ADVERTISEMENT

ಬಾಲ್ಯದಿಂದಲೇ ನಾನೊಬ್ಬ ನಟ

ದ್ವಾರಕೀಶ್
Published 19 ಮೇ 2012, 19:30 IST
Last Updated 19 ಮೇ 2012, 19:30 IST

`ಮೇಯರ್ ಮುತ್ತಣ್ಣ~ ಚಿತ್ರಕ್ಕಾಗಿ ಶೂಟಿಂಗ್ ಮಾಡಿದ ಬೀದಿಗೆ ನಜರ್‌ಬಾದ್ ಹತ್ತಿರವಿತ್ತು. ಲಿಂಗಣ್ಣನವರು ಅಲ್ಲಿನ ದೊಡ್ಡ ಸಾಹುಕಾರರು. ಅವರ ಮಕ್ಕಳು ನನಗೆ ಚೆನ್ನಾಗಿ ಗೊತ್ತು. ಅವರೆಲ್ಲಾ ಚಿಕ್ಕ ವಯಸ್ಸಿನಿಂದಲೂ ನನ್ನನ್ನು `ಕುಳ್ಳ ಕುಳ್ಳ~ ಎಂದೇ ಕರೆಯುತ್ತಿದ್ದದ್ದು. ಕುಳ್ಳಗಿರುವುದು ನನಗೆ ಬೇಸರದ ಅಥವಾ ಬೆರಗಿನ ವಿಚಾರ ಆಗಿರಲಿಲ್ಲ. ನಮ್ಮ ಮನೆಯಲ್ಲಿ ಎಲ್ಲರೂ ಇದ್ದದ್ದೇ ಐದಡಿ ಒಂದಂಗುಲ ಅಥವಾ ಐದಡಿ ಎರಡಂಗುಲ. ಯಾರೂ ಎತ್ತರ ಇಲ್ಲದ್ದರಿಂದ `ಕುಳ್ಳ~ ಎಂಬುದು ನನಗೆ ವಂಶ ಪಾರಂಪಾರ‌್ಯವಾಗಿ ಬಂದ ಹಣೆಪಟ್ಟಿಯೇ ಹೌದು.

ಇಟ್ಟಿಗೆಗೂಡಿನಲ್ಲಿದ್ದ ಶಾಲೆಯಲ್ಲಿ ಪ್ರೈಮರಿ ಸ್ಕೂಲ್ ಓದುವಾಗಲೇ ನನ್ನೊಳಗೊಬ್ಬ ನಟನಿದ್ದ. ಅಲ್ಲಿ ತಿರುಣಾನ್ ಅಯ್ಯಂಗಾರ್ ಎಂಬ ಮೇಷ್ಟರಿದ್ದರು. ತಪ್ಪು ಮಾಡಿದವರೆಲ್ಲರಿಗೆ ಅವರು ಶಿಕ್ಷೆ ಕೊಡುತ್ತಿದ್ದ ರೀತಿಯೇ ವಿಚಿತ್ರ. ಅಂಗೈ ಮೇಲೆ ಬೀಗದ ಕೈಯಿಟ್ಟು, ಕೈಯನ್ನು ಮಡಚುವಂತೆ ಹೇಳಿ, ಆ ಬೀಗದ ಕೈಯನ್ನು ಜೋರಾಗಿ ಒತ್ತುತ್ತಿದ್ದರು. ಅದರಿಂದಾಗುತ್ತಿದ್ದ ನೋವು ಅಷ್ಟಿಷ್ಟಲ್ಲ. ಒಮ್ಮೆ ನನಗೂ ಅಂಥ ಶಿಕ್ಷೆ ಕೊಡಲು ಮುಂದಾದರು. ಬೀಗದ ಕೈ ಇಟ್ಟು ಅವರು ಅಮುಕಿದ್ದೇ ತಡ ನಾನು ಮೂರ್ಛೆ ಬಂದವನಂತೆ ನಟಿಸಿದೆ. ಕುಸಿದು ಬಿದ್ದೆ. `ದ್ವಾರಕಾನಾಥ್... ದ್ವಾರಕಾನಾಥ್~ ಅಂತ ಅವರು ಆತಂಕದಿಂದ ಒಂದೇ ಸಮ ಕೂಗಿಕೊಂಡರೂ ನಾನು ಮೇಲೇಳಲಿಲ್ಲ. ಮೂರ್ಛೆ ಹೋಗಿರದಿದ್ದರೂ ಮೇಷ್ಟರಿಗೆ ಬುದ್ಧಿ ಕಲಿಸಲೆಂದೇ ನಾನು ಆ ರೀತಿ ನಟಿಸಿದ್ದೆ. ಆಮೇಲೆ ಆ ಪ್ರಕರಣ ದೊಡ್ಡದಾಗಿ, ನನ್ನ ತಂದೆಯವರೆಗೆ ಹೋಯಿತು. ಅವರು ಶಾಲೆಗೆ ಬಂದು ತಿರುಣಾನ್ ಅಯ್ಯಂಗಾರರನ್ನು ಬೈದರು. ಅಲ್ಲಿಂದಾಚೆಗೆ ಮೇಷ್ಟರು ಆ ರೀತಿ ಶಿಕ್ಷೆ ಕೊಡುವುದನ್ನು ಬಿಟ್ಟರು.

ಮನೆಯಲ್ಲೂ ನಾನು ಅಭಿನಯಚತುರ! ನಮ್ಮಣ್ಣ ನನಗೆ ಹೊಡೆದು ಅಕಸ್ಮಾತ್ ಸ್ವಲ್ಪ ರಕ್ತ ಏನಾದರೂ ಬಂದರೆ, ಆ ರಕ್ತವನ್ನು ಗೋಡೆಗೆ ಒರೆಸಿ ಆದ ಪೆಟ್ಟಿನ ಪ್ರಮಾಣ ದೊಡ್ಡದೆಂಬಂತೆ ಗುಲ್ಲೆಬ್ಬಿಸುತ್ತಿದ್ದೆ. ಮನೆಯವರೆಲ್ಲಾ ಗಾಬರಿಯಿಂದ ನಮ್ಮಣ್ಣನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅಂಥ ಮೆಲೋಡ್ರಾಮಾ ಇರುವ ಎಷ್ಟೋ ಸನ್ನಿವೇಶಗಳನ್ನು ನಾನು ಮನೆಯಲ್ಲಿ ಸೃಷ್ಟಿಸಿದ್ದೆ.

 
ನನ್ನ ತಂದೆ-ತಾಯಿಗೆ ಆ ವಿಚಾರ ಗೊತ್ತಿತ್ತು. ಅದಕ್ಕೇ ಅವರು, `ಯಾವಾಗಲೂ ನಾಟಕ ಆಡುತ್ತೆ ಮುಂಡೇದು~ ಅಂತ ನನ್ನನ್ನು ಬೈಯುತ್ತಿದ್ದರು. ಒಂದು ಸಲ ನನ್ನ ತಂದೆಯ ಜೊತೆ ಜಗಳವಾಡಿಕೊಂಡು, ಮನೆಬಿಟ್ಟು ಹೋಗಲು ನಾನು ನಿಂತಿದ್ದೆ. `ಹೋಗಿ ಏನು ಮಾಡ್ತೀಯಾ~ ಅಂತ ಅವರು ಕೇಳಿದಾಗ, `ಸಿನಿಮಾಗೆ ಹೋಗ್ತೀನಿ~ ಎಂದಿದ್ದೆ. ಆ ಮಾತನ್ನು ಕೇಳಿ ಅವರು ಬೆತ್ತ ತೆಗೆದುಕೊಂಡು ಒಂದೇ ಸಮ ಬಾರಿಸಿದ್ದರು. ಕಲೆಯ ಬಗ್ಗೆ ಅವರಿಗೆ ಆಸಕ್ತಿ ಇದ್ದರೂ ಸಿನಿಮಾ ಕಂಡರೆ ಆಗುತ್ತಿರಲಿಲ್ಲ. ಆದರೆ, ನನ್ನ ತಾಯಿಗೆ ಸಿನಿಮಾ ಅಂದರೆ ಪ್ರಾಣ. ಅವರ ಅಣ್ಣ ಹುಣಸೂರು ಕೃಷ್ಣಮೂರ್ತಿ ಆ ಕ್ಷೇತ್ರದಲ್ಲಿ ಇದ್ದಿದ್ದರಿಂದ ಅವರಿಗೆ ಸಿನಿಮಾ ಹುಚ್ಚು. ಅವರು ನನ್ನನ್ನು ಕರೆದುಕೊಂಡು ಹೋಗಿ ಅನೇಕ ಚಿತ್ರಗಳನ್ನು ತೋರಿಸುತ್ತಿದ್ದರು.

ನಮ್ಮದು ಒಟ್ಟು ಕುಟುಂಬ. ಬಲ ಅಣ್ಣ, ಎಡ ತಮ್ಮ ಎಂಬೆಲ್ಲಾ ಭೇದವೇ ಇರಲಿಲ್ಲ. ಹತ್ತನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡರೂ ಮದಣ್ಣ ನನ್ನನ್ನು ಚೆನ್ನಾಗಿಯೇ ಬೆಳೆಸಿದ. ನಾವೆಲ್ಲಾ ಮನೆಯಲ್ಲಿ ಬೆಳ್ಳಿತಟ್ಟೆಯಲ್ಲಿ ಊಟ ಮಾಡುತ್ತಿದ್ದೆವು. ಬಳಸುತ್ತಿದ್ದ ದೊನ್ನೆಗಳು ಕೂಡ ಬೆಳ್ಳಿಯವೇ. ಶ್ರೀರಂಗಪಟ್ಟಣದ ಹತ್ತಿರ ನಮ್ಮ ತಂದೆಯ ಐದಾರು ಎಕರೆಯಷ್ಟು ಸೊಗಸಾದ ಜಮೀನಿತ್ತು. ಅಲ್ಲಿಂದ ವರ್ಷಕ್ಕೆರಡು ಸಲ ಗಾಡಿಗಳಲ್ಲಿ ಬತ್ತ ಬರುತ್ತಿತ್ತು.

ಬತ್ತವನ್ನು ಮನೆಯಲ್ಲಿನ ಕಣಜದಲ್ಲಿ ಸಂಗ್ರಹಿಸಿಡುತ್ತಿದ್ದೆವು. ರೈತರು ಬಂದರೆ ಒಟ್ಟೊಟ್ಟಾಗಿಯೇ ಬರುತ್ತಿದ್ದದ್ದು. ಅವರಿಗೆಲ್ಲಾ ನಮ್ಮಮ್ಮ ರುಚಿರುಚಿಯಾಗಿ ಅಡುಗೆ ಮಾಡುತ್ತಿದ್ದಳು. ಹುಳಿ, ಸಾರಿನ ಜೊತೆಗೆ ಹಪ್ಪಳ, ಸಂಡಿಗೆಗಳೂ ಇರುತ್ತಿದ್ದವು. ಎಲ್ಲರನ್ನೂ ಸಾಲಾಗಿ ಕೂರಿಸಿ, ಬಾಳೆಎಲೆ ಹಾಕಿ, ನಾವೆಲ್ಲಾ ಬಡಿಸುತ್ತಿದ್ದೆವು. ಎಲ್ಲರೂ ಬೆರೆತು ಸಂತೋಷದಿಂದ ಇರುತ್ತಿದ್ದ ಆ ದಿನಗಳನ್ನು ನಾನು ಮರೆಯಲಾರೆ.
 
ನಮ್ಮ ಮನೆಗೆ ಅತ್ತಿಗೆ ಶಾಂತಮ್ಮ ಬಂದಾಗ ನಾನು ಎರಡು ವರ್ಷದವನಂತೆ. ಕೊನೆಯವರೆಗೂ ಅವರೂ ನನ್ನ ಅಮ್ಮ ಜಗಳವಾಡಿದ್ದನ್ನು ನಾನು ನೋಡಿಯೇ ಇಲ್ಲ.
 

`ಇವನನ್ನು ಎತ್ತಿಕೊಂಡು ಸುತ್ತಾಡಿ ಸುಸ್ತಾದ ಸೊಂಟ ಇದು~ ಎಂದು ಅವರು ನನ್ನನ್ನು ತೋರಿಸುತ್ತಾ ಪದೇಪದೇ ಹೇಳುತ್ತಿದ್ದರು. ನಾನು ಅತ್ತಾಗಲೆಲ್ಲಾ ಸಮಾಧಾನ ಮಾಡುತ್ತಿದ್ದ ಶಾಂತಮ್ಮ ಎರಡು ವರ್ಷದ ಹಿಂದೆ ತೀರಿಹೋದರು. ಅವರ ಕಂಕುಳಲ್ಲಿ ಬೆಳೆದ ನನಗೆ ಬಾಲ್ಯದಲ್ಲಿ ಅವರೂ ಸಿನಿಮಾಗಳನ್ನು ತೋರಿಸಿದ್ದರು. ಮದಣ್ಣನಂತೂ ಭಾನುವಾರ ಮನೆಯಲ್ಲಿದ್ದರೆ, `ಬಡ್ಡೆತದೆ, ಮನೇಲಿ ಕೂತು ಏನು ಮಾಡ್ತಿದ್ಯಾ... ಹೋಗಿ ಒಂದು ಸಿನಿಮಾ ನೋಡಿಬಾ~ ಎಂದು ಕಾಸು ಕೊಡುತ್ತಿದ್ದ. `ಬಡ್ಡೆತದೆ~ ಎಂಬುದು ಮದಣ್ಣನ ಫೇವರಿಟ್ ಪದ.

ಮಿಡ್ಲ್‌ಸ್ಕೂಲ್‌ವರೆಗೆ ಶಾರದಾವಿಲಾಸ್ ಶಾಲೆಯಲ್ಲಿ ಓದಿದ ನಾನು ಹೈಸ್ಕೂಲ್ ಓದಿದ್ದು ಬನುಮಯ್ಯಾಸ್ ಶಾಲೆಯಲ್ಲಿ. ಅಲ್ಲಿ ಚಿಕ್ಕ ಚಿಕ್ಕ ನಾಟಕಗಳನ್ನು ಮಾಡುತ್ತಿದ್ದೆ. ಎಸ್ಸೆಸ್ಸೆಲ್ಸಿ ಓದುವಾಗಲೇ ನಾನು ದಾಶರಥಿ ದೀಕ್ಷಿತರ `ಅಳಿಯ ದೇವರು~ ನಾಟಕದಲ್ಲಿ ಅಭಿನಯಿಸಿದ್ದೆ.
ಅದರಲ್ಲಿ ಸಂಜೀವ ಎಂಬ ಡಾಕ್ಟರ ಪಾತ್ರವನ್ನು ನಾನು ಮಾಡುತ್ತಿದ್ದೆ. ರಂಗನಾಥ ಅಯ್ಯಂಗಾರ್ ಎಂಬ ಮೇಷ್ಟರಿದ್ದರು. ಅವರು ಸಿಕ್ಕಾಪಟ್ಟೆ ಹೋಂವರ್ಕ್ ಕೊಡುತ್ತಿದ್ದರು. ಅವರಿಗೂ ನಾಟಕದಲ್ಲಿ ಒಂದು ಪಾತ್ರ ಕೊಟ್ಟು ಪುಸಲಾಯಿಸಿಬಿಟ್ಟೆ. ಆ ನಾಟಕದಲ್ಲಿ ಅಭಿನಯಿಸಿದ ಮೇಲೆ ನನ್ನ ವಿಷಯದಲ್ಲಿ ಅವರ ಧೋರಣೆಯೇ ಬದಲಾಗಿ, `ನೋ ಹೋಂವರ್ಕ್ ಫುಲ್ ಮಾರ್ಕ್ಸ್~ ಎಂಬಂತಾಯಿತು. ನಾನು ರಿಹರ್ಸಲ್‌ನಲ್ಲಿ ನಾಟಕ ಹೇಳಿಕೊಡುತ್ತಿದ್ದ ರೀತಿಯನ್ನು ರಂಗನಾಥ ಅಯ್ಯಂಗಾರ್ ಮೇಷ್ಟ್ರು ತುಂಬಾ ಮೆಚ್ಚಿಕೊಂಡು ಮಾತನಾಡಿದ್ದು ಇನ್ನೂ ಕಿವಿಯಲ್ಲಿ ಇದೆ.

ವಿವಿಧ ನಾಟಕ ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲಲೇಬೇಕು ಎಂದು ನಾವೆಲ್ಲಾ ಶ್ರದ್ಧೆಯಿಂದ ತಾಲೀಮು ನಡೆಸುತ್ತಿದ್ದೆವು. ಆ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ. ಆಸೆಗಳು ಇಲ್ಲದಿದ್ದರೆ ಜೀವನವೇ ಇಲ್ಲವಂತೆ. ಎಲ್ಲಿಯವರೆಗೆ ಆಸೆಗಳು ಇರುತ್ತವೋ ಅಲ್ಲಿಯವರೆಗೆ ಬದುಕು. ನಾನು ಚಿಕ್ಕ ವಯಸ್ಸಿನಿಂದಲೇ ಏನೇನೋ ಆಸೆಗಳನ್ನು ಇಟ್ಟುಕೊಂಡು ಬೆಳೆದವನು. ಬಾಲ್ಯದಲ್ಲಿ ಸೈಕಲ್ ಮೇಲೆ ಹೋಗುವಾಗ ಮೈಸೂರನ್ನು ನೋಡುತ್ತಾ, `ನಾನೇನಾದರೂ ಸಿನಿಮಾಗೆ ಹೋದರೆ ಈ ಊರನ್ನು ಹೆಲಿಕಾಪ್ಟರ್‌ನಿಂದ ತೋರಿಸುತ್ತೇನೆ~ ಅಂದುಕೊಂಡಿದ್ದೆ. `ಡಾನ್ಸ್ ರಾಜಾ ಡಾನ್ಸ್~ ಸಿನಿಮಾ ಮಾಡಿದಾಗ ಅದೇ ಮೈಸೂರನ್ನು ನಾನು ಹೆಲಿಕಾಪ್ಟರ್ ಬಳಸಿ ಶೂಟ್ ಮಾಡಿದೆ. ಯಾವುದೋ ಒಂದು ಶಕ್ತಿ ನನ್ನ ಬಾಲ್ಯದ ಆಸೆಯನ್ನು ಈಡೇರಿಸಿಕೊಳ್ಳಲು ಕಾರಣವಾಯಿತು.

ಒಮ್ಮೆ ಗಾಯತ್ರಿ ಥಿಯೇಟರ್‌ನಲ್ಲಿ `ವಿಕ್ಟೋರಿಯಾ ಫಾಲ್ಸ್~ ಸಿನಿಮಾ ನೋಡಿಬಂದೆ. ದಿನಗಟ್ಟಲೆ ಅದು ನನ್ನ ಮನಸ್ಸನ್ನು ಆವರಿಸಿಕೊಂಡಿತು. ನಾನು ಕೂಡ ಸಿನಿಮಾಗೆ ಹೋಗಿ, `ವಿಕ್ಟೋರಿಯಾ ಫಾಲ್ಸ್~ ತರಹದ್ದೇ ಚಿತ್ರ ತೆಗೆಯಬೇಕು ಎಂದು ಕನಸು ಕಂಡೆ. ಆ ಸ್ಫೂರ್ತಿಯಿಂದ ಮೂಡಿದ್ದೇ `ಆಫ್ರಿಕಾದಲ್ಲಿ ಶೀಲಾ~. ಬಾಲ್ಯದಲ್ಲಿ ಹುಟ್ಟಿದ ಆಸೆಗಳನ್ನು ನಾನು ನೇವರಿಸುತ್ತಾ, ಮುಂದೆ ಅವನ್ನು ಈಡೇರಿಸಿಕೊಳ್ಳಲು ಸಾಧ್ಯವಾಗಿದ್ದು ಎಷ್ಟೋ ಸಲ ನನಗೇ ಅಚ್ಚರಿಯಾಗಿ ಕಂಡಿದೆ. `ಮೈಸೂರು ನನ್ನ ಮೈಸೂರು~ ಅಂತ ಹಾಡನ್ನೂ ಹಾಡಿದೆ. ಈ ಭಾಗ್ಯ ಎಷ್ಟು ಜನರದ್ದಾಗಲು ಸಾಧ್ಯ? ನಾನು ಈ ವಿಷಯದಲ್ಲಿ ಮಾತ್ರ ತುಂಬಾ ಅದೃಷ್ಟವಂತ ಎನ್ನಲೇಬೇಕು.

ನಮ್ಮ ಮಾವ ಹುಣಸೂರು ಕೃಷ್ಣಮೂರ್ತಿ ಆಗ ನಾಟಕಗಳಲ್ಲಿ ಪಾರ್ಟು ಮಾಡುತ್ತಿದ್ದರು. `ಧರ್ಮ ರತ್ನಾಕರ~ ನಾಟಕವನ್ನು ನಾನೂ ನನ್ನ ತಾಯಿ ನೋಡಿ ಚಪ್ಪಾಳೆ ಹೊಡೆದ ದಿನಗಳು ಒಂದೆರಡಲ್ಲ. ನಾನೂ ಅವರಂತೆ ನಾಟಕಗಳಲ್ಲಿ ಅಭಿನಯಿಸಬೇಕು ಎಂಬ ಆಸೆ ಆಗ ಮೊಳೆಯಿತು. ಮುಂದೆ ನಮ್ಮ ಮಾವ ಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟರು. `ರೇಣುಕಾ ಮಹಾತ್ಮೆ~, `ಮಾಡಿದ್ದುಣ್ಣೋ ಮಹಾರಾಯ~, `ಜಗನ್ಮೋಹಿನಿ~, `ಕನ್ಯಾದಾನ~, `ಮುತ್ತೈದೆ ಭಾಗ್ಯ~, `ನಟಶೇಖರ~ ಮೊದಲಾದ ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದರು. ಆ ಚಿತ್ರಗಳನ್ನೂ ನಾನು ನೋಡಿದೆ. ಟೈಟಲ್ ಕಾರ್ಡ್‌ನಲ್ಲಿ `ಹುಣಸೂರು ಕೃಷ್ಣಮೂರ್ತಿ~ ಅಂತ ಹೆಸರು ಕಂಡೊಡನೆ ನಾವೆಲ್ಲಾ ತುಂಬಾ ಸಂತೋಷದಿಂದ ಚಪ್ಪಾಳೆ ಹೊಡೆಯುತ್ತಿದ್ದೆವು.

ಚಿತ್ರರಂಗದ ಸೂಜಿಗಲ್ಲು ಆಗಿನಿಂದಲೇ ನನ್ನನ್ನು ಸೆಳೆಯತೊಡಗಿತು. ಸಿನಿಮಾ ಬಗ್ಗೆ ನನಗೆ ಆಗಿನಿಂದಲೂ ಮೋಹ. 
 
 ಮುಂದಿನ ವಾರ: ಹಾಡು ಹೇಳಿ  ಕಿತ್ತಳೆಹಣ್ಣು ಮಾರಿದ್ದು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.