ADVERTISEMENT

ನಮ್ಮ ಮೊದಲಿಯಾರ್ ಮೇಷ್ಟ್ರು

ಕಲೀಮ್ ಉಲ್ಲಾ
Published 24 ಡಿಸೆಂಬರ್ 2014, 19:30 IST
Last Updated 24 ಡಿಸೆಂಬರ್ 2014, 19:30 IST

ಸುಣ್ಣ ಬಣ್ಣ ಕಾಣದ ಲಟಾರಿ ಶಾಲೆಗಳಿಂದ ಎದ್ದು ಬಂದಿದ್ದ ನನ್ನಂಥವರಿಗೆ ಶಿವಮೊಗ್ಗದ ಡಿ.ವಿ.ಎಸ್. ಕಾಲೇಜ್ ಒಂದು ಫೈವ್ ಸ್ಟಾರ್ ಹೋಟೆಲ್ಲಿನಂತೆ ಕಾಣತೊಡಗಿತು. ‘ಇಲ್ಲಿ ಸೀಟ್ ಸಿಕ್ಕಿದ್ದೇ ನಿನ್ನ ಪುಣ್ಯ ಕಣಪ್ಪ’ ಎಂದು ಅಪ್ಪ ಸಂಭ್ರಮಪಟ್ಟರು. ಸಂಕೋಚ, ಭಯ, ಕೀಳರಿಮೆಗಳನ್ನೆಲ್ಲಾ ಹಳ್ಳಿಯಿಂದ ಹೊತ್ತುಕೊಂಡು ಬಂದಿದ್ದ ನನಗೆ ಇಲ್ಲಿರುವುದು ಹೇಗೋ? ಏನೋ? ಎಂಬ ತಳಮಳ ಶುರುವಾಗಿ ಬಿಟ್ಟಿತು. ಮೇಲಾಗಿ ನನ್ನ ಅಣ್ಣನೂ ಅದೇ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿದ್ದ. ಹೀಗಾಗಿ ನಾನು ಕಮಕ್ ಕಿಮಕ್ ಎನ್ನುವಂತಿರಲಿಲ್ಲ. ಬಾಲ ಮುಚ್ಚಿಟ್ಟುಕೊಂಡು ಎರಡು ವರ್ಷ ಪೂರೈಸಬೇಕಿತ್ತು. ಅಲ್ಲಿದ್ದವರು ಶಿಸ್ತಿಗೆ, ದಕ್ಷತೆಗೆ ಹೆಸರಾಗಿದ್ದ ಪ್ರಿನ್ಸಿಪಾಲ್ ವಿ. ದೇವೇಂದ್ರ. ಅದೇನೋ ಅವರನ್ನು ನೋಡಿದರೆ ಮೈ ಜುಮ್ಮೆನ್ನುತ್ತಿತ್ತು. ಸ್ವತಂತ್ರ ಹಕ್ಕಿಗಳಂತೆ ಸರ್ಕಾರಿ ಶಾಲೆಯಲ್ಲಿ ನಲಿದಾಡಿಕೊಂಡಿದ್ದ ನಮಗೆ ಈ ಕಾಲೇಜು ಒಂದು ಸುಂದರ ಪಂಜರದಂತೆ ಕಾಣತೊಡಗಿತು.

ಅದು ಕಾಲೇಜಿನಲ್ಲಿ ಮೊದಲ ದಿವಸ. ಮೊದಲ ತರಗತಿಗೆ ಯಾರು ಬರಬಹುದೆಂಬ ಕಾತರದಿಂದ ಕಾಯುತ್ತಿದ್ದೆವು. ಅವತ್ತು ಮಿಲಿಟರಿ ಅಧಿಕಾರಿಯಂತೆ ಇಸ್ತ್ರಿ ಮಾಡಿದ ಗರಿಗರಿ ಬಟ್ಟೆ ಹಾಕಿಕೊಂಡ ಉಪನ್ಯಾಸಕರೊಬ್ಬರು ಬಂದರು. ತಲೆಯ ಮೇಲೆ ಸಿಖ್ಖರಂತೆ ಟೋಪಿ ಧರಿಸಿದ್ದರು. ತೆಳುಗಡ್ಡ ಬಿಟ್ಟಿದ್ದರು. ಚೂಪಾದ ಕಣ್ಣಿನ, ತುಂಟ ನಗೆ ಮುಖದ ಇವರು ಬಲು ಸ್ಟ್ರಿಕ್ಟ್ ಮೇಷ್ಟ್ರೇ ಇರಬೇಕೆಂದು ನಾವು ಭಾವಿಸಿಕೊಂಡೆವು. ಸುಂದರ ಮೈ ಬಣ್ಣದ ಇವರು ಉತ್ತರ ಭಾರತದ ಕಡೆಯವರೇ ಇರಬಹುದೆಂದು ನಾವು ತೀರ್ಮಾನಿಸಿಕೊಂಡೆವು.

‘ನನ್ನ ಹೆಸರು ವೆಂಕಟೇಶ್ ಮೊದಲಿಯರ್. ಗೆಳೆಯರು ಪ್ರೀತಿಯಿಂದ ನನಗೆ ವೆಂಕ ಅಂತಾರೆ. ನನ್ನ ಟೋಪಿ ನೋಡಿ ನೀವು ಮನಸ್ಸಿನಲ್ಲಿ ಏನೇನೋ ತರಲೆ ಲೆಕ್ಕಾಚಾರ ಹಾಕ್ಕೊಂಡಿರ್ತೀರಾ. ಇವನ್ಯಾರೋ ಸಿಖ್ಖರವನೋ? ನೇಪಾಳದವನೋ ಅಂದ್ಕೊಂಡಿರ್ತೀರಾ? ಹಂಗೇನಿಲ್ಲ ಕಣ್ರೋ. ನಾನು ಅಪ್ಪಟ ಕರ್ನಾಟಕದವನು. ನನ್ನ ಮಾತೃ ಭಾಷೆ ತಮಿಳು. ಇದಿಷ್ಟು ನನ್ನ ಹಿಸ್ಟರಿ. ನಿಮಗೆ ನಾನು ಪಾಠ ಮಾಡೊ ಸಬ್ಜೆಕ್ಟೂ ಹಿಸ್ಟರಿ. ಅದಕ್ಕೂ ಮೊದಲು ಒಬ್ಬೊಬ್ಬರಾಗಿ ನಿಮ್ಮ ಹಿಸ್ಟರಿ ಹೇಳಿ’ ಎಂದರು. ಹುಡುಗರು ಉಗುಳು ನುಂಗುತ್ತಾ, ನಿಲ್ಲಲು ತಡವರಿಸುತ್ತಾ, ಹೇಳಲು ಸಂಕೋಚ ಪಡುತ್ತಿದ್ದರು. ಆಗ ‘ಧೈರ್ಯವಾಗಿ ಹೇಳ್ರಪ್ಪ. ಹೆದರಬೇಡಿ. ನಾನೇನು ನಿಮ್ಮನ್ನು ನುಂಗು ಹಾಕೋ ಭೂತದ ಥರ ಇದ್ದೀನಾ’ ಎಂದು ಹೇಳಿ ಎಲ್ಲರನ್ನೂ ಒಮ್ಮೆ ನಗಿಸಿ ಹಗುರಾಗಿಸಿದರು. ಬಲು ಕಠಿಣ ಗುರುಗಳೇ ಇರಬೇಕೆಂದು ತಪ್ಪಾಗಿ ಭಾವಿಸಿಕೊಂಡಿದ್ದ ನಮಗೆಲ್ಲಾ ಆಗ ಒಂದಿಷ್ಟು ನಿರಾಳವಾಯಿತು.

ತಮ್ಮ ಜೀವನದ ಕೆಲ ಫಜೀತಿ ಪ್ರಸಂಗಗಳನ್ನು ಹೇಳಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದರು. ಬಡತನದಿಂದ, ಹಳ್ಳಿಯಿಂದ, ದುರ್ಬಲ ವರ್ಗದಿಂದ ಬಂದ ಮಕ್ಕಳು ನೀವು. ಕನ್ನಡ ಮಾಧ್ಯಮದವರೆಂದು ಅಂಜಬೇಡಿ. ಇನ್ಮುಂದೆ ಇಲ್ಲಿ ಧೈರ್ಯವಾಗಿರಿ, ಶಿಸ್ತಿನಿಂದಿರಿ. ಇಷ್ಟಪಟ್ಟು ಕಲಿಯಿರಿ. ನಿಮ್ಮೊಳಗಿನ ಕಷ್ಟಗಳು ಏನೇ ಇದ್ದರೂ ಅದನ್ನು ನನ್ನ ಹತ್ರ ಹೇಳ್ಕೊಳಿ. ನನ್ನ ಕೈಲಾದ ಸಹಾಯ ಮಾಡ್ತೀನಿ. ಬೀದಿ ಬದಿಯಲ್ಲಿ ಕಡ್ಲೆಕಾಯಿ ಮಾರಿದೋನು, ಪೇಪರ್ ಹಾಕಿ, ಸಿನಿಮಾ ಟಾಕೀಸ್‌ನಲ್ಲಿ ಕಸಗುಡಿಸಿ  ಛಲದಿಂದ ಓದಿದವನು ಒಂದು ಉನ್ನತ ಸ್ಥಾನಕ್ಕೆ ಬರಬಹುದು ಅನ್ನೋದಕ್ಕೆ ನಾನೇ ಉದಾಹರಣೆ ಕಣ್ರಯ್ಯ. ಜೀವನಾನ ಛಾಲೆಂಜಾಗಿ ಎದುರಿಸಬೇಕು ಎಂದು ಹೇಳುತ್ತಲೇ ನಮ್ಮೆಲ್ಲರ ಮನಸ್ಸಿಗೆ ತೀರಾ ಹತ್ತಿರ ಬಂದು ನಿಂತರು. ನಮ್ಮೊಳಗಿದ್ದ ಅಳುಕು, ಅಧೈರ್ಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡ ಒಬ್ಬ ಆದರ್ಶ ಗೆಳೆಯನೇ ನಮಗೆ ಸಿಕ್ಕಂತಾಯಿತು.
  
ಮೊದಲಿಯಾರ್ ಪಾಠಕ್ಕೆ, ಅವರ ಮಾತಿನ ಮೋಡಿಗೆ ನಾವೆಲ್ಲಾ ಫಿದಾ ಆಗಿ ಹೋಗಿದ್ದೆವು. ಅವರ ಒಂದೇ ಒಂದು ಕ್ಲಾಸನ್ನೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲ. ನಕ್ಕು ನಕ್ಕು ಸಾಕಾಗುವಷ್ಟು ಹಾಸ್ಯ ಪ್ರಸಂಗಗಳನ್ನು ಪಾಠದ ಜತೆ ಜತೆಗೆ ಹೇಳುತ್ತಿದ್ದರು. ಅವರು ಜೋಕ್ ಹೇಳುವ ರೀತಿಯೇ ವಿಶಿಷ್ಟವಾಗಿತ್ತು. ಅವರ ಕಣ್ಣುಗಳ ಚಲನೆಯಲ್ಲೇ ಒಂದು  ಅಭಿನಯವಿರುತ್ತಿತ್ತು.

ವಿಶೇಷವೆಂದರೆ ಅವರು ಕೈಯಲ್ಲಿ ಒಂದು ದಿನವೂ ಚಾಕ್‌ಪೀಸ್ ಹಿಡಿಯಲಿಲ್ಲ. ಪುಸ್ತಕ ತರಲಿಲ್ಲ. ಕೈ ಬೀಸಿಕೊಂಡು ಬಂದು ನಿಂತರೆ ಮುಗಿಯಿತು. ಒಳ್ಳೇ ಪಾಠ ಮಾಡಿ, ಪರ್ಫೆಕ್ಟ್ ನೋಟ್ಸ್ ಬರೆಸಿಬಿಡುತ್ತಿದ್ದರು. ಪ್ರತಿಸಲ ‘ಅಯ್ಯೋ ಇಷ್ಟು ಬೇಗ ಇವರ ಪಿರಿಯೆಡ್ ಮುಗೀತಲ್ಲ’ ಎಂದು ಕೊರಗುತ್ತಿದ್ದೆವು. ಮತ್ತೆ ಅವರ ಕ್ಲಾಸ್‌ಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದೆವು.

ಮೇಷ್ಟ್ರು ಮೊದಲಿಯಾರ್ ಸ್ಪಷ್ಟ ವಿಚಾರವಂತರು. ಸಮಾಜದ ಬಗ್ಗೆ ಅತೀವ ಕಳಕಳಿ, ಕಾಳಜಿ ಹೊಂದಿದ್ದವರು. ಯುವಕರಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ನಂಬಿದವರು. ದೇವರು, ಧರ್ಮಗಳಿಗಿಂತ ಮಾನವೀಯತೆ, ಅಂತಃಕರಣ, ಸಮಾನತೆಗಳೇ ಮುಖ್ಯವೆಂದು ಭಾವಿಸಿದ್ದವರು. ಹೀಗಾಗಿ ಆ ಬೀಜಗಳನ್ನೆಲ್ಲಾ ನಮ್ಮೆದೆಯೊಳಗೆ ಬಿತ್ತುತ್ತಾ ಹೋದರು.

ರಕ್ತದಾನ ಮಾಡುವಂತೆ ಪ್ರೇರೇಪಿಸಿದರು. ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಕಷ್ಟದಲ್ಲಿರುವ ಜನರನ್ನು ನೋಡಿ ನಿಮ್ಮ ಕೈಲಾದ ಸಹಾಯ ಮಾಡಿ ಬನ್ನಿ ಅನ್ನುತ್ತಿದ್ದರು. ತುರ್ತು ರಕ್ತದ ಅಗತ್ಯ ಇದ್ದವರು ಕಾಲೇಜಿನ ಹತ್ರ ಬಂದರೆ ‘ಜಾತಿ, ಧರ್ಮ ಏನೂ ಕೇಳಬೇಡಿ. ರಕ್ತ ಕೊಟ್ಟು ಜೀವ ಉಳಿಸಿ. ತೀರಾ ಬಡವರಾಗಿದ್ರೆ ಒಂದಿಷ್ಟು ಹಣದ ವ್ಯವಸ್ಥೆ ಮಾಡೋಣ. ಅದೇನೋ ಕಷ್ಟದಲ್ಲಿರೋರನ್ನ ಕಂಡರೆ ನನಗೆ ಹೊಟ್ಟೆ ಉರಿಯುತ್ತಪ್ಪ. ಬದುಕಿರುವಷ್ಟೂ ದಿನ ಹತ್ತು ಜನರಿಗೆ ಒಳ್ಳೇದು ಮಾಡ್ಬೇಕು. ಕಣ್ಣೀರು ಯಾರಾದಾದರೂ ಆಗಿರಲಿ, ತಕ್ಷಣ ಒರೆಸುವ ಕೈ ನಮ್ಮದಾಗಿರಬೇಕು. ಹಸಿದವನ ಹತ್ತು ತುತ್ತು ನಮ್ಮ ತಟ್ಟೆಯಲ್ಲಿರುತ್ತೆ ಕಣ್ರೋ ಅದನ್ನ ಮರೀಬಾರದು’ ಎಂದು ಸದಾ ಹೇಳುತ್ತಿದ್ದರು.

ಮುಂದೊಂದು ದಿನ ಅದೇ ಕಾಲೇಜಿನ ಪ್ರಿನ್ಸಿಪಾಲರಾದರು. ಆಗಲೂ ವಿದ್ಯಾರ್ಥಿಗಳ ಜತೆ ಗೆಳೆಯನಾಗಿ ಬಾಳುವ ಅವರ ಒಳ್ಳೇಗುಣ ಹೋಗಲಿಲ್ಲ. ಅಟೆಂಡರ್‌ಗಳ ಭುಜದ ಮೇಲೆ ಕೈ ಹಾಕಿ ಆತ್ಮೀಯವಾಗಿ ಮಾತಾಡುವ ಆ ದಿನಗಳನ್ನು ಅವರು ಮರೆಯಲಿಲ್ಲ. ಗೆಳೆಯರ ಜೊತೆ ಮತ್ತಷ್ಟು ಸಲಿಗೆ ಬೆಳೆಸಿಕೊಂಡರು. ಕಾಲೇಜಿನಲ್ಲಿ ಓದುವ ಬಡ ಮಕ್ಕಳನ್ನು ಮೊದಲು ಗುರುತಿಸಿ ಗುಡ್ಡೆ ಹಾಕಿಕೊಂಡರು. ಅವರಿಗೆ ಬ್ಯಾಗು, ಬುಕ್ಕು, ಚಪ್ಲಿಗಳನ್ನು ಕೊಡಿಸಿದರು. ಮಳೆಗಾಲದಲ್ಲಿ ನೆಂದು ತೊಪ್ಪೆಯಾಗಿ ಮುಜುಗರದಿಂದ ಬರುವ ಹೆಣ್ಮಕ್ಕಳಿಗೆ ಛತ್ರಿ ಕೊಡಿಸಿದರು. ಮಧ್ಯಾಹ್ನದ ಊಟ ಸಿಗುವಂತೆಯೂ ಮಾಡಿದರು. ಇದನ್ನೆಲ್ಲಾ ಕುಹಕದಿಂದ ನೋಡುವ, ಗೇಲಿ ಮಾಡಿ ನಗುವ ಕೆಲ ಗೆಳೆಯರು ಬಗಲಲ್ಲೇ ಇದ್ದರು. ಮೊದಲಿಯಾರ್ ಇದ್ಯಾವುದಕ್ಕೂ ಕೇರ್ ಮಾಡಲಿಲ್ಲ. ಇಂಥ ಹಲವು ಕಾರಣದಿಂದಾಗಿ ಅವರೆಂದೂ ತಮ್ಮ ಸಂಬಳವನ್ನು ಸರಿಯಾಗಿ ಮನೆಗೆ ಒಯ್ಯಲಿಲ್ಲ. ಇಳೆಗೆ ಸುರಿಯುವ ಮೋಡದಂತೆ ತಮ್ಮ ಬಳಿ ಇರುವುದನ್ನೆಲ್ಲಾ ಹಂಚುತ್ತಿದ್ದರು.

ಒಂದು ದಿನ ಐದು ಗಂಟೆಯ ಹೊತ್ತಿಗೆ ಕಾಲೇಜಿನ ಹತ್ತಿರ ಹುಡುಗನೊಬ್ಬ ಬಂದು ನಿಂತನು. ಅವನ ಕಾಲಲ್ಲಿನ ಹವಾಯಿ ಚಪ್ಲಿಗಳು ಸವೆದು ಕಿತ್ತು ಹೋಗಿದ್ದವು. ಆ ಚಪ್ಲಿಗಳಿಗೆ ಆತ ಸೇಫ್ಟಿ ಪಿನ್ನು ಚುಚ್ಚಿಕೊಂಡಿದ್ದ. ಹೊನ್ನಾಳಿ ಕಡೆಯ ಹಳ್ಳಿಯಿಂದ ಕಾಲೇಜಿನ ಅಡ್ರೆಸ್ ಹುಡುಕುತ್ತಾ ಬಂದ. ಅವನ ಮುಖ ಪೂರಾ ದಣಿದಿತ್ತು. ‘ಪಿಯುಸಿಗೆ ಅಡ್ಮೀಶನ್ ಆಗಬೇಕಾಗಿತ್ರಿ ಸಾರ್’ ಎಂದಾತ ಕೇಳಿದ. ಮನೆಗೆ ಹೊರಟು ನಿಂತಿದ್ದ ಉಪನ್ಯಾಸಕರೆಲ್ಲಾ ‘ಅಯ್ಯೋ ಈಗೆಲ್ಲಿ ಅಡ್ಮೀಶನ್ ಮಾರಾಯ. ಎಲ್ಲಾ ಮುಗಿದು ತಿಂಗಳೇ ಆಯ್ತಲ್ಲಪ್ಪಾ. ಇಷ್ಟು ದಿನ ಏನ್ ಮಾಡ್ತಿದ್ದೋ ತಮ್ಮಾ? ಇಲ್ಲಿ ಸೀಟೆಲ್ಲಾ ಭರ್ತಿಯಾಗಿದ್ದಾವೆ, ಬೇರೆ ಕಡೆ  ಹೋಗಿ ಟ್ರೈ ಮಾಡು’ ಎಂದು ಹೇಳಿ ವಾಪಾಸ್ಸು ಕಳಿಸುತ್ತಿದ್ದರು. ಅಳು ಮುಖ ಮಾಡಿಕೊಂಡ ಆ ಹುಡುಗ ‘ಕಾಲೇಜಿಗೆ ಸೇರಕ್ಕೆ ದುಡ್ಡು ಇರಲಿಲ್ರಿ ಸಾರ್. ಹಳ್ಳೀಲಿ ಕೂಲಿಗೆ ಹೋಗ್ತಿದ್ದೆ. ಒಂದಿಷ್ಟು ದುಡ್ಡು ಜೋಡಿಸಿಕೊಂಡು ಬರೋದ್ರಾಗೆ ತಡವಾಯ್ತು ಸಾರ್. ನಮ್ಮ ಮನೆಯಾಗ ತಿಳಿದೋರು, ಓದಿದೋರು ಯಾರೂ ಇಲ್ರಿ. ಹ್ಯಾಂಗಾದ್ರೂ ಮಾಡಿ ನನಗೊಂದು ಸೀಟ್ ಕೊಟ್ಬಿಡ್ರಿ ಸಾರ್. ಕೈ ಮುಗೀತೀನಿ’ ಎಂದು ಗೋಗರೆಯತೊಡಗಿದನು.

ಇದನ್ನೆಲ್ಲಾ ದೂರದಿಂದ ಗಮನಿಸುತ್ತಿದ್ದ ಮೊದಲಿಯಾರ್ ಅಲ್ಲಿಗೆ ಬಂದರು. ಹುಡುಗನ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ತೆಗಿಸಿ ನೋಡಿದರು. 463 ಮಾರ್ಕ್ಸ್ ಇದ್ದವು. ‘ಸೈನ್ಸ್ ಓದ್ತಿಯೇನೋ ಮರಿ’ ಎಂದು ಫಟ್ಟಂತ ಕೇಳಿಬಿಟ್ಟರು. ಈ ಮಾತಿಗೆ ಹೆದರಿದ ಆತ ‘ಬ್ಯಾಡ್ರಿ ಸಾರ್. ಆರ್ಟ್ಸ್ ಕನ್ನಡ ಮೀಡಿಯಂ ಕೊಡ್ರಿ ಸಾಕು. ಸೈನ್ಸ್ ಓದೋ ಅಷ್ಟು ದುಡ್ಡೂ ಇಲ್ಲ. ಶಕ್ತೀನೂ ಇಲ್ಲ’ ಎಂದು ಕೈ ಮುಗಿದನು.

‘ಊರಿನ ಬೀದಿ ದೀಪದ ಕೆಳಗೆ ಓದೇ ಇಷ್ಟೊಂದು ಒಳ್ಳೇ ಮಾರ್ಕ್ಸ್ ತೆಗಿದಿದ್ದೀಯಾ ಅಂದ್ರೆ ನೀನು ಸಾಮಾನ್ಯ ಹುಡುಗನಲ್ಲ. ನೀನೇನು ಹೆದರಬೇಡ. ನಿನ್ನ ಜೊತೆ ನಾನಿರ್ತೇನೆ ನೀನು ಸೈನ್ಸೇ ಓದು. ನಿನಗೆ ಇರೋಕೆ ವ್ಯವಸ್ಥೇನಾ ನಮ್ಮ ಲೆಕ್ಚರರ್ ರಾಜಶೇಖರ್ ಮಾಡ್ತಾರೆ’ ಎಂದು ಧೈರ್ಯ ಹೇಳಿದರು. ಅಳುಕಿನಿಂದ ಸೈನ್ಸ್ ತೆಗೆದುಕೊಂಡ ಆ ಹಳ್ಳಿ ಹೈದ ಇವತ್ತು ವಿದೇಶದಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಎಷ್ಟೊಂದು ಜನರ ಪಾಲಿಗೆ ಸಂಜೀವಿನಿಯಾಗಿ ಬದುಕಬಹುದು ಅನ್ನೋದಕ್ಕೆ ಮೊದಲಿಯಾರ್ ಮೇಷ್ಟ್ರು ಉದಾಹರಣೆಯಾಗಬಲ್ಲರು.
 
ಕೆ.ಎಸ್. ನಿಸಾರ್ ಅಹಮದ್ ಶಿವಮೊಗ್ಗದಲ್ಲಿದ್ದಾಗ ಕಟ್ಟಿದ ಅಭಿನಯ ನಾಟಕ ತಂಡವನ್ನು ತಾವೇ ಮುನ್ನಡೆಸಿದರು. ನನ್ನ ಮಿಕ್ಕ ಮೇಷ್ಟ್ರುಗಳಾದ ಕುಮಾರಸ್ವಾಮಿ, ಕಾಂತೇಶ್ ಮೂರ್ತಿ, ಟಿ.ವಿ.ಹೆಗ್ಗಡೆ,  ಎಲ್.ಎಂ.ಎಲ್.ಶಾಸ್ತ್ರಿ, ಕಿಟ್ಟಿ ಸಾರ್, ಹಾಗೂ ಪ್ರೊ. ಹಾಲೇಶ್ ಜೊತೆ ಸೇರಿ ಹಯವದನ, ತುಘಲಕ್, ಎಲ್ಲಿಗೆ, ಮುಂತಾದ ಕನ್ನಡದ ನಾಟಕಗಳನ್ನು ಆಡಿದರು. ತಾವೇ ನಾಟಕ, ಕಾವ್ಯಗಳ ಬರೆದರು. ಒಮ್ಮೆ ಗೆಳೆಯ ರಂಗನಾಥ್ ಅಯ್ಯರ್ ಜೊತೆ ಸೇರಿ ಹಾಸ್ಯ ನಟ ನರಸಿಂಹರಾಜರಿಗೆ ನಮ್ಮೂರಿಗೆ ಬನ್ನಿ ಎಂದು ತಮಾಷೆಗೊಂದು ಪತ್ರ ಬರೆದರು. ಇವರ ಮಾತು ನಂಬಿ ನರಸಿಂಹರಾಜು ನಿಜವಾಗಿಯೂ  ಶಿವಮೊಗ್ಗೆಗೆ ಬಂದಾಗ ಅವರ ಜೊತೆ ನಕ್ಕು ನಲಿದು ಸನ್ಮಾನಿಸಿ ಕಳಿಸಿಕೊಟ್ಟರು. ಇಂಥ ಸಲ್ಲದ ತರಲೆ ಕೆಲಸಗಳನ್ನು ಅವರು ಮಾಡಿದ್ದಿದೆ. ಮನುಷ್ಯನಿಗಿರುವ ಅನೇಕ ಮಿತಿಗಳು, ಸಾಕಷ್ಟು ಕೊರತೆಗಳು ಮೊದಲಿಯಾರ್ ಮೇಷ್ಟ್ರಿಗೆ ಇದ್ದವು.

ಅದೇನೋ ಯೌವನದಲ್ಲೇ ಮೂಡಿ ಬಂದ ಸಕ್ಕರೆ ಕಾಯಿಲೆ ಅವರನ್ನು ಕಟ್ಟಿ ಹಾಕಿತು. ಆದರೆ ಅದಕ್ಕೆಲ್ಲ ಅವರು ಸೊಪ್ಪು ಹಾಕಿದವರೇ ಅಲ್ಲ. ಬಟ್ಟೆ ತೆಗೆದರೆ ಹಲವು ಇಂಚು ಉದ್ದಕ್ಕೆ ಕೊಯ್ದ ಓಪನ್ ಹಾರ್ಟ್ ಸರ್ಜರಿ ಗಾಯ ಎದ್ದು ಕಾಣುತ್ತಿತ್ತು. ‘ನನ್ನೊಳಗೆ ಒರಿಜನಲ್ ಪಾರ್ಟ್ಸ್ ಒಂದೂ ಇಲ್ಲ ಕಣೋ. ನೋಡು ಸದ್ಯಕ್ಕೆ ತಮ್ಮ ಕಿಡ್ನಿ ಕೊಟ್ಟಿದ್ದಾನೆ. ನನ್ನ ಆಪರೇಶನ್ ಆದಾಗೆಲ್ಲಾ ಎಲ್ಲಾ ಜಾತಿ, ಧರ್ಮದವರು ನನ್ನ ಎದೆಯೊಳಗೆ ತಮ್ಮ ರಕ್ತ ಸುರಿದಿದ್ದಾರೆ. ನನ್ನ ಹಿಂಗೆ ಬಿಟ್ರೆ ಇನ್ನು ಯಾರ್‌ಯಾರ ಹತ್ರ ಏನೇನ್ ಸ್ಪೇರ್ ಪಾರ್ಟ್ಸ್ ಕಸ್ಕೋತಿನೋ ಗೊತ್ತಿಲ್ಲ. ಐದು ಸಲ ನರಕದ ಬಾಗಿಲು ತಟ್ಟಿ ಬಂದಿದ್ದೀನಿ ಕಣೋ. ಬಡ್ಡಿ ಮಕ್ಕಳು ತೆಗಿಯಲ್ಲಾ ಅಂತಾರೆ, ನಾನೇನು ಮಾಡ್ಲಿ ಹೇಳು’ ಎಂದು ನಗುತ್ತಿದ್ದವರು ನಿಜಕ್ಕೂ ಈಗ ಹೊರಟು ಹೋಗಿದ್ದಾರೆ.

ತನ್ನ ಕುಟುಂಬದ ಎಲ್ಲರ ಸಂಕಷ್ಟ ಕೇಳುತ್ತಾ, ಪ್ರಪಂಚದ ಜನರ ಕಷ್ಟಗಳನ್ನೇ ತನ್ನ ಕಷ್ಟ ಎಂದು ಹಂಬಲಿಸುತ್ತಾ ಜೀವ ಸವೆಸುವ ಇಂಥ ಅನೇಕ ಗುರುಗಳು ಇನ್ನೂ ನಮ್ಮ ನಡುವೆ ಇದ್ದಾರೆ. ಅಂಥ ಸಹೃದಯದವರ ಸಂಖ್ಯೆ ಯಾವತ್ತೂ ಹೆಚ್ಚಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.