ADVERTISEMENT

ಒಂದು ಹನಿಮೂನ್ ಕಥೆ

ಕಲೀಮ್ ಉಲ್ಲಾ
Published 10 ಸೆಪ್ಟೆಂಬರ್ 2014, 19:30 IST
Last Updated 10 ಸೆಪ್ಟೆಂಬರ್ 2014, 19:30 IST
ಒಂದು  ಹನಿಮೂನ್ ಕಥೆ
ಒಂದು ಹನಿಮೂನ್ ಕಥೆ   

ಆತ ಅಪ್ಪಟ ತಾಯಿ ಕರುಳಿನ ಹುಡುಗ. ಅವನಷ್ಟು ಸೂಕ್ಷ್ಮ ಮನಸ್ಸಿನ ಮಕ್ಕಳು ಜೀವನದಲ್ಲಿ ಸಿಗುವುದೇ ಅಪರೂಪ. ಅವನ ನೋಡುವುದೇ ಈ ಕ್ಷಣಕ್ಕೂ ಒಂದು ಸಂತಸ. ನೀರಿನೊಳಗಿನ ಮೀನಿನಂತೆ ಸಂಕೋಚ ಸ್ವಭಾವದವನು. ಹೃದಯವ ಕೈಯಲ್ಲಿಟ್ಟುಕೊಂಡೇ ಓಡಾಡುವವನು. ಸಿಕ್ಕಾಪಟ್ಟೆ ಭಾವುಕ ಮನುಷ್ಯ. ಅವನ ಪ್ರೀತಿಯೋ ಭೂಮಿಗಿಂತ ಭಾರ; ಆತನ ನಡತೆಯಲ್ಲಿರುವ ಗೌರವ ಆಕಾಶಕ್ಕಿಂತ ಅಗಲ. ಅವನಿಗಿರುವಷ್ಟು ಒಳ್ಳೆಯತನ ನನ್ನಲ್ಲಿ ಇಲ್ಲವಲ್ಲ ಎಂದು ನಾನೆಷ್ಟೋ ಸಲ ಹೊಟ್ಟೆಕಿಚ್ಚು ಪಟ್ಟಿದ್ದೇನೆ. ನನ್ನ ಪ್ರೀತಿಯ ಈ ಹುಡುಗನ ಹೆಸರು ಭೈರೇಶ.

ಅವನಿಗೆ ಚಡಪಡಿಸುವಷ್ಟು ಬಡತನವಿತ್ತು. ಮನೆಯಲ್ಲಿ ನೂರಾರು ಕಷ್ಟಗಳು ಹುತ್ತಕಟ್ಟಿ ವಾಸವಾಗಿದ್ದವು. ಮನೆಯ ವಾತಾವರಣ ಓದಿಗಿಂತ ಕೂಲಿ ಕೆಲಸವೇ ಒಳ್ಳೆಯದು ಬೇಗ ಬಂದು ಬಿಡು ಮಗನೇ... ಎಂದು ಕರೆಯುತ್ತಿತ್ತು. ಆತ ಇವೆಲ್ಲವನ್ನೂ ಸವಾಲಾಗಿ ತೆಗೆದುಕೊಂಡ. ಕೂಲಿ ಸ್ಕೂಲು ಎರಡನ್ನೂ ನಿಭಾಯಿಸಿದ. ಶ್ರದ್ಧೆಯಿಂದ ಕಲಿಯತೊಡಗಿದ. ಹಟ ಹಿಡಿದು ಓದಿದ. ಉದ್ಯೋಗ ಸಿಗುವ ಎಲ್ಲಾ ಪರೀಕ್ಷೆಗಳನ್ನು ಬರೆದ. ಅವಕಾಶ ಅವನಿಗಾಗಿ ಕಾಯುತ್ತಿತ್ತು. ಚಿಕ್ಕೋಡಿ ಬಳಿಯ ಹಳ್ಳಿಯಲ್ಲಿನ ಸರ್ಕಾರಿ ಪ್ರೈಮರಿ ಶಾಲೆಯಲ್ಲಿ ಮೇಷ್ಟ್ರು ಕೆಲಸ ಸಿಕ್ಕಿತು.

ಅಪ್ಪ ಅಮ್ಮನ ಬಿಟ್ಟು ಅಷ್ಟು ದೂರ ಹೇಗೆ ಹೋಗುವುದೆಂದು ಕೊರಗಿದ. ಅಮ್ಮನ ಸಾಕಬೇಕು. ಅಪ್ಪನಿಗೆ ನೆರವಾಗಿ ಮನೆಯಲ್ಲಿರಬೇಕು ಎಂಬ ಹಂಬಲ ಅವನಲ್ಲಿ ತುಡಿಯುತ್ತಿತ್ತು. ಕೆಲಸ ಸಿಕ್ಕರೆ ಸಾಕು ತಮ್ಮ ಹಳ್ಳಿಯನ್ನು, ಮುದಿ ಅಪ್ಪ ಅವ್ವನನ್ನು ಬಿಟ್ಟು ಪುರ್ರಂತ ಹಾರಿ ಹೋಗಲು ಹವಣಿಸುವ ಈಗಿನ ಹುಡುಗರ ನಡುವೆ ಇವನೊಬ್ಬ ಮಾತ್ರ ವಿಶಿಷ್ಟವಾಗಿ ಕಾಣತೊಡಗಿದ. ಕಷ್ಟದಲ್ಲಿರೋ ಅಪ್ಪ ಅಮ್ಮನ ಹೆಂಗೆ ಬಿಟ್ಟು ಹೋಗಲಿ. ನಾನೊಬ್ಬ ದೂರ ಹೋಗಿ ಸುಖವಾಗಿರ್ತೇನೆ ನಿಜ. ಆದರೆ, ನನಗಾಗಿ ಜೀವ ತೇದ ಅವೆರಡು ಅದೇ ಗುಡ್ಲು ಮನೆಯಲ್ಲಿ ನರಳ್ತಾನೇ ಇರ್ತಾವಲ್ಲ ಸಾರ್ ಏನ್ಮಾಡೋದು? ಅವರಿಗೆ ಒಳ್ಳೇ ಸುಖ ನೆಮ್ಮದಿ ಕೊಡೋದು ಹೆಂಗ್ಹೇಳಿ ಎಂದು ಚಿಂತಿಸತೊಡಗಿದ.

ಮೊದಲು ನೀನು ಹೋಗಿ ಕೆಲಸಕ್ಕೆ ಹಾಜರಾಗು. ಸ್ವಲ್ಪ ದಿನದಲ್ಲೇ  ಸೆಟ್ಲಾಕ್ತೀಯ ಅಲ್ವಾ? ಆಮೇಲೆ ಬಂದು ಅವರನ್ನು ಕರ್ಕೊಂಡು ಹೋಗಿ ನಿನ್ನ ಹತ್ರಾನೆ ಇಟ್ಕೊಂಡು ಚೆನ್ನಾಗಿ ನೋಡ್ಕೊಬಹುದಲ್ಲ. ನೀನೋ ದೇಶಾನೇ ಬಿಟ್ಟು ಹೋಗೋನ್ ಥರ ಗೋಳಾಡ್ತಾ ಇದ್ದೀಯ. ಚಿಕ್ಕೋಡಿ ಏನ್ ಅಮೇರಿಕಾದಲ್ಲಿ ಇದಿಯಾ?  ಎಂದು ಸಮಾಧಾನ ಹೇಳಿದೆ. ನೀವು ಹೇಳಿದಂಗೆ ಆಗಿದ್ರೆ ಪರ್ವಾಗಿಲ್ಲ ಸಾರ್. ಆ ಮುದ್ಕ ಮುದ್ಕಿ ಈ ಹಳ್ಳಿ ಬಿಟ್ಟು ಎಲ್ಲೂ ಬರಲ್ಲ ಅಂತ ಹಟ ಹಿಡಿದಿದ್ದಾವೆ. ಅದೇ ನನ್ನ ಚಿಂತೆ ಅಂದ. ಮುಂದೆ ಎಲ್ಲಾ ಸರಿ ಹೋಗುತ್ತೆ. ಮೊದ್ಲು ನೀನು ಹೋಗಿ ಕೆಲಸಕ್ಕೆ ಸೇರು ಎಂದು ಹೇಳಿ ಕಳಿಸಿದೆ.

ಎರಡು ವರ್ಷ ದುಡಿದ ದುಡ್ಡನ್ನೆಲ್ಲಾ ತಂದು ಮನೆಗೆ ಹಾಕಿದ. ಗುಡಿಸಲು ಮುರಿದು ಮನೆ ಕಟ್ಟಿದ. ಅವರಿಗೆ ಬೇಕಾದ ಎಲ್ಲವನ್ನೂ ಮಾಡುತ್ತಾ ಓಡಾಡುತ್ತಲೇ ಇದ್ದ. ಅಷ್ಟರಲ್ಲಿ ಅವನ ಮದುವೆಯ ಮಾತು ಬಂತು. ಅಪ್ಪ ಹಲವಾರು ಕಡೆ ಸಂಬಂಧ ತಲಾಶ್ ಮಾಡತೊಡಗಿದರು. ಭೈರೇಶ ಪ್ರೇಮದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ.

ಆತ ತನ್ನ ಪ್ರೇಮವನ್ನು ಮೊದಲು ನನ್ನ ಬಳಿ ಹೇಳಿಕೊಳ್ಳಬೇಕಿತ್ತು. ಅದಕ್ಕಾಗಿ ಬಹಳ ಶ್ರಮಪಟ್ಟ. ಅವನ ನುಲಿಯುವಿಕೆ, ತೊಳಲಾಟಗಳಲ್ಲೇ ನನಗದು ಅರ್ಥವಾಗಿ ಹೋಯಿತು. ಸಂಕೋಚವಿಲ್ಲದೆ ಹೇಳಿಕೋ ಭೈರೇಶ ಎಂದೆ. ಏನೋ ತಪ್ಪು ಮಾಡಿದವನಂತೆ ತನ್ನ ಪ್ರೀತಿಯ ಹೇಳಿಕೊಂಡ. ಹುಡುಗಿ ಒಪ್ಪಿದ್ದಾಳೆ. ನಮ್ಮ ಮನೆಯವರೂ ಒಪ್ಪಿದ್ದಾರೆ. ಆದ್ರೆ ಹುಡುಗಿ ತಾಯಿ ಒಪ್ಪುತ್ತಿಲ್ಲ. ಹೋಗಿ ಕೇಳಿದರೆ ಆಗಲ್ಲ ಅಂತಿದ್ದಾರೆ. ಅವಳಿಗೆ ಬೇರೆ ಕಡೆ ವರನ ಹುಡುಕಿದ್ದಾರಂತೆ. ಅವಳಂದ್ರೆ ನನಗೆ ಪ್ರಾಣ ಎಂದು ಕಣ್ಣೀರು ಹಾಕಿದ.

ನಿನ್ನಷ್ಟು ಒಳ್ಳೆ ಹುಡುಗ ಸಿಗೋದು ಅವರ ಪುಣ್ಯ ಕಣೋ. ನಾನು ಬಂದು ಬೇಕಾದರೆ ಮಾತಾಡ್ತೀನಿ ಎಂದೆ. ಬ್ಯಾಡ ಸಾರ್ ಅವಳಮ್ಮ ಬಜಾರಿ ಹೆಂಗಸು ನಿಮಗೇನಾದ್ರು ಅಂದುಬಿಟ್ರೆ ನನಗೆ ಕಷ್ಟವಾಗುತ್ತೆ ಅಂದ. ಅನ್ಲಿ ಬಿಡಯ್ಯ ಏನಾಗುತ್ತೆ ನೋಡೋಣ?. ನಿನಗಾಗಿ ನಾನಷ್ಟು ಮಾಡದಿದ್ದರೆ ಹ್ಯಾಗೆ ಎಂದು ಧೈರ್ಯ ತುಂಬಿದೆ. ಅಂಥ ಸಂದರ್ಭ ಬರಲಿ ಹೇಳ್ತೀನಿ ಸಾರ್. ಸದ್ಯಕ್ಕೆ ನನ್ನ ಪ್ರಯತ್ನ ಮಾಡ್ತಾನೆ ಇರ್ತೀನಿ ಎಂದ. ನಿನ್ನ ಜೊತೆ ನಾನಿದ್ದೇನೆ ಹೆದರಬೇಡ ಎಂದು ಪ್ರೋತ್ಸಾಹದ ಮಾತನಾಡಿ ಪ್ರೇಮಿಯೊಬ್ಬನಿಗೆ ತುಂಬಬಹುದಾದ ಎಲ್ಲಾ ಪ್ರೋತ್ಸಾಹದ ಇಂಧನವನ್ನು ತುಂಬಿದೆ.

ಭೈರೇಶನಷ್ಟೇ ಮಾನವೀಯತೆಯ ಮತ್ತೊಬ್ಬ ಶಿಷ್ಯ ನನಗೊಬ್ಬನಿದ್ದಾನೆ. ಅವನ ಹೆಸರು ಪರಮೇಶ. ಅವನೂ ಬಡತನವನ್ನು ಹಿಮ್ಮೆಟ್ಟಿಸಿ ಬೆಳೆದವನು. ಆತ ಮತ್ತು ಭೈರೇಶ ಇಬ್ಬರು ಖಾಸ ಗೆಳೆಯರು. ಪರಮೇಶನಿಗೆ ನಾನು ನೀನು ಅವನ ಪ್ರೇಮಕ್ಕೆ ಸಹಕಾರ ಕೊಡಬೇಕು ಕಣೋ, ಎಂದು ಹೇಳಿದೆ. ಅವನೂ ಆಯ್ತೆಂದು ಒಪ್ಪಿದ. ಇಬ್ಬರು ಸೇರಿ ಅದೇನೇನೋ ಭಂಡ ಧೈರ್ಯ ಮಾಡಿ ಆ ಹುಡುಗಿಯ ತಂದೆಗೆ ಒಪ್ಪಿಸಿಬಿಟ್ಟರು. ಹುಡುಗಿಯ ತಾಯಿ ಮಾತ್ರ ಚಂಡಿಯಾಗಿ ಹಟ ಹಿಡಿದಳು.

ಭೈರೇಶನ ಹಳ್ಳಿಯ ಜನರನ್ನು ಪರಮೇಶ ಮದುವೆಗೆ ಒಪ್ಪಿಸಿದ. ಅವರ ಅನುಮತಿ ಪಡೆದು ಒಂದು ದಿನ ಸರ್ರಂತ ಹೋದವನೇ ಆ ಹುಡುಗಿಯನ್ನು ಕರೆದುಕೊಂಡು ಬಂದೇ ಬಿಟ್ಟ. ಮಾರನೆಯ ದಿನವೇ ನನಗೆ ಮದುವೆ ಇದೆ ಬನ್ನಿ ಎಂಬ ಕರೆ ಬಂತು. ನನಗೋ ಆಶ್ಚರ್ಯ! ಮತ್ತು ಆಘಾತ. ಎಲ್ಲಿ ಮಾರಾಮಾರಿ ನಡೆಯುವುದೋ ಎಂದು ಹೆದರಿಕೊಂಡೇ ಮದುವೆಗೆ ಓಡಿದೆ.

ಭೈರೇಶ ಪರಮೇಶ ಎಲ್ಲಾ ತಯಾರಿ ಮಾಡಿಕೊಂಡಿದ್ದರು. ಅಲ್ಲಲ್ಲಿ ಗುಸುಗುಸುಗಳು ಸಣ್ಣ ಜಗಳಗಳು ನಡೆಯುತ್ತಲೇ ಇದ್ದವು. ಹುಡುಗಿಯ ತಾಯಿ ಗಂಟು ಮುಖ ಮಾಡಿಕೊಂಡು ಮದುವೆಗೆ ಬಂದವರ ಮೇಲೆಲ್ಲಾ ಕೆಂಡ ಕಾರುತ್ತಿದ್ದಳು. ಆಕೆಯ ಮಾತು ಕೇಳುವವರೇ ಅಲ್ಲಿ ಯಾರೂ ಇರಲಿಲ್ಲ. ನೋಡು ನೋಡುತ್ತಿದ್ದಂತೆ ಮದುವೆ ನಡೆದೇ ಹೋಯಿತು. ಹೆಣ್ಣಿನ ಕಡೆಯವರು ಭೈರೇಶನ ದೂರದ ರಕ್ತ ಸಂಬಂಧಿಗಳೇ ಆಗಿದ್ದರಿಂದ ಅಂಥ ಕೋಲಾಹಲವೇನೂ ನಡೆಯಲಿಲ್ಲ.

ಮದುವೆ ಮುಗಿದ ಮೇಲೆ ಎಲ್ಲಾ ಹನಿಮೂನಿಗೆ ಮೈಸೂರು, ಊಟಿ, ಕೊಡೈಕೆನಾಲ್ ಎಂದರೆ ನಮ್ಮ ಭೈರೇಶ  ಧರ್ಮಸ್ಥಳಕ್ಕೆ ಹೋಗ್ತೀನಿ ಸಾರ್ ಎಂದು ಹೇಳಿ ಆಶ್ಚರ್ಯ ಮೂಡಿಸಿದ. ಕೇಳಿದರೆ ಇವಳು ನಮ್ಮ ಮದ್ವೆ ಆದ್ರೆ ಬರ್ತೀನಂತ ಮಂಜುನಾಥ ಸ್ವಾಮಿಗೆ ಹರಕೆ ಮಾಡ್ಕೊಂಡಿದ್ಲಂತೆ ಸಾರ್ ಎಂದು ಹೆಂಡತಿಯ ಕಡೆ ಕೈ ತೋರಿಸಿದ. ಅವನ ಕ್ಲಾಸ್‌ಮೇಟ್‌ಗಳು ಹೆಂಡ್ತಿ ಈಗ್ಲೆ ತಲೆಬೋಳ್ಸೋದಕ್ಕೆ ನಿನ್ನ ರೆಡಿ ಮಾಡಿದ್ದಾಳಲ್ಲಪ್ಪ ಎಂದು ಜೋಕ್ ಮಾಡಿ ನಕ್ಕರು. ನಾನು ಆಯ್ತು ಹೋಗಿ ಬಾ ಎಂದು ಹೇಳಿ ಹೊರಟು ಬಂದೆ. ಎರಡು ದಿನವಾದ ಮೇಲೆ ಧರ್ಮಸ್ಥಳದಿಂದ ಭೈರೇಶ ಆತಂಕದಿಂದ ನನಗೆ ಫೋನು ಮಾಡಿದ. ನಾನು ಗಾಬರಿಯಲ್ಲೇ ಏನಾಯಿತೋ ಎಂದು ಕೇಳಿದೆ. ಅದಕ್ಕವನು ಸಾರ್ ಭಾರಿ ಎಡವಟ್ಟಾಗಿದೆ. ಸದ್ಯ ನನಗೆ ಊರಿಗೆ ಬರೋಕೆ ದುಡ್ಡೇ ಇಲ್ಲ ಎಂದ. ನಾನು ತಕ್ಷಣ ನಿನಗೆ ದುಡ್ಡು  ಕಳಿಸುತ್ತೇನೆ. ನಿನ್ನ ಅಕೌಂಟ್ ನಂಬರ್ ಕೊಡು, ಅದಕ್ಕೂ ಮೊದಲು ಏನಾಯಿತು ಹೇಳು ಎಂದು ಆತಂಕದಿಂದ ವಿಚಾರಿಸಿದೆ. ಬಂದು ಹೇಳುತ್ತೀನಿ ಎಂದು ಫೋನಿಟ್ಟು ಬಿಟ್ಟ.

ನನಗೆ ಅಲ್ಲಿ ಏನಾಗಿದೆಯೋ ಏನೋ ಎಂಬ ಕಳವಳ ಶುರುವಾಯಿತು. ಅವನು ತನ್ನ ಮೊಬೈಲ್ ಫೋನನ್ನು ಕಳೆದುಕೊಂಡು ಕಾಯಿನ್ ಬಾಕ್ಸ್‌ನಿಂದ ಮಾತಾಡಿದ್ದ. ನೇರ ನನ್ನ ಮನೆಗೇ ಬಾ. ಎಷ್ಟೊತ್ತಾದ್ರೂ ಆಗಲಿ ಕಾಯ್ತೀನಿ ಎಂದು ಹೇಳಿ ಕಾಯುತ್ತಲೇ ಇದ್ದೆ. ನನ್ನ ತಲೆಯಲ್ಲಿ ನೂರಾರು ಕಲ್ಪನೆಗಳು ಮೂಡಿ ಹೋದವು. ಹುಡುಗಿ ಕಡೆಯವರು ಬಂದು ಇವನಿಗೇನಾದ್ರೂ ಮಾಡಿ ಬಿಟ್ಟರೋ? ಏನೋ ಎನ್ನುವುದರಿಂದ ಹಿಡಿದು ಹತ್ತು ಹಲವಾರು ಭಯಾನಕ ಕತೆಗಳು ಮೈ ಮೂಡಿದವು.

ಅರ್ಧ ರಾತ್ರಿಯಲ್ಲಿ ಹೆಂಡತಿ ಕರೆದುಕೊಂಡು, ಲಗೇಜ್ ಕಳೆದುಕೊಂಡು ಸಪ್ಪೆಮುಖ ಮಾಡಿಕೊಂಡು ಬಂದ ಭೈರೇಶ ಥೂ ಈ ಹನಿಮೂನ್ ಸವಾಸನೇ ಅಲ್ಲ ಸಾರ್ ಎಂದ. ಏನಾಯಿತೋ ಎಂದೆ. ಇವಳು ನೇತ್ರಾವತಿ ನದೀಲಿ ಸ್ನಾನ ಮಾಡೋಕೆ ಹೋಗಿದ್ದಾಗ ನಾನು ಬಟ್ಟೆ ಬ್ಯಾಗು ಕಾಯ್ಕೊಂಡು ಕೂತಿದ್ದೆ ಸಾರ್. ಯಾವನೋ ಒಳ್ಳೆ ಟಿಪ್ ಟಾಪಾಗಿ ಬಂದು ಮಾತಾಡ್ಸಿದ. ನಾನೂ ಶಿವಮೊಗ್ಗದಲ್ಲೇ ಓದಿದ್ದು ಇಲ್ಲಿ ಡಾಕ್ಟರಾಗಿದ್ದೇನೆ ಅಂತಂದು ಪರಿಚಯ ಮಾಡಿಕೊಂಡ.

ನಾನೂ ನಮ್ಮೂರೋನಲ್ವ ಅಂತ ಸಂತೋಷದಿಂದ ಮಾತಾಡಿಸಿದೆ. ನಾನು ಬ್ಯಾಡ ಅಂದ್ರು ಇರ್ರಿ ಟೀ ತರ್ತೀನಿ ಕುಡಿಯೋಣ ಅಂದ. ನಾನು ಬ್ಯಾಡಂದ್ರೂ ಕೇಳದೆ ಟೀ ತಂದು ಕುಡಿಸಿದ. ಟೀ ಕುಡಿತಾ ಅವನ ಜೊತೆ  ಮಾತಾಡುತ್ತಾ ಇದ್ದವನಿಗೆ ಏನಾಯಿತೋ ಫಕ್ಕನೆ ತಿಳೀಲೇ ಇಲ್ಲ. ತಲೆ ಸುತ್ತಿದಂಗ್ಹಾಗಿ ಹಂಗೇ ಯಮನಿದ್ದೆ ಸುತ್ಕೊಂಡು ಬಿಡ್ತು. ಪ್ರಜ್ಞೆ ತಪ್ಪಿದಂತೆ ಮಲಗಿಬಿಟ್ಟೆ. ಇವಳು ಬಂದು ಕಷ್ಟಪಟ್ಟು ಎಚ್ಚರ ಮಾಡಿದಾಗ ನನಗೆ ಬುದ್ಧಿ ತಿಳಿದಿದ್ದು. ನೋಡಿದರೆ ನನ್ಮಗ ನಮ್ಮ ಬ್ಯಾಗು, ಮೊಬೈಲು, ನನ್ನ ಜೇಬಲ್ಲಿದ್ದ ದುಡ್ಡು ಎಲ್ಲಾ ಎಗರಿಸಿಕೊಂಡು ಹೋಗಿದ್ದ. ಇವಳ ಮಾತು ಕೇಳಿ ಅಲ್ಲಿಗೆ ಹನಿಮೂನಿಗೆ ಹೋಗಿ ಎಲ್ಲಾ ಬೋಳಿಸಿಕೊಂಡು ಬಂದಂಗಾಯ್ತು.

ಅದೇನು ಮಾಯಾವಿ ಔಷಧಿ ಹಾಕಿದ್ದನೋ ಇನ್ನೂ ಮಂಪರು ಎಳೀತಾನೆ ಇದೆ ಎಂದು ಕಣ್ಣಿನಲ್ಲಿ ಬೆಲ್ಲ ತೂಗತೊಡಗಿದ. ಭೈರೇಶನ ಮುಗ್ಧತೆ, ಒಳ್ಳೆಯತನಗಳೇ ಅವನಿಗೆ ಮುಳುವಾಗಿದ್ದವು. ಸಣ್ಣ ವ್ಯವಹಾರಿಕ ಜ್ಞಾನವೂ ಇಲ್ಲದ, ಜಗತ್ತಿನ ಬಗ್ಗೆ ಸಣ್ಣ ಗುಮಾನಿಯೂ ಇರದ, ಎಲ್ಲವನ್ನೂ, ಎಲ್ಲರನ್ನೂ, ಹೃದಯದ ಮೂಲಕವೇ ಅಳತೆ ಮಾಡಿ ನೋಡುವ, ಪ್ರಪಂಚದಲ್ಲಿ ಇರೋರೆಲ್ಲಾ ಒಳ್ಳೆಯವರು ಎಂದು ಗಾಢವಾಗಿ ನಂಬುವ ಅವನ ಭೋಳೇತನ ಈ ಲೋಕಕ್ಕೆ ಅಗತ್ಯವಿದೆಯೇ? ಎಂದು ನಾನು ಯೋಚಿಸತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.