ADVERTISEMENT

ನಾನೇನ್ ಸೂಪರ್ ಮ್ಯಾನಾ? ಸ್ಪೈಡರ್ ಮ್ಯಾನಾ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ಜೂನ್ 2013, 19:59 IST
Last Updated 30 ಜೂನ್ 2013, 19:59 IST
ಭಾವು ಪತ್ತಾರ್
ಭಾವು ಪತ್ತಾರ್   

`ಸಾರ್, ರಾಜ್ಯದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಆಗ್ತಾ ಇದೆ'- ಎಂದು ಪೆಕರ ಫೋನ್ ಮಾಡಿದಾಗ ಸಂಪಾದಕರು ಬೆಚ್ಚಿಬಿದ್ದರು. ಅಲ್ಲೋಲ ಕಲ್ಲೋಲವಾಗ್ತಾ ಇರೋದು ಉತ್ತರಾಖಂಡದಲ್ಲಿ. ಕರ್ನಾಟಕದಲ್ಲಿ ಏನಾಗಿದೆ? ಅಯ್ಯ ಅವರ ಸರ್ಕಾರ ಬಹಳ ಸ್ಮೂತಾಗೇ ನಡೀತಾ ಇದೆಯಲ್ಲಾ ಎಂದು ಅನುಮಾನ ಬಂದು, `ಅದೇನು ಸರಿಯಾಗಿ ಹೇಳ್ರಿ, ಬ್ರೇಕಿಂಗ್ ನ್ಯೂಸ್ ತರಹ' ಹೇಳ್ಬೇಡಿ ಎಂದು ಗದರಿದರು.

`ಕಾಂಗ್ರೆಸ್ ಕಚೇರಿಯಲ್ಲಿ ಸಚಿವರೆಲ್ಲಾ ಗುಟ್ಟಾಗಿ ಸೇರಿದ್ದಾರೆ ಸಾರ್, ಒಳಗೆ ತಲೆ ಎಣಿಕೆ ಬೇರೆ ನಡೀತಾ ಇದೆಯಂತೆ. ಅಧ್ಯಕ್ಷರು ಎಲ್ಲರಿಗೂ ಪ್ರಶ್ನೆಗಳನ್ನು ಕೇಳಿ, ಸರ್ಕಾರದ ಬಗ್ಗೆ ವಿವರ ಪಡೀತಾ ಇದಾರಂತೆ. ಭಿನ್ನಮತ ಶುರುವಾಗಿ ಬಿಟ್ಟಿದೆ ಸಾರ್, `ಭಯಂಕರ ಸುದ್ದಿ', ಲೀಡ್ ನ್ಯೂಸ್' ಪೆಕರ ಉದ್ವೇಗದಿಂದಲೇ ಹೇಳಲಾರಂಭಿಸಿದ.

`ಏನೇನೋ ಊಹಿಸಿಕೊಂಡು ಹೇಳ್ಬೇಡಿ, ಬಹುಶಃ ಮನೆಯ ಬಾಡಿಗೆ ಒಂದು ಲಕ್ಷ ಸಾಲಲ್ಲ, ಇನ್ನಷ್ಟು ಜಾಸ್ತಿ ಮಾಡಿ ಅಂತ ಕೇಳಲು ಸಭೆ ಸೇರಿರಬೇಕು ನೋಡ್ರಿ' ಎಂದು ಸಂಪಾದಕರು ಅನುಮಾನಿಸಿದರು.

`ಇಲ್ಲಾ ಸಾರ್, ಇದು ಭಿನ್ನರ ಸಭೆ' ಎಂದು ಪೆಕರ ಮತ್ತೆ ರಾಗ ತೆಗೆದ.

`ಸರಿಯಾಗಿ ನೋಡ್ರಿ, ಆಮೇಲೆ ಸಂಬಂಧಪಟ್ಟವರು ಪತ್ರಿಕಾ ಸಂವಾದದಲ್ಲಿ ಬರೀ ಸಮರ್ಥನೆ, ಸ್ಪಷ್ಟನೆಗಳನ್ನೇ ಕೊಡಬೇಕಾಗುತ್ತೆ, ಅಗ್ಗದ ದರದಲ್ಲಿ ಮದ್ಯ ಕೊಡ್ತಾರಂತೆ ಅಂತ ಬರೆದಿರಿ. ಈಗ ನಾನು ಹಾಗೆ ಹೇಳ್ಲೇ ಇಲ್ಲ ಅಂತಿದ್ದಾರೆ. ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ನಿಲ್ಲಿಸ್ತಾರೆ ಅಂತ ಬರೆದಿರಿ, ಈಗ ಹಾಗೆ ಹೇಳ್ಲೇ ಇಲ್ಲ ಅಂತ ಸ್ಪಷ್ಟನೆ ಬಂದಿದೆ. ಉಡುಪಿ ಕೃಷ್ಣ ಮಠ ಸರ್ಕಾರದ ವಶಕ್ಕೆ ಎಂದು ಬರೆದಿರಿ. ಹಾಗೇ ಹೇಳಲೇ ಇಲ್ಲ ಎಂದು  ಸ್ಪಷ್ಟನೆ ಬಂತು. ಬರೀ ಸ್ಪಷ್ಟನೆ ಬರೋ ಅಂತ ನ್ಯೂಸನ್ನೇ ಕೊಡ್ತೀರಲ್ರಿ, ಒಳ್ಳೆ ಅಭಿವೃದ್ಧಿ ಇರೋ ಅಂತ ನ್ಯೂಸ್ ಬರೀಬಾರ್ದೆ' ಎಂದು ಸಂಪಾದಕರು ಪೆಕರನನ್ನು ದಬಾಯಿಸಿದರು.

`ಇಲ್ಲಾ ಸಾರ್, ಕಾಂಗ್ರೆಸ್ ಕಚೇರಿ ಮುಂದೆ ಸಾವಿರಾರು ಜನ ಸೇರಿದ್ದಾರೆ, ಏನೋ ನಡೀತಿದೆ' ಎಂದು ಪೆಕರ ಖಚಿತವಾಗಿ ಹೇಳಿದ ಮೇಲೆ, `ಸರಿ, ಅಲ್ಲಿಗೆ ಹೋಗಿ, ವರದಿ ಮಾಡಿ' ಎಂಬ ಆದೇಶ ಸಿಕ್ಕಿತು.

ಪೆಕರ ಕಾಂಗ್ರೆಸ್ ಕಚೇರಿಯ ಮುಂದೆ ಬಂದು ಸೇರುವ ವೇಳೆಗೆ, ಟಿವಿ ಚಾನೆಲ್‌ಗಳ ವರದಿಗಾರರು, ಕ್ಯಾಮೆರಾಮನ್‌ಗಳು ಆಗಾಗಲೇ ಮುಕುರಿಕೊಂಡಿದ್ದರು. ಸೆಕ್ಯುರಿಟಿಯವರು ಯಾರನ್ನೂ ಒಳಗೆ ಬಿಡದೆ ನೂಕಾಡುತ್ತಿದ್ದರು. `ಒಂದ್ ಬೈಟ್, ಒಂದ್ ಬೈಟ್' ಎಂಬ ಅರಚಾಟ ಅರಣ್ಯರೋದನವಾಗಿತ್ತು. ಪ್ರೆಸ್‌ನವರಿಗೆ ಒಳಗೆ ಬಿಡಬಾರ್ದು ಅಂತ ಆದೇಶವಾಗಿದೆ ಎಂದು ಸೆಕ್ಯುರಿಟಿಯವರು ಎಷ್ಟು ಹೇಳಿದರೂ ಪ್ರೆಸ್‌ನವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಈಗಾಗಲೇ ಚಾನಲ್‌ಗಳಲ್ಲಿ `ಭಿನ್ನಮತ ರಹಸ್ಯ ಸಭೆ' ಎಂಬ ಸ್ಫೋಟಕ ಹೆಡ್‌ಲೈನ್‌ಗಳು ಬರಲಾರಂಭಿಸಿದವು. ಈ ವಿಷಯವನ್ನು ಹೀಗೇ ಬಿಟ್ಟರೆ, ಪ್ರೆಸ್‌ನವರು ದೊಡ್ಡ ರಾಮಾಯಣವನ್ನೇ ಸೃಷ್ಟಿಸುತ್ತಾರೆ ಎಂಬುದನ್ನು ಊಹಿಸಿದ ಅಧ್ಯಕ್ಷರು, ಹೊರಗೆ ಬಂದು, `ದಯವಿಟ್ಟು, ಕೇಳಿ, ತಿಂಗಳಿಗೊಮ್ಮೆ ಕೆಪಿಸಿಸಿ ಕಚೇರಿಗೆ ಭೇಟಿ ನೀಡುವಂತೆ ಎಲ್ಲ ಸಚಿವರಿಗೂ ಸೂಚಿಸಲಾಗಿದೆ. ಈ ಸಂಬಂಧ ವೇಳಾಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ. ಅದರಂತೆ ಈ ಸಭೆ ನಡೀತಿದೆ. ಭಿನ್ನಮತವೂ ಅಲ್ಲ, ರಹಸ್ಯ ಸಭೆನೂ ಅಲ್ಲ, ದಯವಿಟ್ಟು ಸಹಕರಿಸಿ, ಎಲ್ಲರೂ ಇಲ್ಲಿಂದ ಹೋಗಿ, ಸಭೆ ಮುಗಿದ ಮೇಲೆ, ಏನು ನಡೀತು ಅಂತ ಪ್ರೆಸ್ ಸ್ಟೇಟ್‌ಮೆಂಟ್ ಕೊಡ್ತೀವಿ' ಎಂದು ಎಲ್ಲರಿಗೂ ಕೈಮುಗಿದರು.

ಉತ್ತರಾಖಂಡದಲ್ಲಿ ಶಿಖರಗಳೇ ಜರುಗಬಹುದು, ಆದರೆ ಮೀಡಿಯಾ ದಂಡು ಒಂದಿಂಚೂ ಕದಲಲಿಲ್ಲ.
`ಸಂಪುಟದಲ್ಲಿ ಸಚಿವರು ವಿವರಣೆ ಕೊಡಬೇಕು, ಸಿಎಂ ಅಧ್ಯಕ್ಷತೆಯಲ್ಲಿ ವಿವರಣೆ ಕೊಡಬೇಕು, ಇಲ್ಲೇನು ಸಾರ್?' ಎಂದು ಒಬ್ಬರು ಪ್ರಶ್ನಿಸಿದರು.

ತನಿಖಾ ವರದಿಯಲ್ಲೂ, ರಹಸ್ಯ ಕುಟುಕು ಕಾರ್ಯಾಚರಣೆ ಮಾಡುವ ವರದಿಗಾರಿಕೆಯಲ್ಲೂ ಪೆಕರ ತಜ್ಞನೆನಿಸಿದ್ದ. ಈ ಸಭೆಗೆ ಯಾರನ್ನೂ ಬಿಡುವುದಿಲ್ಲ ಎನ್ನುವುದನ್ನು ಅರಿತ ಪೆಕರ, ತಲೆಗೊಂದು ಕಾಂಗ್ರೆಸ್ ಟೋಪಿ ಹಾಕಿಕೊಂಡು, ಜಬರ್‌ದಸ್ತಿನಿಂದ ಸಭಾಂಗಣದತ್ತ ನುಗ್ಗಿದ. ಪೆಕರನ ಭರ್ಜರಿ ಶೈಲಿ ನೋಡಿ, ಅವನೂ ಸಚಿವನಿರಬಹುದು ಎಂದು ಎಲ್ಲರೂ ಭಾವಿಸಿದ್ದರಿಂದ ಪೆಕರನ ಕಾರ್ಯಾಚರಣೆ ಯಶಸ್ವಿಯಾಯಿತು.

ಸಚಿವರನ್ನು ಒಂದೇ ಕಡೆ ನೋಡಿದ ಕಾರ್ಯಕರ್ತರು, ನಮ್ಮ ಕೆಲಸ ಮಾಡಿಕೊಡಿ, ಇಂತಹವರ ವರ್ಗಾವಣೆ ಮಾಡಿಕೊಡಿ ಎಂದು ಸಚಿವರಿಗೆ ದುಂಬಾಲು ಬಿದ್ದ ಕಾರಣ ಸಭೆ ಅಸ್ತವ್ಯಸ್ತವಾಯಿತು. ನೂಕು ನುಗ್ಗಲು ಬೇಡ. ಎಲ್ಲ ಕಾರ್ಯಕರ್ತರ ಬೇಡಿಕೆಗಳನ್ನೂ ಈಡೇರಿಸಲಾಗುವುದು, ಎಲ್ಲರೂ ಸೈಲೆಂಟಾಗಿ ಕೂರಿ ಎಂದು ಅಧ್ಯಕ್ಷರು ಎಷ್ಟು ಕೂಗಿಕೊಂಡರೂ ಯಾರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದೀಗ ತಾನೇ ನಮ್ಮ ಸಚಿವರು ಉತ್ತರಾಖಂಡಕ್ಕೆ ಹೋಗಿ ಕನ್ನಡಿಗ ಪ್ರವಾಸಿಗರನ್ನು ರಕ್ಷಿಸಿ ಬಂದಿದ್ದಾರೆ ಕೂತುಕೊಳ್ಳಿ ಎಂದು ಅಂಗಲಾಚಿದರೂ ಯಾರೂ ಕೇಳುವವರಿಲ್ಲದೆ ಸಭೆ ಯಲ್ಲಪ್ಪನ ಜಾತ್ರೆಯಾಯಿತು. ಸಚಿವರೆಲ್ಲಾ ಅರ್ಜೆಂಟಾಗಿ ಹೋಗ್ಬೆಕು ಎಂದು ಎದ್ದೆದ್ದು ಹೋಗಲಾರಂಭಿಸಿದಾಗ ನಮ್ಮ ಪೆಕರ ಕೂಡಾ ಎದ್ದು, ಉತ್ತರಾಖಂಡಕ್ಕೆ ತೆರಳಿದ್ದ ಸಚಿವರನ್ನು ಭೇಟಿಯಾಗಲು ಓಡಿದ.

`ಸಾರ್, ಉತ್ತರಾಖಂಡಕ್ಕೆ ಹೋಗಿ ಸ್ವಲ್ಪ ಸೊರಗಿದ್ದೀರಲ್ಲಾ ಸಾರ್'
`ನೀವು ಹೇಳಿದ್ದು ಸ್ವಲ್ಪ ಸರಿ., ಉತ್ತರಾಖಂಡದಲ್ಲಿ ದಾರಿಗಳೆಲ್ಲಾ ನಾಶವಾಗಿವೆ. ಓಡಾಡಿ, ಕನ್ನಡಿಗರನ್ನು ಹುಡುಕುವುದೇ ಕಷ್ಟವಾಯ್ತು. ಅಲ್ಲಿ ಚೆನ್ನಾಗಿಯೇ ಇದ್ದೆ. ಏನೂ ಕಷ್ಟವಾಗ್ಲಿಲ್ಲ. ಬೆಂಗಳೂರಿಗೆ ಬಂದು ಗುಂಡಿ ಬಿದ್ದಿರುವ ರಸ್ತೆಯಲ್ಲಿ ಓಡಾಡಿ ಸುಸ್ತಾಗಿದೆ'

`ಎಷ್ಟು ಜನ ಕನ್ನಡಿಗರನ್ನು ರಕ್ಷಿಸಿದಿರಿ?'

`150 ಜನರನ್ನು  ಮಾತನಾಡಿಸಿದ್ದೇನೆ, ಇನ್ನೊಂದು ವಾರದಲ್ಲಿ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಬರುವ ಏರ್ಪಾಡು ಮಾಡುವೆ'

`ಗುಜರಾತ್ ಮುಖ್ಯಮಂತ್ರಿ ಮೋದಿ ಅವರು ಡೆಹ್ರಾಡೂನ್‌ಗೆ ನೇರವಾಗಿ ಬಂದು 15 ಸಾವಿರ  ಗುಜರಾತಿಗಳನ್ನು ಕರೆದುಕೊಂಡು ಹೋದರಂತೆ. ನೀವೇನ್ ಸಾರ್, ಇನ್ನೊಂದು ವಾರ ಅಂತಾ ಇದೀರಿ?'

`ನಾನೇನ್ ಸೂಪರ್‌ಮ್ಯಾನಾ, ಸ್ಪೈಡರ್ ಮ್ಯಾನಾ? ಹಾರ್ತಾ ಹೋಗಿ, ಎತ್ತಿಕೊಂಡು ಬರೋಕ್ಕಾಗುತ್ತಾ?'

`ಅವರು 80 ಇನೋವಾ ಕಾರಿನಲ್ಲಿ ಕರೆದುಕೊಂಡು ಹೋದರಂತೆ. ನೀವು ಕೇಳಿದ್ರೆ ಅಯ್ಯ ಅವರು ಕೊಡಲ್ಲ ಅಂತಿದ್ರಾ'
`ನಮೋ ನಮೋ ಎಂಬ ಜಪ ಮಾಡ್ತಾ ಇರೋರ್ನೆಲ್ಲಾ ಅವರು ಹೆಗಲ ಮೇಲೆ ಕೂರಿಸಿಕೊಂಡು ಹಾರಿ ಹೋಗಿರಬೇಕು.

ಅದೆಲ್ಲಾ ರಾಮಜಪ ಮಾಡುವವರಿಗೆ ಚೆನ್ನಾಗಿಯೇ ಗೊತ್ತಿರುತ್ತೆ. ಅವರೇನು ಲಂಕೆಯನ್ನೂ ಹಾರುತ್ತಾರೆ, ಬೆಟ್ಟವನ್ನೂ ಕಿತ್ತು  ಹಾರುತ್ತಾ ಸಾಗಿಸುತ್ತಾರೆ. ಅದೆಲ್ಲಾ ನಮಗೆ ಗೊತ್ತಿಲ್ಲವಲ್ಲಾ'

ಪೆಕರ ಖುಷಿಯಿಂದ ಎಕ್ಸ್‌ಕ್ಲೂಸಿವ್ ನ್ಯೂಸ್ ಸಿಕ್ತು ಅಂತ ಕಚೇರಿ ಕಡೆ ಓಡಿದ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.