ADVERTISEMENT

ಗಾರ್ಮೆಂಟ್ ಹುಡುಗಿ ಹೊಲಿದ ಚೆಂದದ ಪೋಷಾಕು

ಸಬಿತಾ ಬನ್ನಾಡಿ
Published 15 ಏಪ್ರಿಲ್ 2019, 5:07 IST
Last Updated 15 ಏಪ್ರಿಲ್ 2019, 5:07 IST

ಬಟ್ಟೆಯ ಕತ್ತರಿಸುವ ಕತ್ತರಿ
ಇವಳ ಕನಸುಗಳ ಕತ್ತರಿಸುತ್ತದೆ
ಜೋಡಿಸಿ ಹೊಲಿವ ಕೈಗಳು
ಮತ್ತೊಂದು ಕನಸ ಹೊಲಿಯುತ್ತದೆ
ಮೇಲ್ವಿಚಾರಕನ ಸೂಜಿಗಣ್ಣು

ಅವಳು ಕತ್ತೆತ್ತದಂತೆ ಚುಚ್ಚುತ್ತದೆ
ಅರೆಹೊಟ್ಟೆಯ ನಿಶ್ಯಕ್ತ ಕಾಲು
ಸೆಟೆದುಕೊಳದಂತೆ
ವೇಗವಾಗಿ ತುಳಿಯುತ್ತದೆ
ಒತ್ತರಿಸಿ ಬರುವ ಬಾಯಾರಿಕೆಯೂ
ಜಿಪ್ ಏರಿಸಿದೆ

ಜಲಬಾಧೆ ತೀರಿಸಿಕೊಳಲೂ
ಬೇಕು ಒಪ್ಪಿಗೆಯ ಪತ್ರ
ನೀರೆಲ್ಲ ನಿರಿಗೆಯಾಗಿ
ಪೋಷಾಕು ಸಿಂಗಾರಗೊಳುತ್ತದೆ
ಎಳೆಹಸುಳೆಯ ತಾಯಂದಿರು
ಹಾಲುಣಿಸಲು ಹಂಬಲಿಸಿದರೆ

ನಾಳಿನ ಪಾಳಿಯ ಸೂರಿಲ್ಲ
ಸೋರಿಹೋಗುವ ಎದೆಹಾಲು
ಬೆಳ್ಳನೆ ಲೇಸ್‌ಗಳಾಗಿ
ಕತ್ತಸುತ್ತ ಚಲುವ ಬಲೆಯಾಗಿಸುತ್ತಾಳೆ
ದಿನದ ಟಾರ್ಗೆಟ್ ಮುಗಿಸಿ
ನಿಟ್ಟುಸಿರಿಡಲು ಕಾತರಿಸುತ್ತಾಳೆ
ಮೇಲ್ವಿಚಾರಕನ

ಹದ್ದಿನ ಕಣ್ಣಿಗೆ ತೋಳದ ದಾಹ
ನಿಮಿರಿದ ಮೈ ಮುಳ್ಳುಗಳ
ದುಂಡಗಾಗಿಸಿ ಬಟನ್‌ಗಳಾಗಿ
ಪೋಣಿಸುತ್ತಾಳೆ
ಹೃದಯ ಮೋಂಬತ್ತಿಯಾಗಿ ಉರಿಯುತ್ತಿದೆ

ಕಪ್ಪು ಮಸಿಯ ಮೇಲೆ ರಕ್ತಗೆಂಪಿನ
ಚಿತ್ತಾರದ ಅಂಗಿ ರಫ್ತಿನ ಪೆಟ್ಟಿಗೆಯಲಿ
ಬೆಚ್ಚಗೆ ಗಡಿದಾಟಿದೆ
ಮನೆಗೆ ತೆರಳುವ ಹಾದಿಯಲಿ, ಅತ್ತು
ಕಪ್ಪಾದ ಆಗಸದ ಬಟ್ಟೆ ಹರಿದು

ಚುಕ್ಕೆಯಂತೆ ಚೂರಾಗಿದೆ
ನಾಳೆ ಮತ್ತೆ ಅವುಗಳನೆಲ್ಲಾ ಹೊಲಿದು
ಒಗೆದು ನೀಲಿ ಹಾಕಿ ಒಣಹಾಕಲು
ಅವಳು ತಯಾರಿ ನಡೆಸುತ್ತಾಳೆ
ಬಟ್ಟೆಯ ಕತ್ತರಿಸುವ ಕತ್ತರಿ

ಅವಳ ಕನಸುಗಳನ್ನು ಕತ್ತರಿಸುತ್ತದೆ
ಜೋಡಿಸಿ ಹೊಲಿವ ಕೈಗಳು
ಮತ್ತೊಂದು ಕನಸನ್ನು ಹೊಲಿಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.