ADVERTISEMENT

ನಾನು, ನನ್ನದು, ನನ್ನಿಂದಲೇ...

ರಾಮಚಂದ್ರ ಗುಹಾ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST
ನಾನು, ನನ್ನದು, ನನ್ನಿಂದಲೇ...
ನಾನು, ನನ್ನದು, ನನ್ನಿಂದಲೇ...   

ಈ ವರ್ಷ ಫೆಬ್ರುವರಿಯ ಅನೇಕ ದಿನ­ಗಳನ್ನು ದೆಹಲಿಯಲ್ಲಿ, ಪತ್ರಾಗಾರ­ದಲ್ಲಿ ಕೆಲಸ ಮಾಡುತ್ತಾ ಕಳೆದೆ. ನಡುವೆ ಹಳೆಯ, ಹೊಸ ಸ್ನೇಹಿತರನ್ನು ಭೇಟಿ ಮಾಡು­ತ್ತಿದ್ದೆ. ಸಹಜವಾಗಿಯೇ ಎಲ್ಲರೂ ಮುಂದಿನ ಲೋಕಸಭಾ ಚುನಾವಣೆ ಕುರಿತೇ ಮಾತಾಡು­ತ್ತಿದ್ದರು. ನನಗೆ ಗೊತ್ತಿರುವ, ನಾನು ತುಂಬಾ ಗೌರವಿಸುವ ಅನೇಕ ಲೇಖಕರು, ಹೋರಾಟಗಾ­ರರು ನರೇಂದ್ರ ಮೋದಿ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶ ಮತ್ತೆ ಸರ್ವಾಧಿ­ಕಾರಿ, ಫ್ಯಾಸಿಸ್ಟ್ ಆಡಳಿತವನ್ನು ನೋಡ­ಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.

ಇಂದಿರಾ ಗಾಂಧಿ ಕಾಲದ ತುರ್ತು ಪರಿಸ್ಥಿತಿ ಮತ್ತೆ ಬಂದೀತೆಂಬುದು ಅವರೆಲ್ಲರ ಆತಂಕ. ಇಂದಿರಾ ಗಾಂಧಿ, ತುರ್ತು ಪರಿಸ್ಥಿತಿ ಹೇರಿದಾಗ ಮುದ್ರಣ ಮಾಧ್ಯಮವನ್ನು ಸೆನ್ಸಾರ್‌ಗೆ ಒಳಪಡಿಸಿದ್ದರು. ವಿರೋಧ ಪಕ್ಷದ ರಾಜಕಾರಣಿಗಳನ್ನು ಜೈಲಿಗೆ ಕಳುಹಿಸಿದ್ದರು. ಎಲ್ಲೆಡೆ ಆಗ ಭಯದ ವಾತಾ­ವರಣ. ನನ್ನ ಜೊತೆ ಮಾತಾಡಿದ ಇನ್ನು ಕೆಲವು ಪ್ರಜ್ಞಾವಂತರು, ಮೋದಿ ನೇತೃತ್ವದ ಸರ್ಕಾರ  ಬಂದರೆ ಅಲ್ಪಸಂಖ್ಯಾತರ ಶೋಷಣೆ ಶುರು­ವಾ­ಗು­ತ್ತದೆ ಎಂದು ಅಂದಾಜು ಮಾಡಿದರು. ಮತ್ತೆ ಕೆಲವರು ಅಪಾಯಕಾರಿ ವಿದೇಶಾಂಗ ನೀತಿಯ ಸಾಧ್ಯತೆಯನ್ನು ಮುಂದಿಟ್ಟರು. ಅಂಥ ವಿದೇ­ಶಾಂಗ ನೀತಿಯಿಂದ ಚೀನಾ ಹಾಗೂ ಪಾಕಿಸ್ತಾ­ನದ ಜತೆ ದೇಶದ ಬಿಕ್ಕಟ್ಟು ಇನ್ನಷ್ಟು ಹೆಚ್ಚಾ­ಗಬಹುದು ಎಂಬುದು ಅವರೆಲ್ಲರ ಇನ್ನೊಂದು ಆತಂಕ.

ಸ್ನೇಹಿತರು ವ್ಯಕ್ತಪಡಿಸಿದ ಆತಂಕಗಳನ್ನು ಕೇಳಿಸಿಕೊಂಡು, ಹಾಗೇನೂ ಆಗುವುದಿಲ್ಲ ಎಂದು ಹೇಳಲಂತೂ ಸಾಧ್ಯವಿಲ್ಲ. ಚುನಾವಣಾ ಪ್ರಚಾರ ಭಾಷಣಗಳಲ್ಲಿ ನರೇಂದ್ರ ಮೋದಿ ತಮ್ಮ ರಾಜ­ಕೀಯ ವಿರೋಧಿಗಳನ್ನು ವೈಯಕ್ತಿಕವಾಗಿ ಟೀಕಿಸು­ತ್ತಿದ್ದಾರೆ. ತಮ್ಮ ನಿರ್ಧಾರಗಳಿಗೆ ಯಾರಾದರೂ ಅಸಮ್ಮತಿ ಸೂಚಿಸಿದರೆ ಅದನ್ನು ಅವರು ಸಹಿಸುವುದಿಲ್ಲ. ಮೋದಿ ತವರು ರಾಜ್ಯವಾದ ಗುಜರಾತ್‌ನಲ್ಲಿ ಲೇಖಕರು, ಕಲಾವಿದರು ಮಾತಾಡಲು ಅಂಜುತ್ತಿರುವುದೇ ಇದಕ್ಕೆ ಸಾಕ್ಷಿ.

ಮೋದಿ ಅವರ ಕಟುಟೀಕಾಕಾರರು ಅವರನ್ನು ‘ಭಾರತದ ಹಿಟ್ಲರ್’ ಅಥವಾ ‘ಮುಸಲೋನಿ’ ಎಂದೇ ಬಣ್ಣಿಸುತ್ತಾರೆ. ಮೋದಿ ವೈಯಕ್ತಿಕ ಶೈಲಿಯನ್ನು ಗಮನಿಸಿದರೆ ಅವರನ್ನು ದಿವಂಗತ ಹ್ಯೂಗೊ ಚಾವೆಜ್ ಅವರಿಗೆ ಹೋಲಿಸಬಹುದು. ಆದರೆ ಇಬ್ಬರ ರಾಜಕೀಯ ಸಿದ್ಧಾಂತಗಳು, ಆರ್ಥಿಕ ಮಾದರಿಗಳು ಬೇರೆ ಬೇರೆ ಎಂಬು­ದಂತೂ ಸ್ಪಷ್ಟ. ಎಲ್ಲವನ್ನೂ ತಾವೊಬ್ಬರೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುವುದರಲ್ಲಿ ಹಾಗೂ ವಿರೋಧಿಗಳನ್ನು ಹಣಿಯುವುದರಲ್ಲಿ ಇಬ್ಬರದೂ ಒಂದೇ ರೀತಿ.

ಲ್ಯಾಟಿನ್ ಅಮೆರಿಕದ ಶ್ರೇಷ್ಠ ಇತಿಹಾಸಕಾರ ಎನ್ರಿಕ್ ಕ್ರೂಜ್, ಕ್ಯಾರಕಾಸ್‌ಗೆ ಪದೇ ಪದೇ ಭೇಟಿ ನೀಡಿದ ನಂತರ ಹೀಗೆ ಬರೆದರು: ‘ತಮ್ಮ ರಾಜಕೀಯ ವಿರೋಧಿಗಳನ್ನು ಚಾವೆಜ್ ಹಣಿ­ದಿರುವ ರೀತಿಯೊಂದೇ ಅಲ್ಲಿ ನನ್ನನ್ನು ಕಂಗಾಲು ಮಾಡಿದ್ದು. ತಮ್ಮ ವಿರೋಧವನ್ನು ಅವರು ಸರ್ವತ್ರಗೊಳಿಸಿದ್ದರು. ಯಾವ ಬ್ಯಾನರ್, ಫಲಕ ನೋಡಿದರೂ ಹಣಿಯು­ವಂಥವೇ ಸಾಲುಗಳು. ಭಾಷಣಗಳ ಸಾರವೂ ಅದೇ. ಟಿ.ವಿ. ಶೋಗಳಲ್ಲಿ ಕೂಡ ಅದೇ ಮಾದ­ರಿಯ ಜಿಗುಟು ಜಿಗುಟಾದ ಘೋಷಣೆಗಳು. ಹುನ್ನಾರದ ಸಿದ್ಧಾಂತಗಳನ್ನು, ಪೂರ್ವಗ್ರಹ­ಗಳನ್ನು ಹರಡಲು ಸಾಮಾಜಿಕ ಮಾಧ್ಯಮವನ್ನು ಅವರು ಬಳಸಿಕೊಂಡಿದ್ದರು’.

ಮೋದಿ ಅಧಿಕಾರಾವಧಿಯಲ್ಲಿ ಗುಜರಾತ್ ಕಂಡವರು, ಅವರ ಭಾಷಣಗಳನ್ನು ಕೇಳಿದವರು, ಪ್ರಧಾನಿ ಆಗುವ ಮಹತ್ವಾಕಾಂಕ್ಷೆಯನ್ನು ಹೊರ­ಹಾಕಿದ ನಂತರ ಅದನ್ನು ಈಡೇರಿಸಿಕೊಳ್ಳಲೆಂದೇ ಸಾಮಾಜಿಕ ಮಾಧ್ಯಮವನ್ನು ಪ್ರಚಾರಕ್ಕೆ ಅವರು ಬಳಸಿಕೊಂಡ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿ­ದವರಿಗೆ ಸತ್ಯ ಅರಿವಾಗಿರುತ್ತದೆ.

‘ಗುಜರಾತ್ ಮಾದರಿ’ ಆರ್ಥಿಕ ಅಭಿ­ವೃದ್ಧಿಯ ಒಳಿತು–ಕೆಡಕುಗಳ ಚರ್ಚೆ ಜೋರಾಗಿ ನಡೆಯುತ್ತಿರುವ ಸಂದರ್ಭ ಇದು. ನಾನು ಅರ್ಥ ವ್ಯವಸ್ಥೆಯ ತಜ್ಞ ಅಲ್ಲ. ಆದರೆ ಜೀವನಚರಿತ್ರೆ ಬರೆಯುವ ಒಬ್ಬ ಲೇಖಕನಾಗಿ, ಎಲ್ಲಾ ಯಶ­ಸ್ಸಿಗೂ ತಾವೊಬ್ಬರೇ ಕಾರಣಕರ್ತ (ವಾಸ್ತವವೋ ಕಲ್ಪಿತವೋ) ಎಂದು ಗುಜರಾತ್ ಮುಖ್ಯಮಂತ್ರಿ ಹೇಳಿಕೊಳ್ಳುವುದು ನನ್ನ ಗಮನ ಸೆಳೆದಿದೆ. ನಾನು, ನನ್ನದು, ನನ್ನಿಂದಲೇ ಎಂದು ಮೋದಿ ಮಾತನಾಡುವುದು ಅವರ ಭಾಷಣಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ತಮ್ಮ ಸರ್ಕಾರದ ಯಾವುದೇ ಮಂತ್ರಿ ಯನ್ನಾಗಲೀ, ಸರ್ಕಾರಿ ಅಧಿ­ಕಾರಿ­ಯನ್ನಾಗಲೀ ಅವರು ಹೊಗಳುವುದು ಹಾಗಿ­ರಲಿ, ಸ್ಮರಿಸಿಕೊಳ್ಳುವುದೂ ಇಲ್ಲ. ಗುಜ­ರಾತ್‌ನ ಹಾಲು ಉತ್ಪಾದನೆಯ ದಾಖಲೆ ಕುರಿತು ಉದ್ದುದ್ದ ಭಾಷಣ ಹೊಡೆಯಬಲ್ಲ ಮೋದಿ, ತ್ರಿಭುವನ್‌ದಾಸ್ ಪಟೇಲ್ ಅಥವಾ ಡಾ. ವರ್ಗಿಸ್ ಕುರಿಯನ್ ಹೆಸರನ್ನು ಕೂಡ ಪ್ರಸ್ತಾಪಿಸುವುದಿಲ್ಲ.

ಪಕ್ಷ ಹಾಗೂ ಸರ್ಕಾರದ ನಾಯಕರಾಗಿ ಮೋದಿ ಆತ್ಮಪ್ರಶಂಸೆ ಮಾಡಿಕೊಳ್ಳುತ್ತಾ ಅದರ ಕೇಂದ್ರೀಕರಣದಲ್ಲೇ ತೊಡಗಿದ ಧೋರಣೆ ಉಳ್ಳ­ವ­ರಾ­ಗಿದ್ದಾರೆ. ವೈವಿಧ್ಯವೂ ವಿಸ್ತಾರವೂ ಆದ ನಮ್ಮ ದೇಶದ ಪ್ರಧಾನಿಯೊಬ್ಬರಿಗೆ ಇರಬೇಕಾದ ವಿಶಾಲ ದೃಷ್ಟಿಕೋನದ ಲಕ್ಷಣ ಇದಲ್ಲ. ಅವರ ಸಿದ್ಧಾಂತ ಭಾರತೀಯ ಸಾಂವಿಧಾನಿಕ ಚೌಕಟ್ಟಿ­ನಿಂದ ಹೊರತಾದಂತೆ ಕಾಣುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಆಜೀವ ಸದಸ್ಯರು ಈ ಮೋದಿ. ಹಿಂದೂ ಪುರೋ­ಹಿತ­ಶಾಹಿ ದೇಶ ನಿರ್ಮಾಣದ ಬಯಕೆಯನ್ನು ಆರ್‌ಎಸ್‌ಎಸ್ ಇದುವರೆಗೂ ಬಿಟ್ಟುಕೊಡುವ ಮಾತನಾಡಿಲ್ಲ.

೧೯೯೦ರ ದಶಕದಲ್ಲಿ ‘ಹಿಂದೂ ರಾಷ್ಟ್ರೀಯ­ವಾದಿ’ ಎಂಬ ವಿಶೇಷಣ ಹೆಚ್ಚು ಚಾಲ್ತಿಗೆ ಬಂದಿತು. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತದ ಬಿಂಬ ಅದು. ನನ್ನ ಪ್ರಕಾರ ಅದೊಂದು ವಿರೋಧಾಭಾಸ. ಪಾಕಿಸ್ತಾನವು ವಾಸ್ತವದಲ್ಲಿ, ಆಚರಣೆಯ ದೃಷ್ಟಿಯಿಂದ ಇಸ್ಲಾ­ಮಿಕ್ ದೇಶ. ಯುನೈಟೆಡ್ ಕಿಂಗ್‌ಡಮ್ ಮೂಲತಃ ಕ್ರಿಶ್ಚಿಯನ್ ದೇಶ. ಆದರೆ ಭಾರತ ಗಣರಾಜ್ಯವನ್ನು ಹಿಂದೂ ದೇಶ ಎನ್ನಲಾಗದು. ಈ ದೇಶ ಕಟ್ಟಿದವರು  ನಂಬಿಕೆ, ಆಚರಣೆಯನ್ನು ದೇಶ ರಚನೆಯ ಸಿದ್ಧಾಂತಕ್ಕೆ ತಳಕು ಹಾಕಲಿಲ್ಲ. ಅವರ ಜಾಣತನದ, ಧೈರ್ಯದ ನಿಲುವಿನ ಫಲವಿದು.

ವೈಯಕ್ತಿಕವಾಗಿ ನಾನೂ ಒಬ್ಬ ಹಿಂದೂ. ದೇಶ­ಭಕ್ತನೂ ಹೌದು. ಆದರೆ ಬೆಳೆದದ್ದು ಅಸಾಂಪ್ರ­ದಾ­ಯಿಕವಾದ, ಸುಧಾರಣೆಗೆ ಒಡ್ಡಿಕೊಂಡ ಕುಟುಂಬದಲ್ಲಿ. ಹಾಗಿದ್ದೂ ನಾನೊಬ್ಬ ಹಿಂದೂ ಎನ್ನುವುದರಲ್ಲಿ ಅನುಮಾನವೇ ಇಲ್ಲ. ದೇಶದ ಮೇಲೆ ನನಗೆ ಪ್ರೀತಿಯೂ ಇದೆ. ಗಾಂಧಿ, ನೆಹರೂ ಅವರ ರಾಜಕೀಯ ನಂಬಿಕೆಯ ಹಾದಿ ನನ್ನದು. ಅವರು ಪ್ರತಿಪಾದಿಸಿದ ‘ಭಾರತವು ಹಿಂದೂ ಪಾಕಿಸ್ತಾನ ಅಲ್ಲ, ಎಂದಿಗೂ ಹಾಗೆ ಆಗದು’ ಎಂಬ ತತ್ವವನ್ನು ನಂಬಿದವನು.

ವ್ಯಕ್ತಿಯೊಬ್ಬ ಹಿಂದೂ ಆಗಿರಬಹುದು. ರಾಷ್ಟ್ರೀಯತಾವಾದಿಯೂ ಆಗಿರಬಹುದು. ಆದರೆ ‘ಹಿಂದೂ ರಾಷ್ಟ್ರೀಯತಾವಾದಿ’ ಎಂದು ಕರೆದುಕೊಳ್ಳುವುದು ಭಾರತೀಯ ಸಂವಿಧಾನದ ಚೌಕಟ್ಟಿನಿಂದ ಹೊರತಾದಂತೆ ಕಾಣುತ್ತದೆ. ಹಿಂದೂಗಳು ಈ ದೇಶದಲ್ಲಿ ಆದ್ಯತೆ ಪಡೆದಿದ್ದಾರೆ, ಅವರ ಬೇರುಗಳು ಆಳಕ್ಕಿಳಿದಿವೆ, ಮುಖ್ಯಸ್ಥಾನದಲ್ಲಿ ಅವರಿದ್ದಾರೆ ಎಂದು ವಾದ ಮಾಡುವುದಾದರೆ, ಅಂಥವರನ್ನು ಬಣ್ಣಿಸಲು ನಾನು ‘ಹಿಂದೂ ವೀರ ದೇಶಾಭಿಮಾನಿ’ ಎಂಬ ಪದಪುಂಜ ಬಳಸುತ್ತೇನೆ. ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿ ಮೋದಿ ರೂಪು­ಗೊಳ್ಳಲು ಈ ‘ವೀರ ದೇಶಾಭಿಮಾನ’ ಸ್ವಭಾವ­ಜನ್ಯವಾಗಿ ಕೆಲಸ ಮಾಡಿದೆ. ಕೆಲವು ಹೊಗಳು­ಭಟ್ಟರು ಹೇಳುವ ಈ ವಿಶೇಷಣವನ್ನು ಮೋದಿ ನಿರಾಕರಿಸುತ್ತಾರೆಯೇ? 

ಯಾರಿಗೂ ಈ ಬಗ್ಗೆ ಖಾತರಿ ಇಲ್ಲ. ಸದ್ಭಾ­ವನಾ ಯಾತ್ರೆಯ ಸಂದರ್ಭದಲ್ಲಿ ಸ್ಕಲ್ ಟೋಪಿ ತೊಡಲು ಮೋದಿ ನಿರಾಕರಿಸಿದಾಗ ಅವರ ದೇಹ­ಭಾಷೆಯೇ ತಮಗೆ ಅನ್ಯ ಎಂದು ಭಾವಿಸಿದ ಸಂಕೇತ­ವನ್ನು ಒಪ್ಪಿಕೊಳ್ಳುವ ಮನಸ್ಥಿತಿ ಅವರಿಗಿಲ್ಲ ಎಂಬುದನ್ನು ದೃಢಪಡಿಸಿತು. ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲೂ ಅವರು ತಾವೊಬ್ಬ ‘ಹಿಂದೂ ರಾಷ್ಟ್ರೀಯತಾವಾದಿ’ ಎಂದೇ ಹೇಳಿ­ಕೊಂಡರು. ಅವರ ಆ ಹೇಳಿಕೆಯೇ ಅವರಿನ್ನೂ ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರ ಸಿದ್ಧಾಂತಕ್ಕೆ ಬದ್ಧರಾದವರು ಎಂಬುದನ್ನು ಪುಷ್ಟೀಕರಿಸುತ್ತದೆ.

ಉದಾರವಾದಿಗಳು ಹಾಗೂ ಪ್ರಜಾತಂತ್ರ­ವಾದಿ­ಗಳು ನರೇಂದ್ರ ಮೋದಿ ಅವರ ವ್ಯಕ್ತಿತ್ವ ಹಾಗೂ ಸಿದ್ಧಾಂತಗಳ ಕುರಿತು ಚಿಂತಾಕ್ರಾಂತ­ರಾಗಿ­ರುವುದು ಸರಿಯಷ್ಟೆ. ಮೋದಿ ವಿಷಯದಲ್ಲಿ ಇರುವ ಆತಂಕದಿಂದ ಅವರೆಲ್ಲಾ  ಕಾಂಗ್ರೆಸ್‌ ಪಕ್ಷದ ಕಡೆ ಅಥವಾ ಪರ್ಯಾಯವಾಗಿ ‘ಫೆಡ­ರಲ್‌ ಫ್ರಂಟ್’ ಕಡೆ ಮುಖ ಮಾಡುತ್ತಿರ­ಬಹುದು.  ಅಂಥವರ ಪಾಲಿಗೆ ಈ ಆಯ್ಕೆ ಫ್ಯಾಸಿಸಂ ತಡೆಯಬಹುದಾದ ಗೋಡೆಯಂತೆ ಭಾಸವಾಗುತ್ತಿರಬಹುದು. ಬಿಜೆಪಿ ಅಧಿಕಾರಕ್ಕೆ ಬರದಂತೆ ಮಾಡಲು ಅಂಥವರು ಕಾಂಗ್ರೆಸ್‌ ಪಕ್ಷದ ಸ್ವಜನ ಪಕ್ಷಪಾತ, ವಂಶ ಪಾರಂಪರ್ಯ ಸಂಸ್ಕೃತಿ, ಪ್ರಾದೇಶಿಕ ಮಟ್ಟದ ಕೆಲವು ನಾಯಕರ ನಿರಂಕುಶ ವರ್ತನೆಯನ್ನು ನಿರ್ಲಕ್ಷಿಸಲೂ ಸಿದ್ಧರಿದ್ದಾರೆ.

ಒಂದು ವೇಳೆ ಮೋದಿ ಪ್ರಧಾನಿ ಆದಲ್ಲಿ ‘ಫ್ಯಾಸಿಸ್ಟ್‌ ಯುಗ’ ಉದ್ಘಾಟನೆಗೊಂಡಂತೆ ಅಥವಾ ತುರ್ತು ಪರಿಸ್ಥಿತಿಯಂಥ ಆಡಳಿತ ಜಾರಿಗೆ ಬಂದಂತೆ ಎಂದು ವಾದಿಸುತ್ತಿರುವವರು ಪ್ರಜಾಪ್ರಭುತ್ವದ ಸಾಂಸ್ಥಿಕ ಬಲವನ್ನು, ಒಕ್ಕೂಟ ವ್ಯವಸ್ಥೆಯ ಗಟ್ಟಿತನವನ್ನು ಕಡೆಗಣಿಸಿ ಯೋಚಿಸು­ತ್ತಿ­ದ್ದಾರೆ ಎನಿಸುತ್ತದೆ. ಇಂದಿರಾ ಗಾಂಧಿ 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ದೇಶದ ಒಂದು ರಾಜ್ಯ ಹೊರತುಪಡಿಸಿ ಮಿಕ್ಕೆಲ್ಲಾ ಕಡೆ ಅವರದ್ದೇ ಕಾಂಗ್ರೆಸ್‌ ಪಕ್ಷ ಅಧಿಕಾರ­ದಲ್ಲಿತ್ತು. ಆದರೆ ಈಗ ಮೋದಿ ನೇತೃತ್ವದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೂ, ಬಹುತೇಕ ರಾಜ್ಯಗಳಲ್ಲಿ ಅವರದ್ದೇ ಪಕ್ಷದ ಸರ್ಕಾರಗಳು ಇರುವುದಿಲ್ಲ. ಅವರ ಹಿಂದೆ ಕೆಲವು ಮಾಧ್ಯಮಗಳು ಸಾಲು­ಗಟ್ಟಿ ನಿಲ್ಲಬಹುದು. ಉಳಿದ ಮಾಧ್ಯಮಗಳು ಸ್ವತಂತ್ರವಾಗಿಯೇ ಉಳಿಯುತ್ತವೆ. ಸಾಮಾಜಿಕ ಮಾಧ್ಯಮವನ್ನಂತೂ ನಿಯಂತ್ರಿಸಲು ಅಥವಾ ಸೆನ್ಸಾರ್‌ ಮಾಡಲು ಸಾಧ್ಯವಿಲ್ಲ.

ಮೋದಿ ಅವರ ಪ್ರಚಾರ ವೈಖರಿ ಕಂಡು ಕಣ್ಣರಳಿಸುತ್ತಿರುವ ಎರಡು ಗುಂಪುಗಳಿವೆ. ಒಂದು ಗುಂಪು ಕಟ್ಟಾ ಹಿಂದುತ್ವವಾದಿಗಳದ್ದು. ಇನ್ನೊಂದು, ಕಾಂಗ್ರೆಸ್‌ ಪಕ್ಷದ ದೊಡ್ಡ ಮಟ್ಟದ ಭ್ರಷ್ಟಾಚಾರದಿಂದ ಬೇಸತ್ತವರದ್ದು. ಎರಡನೇ ಗುಂಪಿನಲ್ಲಿರುವ ಯುವಕರಿಗೆ 1980, 1990ರ ದಶಕಗಳಲ್ಲಿ ನಡೆದ  ಅಯೋಧ್ಯಾ ಗಲಭೆಗಳ ವಿನಾಶಕಾರಿ ಪರಿಣಾಮ ಗೊತ್ತಿರಲು ಸಾಧ್ಯವಿಲ್ಲ. ಮೋದಿ ದೆಹಲಿಯಲ್ಲಿ ಗದ್ದುಗೆ ಏರಿ­ದರೆ, ತಮ್ಮ ಧರ್ಮಾಂಧತೆಯನ್ನು ಬದಿಗೊತ್ತಿ ಅಭಿವೃದ್ಧಿಯ ದಾರಿಯಲ್ಲಿ ನಡೆದಾರು ಎಂಬ ನಿರೀಕ್ಷೆ ಅಂಥ ಯುವಕರದ್ದು.

ಒಂದು ವೇಳೆ ಮೋದಿ ನಮ್ಮ ಮುಂದಿನ ಪ್ರಧಾನಿ ಆದರೆ, ಅವರು ಎಂತೆಂಥ ಯೋಜನೆ­ಗ­ಳನ್ನು ಜಾರಿಗೆ ತರಬಹುದು? ಆರ್‌ಎಸ್‌ಎಸ್‌ ಕೇಳಿ­ದರೆ– ಅದು ಕೇಳುವುದರಲ್ಲಿ ಅನುಮಾನ­ವೇನೂ ಇಲ್ಲ– ಅದರ ಸಿದ್ಧಾಂತ ಒಪ್ಪಿಕೊಂಡ ಸಂಸ್ಕೃತಿ ಹಾಗೂ ಶಿಕ್ಷಣ ಸಚಿವರೇ ಗದ್ದುಗೆ ಏರು­ತ್ತಾರೆ. ಅವರ ‘ವೀರ ದೇಶಾಭಿಮಾನದ ನಿರ್ಧಾ­ರ’ಗಳಿಗೆ ಮೋದಿ ಆಕ್ಷೇಪಿಸುವುದಾದರೂ ಹೇಗೆ? ಬಜರಂಗ ದಳ ಹಾಗೂ ಶಿವಸೇನೆಯ ಗೂಂಡಾ­ಗಳು ಸ್ವತಂತ್ರ ಮನೋಭಾವದ ಲೇಖ­ಕರು, ಕಲಾ­ವಿದರ ಮೇಲೆ ದಾಳಿ ಮಾಡಿದರೆ, ಅಂಥವರ ವಿರುದ್ಧ ಮೋದಿ ಕ್ರಮ ತೆಗೆದುಕೊಳ್ಳು­ವರೇ? ಅವರ ಸರ್ಕಾರದ ಯೋಜನೆಗಳನ್ನು ಮಾಧ್ಯಮ ಟೀಕಿ­ಸಿದರೆ ಸಹಿಸಿಕೊಂಡು ಸುಮ್ಮನಿ­ರು­ತ್ತಾ
ರೆ­ಯೇ? ನಾಗರಿಕ ಸೇವೆಯಲ್ಲಿರುವ ಅಧಿಕಾರಿ­ಗಳು, ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುತ್ತಾರೋ ಅಥವಾ ಪಕ್ಷದ ಧೋರಣೆಗೆ ಅಂಟಿಕೊಳ್ಳುವಂತೆ ಮಾಡುತ್ತಾರೋ?

ಇವೆಲ್ಲವೂ ನ್ಯಾಯಸಮ್ಮತವಾದ ಪ್ರಶ್ನೆಗಳು. ಗುಜರಾತ್‌ನಲ್ಲಿ ಮೋದಿ ಸಾಧನೆ ಹಾಗೂ 1998–2004ರ ಅವಧಿಯಲ್ಲಿ ಎನ್‌ಡಿಎ ಸರ್ಕಾರ ಆರ್‌ಎಸ್‌ಎಸ್‌ ಪ್ರಭಾವದಿಂದ ನಡೆ­ಸಿದ ಆಡಳಿತವನ್ನು ಗಮನಿಸಿದರೆ ಈ ಪ್ರಶ್ನೆಗಳು ಯಾಕೆ ನ್ಯಾಯಸಮ್ಮತ ಎಂಬುದು ಸ್ಪಷ್ಟ­ವಾಗು­ತ್ತದೆ. ತುರ್ತು ಪರಿಸ್ಥಿತಿ ಉದ್ಭವವಾದರೆ ಏನು ಗತಿ ಎನ್ನುತ್ತಿರುವವರದ್ದು ಆತುರದ, ಅನಪೇಕ್ಷಿತ ಆತಂಕ. ಮೇ 2014ರಲ್ಲಿ ಬಹುಶಃ ನಾವು ಈಗ ಇರುವ ದುರ್ಬಲ, ಅದಕ್ಷ ಪ್ರಧಾನಿಯ ಜಾಗ­ದಲ್ಲಿ ಸೊಕ್ಕಿನ, ಪಂಥಾಭಿಮಾನಿ ಪ್ರಧಾನಿಯನ್ನು ಕಾಣಬಹುದು. ಆದರೆ ಇದರಿಂದ ಭಾರತಕ್ಕಾಗಲಿ ಅಥವಾ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗಾಗಲಿ  ಬಾಧಕವೇನೂ ಆಗಲಾರದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT