ADVERTISEMENT

ರಣರಂಗದಲ್ಲಿ ಕಣ್ಣೀರಿಡುವ ಛಲದಂಕಮಲ್ಲ

ನಲ್ದಾಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:59 IST
Last Updated 6 ಜುಲೈ 2013, 19:59 IST

ನ್ನಡದಲ್ಲಿ ಪಂಪ ಮಹಾಕವಿಯಿಂದ ಆರಂಭವಾದ `ಒಂದು ಜೈನ ಕಾವ್ಯ ಇನ್ನೊಂದು ಲೌಕಿಕ ಕಾವ್ಯ' ಬರೆಯುವ ಪರಂಪರೆಯನ್ನು ರನ್ನ ಕವಿ ಮುಂದುವರಿಸಿದ. `ಅಜಿತನಾಥ ಪುರಾಣ' ಮತ್ತು `ಸಾಹಸ ಭೀಮ ವಿಜಯ' ಎಂಬ ಕಾವ್ಯಗಳಲ್ಲಿ ಈ ಕವಿಯ ಪ್ರತಿಭೆ ಬೆಳಗುವ ಬಗೆಯೇ ವಿಶಿಷ್ಟ.

ಪಂಪ ತನ್ನ ಸಮಸ್ತ ಭಾರತವನ್ನು ಹದಿನಾಲ್ಕು ಆಶ್ವಾಸಗಳಲ್ಲಿ ಬರೆದರೆ, ರನ್ನ ಯುದ್ಧದ ಕೊನೆಯಲ್ಲಿ ಬರುವ ದುರ್ಯೋಧನ ಮತ್ತು ಭೀಮ ಮಾಡುವ ಗದಾಯುದ್ಧದ ಪ್ರಸಂಗವನ್ನು ಮಾತ್ರ ಆರಿಸಿಕೊಂಡಿದ್ದಾನೆ. ಕಾವ್ಯಕ್ಕೆ ಭೀಮನನ್ನೇ ನಾಯಕನನ್ನಾಗಿ ಮಾಡಿ ಅವನ ಹೆಸರೇ ಇಟ್ಟಿದ್ದರೂ ಅವನ ವಿರೋಧಿಯಾದ ದುರ್ಯೋಧನನನ್ನು ಛಲದಂಕಮಲ್ಲ, ಅಭಿಮಾನಧನ ಎಂದೆಲ್ಲ ಬಾಯ್ತುಂಬ ಹೊಗಳುತ್ತಾನೆ. 

ರನ್ನನ ಕಾವ್ಯ ಆರಂಭವಾಗುವ ಹೊತ್ತಿಗೆ ದುರ್ಯೋಧನ ಯುದ್ಧದಲ್ಲಿ ಎಲ್ಲರನ್ನೂ ಕಳೆದುಕೊಂಡು ದುರಂತನಾಯಕನಾಗಿದ್ದಾನೆ. ರಣರಂಗದಲ್ಲಿ ಅವನು ಮಕ್ಕಳ ಶವಗಳನ್ನು ಕಂಡು ರೋದಿಸುವುದಂತೂ ಎಲ್ಲರ ಹೃದಯಗಳು ಮತ್ತಷ್ಟು ಕರಗುತ್ತವೆ.

ಏಕಾಂಗವೀರನಾಗಿ ಹೋರಾಡಿದ ಅಭಿಮನ್ಯುವಿನ ಪರಾಕ್ರಮ ಅವನ ಮನಸ್ಸನ್ನು ಸೂರೆಗೊಂಡಿದ್ದರಿಂದ `ನಿನ್ನನ್ನು ಹೆತ್ತವಳ ಪುಣ್ಯವೇ ಪುಣ್ಯ' ಎಂದು, ಸಾಹಸಧನ ಎಂದು ಅವನಿಗೆ ಕೈ ಮುಗಿಯುತ್ತಾನೆ. ಅವನಿಗೆ ಬಂದಂಥ ವೀರಮರಣ ತನಗೂ ಬರಲಿ ಎಂದು ಕೇಳಿಕೊಳ್ಳುವುದು ದುರ್ಯೋಧನನ ಪರಮ ಔದಾರ್ಯವೇ ಸರಿ.

ADVERTISEMENT

ನಂತರ ತನ್ನ ಮಗ ಲಕ್ಷಣ ಕುಮಾರನ ಶವ ಕಂಡಾಗ ಅವನ ನಯನ ಇರಲಿ, ಹೃದಯವೂ ಕಣ್ಣೀರಿನಲ್ಲಿ ಮುಳುಗಿಹೋಯಿತಂತೆ. ತಂದೆಗೆ ಮಗ ಜಲಾಂಜಲಿ ಕೊಡಬೇಕು, ಆದರೆ ಇಲ್ಲಿ ತಂದೆಯೇ ಮಗನಿಗೆ ಕೊಡುವಂತಾಯಿತೇ ಎಂದು ತುಂಬಾ ದುಃಖಿಸುತ್ತಾನೆ.

ನಂತರ ಕರ್ಣ, ದುಶ್ಶಾಸನರ ಶವಗಳನ್ನು ಕಂಡು ಇವರಿಬ್ಬರೂ ಸತ್ತ ಮೇಲೆ ಇನ್ನು ಯಾರಿದ್ದರೇನು, `ನನ್ನ ಕಣ್ಣೀರಿನಿಂದ ನಾನೇ ಪಟ್ಟ ಕಟ್ಟಿಕೊಳ್ಳಬೇಕು' ಎಂದು ನಿಟ್ಟುಸಿರು ಬಿಡುತ್ತಾನೆ. `ನನಗಿಂದು ಮನ ಶೂನ್ಯ, ಮನೆ ಶೂನ್ಯ, ಬೀಡು ಶೂನ್ಯ, ಇಡೀ ಭೂಮಿಯೇ ಶೂನ್ಯವಾಯಿತು. ಕರ್ಣನಿಲ್ಲದೆ ದುಶ್ಶಾಸನನಿಲ್ಲದೆ ನಾನು ಹೇಗಿರಲಿ' ಎಂದು ಎದೆಬಡಿದುಕೊಳ್ಳುತ್ತಾನೆ.

`ತಾಯಿಯ ಹಾಲು, ದಿವ್ಯಭೋಜನ ಎಲ್ಲವನ್ನೂ ನಾನು ಮೊದಲು ಉಂಡ ಬಳಿಕ ನೀನು ಉಂಡೆ; ಬಾಲಕನಾಗಿಯೂ ಎಂದೂ ನೀನು ನನ್ನನ್ನು ಮೀರಲಿಲ್ಲ. ಆದರೆ ಮರಣಕ್ಕೆ ಮಾತ್ರ ಮೊದಲಾದೆಯಲ್ಲಾ' ಎಂದು ಅವನು ತಮ್ಮನ ಶವನ ಮುಂದೆ ಅಳುವುದು ಮಾತ್ರ ಯಾರ ಕಣ್ಣಲ್ಲಾದರೂ ನೀರು ತರಿಸುತ್ತದೆ. ಕರ್ಣ ದುರ್ಯೋಧನರ ಗೆಳೆತನ ಎಲ್ಲ ಕವಿಗಳಿಗೂ ಅಚ್ಚುಮೆಚ್ಚು.

`ಏನು ಕರ್ಣ, ನೋಡಿಲ್ಲಿ ನಿನ್ನ ಗೆಳೆಯ  ಬಂದಿದ್ದೇನೆ. ನನ್ನೊಡನೆ ಮಾತನಾಡದೆ, ಅಪ್ಪಿಕೊಳ್ಳದೆ ಏನು ಮಾಡಬೇಕು ಎಂದು ಕೇಳದೆ ಏಕೆ ಸುಮ್ಮನಿದ್ದೀಯಾ' ಎಂದು ಅವನು ಹುಚ್ಚನಂತೆ ಆಡುತ್ತಾ `ನೀನಿದ್ದರೆ ರಾಜ್ಯ, ನೀನಿದ್ದರೆ ಪಟ್ಟ' ಎಂದು ಶೋಕಿಸುತ್ತಾನೆ. ಪಂಪ ಮತ್ತು ರನ್ನ ಇಬ್ಬರ ಮಹಾಭಾರತ ಕಾವ್ಯಗಳಲ್ಲೂ ದುರ್ಯೋಧನನ ಪ್ರಲಾಪ ಅತ್ಯಂತ ಆರ್ದ್ರ ಪ್ರಸಂಗಗಳಾಗಿ ಮೂಡಿಬಂದಿವೆ.

`ನನ್ನ ಅಮ್ಮ ಬಂದು ನಿನ್ನ ತಮ್ಮಂದಿರು ಎಲ್ಲಿ ಎಂದು ಕೇಳಿದರೆ ಅವಳಿಗೇನು ಹೇಳಲಿ, ಕುಂತೀಪುತ್ರರು ಅವರನ್ನೆಲ್ಲ ಕೊಂದರು ಎಂದು ಹೇಳಲೇ' ಎಂಬುದು ದುರ್ಯೋಧನನ ದುಃಖದ ಉತ್ಕಟ ಸಮಸ್ಯೆ. ಆದರೆ ಮುಂದೆ ಗಾಂಧಾರಿ ಮತ್ತು ಧೃತರಾಷ್ಟ್ರರು ಮಾತ್ರ `ಸತ್ತ ಮಗಂದಿರು ಸತ್ತರು, ನೀನು ನಮಗುಳಿದರೆ ಸಾಕು' ಎಂಬ ಕಠೋರ ನಿಲುವಿಗೆ ಬಂದು ಬೆಚ್ಚಿಬೀಳಿಸುತ್ತಾರೆ. ದುಃಖದ ಸಮಯದಲ್ಲಿ ಮನುಷ್ಯರಲ್ಲಿ ಹುಟ್ಟುವ ವಿಭಿನ್ನ ಭಾವನೆಗಳ ಮೆರವಣಿಗೆ ರನ್ನನ ಕಾವ್ಯದಲ್ಲಿ ಕಾಣುತ್ತದೆ.
-ಪೂರ್ವೀ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.