ADVERTISEMENT

ರಜನಿ ಕೊಟ್ಟದ್ದು ಬರೀ ಕಾಫಿ

ದ್ವಾರಕೀಶ್
Published 16 ಫೆಬ್ರುವರಿ 2013, 19:59 IST
Last Updated 16 ಫೆಬ್ರುವರಿ 2013, 19:59 IST

ವಿಷ್ಣುವರ್ಧನ್ ನನ್ನಿಂದ ದೂರವಾಗಿ ಏಳು ವರ್ಷ ಆಗಿದ್ದರೂ ಹೃದಯದಲ್ಲಿ ಅವನು ಇದ್ದೇ ಇದ್ದ. ಆತನಿಲ್ಲದೆ ನನ್ನ ಚಿತ್ರ ಏಳುವುದು ಕಷ್ಟ ಎಂದು ಮನಸ್ಸು ಹೇಳುತ್ತಿತ್ತು. ಆದರೂ ಧೈರ್ಯ ಮಾಡಿ, ಪರದೆಯನ್ನೇ ನಂಬಿದ್ದ ನಾನು `ಹೊಸ ಕಳ್ಳ ಹಳೆ ಕುಳ್ಳ' ಸಿನಿಮಾ ಮಾಡಿದೆ.

ಶಶಿಕುಮಾರ್‌ಗೆ ಅದರಲ್ಲಿ ನಟಿಸುವ ಅವಕಾಶ ಕೊಟ್ಟೆ. ಅದು `ಕಳ್ಳ ಕುಳ್ಳ' ಚಿತ್ರವನ್ನು ಯಾವ ರೀತಿಯಲ್ಲೂ ನೆನಪಿಸಲಿಲ್ಲ. ವ್ಯಾಪಾರದಲ್ಲಿಯೂ ಸೋತಿತು. ನಂತರ ಚಿಂತೆ ಶುರುವಾಯಿತು.

ದೇವರು ಇದ್ದಾನೆ ಎಂಬುದಕ್ಕೆ ಸಾಕ್ಷಿ ಮೊದಲೇ ನಾನು ಪ್ರಸ್ತಾಪಿಸಿದ್ದ `ಚಿತ್ರಂ' ತಮಿಳು ಚಿತ್ರ. ಆ ಚಿತ್ರದ ರೀಮೇಕ್ ಹಕ್ಕು ಪಡೆದು ಎಂಟು ವರ್ಷವಾಗಿತ್ತು. ವಿಷ್ಣು ಇಲ್ಲದೆ ಆ ಚಿತ್ರ ಮಾಡುವುದು ಸಾಧ್ಯವೇ ಇಲ್ಲ ಎಂದು ಭಾವಿಸಿ ಸುಮ್ಮನೆ ಇಟ್ಟಿದ್ದೆ. ಕಾಟ್ರಗಡ್ಡ ಪ್ರಸಾದ್ ಎಂಬ ತೆಲುಗು ನಿರ್ಮಾಪಕರು ಬಂದರು.

ಆಗಲೇ ಎರಡು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದ ಅವರು `ಚಿತ್ರಂ' ಪ್ರಸ್ತಾಪ ಮಾಡಿದರು. ಅದರ ಹಕ್ಕನ್ನು ತಮಗೆ ನೀಡುವಂತೆ ಕೇಳಿದರು. 1993ರಲ್ಲಿ ಅವರು ಈ ಬೇಡಿಕೆ ಇಟ್ಟದ್ದು. ವಿಷ್ಣುವನ್ನು ಹಾಕಿಕೊಂಡು ಅದನ್ನು ನಾನೇ ಮಾಡಬೇಕೆಂಬ ಬಯಕೆ ಇದ್ದಿದ್ದರಿಂದ ಅವರಿಗೆ ಇಲ್ಲವೆಂದೆ.

ವಿಷ್ಣುವಿಗೆ ನಿತ್ಯಾನಂದ ಎಂಬ ಸ್ನೇಹಿತರಿದ್ದರು. ಅವರು ನನಗೂ ಪರಿಚಿತರು. ಅವರನ್ನು ಪುಸಲಾಯಿಸಿ `ಹೊಸ ಕಳ್ಳ ಹಳೆ ಕುಳ್ಳ' ಚಿತ್ರವನ್ನು ನೋಡಲು ವಿಷ್ಣುವನ್ನು ಒಪ್ಪಿಸಿದ್ದಾಯಿತು. ವಸಂತ್ ಲ್ಯಾಬ್‌ನಲ್ಲಿ ಚಿತ್ರ ತೋರಿಸಿದೆ. ವಿಷ್ಣುವಿಗೆ ಅದನ್ನು ನೋಡಿದ ಮೇಲೆ ಸ್ವಲ್ಪ ಅಸಮಾಧಾನವಾಯಿತು.

ADVERTISEMENT

`ನೀನು ಎಷ್ಟು ಚೆನ್ನಾಗಿ ಸಿನಿಮಾ ಮಾಡುತ್ತಿದ್ದೆ. ಯಾಕೋ ನನಗೆ ಇದು ಇಷ್ಟವಾಗಲಿಲ್ಲ' ಎಂದು ಹೇಳಿದ. ನನಗೂ ಅದು ನಿಜ ಎನ್ನಿಸಿತು. `ನೀನು ಇಲ್ಲದೆ ಆ ಚಿತ್ರ ಚೆನ್ನಾಗಿರಲು ಹೇಗೆ ಸಾಧ್ಯ' ಮನಸ್ಸಿನಲ್ಲಿ ಅಂದುಕೊಂಡೆ. ಆ ಸಿನಿಮಾ ನೋಡಿದ ನಂತರ ನಾನು, ವಿಷ್ಣು ಮತ್ತೆ ಸ್ವಲ್ಪ ಹತ್ತಿರಕ್ಕೆ ಬಂದೆವು.

ಕಾಟ್ರಗಡ್ಡ ಪ್ರಸಾದ್‌ಗೆ ನಾನು, ವಿಷ್ಣು ಮತ್ತೆ ಪರಸ್ಪರ ಮಾತನಾಡುತ್ತಿರುವ ವಿಷಯ ಗೊತ್ತಾಯಿತು. ವಿಷ್ಣುವನ್ನು ಹಾಕಿಕೊಂಡೇ `ಚಿತ್ರಂ' ನಿರ್ದೇಶಿಸಿ ಕೊಡುವಂತೆ ಅವರು ಕೇಳಿಕೊಂಡರು. ಹಣ ಹೂಡಲು ಅವರು ಸಿದ್ಧರಿದ್ದರು. ಈಗ ನಿರಾಕರಿಸಲು ನನ್ನ ಮನಸ್ಸು ಒಪ್ಪಲಿಲ್ಲ.

ಆ ಚಿತ್ರವೇ `ರಾಯರು ಬಂದರು ಮಾವನ ಮನೆಗೆ'. ವಿಷ್ಣು ಯಾವ ಷರತ್ತನ್ನೂ ಹಾಕದೆ ನಟಿಸಲು ಒಪ್ಪಿಕೊಂಡ. ನಾನು ಏನೇ ಸಂಭಾಷಣೆ ಹೇಳಿದರೂ ಅದಕ್ಕೆ ಪ್ರತಿಯಾಗಿ ಇನ್ನೊಂದನ್ನು ಹೇಳಿ ನಗಿಸುತ್ತಿದ್ದ. ಆ ಚಿತ್ರದಲ್ಲಿ ಡಾಲಿ ಎಂಬ ನಟಿಯನ್ನು ಪರಿಚಯಿಸಿದೆ. ಮುಂದೆ ಅವಳು ಟೈಗರ್ ಪ್ರಭಾಕರ್ ನಟಿಸಿದ ಅನೇಕ ಚಿತ್ರಗಳ ನಾಯಕಿಯಾದಳು.

ಇದ್ದಕ್ಕಿದ್ದಂತೆ ವಿಷ್ಣು ಒಬ್ಬ ನಿರ್ದೇಶಕರನ್ನು ಕರೆದುಕೊಂಡು ಬಂದು, `ಅವರಿಗೆ ಒಂದು ಸಿನಿಮಾ ನಿರ್ದೇಶಿಸಿ ಕೊಡು' ಎಂದು ಕೇಳಿದ. ಅದೇ `ಕಿಲಾಡಿಗಳು' ಸಿನಿಮಾ ಮೂಡಲು ಕಾರಣ. ನಾನು, ವಿಷ್ಣು ಆ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದೆವು. ಒಂದೇ ಪ್ರೊಜೆಕ್ಷನ್ ಹಾಕಿದ್ದು, ಎಲ್ಲಾ ಏರಿಯಾಗಳಿಗೂ ಚಿತ್ರ ಮಾರಾಟವಾಯಿತು. ಆದರೆ, ನಾನು ಕಂಡಿದ್ದ ವಿಷ್ಣುವನ್ನು ಮತ್ತೆ ಕಾಣಲಿಲ್ಲ ಎಂಬ ಬೇಸರ ನನ್ನಲ್ಲಿತ್ತು. ಆತ ಚೆನ್ನಾಗಿ ಬೆಳೆದಿದ್ದ. ನಾನು ಸರಿಯಾಗಿ ಜಾರಿದ್ದೆ. ಇಬ್ಬರ ನಡುವಿನ ಸಂಬಂಧ ಒಂದು ಬಗೆಯಲ್ಲಿ ಒಡೆದ ಕನ್ನಡಿಯಂತೆಯೇ ಉಳಿಯಿತು.

ನಂತರ ನಾನು ಮಾಡಿದ ಸಿನಿಮಾ `ಶ್ರುತಿ ಹಾಕಿದ ಹೆಜ್ಜೆ'. ಹರಿಕೃಷ್ಣ ಅದನ್ನು ನಿರ್ಮಿಸಿದರು. ಏನೂ ಇಲ್ಲವಾದರೂ ಸಿನಿಮಾ ದೋಣಿ ಪಯಣ ಸಾಗುತ್ತಿತ್ತು ಎಂಬುದಕ್ಕೆ ಇವೆಲ್ಲಾ ನಿದರ್ಶನಗಳು. ಹಣಕಾಸಿನ ವಿಷಯದಲ್ಲಿ, ಆಸ್ತಿ ವಿಷಯದಲ್ಲಿ ನಾನು ಬಹಳ ಹಿಂದೆ ಬಿದ್ದಿದ್ದೆ. ಖಾಲಿಯಾದದ್ದೇ ಹೆಚ್ಚು. ತಾಪತ್ರಯಗಳು ಜಾಸ್ತಿಯಾಗಿದ್ದವು. ಸಿನಿಮಾರಂಗದ ತಂದೆಯರಿಗೆ ಇರುವ ಕಾಯಿಲೆ ನನಗೂ ಬಂತು.

ಮಕ್ಕಳನ್ನೇ ಹೀರೊಗಳನ್ನಾಗಿ ಮಾಡುವ ಮನಸ್ಸಾಯಿತು. ಮೂರನೆಯ ಮಗ ಗಿರೀಶ್, ಕೊನೆಯ ಮಗ ಅಭಿಲಾಷ್ ಇಬ್ಬರನ್ನೂ ಹಾಕಿ `ಹೃದಯ ಕಳ್ಳರು' ಮಾಡಿದೆ. ಕಷ್ಟಪಟ್ಟೇ ಆ ಚಿತ್ರ ಮಾಡಿದರೂ ಗೆಲ್ಲಲಿಲ್ಲ. ಆಗ ಕೊನೆಯ ಮಗನಿಗೆ ಹೇಳಿದೆ: `ಮಗನೇ,ಚಿತ್ರ ನಮಗಲ್ಲ. ಚೆನ್ನಾಗಿ ಓದು'. ಅವನು ಸಿನಿಮಾ ಮರೆತು, ಬಸ್‌ನಲ್ಲಿ ಓಡಾಡಿ ಡಿಸ್ಟಿಂಕ್ಷನ್‌ನಲ್ಲಿ ಎಂಬಿಎ ಪಾಸ್ ಮಾಡಿದ. ಈಗ ದೊಡ್ಡ ಸಾಫ್ಟ್‌ವೇರ್ ಕಂಪೆನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ.

`ಹೃದಯ ಕಳ್ಳರು' ನಂತರ ಮತ್ತೆ ಸಂಕಷ್ಟದ ದಿನಗಳು. ವಿಮಾನದಲ್ಲಿ ಓಡಾಡುತ್ತಿದ್ದ ನಾನು ರೈಲಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಬಿದ್ದೋನು ಗೆಲ್ಲಬಹುದು. ಗೆದ್ದೋನು ಬಿದ್ದರೆ ಪಕ್ಕದಲ್ಲಿರುವವರಿಗೆ ಆನಂದವೋ ಆನಂದ. ನನ್ನ ಪರಿಸ್ಥಿತಿಯೂ ಹಾಗೆಯೇ ಆಯಿತು. ರೈಲಿನಲ್ಲಿ ಹೋದರೆ, `ಏನ್ ಸಾರ್ ಇದು, ರೈಲಿಗೆ ಬಂದುಬಿಟ್ಟಿರಿ. ಎಲ್ಲಾ ಹೋಯ್ತಾ? ಪೇಪರ್‌ನಲ್ಲಿ ಓದಿದ್ವಿ... ಅನ್ಯಾಯ... ಅಯ್ಯೋ ಪಾಪ' ಎನ್ನುತ್ತಿದ್ದರು.

`ಅಯ್ಯೋ ಪಾಪ' ಎಂಬ ಮಾತು ಕೇಳಿ ಬದುಕುವುದು ಕಠಿಣ. ಅಪ್ಪಿತಪ್ಪಿ ವಿಮಾನದಲ್ಲಿ ಹೊರಟರೆ, `ಏನ್ ಸರ್ ಇದು, ಪ್ಲೇನ್‌ನಲ್ಲಿ ಬರ‌್ತಿದೀರಾ? ಸಾಲದ ದುಡ್ಡಾ? ಅದು ಹೇಗೆ ಇಷ್ಟು ಸಾಲದಲ್ಲಿ ಬದುಕಿದ್ದೀರಾ?' ಎಂಬ ಪ್ರಶ್ನೆ. ಅದಕ್ಕೆ ಉತ್ತರ ಎಲ್ಲಿಂದ ತರಲಿ. ಸೆಲಬ್ರಿಟಿಗಳು ಬಿದ್ದರೆ ಕಸಕ್ಕಿಂತ ಕಡೆ ಎಂಬುದು ಅನುಭವಕ್ಕೆ ಬಂದಿತು.

ಎಲ್ಲವನ್ನೂ ಸಹಿಸಿಕೊಂಡೇ ಇದ್ದೆ. ದೇವರು ಮತ್ತೊಮ್ಮೆ ಕೈಕೊಟ್ಟ. ಆರೋಗ್ಯ ಹದಗೆಟ್ಟಿತು. ಮದ್ರಾಸ್ ವಿಮಾನ ನಿಲ್ದಾಣದಲ್ಲಿ ಸಂಕಟ ಶುರುವಾಗಿ ಎದೆತನಕ ಬಂದು, ಹತ್ತಿರದಲ್ಲೇ ಇದ್ದ ಫೋನ್ ಬಳಿಗೆ ಹೋಗಲೂ ಆಗದೆ ಒದ್ದಾಡಿದೆ. ಹೇಗೋ ಚೇತರಿಸಿಕೊಂಡೆ. ಆಗ ಮೊಬೈಲ್ ಇರಲಿಲ್ಲ. ಬೆಂಗಳೂರಿಗೆ ಬಂದವನೇ ತೋರಿಸಿಕೊಳ್ಳಲು ವೈದ್ಯರಲ್ಲಿಗೆ ಹೋದೆ. ಬೈಪಾಸ್ ಸರ್ಜರಿ ಆಗಬೇಕೆಂಬ ಬಾಂಬ್ ಕಿವಿಗೆ ಅಪ್ಪಳಿಸಿತು.

ಆಗ ಬೈಪಾಸ್ ಸರ್ಜರಿಗೆ ಐದಾರು ಲಕ್ಷ ರೂಪಾಯಿ ಖರ್ಚಾಗುತ್ತಿತ್ತು. ಸತ್ಯ ಹೇಳಬೇಕೆಂದರೆ, ನನ್ನ ಬಳಿ 500 ರೂಪಾಯಿಯೂ ಇರಲಿಲ್ಲ. ಆ ಕಡೆ ಹಣವಿಲ್ಲ, ಈ ಕಡೆ ಸ್ನೇಹಿತರಿಲ್ಲ. ಮಾಡಿದ ಆಸ್ತಿ ಹೋಗಿತ್ತು. ಆದರೂ ಮನಸ್ಸು ಹೇಳಿತು- `ರಜನೀಕಾಂತ್ ಜೊತೆಯಲ್ಲಿ ಒಂದು ಸಿನಿಮಾ ಮಾಡಿದರೆ ಪರಿಸ್ಥಿತಿ ಸರಿಹೋದೀತು'. ಕೆಟ್ಟ ಧೈರ್ಯ ಮಾಡಿ, ಮದ್ರಾಸ್‌ನ ಎವಿಎಂ ಸ್ಟುಡಿಯೊಗೆ ಹೋದೆ. ಯಾವ ಸ್ಟುಡಿಯೊದಲ್ಲಿ ನಾನು ಹಾಕಿದ್ದ ಸೆಟ್ ಹತ್ತು ವರ್ಷ ಹಾಗೆಯೇ ಇತ್ತೋ ಅಲ್ಲಿಗೆ ಹನ್ನೆರಡು ವರ್ಷದ ನಂತರ ಕಾಲಿಟ್ಟೆ.

ಎಲ್ಲಾ ಹೊಸಬರೇ ಇದ್ದರು. `ಮುತ್ತು' ಚಿತ್ರದಲ್ಲಿ ರಜನಿ ಪಾತ್ರ ಮಾಡುತ್ತಿದ್ದ. ಸ್ಟೇಜ್‌ನ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿತ್ತು. ನಟಿ ಮೀನಾ ಕೂಡ ಅಲ್ಲಿದ್ದರು. ನಾನು ಹೋಗಿ ಕುಳಿತೆ. ನನ್ನನ್ನು ನೋಡಿದ್ದೇ ರಜನಿ ಓಡಿ ಬಂದ. `ಹೇಗಿದೀರಾ ದ್ವಾರಕೀಶ್?' ಎಂದ. 

ಗಂಟಲು ಕಟ್ಟಿದಂತಾಯಿತು. ಕಣ್ಣಲ್ಲಿ ನೀರು ತುಂಬಿಕೊಂಡೇ ನನ್ನ ಹೃದಯದ ಸಮಸ್ಯೆಯ ಬಗೆಗೆ ಹೇಳಿದೆ. ಅವನಿಗೆ ಅರ್ಥವಾಯಿತು. `ಹ್ಹಹ್ಹಹ್ಹಹ್ಹ, ಈಗ ಇದೆಲ್ಲಾ ಬಹಳ ಕಾಮನ್. ಏನೂ ಆಗಲ್ಲ. ಕಾಫಿ?' ಎಂದು ಕೇಳಿದ. `ಓಕೆ' ಅಂದೆ. ಕಾಫಿ ಕುಡಿದೆ. ಹೊರಟೆ.

ಅವನ ಜತೆ ಇದ್ದದ್ದು, ಹೆಲ್ತ್ ಕ್ಲಬ್‌ನಲ್ಲಿ ಹರಟೆ ಹೊಡೆಯುತ್ತಿದ್ದದ್ದು, ಪಾರ್ಟಿ ಮಾಡಿದ್ದು, ಅವನಿಗೆಂದೇ ಹಿಂದಿ ಸಿನಿಮಾ ಮಾಡಿದ್ದು, ಎರಡು ಕೋಟಿ ಕೈಬಿಟ್ಟದ್ದು... ಹಳೆ ಅಂಬಾಸಿಡರ್ ಕಾರ್‌ನಲ್ಲಿ ವಾಪಸ್ ಬರುವಾಗ ಮನಸ್ಸಿನಲ್ಲಿ ಫ್ಲ್ಯಾಷ್‌ಬ್ಯಾಕ್ ಬಿಚ್ಚಿಕೊಂಡಿತು. ನಾನು ಕೂಡ `ಹ್ಹಹ್ಹಹ್ಹಹ್ಹ' ಎನ್ನುತ್ತಾ ಎಲ್ಲಾ ಮರೆತೆ.

ಮುಂದಿನ ವಾರ: ನನ್ನನ್ನು ಉಳಿಸಿದ್ದೇ ಅಲ್ಲಾಹು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.