕೊಂಡಿದ್ದ. ಸಿದ್ದಲಿಂಗಯ್ಯ, ಕೆ.ಎಸ್.ಆರ್.ದಾಸ್, ವಿಜಯಾರೆಡ್ಡಿ ಮೊದಲಾದ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಅವನು ಕೆಲಸ ಮಾಡಿ, ಪಳಗಿದ್ದ.

ಮೊದಲಿನಿಂದಲೂ ಸಿನಿಮಾ ಕುರಿತು ತನ್ನದೇ ಆದ ಬದ್ಧತೆಯನ್ನು ಅವನು ಬೆಳೆಸಿಕೊಂಡು ಬಂದಿದ್ದ. ರೀಮೇಕ್ ಚಿತ್ರಗಳನ್ನು ನಿರ್ದೇಶಿಸುವುದು ಅವನಿಗೆ ಇಷ್ಟವಿರಲಿಲ್ಲ. ನಾನು ನನಗೆ ಹಿಡಿಸಿದ ಎಷ್ಟೋ ಸಿನಿಮಾಗಳಿಂದ ಸ್ಫೂರ್ತಿ ಪಡದೇ ಚಿತ್ರಗಳನ್ನು ಮಾಡುತ್ತಿದ್ದೆ. ಹಾಗಾಗಿ ನನ್ನ ಹಾಗೂ ಅವನ ನಡುವೆ ವಸ್ತುವಿನ ಆಯ್ಕೆಯ ವಿಷಯದಲ್ಲಿ ಮೊದಲು ಭಿನ್ನಾಭಿಪ್ರಾಯ ಇತ್ತೇನೋ.

ಆದರೆ, `ಕುಳ್ಳ ಕುಳ್ಳಿ~ ಚಿತ್ರದ ನಂತರ ಅವನಿಗೆ `ಮಂಕುತಿಮ್ಮ~, `ಗುರು ಶಿಷ್ಯರು~, `ಪೆದ್ದ ಗೆದ್ದ~ ಚಿತ್ರಗಳನ್ನು ನಿರ್ದೇಶಿಸುವ ಅವಕಾಶವನ್ನು ನಾನು ಕೊಟ್ಟೆ. ನನ್ನ ನಿರೀಕ್ಷೆ, ಶ್ರದ್ಧೆ ಬಹುಶಃ ಅವನಿಗೂ ಅರ್ಥವಾಯಿತು. `ಗುರು ಶಿಷ್ಯರು~ ಚಿತ್ರವಂತೂ ಅನೇಕರು ನಿಬ್ಬೆರಗಾಗಿ ನೋಡುವಂತೆ ಮೂಡಿಬಂತು. ಇಂದಿಗೂ ಆ ಚಿತ್ರವನ್ನು ನೋಡಿದರೆ ಕಚಗುಳಿ ಇಡುತ್ತದೆ. ಅದು ಹಳತು ಎಂದೆನ್ನಿಸುವುದೇ ಇಲ್ಲ. ಆ ಚಿತ್ರದ ಇನ್ನಷ್ಟು ಒಳ ಹೊರಗಿನ ಕುರಿತು ಆಮೇಲೆ ಬರೆಯುತ್ತೇನೆ.

ಹಾಸ್ಯನಟನಾಗಿದ್ದ ನಾನು ಒಂದಾದ ಮೇಲೊಂದರಂತೆ ಸಿನಿಮಾಗಳನ್ನು ಮಾಡತೊಡಗಿದ ಮೇಲೆ ನನ್ನದೇ ಆದ ಸ್ಟೈಲ್ ರೂಢಿಸಿಕೊಂಡೆ. ಸಿನಿಮಾ ನಿರ್ಮಾಣದ ಶೈಲಿಯಲ್ಲಷ್ಟೇ ಅಲ್ಲದೆ ನನ್ನ ವರ್ತನೆಯೂ ಸ್ಟೈಲಿಶ್ ಆಗಿಯೇ ಇತ್ತು. 1978ರಲ್ಲಿ ಇಂಪೋರ್ಟೆಡ್ ಕಾರು ತಂದು, ಅದರಲ್ಲಿ ಗತ್ತಿನಿಂದ ಓಡಾಡತೊಡಗಿದೆ. ಸಿಂಗಪೂರ್‌ನಿಂದ ಏಸಿ ತಂದು ಅದನ್ನು ನನ್ನ ಕಾರ್‌ಗೆ ಅಳವಡಿಸಿದ್ದೆ. ಆ ಕಾಲಘಟ್ಟದಲ್ಲಿ ಕಾರ್‌ನಲ್ಲಿ ಏಸಿ ಇದೆ ಎಂಬುದೇ ಪ್ರತಿಷ್ಠೆಯ ವಿಷಯವಾಗಿತ್ತು. ಆಗ ದ್ವಾರಕೀಶ್ ಏಸಿ ಕಾರ್‌ನಲ್ಲಿ ಓಡಾಡುತ್ತಾನೆ ಎಂಬುದು ಸುದ್ದಿಯೇ ಹೌದಾಗಿತ್ತು.

ಅಂದುಕೊಂಡ ರೀತಿಯಲ್ಲಿ, ನಿಗದಿಪಡಿಸಿದ ಗಡುವಿನೊಳಗೇ ಸಿನಿಮಾ ಚಿತ್ರೀಕರಣ ಮುಗಿಯಬೇಕು ಎಂಬುದು ನನಗೆ ನಾನೇ ಹಾಕಿಕೊಂಡಿದ್ದ ನಿಯಮ. ಹಾಗಾಗಿ ಆ ಶಿಸ್ತನ್ನು ಸಡಿಲಿಸಲು ನಾನು ಸುತರಾಂ ಸಿದ್ಧನಿರಲಿಲ್ಲ. ಬದುಕಿನಲ್ಲಿ ನಾನು ಎಷ್ಟು ಸ್ಟೈಲಿಶ್ ಆಗಿದ್ದೆನೋ ಕೆಲಸದ ವಿಷಯದಲ್ಲಿ ಅಷ್ಟೇ ಶಿಸ್ತುಬದ್ಧನಾಗಿದ್ದೆ. ನಾನು ನಿರ್ದಾಕ್ಷಿಣ್ಯವಾಗಿ ಇದ್ದದ್ದನ್ನು ಇದ್ದ ಹಾಗೆಯೇ ಹೇಳಿಬಿಡುತ್ತಿದ್ದೆ. ಆ ನಿಷ್ಠುರ ಸ್ವಭಾವವನ್ನು ಕಂಡ ಅನೇಕರು `ದ್ವಾರಕೀಶ್‌ಗೆ ದುರಹಂಕಾರ~ ಎಂದು ಮಾತನಾಡಿಕೊಂಡರು.

ಭಾರ್ಗವ, ನನ್ನ ತಂಗಿ, ನಾನು, ಅಂಬುಜಾ ಪದೇಪದೇ ಟೂರ್ ಹೊಡೆಯುತ್ತಿದ್ದೆವು. ಎಲ್ಲರೂ ಒಂದೇ ಕುಟುಂಬ ಎಂಬ ಭಾವನೆ. ಆಗ ನನ್ನ ತಂಗಿ, ಭಾರ್ಗವ ಬೆಂಗಳೂರಿನ ಎನ್.ಆರ್.ಕಾಲೋನಿಯ ನಮ್ಮ ಮನೆಯಲ್ಲೇ ತಂಗಿದ್ದರು.

ಲಂಕೇಶ್ ಜೊತೆ ಓಡಾಡಿಕೊಂಡಿದ್ದ ಪ್ರಭಾಕರ ರೆಡ್ಡಿ ಒಂದು ಸಿನಿಮಾ ಮಾಡೋಣ ಎಂದು ಹೇಳುತ್ತಿದ್ದ. ಅವನೂ ನನಗೆ ಒಳ್ಳೆಯ ಸ್ನೇಹಿತ. ಮುಂದೆ ನಾವಿಬ್ಬರೂ ಸೇರಿ `ವೇದಪ್ರದ ಪಿಕ್ಚರ್ಸ್‌~ ಎಂಬ ಚಿತ್ರ ವಿತರಣ ಸಂಸ್ಥೆ ಮಾಡಿದೆವು. ಮಾಂಡ್ರೆಯವರ ದೊಡ್ಡ ಸಂಸ್ಥೆಯ ಜೊತೆ ಅದು ಒಡಂಬಡಿಕೆ ಮಾಡಿಕೊಂಡಿತು. ಆ ಪ್ರಭಾಕರ ರೆಡ್ಡಿ ಬಯಕೆ ಈಡೇರಿಸಲೆಂದೇ ನಾವು `ಗುರು ಶಿಷ್ಯರು~ ಸಿನಿಮಾ ಎತ್ತಿಕೊಂಡದ್ದು.

`ಗುರು ಶಿಷ್ಯರು~ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭ. ರಾತ್ರಿ ಒಂಬತ್ತು ಗಂಟೆ ಇರಬೇಕು. ಒಂದು ಸ್ಟಿಲ್ ತೆಗೆಯಬೇಕಿತ್ತು. ಆಗ ಅಂದುಕೊಂಡಂತೆ ಏನೋ ಆಗುತ್ತಿಲ್ಲ ಎಂಬ ಕಾರಣಕ್ಕೆ ನನಗೆ ಸಿಟ್ಟುಬಂತು. ಸಾಕಷ್ಟು ಕೂಗಾಡಿದೆ. ಆಮೇಲೆ ಕಾರಿನಲ್ಲಿ ಹೋಗುವಾಗಲೂ ನನ್ನ ಕೋಪ ತಣ್ಣಗಾಗಿರಲಿಲ್ಲ. ಅಲ್ಲೂ ಕೂಗಾಟ ಮುಂದುವರಿಸಿದೆ. ಅದೇನಾಯಿತೋ ಚಲಿಸುತ್ತಿದ್ದ ಕಾರಿನಿಂದ ಭಾರ್ಗವ ಹೊರಗೆ ಧುಮುಕಿಬಿಟ್ಟ. ನನಗೆ ಏನಾಗಿಹೋಯಿತು ಎಂಬ ಚಿಂತೆ. ಕಾರು ನಿಲ್ಲಿಸಿ, ಧುಮುಕಿದ್ದ ಭಾರ್ಗವನನ್ನು ಸಮಾಧಾನ ಪಡಿಸಲು ಯತ್ನಿಸಿದೆ. ಮನೆಯಲ್ಲೂ ವಿಷಯ ಗೊತ್ತಾಯಿತು. ನನ್ನ ತಾಯಿ ನನ್ನನ್ನು ಬಾಯಿಗೆ ಬಂದಂತೆ ಬೈದರು. ಆ ದಿನ ರಾತ್ರಿ ಎನ್.ಆರ್. ಕಾಲೋನಿಯ ಮನೆಯಲ್ಲಿ ನೀರವ ಮೌನ.
 
ಪ್ರಭಾಕರ ರೆಡ್ಡಿ ಕೂಡ ಫೋನ್ ಮಾಡಿ, `ಇದೇನಯ್ಯಾ ನೀನು, ಅಷ್ಟೊಂದು ಕೋಪ ಮಾಡಿಕೊಳ್ಳುವುದೇ? ಅವನು ನಿನ್ನ ತಂಗಿಯ ಗಂಡ. ಸ್ವಲ್ಪ ಸಮಾಧಾನದಿಂದ ಇರಬಾರದೇ ನೀನು~ ಎಂದೆಲ್ಲಾ ಬುದ್ಧಿ ಹೇಳಿದ. ನನಗೂ ಅಹಂಕಾರವಿತ್ತೇನೋ. ಆದರೆ, ಅದಿದ್ದದ್ದು ಶಿಸ್ತಿನ ಕಾರಣಕ್ಕೆ. ಅದು ಅಹಂಕಾರವೋ, ಶಿಸ್ತೋ, ಕೆಲಸದ ಬಗ್ಗೆ ನನಗೆ ಇದ್ದ ಬದ್ಧತೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ನನ್ನ ಕೋಪದ ಮಾತುಗಳು ನಮ್ಮ ಕುಟುಂಬದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿದ್ದವು. ಒಂದು ರೀತಿಯಲ್ಲಿ ಆ ಘಟನೆ ನನಗೆ ಪಾಠ ಕಲಿಸಿತೆನ್ನಿ. ಆಮೇಲೆ ನಾನು ಸಾಕಷ್ಟು ಮೆತ್ತಗಾದೆ.

ಸಿ.ವಿ.ರಾಜೇಂದ್ರನ್, ಕೆ.ಎಸ್.ಆರ್.ದಾಸ್ ನಿರ್ದೇಶನ ಮಾಡುವಾಗಲೂ ನಾನು ರೇಗಾಡಿದ್ದುಂಟು. ಈಗ ನೋಡಿದರೆ, ಭಾರ್ಗವ ಹೀಗೆ ಮಾಡಿಬಿಟ್ಟಿದ್ದ. ಎಲ್ಲೋ ನನ್ನಲ್ಲೇ ಸಮಸ್ಯೆ ಇರಬಹುದು ಎನ್ನಿಸಿತು. ಕೋಪವನ್ನು ಆದಷ್ಟೂ ಇಳಿಸಿಕೊಂಡು ವರ್ತಿಸಲಾರಂಭಿಸಿದೆ. ಕೊನೆಗೂ `ಗುರು ಶಿಷ್ಯರು~ ಸಿನಿಮಾ ಮುಗಿಯಿತು. ತೆರೆಗೆ ಬಂದಿತು. ನೂರು ದಿನ ಓಡಿತು. ಅಷ್ಟೆಲ್ಲಾ ಕಷ್ಟ ಪಟ್ಟಿದ್ದು, ಸಿಟ್ಟು ಮಾಡಿಕೊಂಡಿದ್ದು, ಮುನಿಸು ಎಲ್ಲಕ್ಕೂ ಅದು ಉತ್ತರರೂಪ ಎಂಬಂತೆಯೇ ಕಂಡಿತು.

1972-74ರಿಂದ 1980ರ ದಶಕದ ಆರಂಭದವರೆಗೆ ನನ್ನದೇ ಜಮಾನ ಕಂಡಿದ್ದ ನಾನು ಆಮೇಲೆ ತೊಂದರೆಗಳನ್ನು ಎದುರಿಸಬೇಕಾಯಿತು. ಬದುಕೆಂದರೆ ಹಾಗೆಯೇ ಅಲ್ಲವೇ?
ವಿಷ್ಣುವರ್ಧನ್ ಇಲ್ಲದೆಯೇ ಕೆಲವು ಚಿತ್ರಗಳನ್ನಾದರೂ ತೆಗೆಯುವ ಧೈರ್ಯ ಮಾಡಿದ್ದ ನಾನು `ಗುರು ಶಿಷ್ಯರು~ ಸಿನಿಮಾಗಿಂತ ಮೊದಲು ಮಾಡಿದ್ದು `ಮಂಕುತಿಮ್ಮ~. ಮಂಜುಳಾ ಆ ಚಿತ್ರಕ್ಕೆ ನಾಯಕಿಯಾಗಬೇಕೆಂದು ಬಯಸಿದವನೂ ನಾನೇ. ನಾನು ನಾಯಕನಾಗಿ ಅಭಿನಯಿಸಿದ ಚಿತ್ರಗಳಲ್ಲೆಲ್ಲಾ ದೊಡ್ಡ ನಾಯಕಿಯರೇ ಇದ್ದರು. ಅದು ಕೂಡ ನನ್ನ ಸ್ಟೈಲ್.

ವಿಷ್ಣು ಜೊತೆ ಅಷ್ಟೆಲ್ಲಾ ಒಳ್ಳೆಯ ಚಿತ್ರಗಳನ್ನು ಮಾಡಿದ್ದರಿಂದ ಮತ್ತೆ ಆ ಒಳ್ಳೆಯ ನಟನನ್ನು ಸೇರಿಸಿಕೊಳ್ಳಲೇಬೇಕು ಎಂದು ಒತ್ತಾಯ ಮಾಡಿದ್ದು ಪ್ರಭಾಕರ ರೆಡ್ಡಿ. ಬಹುಶಃ `ಮನೆ ಮನೆ ಕಥೆ~ ಚಿತ್ರದ ಮೂಲಕ ವಿಷ್ಣು ನನ್ನ ಚಿತ್ರಲೋಕಕ್ಕೆ ಮರುಪ್ರವೇಶ ಮಾಡಿದ. ಅನೇಕರು ನನ್ನಲ್ಲಿ ಇದೆ ಎನ್ನುತ್ತಿದ್ದ ದುರಹಂಕಾರವೇ ವಿಷ್ಣುವನ್ನೂ ನಾನು ಒಂದಿಷ್ಟು ಕಾಲ ದೂರ ಮಾಡಿಕೊಳ್ಳಲು ಕಾರಣವಾಗಿತ್ತೋ ಏನೋ?

ಮುಂದಿನ ವಾರ: `ಮಂಕುತಿಮ್ಮ~ನ ಪಯಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.