ADVERTISEMENT

ಮತದಾರನ ದಶಾವತಾರ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST
ಮತದಾರನ ದಶಾವತಾರ
ಮತದಾರನ ದಶಾವತಾರ   

‘ಏನ್ರೀ ಪೆಕರ ಅವರೇ, ಮತದಾನಕ್ಕೆ ಎರಡೇ ದಿನ ಇದೆ. ಇನ್ನೂ ನೀವು ಮೋದಿ ವೈಫು, ರಮ್ಯಾ ಲೈಫು ಬಗ್ಗೆಯೇ ಬರೀತಾ ಇದ್ದೀರಾ. ಬಡಪಾಯಿ ಮತದಾರನ ಬಗ್ಗೆಯೂ ಸ್ವಲ್ಪ ಯೋಚನೆ ಮಾಡಿ’ ಎಂದು ಸಂಪಾದಕರು ಐಡಿಯಾ ಕೊಟ್ಟರು.

‘ಏನ್ಸಾರ್, ಇದನ್ನು ಒಂದು ದೊಡ್ಡ ಐಡಿಯಾ ಅನ್ನೋ ತರಹ ಹೇಳ್ತಾ ಇದ್ದೀರಾ, ಐನೂರರ ಹಸಿರು ನೋಟು, ಅದರ ಮೇಲೊಂದು ಕ್ವಾಟ್ರು­ಬಾಟ್ಲು ಕೊಟ್ಟುಬಿಟ್ರೆ ಕಣ್ಮುಚ್ಚಿಕೊಂಡು ವೋಟು ಬೀಳುತ್ತೆ. ಇದು ಪರಂಪರಾಗತವಾಗಿ ಬೆಳೆದು ಬಂದಿ­ರುವ ಮಾಮೂಲೀ ವಿಷಯ. ಅದನ್ನೆಲ್ಲಾ ಏನ್ಸಾರ್ ಬರೆಯೋದು?’ ಪೆಕರ ಜುಗುಪ್ಸೆಯಿಂದಲೇ ಉತ್ತರಿಸಿದ.

‘ಹಾಗೆಲ್ಲಾ ಲಘುವಾಗಿ ಮಾತನಾಡಬೇಡಿ ಪೆಕರ ಅವರೇ, ಭಾರತದ ಮತದಾರರನ್ನು ಏನಂತ ತಿಳಿದುಕೊಂಡಿದ್ದೀರಾ? ಅವನ ಮನಸ್ಸಿನ ಆಳ­ದಲ್ಲಿ ನಡೆಯುತ್ತಿರುವ ವ್ಯಾಪಾರವನ್ನು ಅರಿ­ಯಲು ಯಾವ ಪಾತಾಳಗರಡಿಯಿಂದಲೂ ಸಾಧ್ಯ­ವಿಲ್ಲ. ಸರ್ಕಾರವನ್ನು ರಚಿಸಲೂ ಬಲ್ಲ, ಕಿತ್ತು ಬಿಸಾ­ಕಲೂ ಬಲ್ಲ’ ಎಂದು ಸಂಪಾದಕರು ಹೇಳಿದರು.

‘ಆದರೂ ಎಲೆಕ್ಟ್ರಾನಿಕ್ ಮತಯಂತ್ರದ ಮುಂದೆ ನಿಂತಕೂಡಲೇ ನಮ್ಮ ಮತದಾರನ ಮನಸ್ಸು ಚಂಚಲವಾಗಿ ಬಿಡುತ್ತೆ ಸಾರ್’ ಎಂದು ಪೆಕರ ಗೊಣಗಿದ.

‘ಅದು ಸಹಜ ಬಿಡ್ರೀ, ನಮ್ಮ ಮತದಾರ ಅಸಾ­ಮಾನ್ಯ. ಹಸ್ತ, ಕಮಲ, ತೆನೆಹೊತ್ತ ಮಹಿಳೆ, ಪೊರಕೆ, ಕುಡುಗೋಲು, ಸೈಕಲ್, ಗಜ ಎಲ್ಲ­ದಕ್ಕೂ ಅವನು ಅತೀತ. ಗುಂಡು, ದುಡ್ಡು, ಊರು ಹಿರಿಯರು, ಪ್ರಶಸ್ತಿ ವಿಜೇತ ಸಾಹಿತ್ಯ­ರತ್ನಗಳು, ದೊಡ್ಡದೊಡ್ಡ ನಾಯಕರು ಯಾರು ಏನೇ ಹೇಳಲಿ, ಸುಲಭವಾಗಿ ಜಗ್ಗುವವನಲ್ಲ ಶ್ರೀಮಾನ್ ಮತದಾರ, ತಿಳ್ಕೊಳ್ಳಿ’ ಎಂದು ಮತ್ತಷ್ಟು ಮಾಹಿತಿ ನೀಡಿದರು.

‘ಆಯ್ತು ಬಿಡಿ ಸಾರ್, ನಮ್ಮ ನಾಯಕರು ಪ್ರತೀ ಚುನಾವಣೆಯಲ್ಲೂ ಭರವಸೆಗಳನ್ನು ನೀಡಿ ವೋಟು ಕಿತ್ಕೊಳ್ಳುತ್ತಾರೆ. ಒಂದ್‌ಬಾರಿ ಗೆದ್‌­ಮೇಲೆ ಮತ್ತೆ ಆ ಕಡೆ ತಿರುಗಿಯೂ ನೋಡು­ವು­ದಿಲ್ಲ. ಪೊಳ್ಳು ಭರವಸೆ ನಂಬಿ, ಮತಹಾಕಿ ಅವರನ್ನ ಗೆಲ್ಲಿಸಿ ಕಳುಹಿಸಿದ ನಂತರ ನಮ್ಮ ಶ್ರೀಸಾ­ಮಾನ್ಯ ಬಡ ಮತದಾರ, ಪುಢಾರಿಗಳಿಂದ ಚೆನ್ನಾಗಿ ಉಂಡೇ ನಾಮ ತಿಕ್ಕಿಸಿಕೊಂಡು ಕಾಲ­ಕಳೀತಾನೆ’ ಎಂದು ಪೆಕರ ವಿಶ್ಲೇಷಣೆ ಮಾಡಿದ.

ಈಗ ಎಲ್ಲೆಲ್ಲೂ ಮತದಾರನ ಭಜನೆ
೫ ವರ್ಷಕ್ಕೊಮ್ಮೆ ಇವ ನೆನಪಾದನೇ?
ಯಾರು ಗೆದ್ದರೂ ಕಾದಿದೆ ಮೋಸ
ತಪ್ಪದು ಅವನಿಗೆ ರಾಗಿ ಬೀಸುವ ಕೆಲಸ
ಮತದಾರನನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಬೇಕು ಎಂದು ನಿರ್ಧರಿಸಿ,  ಸಾಹಿತಿ ಭೀರಪ್ಪನವರ ಮನೆಗೆ ಬಂದ. ಪ್ರಶ್ನೆ ಕೇಳಿದ ಕೂಡಲೇ ಅವರು ಗರಂ ಆದರು.

‘ಸಾಹಿತಿಗಳು ಸೈಲೆಂಟಾಗಿ ಮನೇಲಿರಬೇಕು. ಮತದಾರನಿಗೆ ತಪ್ಪು ಮಾರ್ಗದರ್ಶನ ಮಾಡ­ಬಾ­ರದು. ಅಪಾರ ಆಸ್ತಿಯಿರುವ ಅಭ್ಯರ್ಥಿಗೆ ವೋಟು ಹಾಕಿ ಅನ್ನೋದು ತಪ್ಪು. ಬೆಂಗಳೂರಿನಲ್ಲಿ ಒಂದು ಪಕ್ಷಕ್ಕೆ, ಕೋಲಾರದಲ್ಲಿ ಮತ್ತೊಂದು ಪಕ್ಷಕ್ಕೆ, ಬೀದರ್‌ನಲ್ಲಿ ಇನ್ನೊಂದು ಪಕ್ಷಕ್ಕೆ ಬೆಂಬಲಕೊಡೋ ಸಾಹಿತಿಗಳಿಗೆ ಚಿತ್ತಶುದ್ಧಿ ಇರಬೇಕು’ ಎಂದು ಭೀಮಪ್ಪನವರು ಸಿಡುಕಿದರು.

‘ಆದರೂ ಸಾಹಿತಿಗಳ ಮಾತನ್ನು ಮತ­ದಾರರು ಸ್ವಲ್ಪವಾದರೂ ನಂಬ್ತಾರೆ ಅನ್ನಿಸುತ್ತೆ’ ಎಂದು ಪೆಕರ ಹೇಳಿದ.
‘ಇನ್ನೊಬ್ಬರ ಬುರುಡೆ ನಂಬಿ ಹೊಳೆ ಹಾರಿ­ದರೆ ಸರಿಯಾದ ಶಾಸ್ತಿಯಾಗುತ್ತೆ. ಯಾರಿಗೆ ಯಾರೋ ಪುರಂದರ ವಿಠಲ’ ಎನ್ನುತ್ತಾ ಭೀಮಪ್ಪನವರು ಮಾತು ಮುಗಿಸಿದರು.

ಮತದಾರನನ್ನು ಮಾತನಾಡಿಸಲು ಶ್ರೀರಾ­ಮೋ­ಹಳ್ಳಿಗೆ ಬಂದ ಪೆಕರ, ‘ದೊಂಗಲು ವಸ್ತು­ನ್ನಾರು ಜಾಗ್ರತ’ ಎಂಬ ಬೋರ್ಡ್ ನೋಡಿ ಬೆಚ್ಚಿ­ಬಿದ್ದ. ಅಲ್ಲೇ ನಿಂತಿದ್ದ ಆಟೊ ಡ್ರೈವರ್ ಒಬ್ಬರನ್ನು ‘ಏಕೆ ಸ್ವಾಮಿ ಈ ರೀತಿ ಬೋರ್ಡ್?!’ ಎಂದು ಪ್ರಶ್ನಿಸಿದ.

‘ರಾಜಕಾರಣಿಗಳು ಆಡ್ತಾ ಇರೋ ಆಟ ನೋಡಿದ್ರೆ ಮೈಯೆಲ್ಲಾ ಪರಚಿಕೊಳ್ಳಬೇಕು ಅನ್ನಿಸ್ತಾ ಇದೆ. ಕಳ್ಳಹಣ ತೆಗೆದುಕೊಂಡು ಹೋಗಿ ಸ್ವಿಸ್ ಬ್ಯಾಂಕಿನಲ್ಲಿ ಇಡುತ್ತಾರೆ. ದೊಡ್ಡ ದೊಡ್ಡ ವ್ಯವಹಾರಕ್ಕೆ ಕೈಹಾಕಿ ಕಿಕ್‌ಬ್ಯಾಕ್ ಪಡೀತಾರೆ. ಇಲ್ಲಿ ಬಂದು ಹರಿಶ್ಚಂದ್ರನ ತರ ಮಾತನಾಡ್ತಾರೆ. ಅವರು ಎದುರಿಗೆ ಬರಲಿ, ಕಪಾಳಮೋಕ್ಷ ಮಾಡ್ತೀನಿ’ ಎಂದು ಆಟೊಡ್ರೈವರ್ ಅಬ್ಬರಿಸಿದ.

ಮತದಾರನ ಪವರ್ ಬಹಳ ಜೋರಾಗಿಯೇ ಇದೆ ಎಂದು ಹೆಮ್ಮೆಪಡುತ್ತಾ, ಪೆಕರ ಸಾಸ್ವೆಹಳ್ಳಿಗೆ ಬಂದ. ನೂರಾರು ಮತದಾರರು ಉರಿಬಿಸಿಲಿನಲ್ಲೂ ತಲೆಯ ಮೇಲೆ ಟವೆಲ್ ಹಾಕಿಕೊಂಡು ಕಾಯುತ್ತಾ ಕುಳಿತಿದ್ದರು. ಪೆಕರ ಎಂಟ್ರಿ ಕೊಟ್ಟಿದ್ದೇ ತಡ, ಅವನ ಕಾರನ್ನು ಮುತ್ತಿಗೆ ಹಾಕಿದರು. ಎಲ್ಲರಿಗೂ ಪೆಕರನನ್ನು ಕಂಡು ನಿರಾಸೆಯಾಯಿತು. ‘ಸಿನಿಮಾ ಆಕ್ಟರ್‌ಗಳು ಬಂದ್ರು ಅಂದುಕೊಂಡ್ವಿ’ ಎಂದು ಎಲ್ಲರೂ ಪೆಕರನನ್ನು ದುರುಗುಟ್ಟಿ ನೋಡಿದರು. ಅವರ ನಿರಾಶೆ ಕಂಡರೆ, ‘ನೀನ್ಯಾಕೋ ಬಂದೆ ಶನಿಮಹರಾಯ’ ಎನ್ನುವಂತಿತ್ತು.
‘ಯಜಮಾನರೇ, ಯಾವ ನಟನಟಿಯರು ಬರ್ತಾ ಇದ್ದಾರೆ?’ ಪೆಕರ ಹಳ್ಳಿಯ ಮತದಾರ­ರೊಬ್ಬರನ್ನು ಪ್ರಶ್ನಿಸಿದ.

‘ಯಾರೋ ಬತ್ತಾರೆ ಅಂದ್ರು, ಗೊತ್ತಿಲ್ಲ’
‘ಯಾರು ಅಂತ್ಲೇ ಗೊತ್ತಿಲ್ಲ, ಮತ್ಯಾಕೆ ಅವರನ್ನ ನೋಡ್ಬೇಕು ಅಂತ ಕಾಯ್ತಾ ಇದ್ದೀರಾ?’

‘ಯಾರ್‌ಯಾರೋ ಬತ್ತಾರಂತೆ, ಡ್ಯಾನ್ಸ್ ಮಾಡ್ತಾರಂತೆ, ಡೈಲಾಗ್ ಹೇಳ್ತಾರಂತೆ, ಮನೇಲಿ ಟಿ.ವಿ. ಇಲ್ಲ. ಅದಕ್ಕೇ ಡ್ಯಾನ್ಸ್ ನೋಡೋಣ ಅಂತ ಕಾಯ್ತಾ ಇದ್ದೀನಿ’
ಮತದಾರನ ಕಿಲಾಡಿತನಕ್ಕೆ ಬೆರಗಾಗಿ ಪೆಕರ ಮತ್ತೊಂದು ಹಳ್ಳಿಗೆ ತೆರಳಿದ.

ಬಡಮತದಾರ, ಹೊಲ ಉಳುತ್ತಾ, ತನ್ನ ಪಾಡಿಗೆ ತಾನು ಕಾಯಕದಲ್ಲಿ ನಿರತನಾಗಿದ್ದ. ‘ಸ್ವಾಮಿ ಯಾರಿಗೆ ವೋಟ್ ಹಾಕ್ತೀರಿ?, ಯಾರು ಈ ಕ್ಷೇತ್ರದ ಕ್ಯಾಂಡಿಡೇಟ್?’ ಎಂದು ಪೆಕರ ಸಂದರ್ಶನ ಆರಂಭಿಸಿದ.

‘ಯಾರಿಗೆ ಗೊತ್ತು?’ ಮತದಾರ ನಿರಾಸೆಯಿಂದ ಉತ್ತರಿಸಿದ.

‘ಏಕೆ ಈ ನಿರಾಸೆ? ನಿಮ್ಮನ್ನು ಯಾರೂ ಮಾತನಾಡಿಸಿಲ್ಲವಾ? ದುಡ್ಡು ಕೊಡಲಿಲ್ಲವಾ? ಏನಾಯ್ತು?’ ಪೆಕರ ಪೆಕರುಪೆಕರಾಗಿ ಪ್ರಶ್ನಿಸಿದ.
‘ನಮ್ಮ ಊರಿಗೆ ರಸ್ತೆ ಸರಿಯಿಲ್ಲ. ಕಸ ಗುಡಿಸಲ್ಲ, ನಮ್ಮೂರಿನಲ್ಲಿ ಚಿರತೆ ಕಾಟ ಇದೆ. ಎಂ.ಪಿ.ಯವರು ಅದನ್ನು ಓಡಿಸಿಲ್ಲ. ಕುಡಿಯೋಕೆ ನೀರಿಲ್ಲ, ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲ, ಎಂ.ಪಿ. ಆದವರು ಈ ಕಡೆ ಮತ್ತೆ ತಿರುಗಿಯೂ ನೋಡಿಲ್ಲ. ನಾನ್ಯಾಕೆ ಸ್ವಾಮಿ ವೋಟ್ ಹಾಕಬೇಕು? ಮತದಾನವನ್ನೇ ಬಹಿಷ್ಕರಿಸಿಬಿಡ್ತೀವಿ’ ಎಂದು ಮತದಾರ ಆಕ್ರೋಶದಿಂದ ಹೇಳಿದ.

‘ಸ್ವಾತಂತ್ರ್ಯ ಬಂದು ಆರೂವರೆ ದಶಕ ಕಳೀತು. ಯಾರ ಕೆಲಸ ಏನು ಅಂತ ಮತದಾರನಿಗೆ ಇನ್ನೂ ಗೊತ್ತಾಗಲಿಲ್ಲ. ಒಬ್ಬ ಎಂ.ಪಿ. ಎಲ್ಲ ಹಳ್ಳಿಗಳಿಗೂ ಹೋಗಿ ಕಸ ಹೊಡೆಯಲು ಸಾಧ್ಯವೇ?’ ಎಂಬೆಲ್ಲಾ ಚಿಂತನೆಗಳನ್ನು ತಲೆಗೆ ಹಚ್ಚಿಕೊಂಡು ಪೆಕರ ಮತ್ತೊಂದು ಹಳ್ಳಿಗೆ ತೆರಳಿದ.

ಅರಳೀಕಟ್ಟೆಯ ಮೇಲೆ ಮತದಾರನೊಬ್ಬ ಪವಡಿಸಿದ್ದ. ಪೆಕರ ಅವನ ಸಂದರ್ಶನ ಶುರುವಿಟ್ಟುಕೊಂಡ.
‘ಸ್ವಾಮೀ ನಿಮ್ಮ ಮತ ಯಾರಿಗೆ?’

‘ಯಾರಿಗಾಕಿದ್ರೆ ಏನ್ ಬಂತು? ಇಲ್ಲಿ ನಾಲ್ಕು ಜನ ನಿಂತು ವೋಟ್ ಕೇಳ್ತಾ ಇದಾರೆ. ನಾಲ್ಕೂ ಜನ ನಾಲ್ಕು ಲೆವೆಲ್ ಕಳ್ಳರು’ ಮತದಾರನ ಉತ್ತರ ಖಡಕ್ ಆಗಿತ್ತು.

‘ನಾಲ್ಕು ಲೆವೆಲ್ ಕಳ್ಳರು ಅಂದ್ರೆ ಏನು? ಗೊತ್ತಾಗಲಿಲ್ಲವಲ್ಲಾ?’
‘ಅದೇ ಸ್ವಾಮಿ, ತಾಲ್ಲೂಕು ಲೆವೆಲ್ ಕಳ್ಳರು, ಡಿಸ್ಟ್ರಿಕ್ ಲೆವೆಲ್ ಕಳ್ಳರು, ಸ್ಟೇಟ್ ಲೆವೆಲ್ ಕಳ್ಳರು, ಸೆಂಟ್ರಲ್ ಲೆವೆಲ್ ಕಳ್ಳರು. ಎಲ್ರೂ ಫೀಲ್ಡ್‌ನಲ್ಲಿದ್ದಾರೆ’ ಎಂದು ಮತದಾರ ವಿವರಿಸಿದ.

‘ಏನ್ ಹೇಳ್ತಾ ಇದೀರಾ? ಅರ್ಥವೇ ಆಗ್ತಾ ಇಲ್ವಲ್ಲಾ’ ಎಂದು ಪೆಕರ ಕಣ್‌ಕಣ್‌ಬಿಟ್ಟ.

‘ನೀವು ಸಿಟಿ ಜನ, ನಿಮಗೆ ಅರ್ಥವಾಗಲ್ಲ. ಹೇಳ್ತೀನಿ ಕೇಳಿ. ತಾಲ್ಲೂಕ್ ಲೆವೆಲ್ ಕಳ್ಳ ಅಂದ್ರೆ ತಟ್ಟೆ ಲೋಟಾ ಕದಿಯೋನು ಅಂತ, ಡಿಸ್ಟ್ರಿಕ್ ಲೆವೆಲ್ ಕಳ್ಳ ಅಂದ್ರೆ ಕೆರೆ, ಗೋಮಾಳ, ಅರಣ್ಯ ಭೂಮಿ ಕಬಳಿಸಿ ತೆಪ್ಪಗಿರೋನು ಅಂತ. ಸ್ಟೇಟ್ ಲೆವೆಲ್ ಕಳ್ಳ ಅಂದ್ರೆ ಗಣಿ ಅಕ್ರಮ ಮಾಡಿಯೂ ಅರಗಿಸಿಕೊಂಡು ಕೂತಿರೋನು ಅಂತ, ಇನ್ನು ಸೆಂಟ್ರಲ್ ಲೆವೆಲ್ ಕಳ್ಳ ಅಂದ್ರೆ ಭೂಗತ ದೊರೆಗಳ ಸಂಪರ್ಕ ಇಟ್ಟುಕೊಂಡು ದೇಶಾನೇ ಮಾರಿ ಓಡಿ ಹೋಗೋನು ಅಂತಾ...’
ಮತದಾರನ ಚಿಂತನಾ ಲಹರಿ ಕಂಡು ಪೆಕರ ಸುಸ್ತಾದ.
ವೋಟ್ ಅಂದ್ರೆ ಸುಮ್ನೇನ?
ಯಾರ್ ಕೇಳ್ತಾರೆ ನಮ್ಮ ದುಮ್ಮಾನ?
೧೭ ರಂದು ಮತದಾನ
ತೋರಿಸ್ತೀವಿ ನಮ್ ತಾಖತ್‌ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.