ADVERTISEMENT

ವಿಜಯ್ ಮಲ್ಯ ಎದುರು ಪರಾಜಯ-

ಆರ್.ಪೂರ್ಣಿಮಾ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST
ವಿಜಯ್ ಮಲ್ಯ ಎದುರು ಪರಾಜಯ-
ವಿಜಯ್ ಮಲ್ಯ ಎದುರು ಪರಾಜಯ-   

ದೊಡ್ಡವರು ಮಾಡುವ ಕೆಲಸ ದೊಡ್ಡ ಪ್ರಮಾಣದಲ್ಲೇ ಇರುತ್ತದೆ, ಅವರು ಹಾಕುವ ಟೋಪಿ ಕೂಡ ಇಡೀ ದೇಶದ ತಲೆಗೆ ಹಿಡಿಯುವಷ್ಟು ದೊಡ್ಡದಾಗಿರುತ್ತದೆ, ಜನರನ್ನು ಬೇಹೋಷ್ ಮಾಡುವುದು ಮದ್ಯ ಮಾತ್ರವಲ್ಲ ಅದರ ಕಂಪೆನಿಯ ಮಾಲೀಕನೂ ಆಗಿರುತ್ತಾನೆ ಎಂಬ ಹಳೇ ಸತ್ಯಗಳನ್ನು ಹೊಸದಾಗಿ ನಿಜಮಾಡಿ ಕನ್ನಡದ ಮಣ್ಣಿನ ಮಗ ವಿಜಯ್ ಮಲ್ಯ ಜಗದೇಕವೀರನಾಗಿ ಹೊರಹೊಮ್ಮಿದ್ದು ಎಂಥ ಕಥಾನಕ!

ಬಟ್ಟೆ ಕಳಚಿ ಬಿಸಾಕುವುದು ನಾನು ಸೊಂಟ ಬಳಸುವ ಹೆಣ್ಣುಗಳಿಗೆ ಮಾತ್ರ ಸುಲಭ ಅಂದುಕೊಳ್ಳಬೇಡಿ, ದೇಶದ ಹದಿನೇಳು ಸಾರ್ವಜನಿಕ ಬ್ಯಾಂಕುಗಳ ಮಾನ ಮರ್ಯಾದೆಯ ಹೊದಿಕೆಯನ್ನು ಸಾರ್ವಜನಿಕವಾಗಿ ಕಳಚಿ ಬಿಸಾಕುವುದು ನನಗೂ ಸುಲಭ ಎಂದು ಅವರು ಕೊಟ್ಟ ‘ರಾಯಲ್ ಚಾಲೆಂಜ್’ ಎಷ್ಟು ರೋಮಾಂಚಕ! ಛೇ ಎಂಥದು ಮಾರಾಯ್ರೇ!

‘ವಸುಧೈವ ಕುಟುಂಬಕಂ’ ಎಂಬ ಮಂತ್ರ ಜಪಿಸುತ್ತ ಐವತ್ತೆರಡು ದೇಶಗಳ ಜನರಿಗೆ ಅಮಲೇರಿಸುತ್ತಿದ್ದ ವಿಜಯ್ ಮಲ್ಯ ಈಗ ನಿಜವಾಗಿ ವಿಶ್ವ ಕುಟುಂಬಿಯಾದರು. ಅವರ ಎಲ್ಲ ಕೆಲಸಗಳೆಲ್ಲವೂ ಜಾಗತೀಕರಣವಾದ ಮೇಲೆ ಬ್ಯಾಂಕುಗಳಿಗೆ ಮಾಡಿದ ಮಹಾಮೋಸವೂ ಆಗಬೇಕಾದ್ದು ಸಹಜ.
ಏಳು ಸೂಟ್‌ಕೇಸ್‌ಗಳನ್ನು ಪ್ಯಾಕ್ ಮಾಡಿಕೊಳ್ಳುವ ಮುನ್ನ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಂಸತ್ತು, ಬ್ಯಾಂಕ್ ಸಮೂಹ, ಕಾನೂನು, ನ್ಯಾಯಾಂಗ, ಉದ್ಯಮ ನೀತಿ ಮೊದಲಾದ ಏಳು ಪೈಲ್ವಾನರನ್ನು ಇನ್ನು ಏಳದಂತೆ ನೆಲಕ್ಕೆ ಬೀಳಿಸಿದರು. ಅವರು ಫೆರಾರಿ ಪ್ರಿಯರಾದರೂ ವಿಮಾನ ಹತ್ತಿ ಪರಾರಿ ಆದರು. ಅವರ ವಿಮಾನ ಸಂಸ್ಥೆ ನೆಲ ಕಚ್ಚಿದರೇನಂತೆ, ಅವರು ಮಾತ್ರ ಹಾರಿ ಹೋದರು. ಹುಟ್ಟುಹಬ್ಬಕ್ಕೆ ನೂರು ಕೋಟಿ ಖರ್ಚು ಮಾಡುವ ಮಲ್ಯ ಸಾಲ ಕೊಟ್ಟವರೆಲ್ಲರಿಗೂ ಹುಟ್ಟಿದ ದಿನ ಕಾಣಿಸಿದರು.

‘ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ’ ಎಂದಿದ್ದ ನಮ್ಮ ಸರ್ವಜ್ಞ. ಆದರೆ ಈ ಸಾಲಸರ್ವಜ್ಞ ತನಗೆ ಸಾಲ ಕೊಟ್ಟ ಬ್ಯಾಂಕುಗಳ ಕಿಬ್ಬದಿಯ ಕೀಲನ್ನು ಹೆಂಗೆ ಮುರಿದು ಹಾಕಿದರು!

ಮಲ್ಯ ಪ್ರಕರಣ ‘ಐಪಿಎಲ್ ಲೀಗ್’ನ ಎರಡನೇ ಎಡಿಷನ್ ಅಷ್ಟೆ- ಐಪಿಎಲ್ ಎಂದರೆ ‘ಇಂಡಿಯನ್ ಪರಾರಿ ಲೀಗ್’. ಬ್ಯಾಂಕುಗಳು ಸೇರಿ ಎಲ್ಲರೂ ಅವರಿಗೆ ಕ್ಲೀನ್‌ಬೌಲ್ಡ್ ಆದದ್ದು ಒಂದು ಜಾಗತಿಕ ವಿಕ್ರಮ.

ಸರ್ಕಾರದ ಕೃಪಾಶೀರ್ವಾದದೊಡನೆ ಲಲಿತ್ ಮೋದಿ ಸುಲಲಿತವಾಗಿ ಪರಾರಿ ಆದಮೇಲೆ ಡೆಡ್ಲಿ ಗೂಗ್ಲಿ ಎಸೆದು ಪರಾರಿ ಆಗುವುದು ಮಲ್ಯ ಸರದಿ. ‘ಇಂಡಿಯನ್ ಪರಾರಿ ಲೀಗ್’ನಲ್ಲಿ ಶ್ರೀನಿವಾಸನ್, ತರೂರ್, ರಾಜ್ ಕುಂದ್ರ ಮೊದಲಾದ ರನ್‌ಔಟ್ ಮೇಯಪ್ಪನ್‌ಗಳದು ಬೇರೆ ಲೋಕಲ್ ಮ್ಯಾಚು. ಕಿಕ್‌ಬ್ಯಾಕ್‌ನ ಕ್ವಟ್ರೋಚಿ, ಯೂನಿಯನ್ ಕಾರ್ಬೈಡ್‌ನ ವಾರೆನ್ ಆ್ಯಂಡರ್‌ಸನ್ ಮೊದಲಾದ ವಿದೇಶಿ ರೋಗ್‌ಗಳದು ಬೇರೆ ವಿಚಾರಗಳ ಪರಾರಿ ಲೀಗ್. ನಮ್ಮ ‘ಜಾರಿ ನಿರ್ದೇಶನಾಲಯ’ ಜಾರಿ ಬಿದ್ದದ್ದು ಎಷ್ಟು ಬಾರಿಯೋ ಗೊತ್ತಿಲ್ಲ.

ನಮ್ಮ ದೇಶದ ಬ್ಯಾಂಕುಗಳ ಕಾರ್ಯನಿರ್ವಹಣೆಯ ಬ್ಯಾಲೆನ್ಸ್ ಶೀಟ್‌ನಲ್ಲಿ ಇಂಥ ಕೂಡಿಕಳೆಯುವ ಪ್ರಕರಣಗಳ ಲೆಕ್ಕ ತೆಗೆಯುವುದು ಕಷ್ಟ. ಬಡ ರೈತನ, ಬೀದಿ ವ್ಯಾಪಾರಿಯ ಸಾವಿರಚಿಲ್ಲರೆ ಸಾಲ ಸುಸ್ತಿ ವಸೂಲಿಗಾಗಿ ಅವರು ಜಪ್ತಿಕುಸ್ತಿಗೆ ನಿಲ್ಲುತ್ತಾರೆ. ಸುಸ್ತಿದಾರರ ಮನೆ ಮುಂದೆ ‘ಸಾಲ ವಸೂಲಾತಿ ವಾಹನ’ ನಿಲ್ಲಿಸಿ ಅವಮಾನ ತಾಳದ ಅವರು ನೇಣು ಬಿಗಿದುಕೊಂಡರೆ ಮೇಲಕ್ಕೆ ಹೋಗಲು ವಾಹನ ಸೌಕರ್ಯ ಕಲ್ಪಿಸಿ ನೆರವಾಗುತ್ತಾರೆ.

ಬಿಡಿ, ಅದು ಬಡ ಶಾಖಾ ಮ್ಯಾನೇಜರ್‌ಗಳ ಜಡಕೆಲಸ. ಆದರೆ ಬರೀ ಪಾತಕಗಳೇ ತುಂಬಿರುವ ಭಾರೀ ಉದ್ಯಮಿಗಳ ಜಾತಕದಲ್ಲಿ ಬರೀ ಶುಕ್ರದೆಸೆ ಎಣಿಸುವುದು ಬ್ಯಾಂಕಿನ ಅಧ್ಯಕ್ಷರು, ಸಿಇಓಗಳು, ನಿರ್ದೇಶಕರ ಕೆಲಸವಾಯಿತು. ಇವನೇ ಕುಬೇರನ ಅಪರಾವತಾರ ಎಂದು ನಂಬಿ, ಅಥವಾ ನಂಬಿದಂತೆ ನಟಿಸಿ ನಾನು ತಾನು ಎಂದು ಸ್ಪರ್ಧೆಯ ಮೇಲೆ ಅವರಿಗೆ ಹಣಕೊಡುವ ಸಾಲಮೇಳ ಮಾಡಿದರು. ಹದಿನೇಳು ಬ್ಯಾಂಕುಗಳ ಹದಿನೇಳು ಅಕ್ಷೋಹಿಣಿ ಸೈನ್ಯವನ್ನು ಏಕಾಂಗ ವೀರ ವಿಜಯ್ ಮಲ್ಯ ಹೆಂಗೆ ಉರುಳಿಸಿದರು ಎನ್ನುವುದು ಇತ್ತೀಚಿನ ಮಹಾನ್ ಭಾರತ ಕಥೆ. ನಿಜಕ್ಕೂ ಅವರದು ಎಂಥ ಸ್ಪಿರಿಟೆಡ್ ಫೈಟ್!

ನೈಂಟಿ ಮೇಲೆ ನೈಂಟಿಯಲ್ಲಿ ಅಮಲು ಹತ್ತಿಸುವುದರಿಂದ ಜನರಿಗೆ ಅಮಲುದೊರೆಯ ಈ ನೈಂಟಿಹಂಡ್ರೆಡ್ ಥೌಸಂಡ್- ಕೋಟಿಗೀಟಿ ರೂಪಾಯಿ ಇತ್ಯಾದಿ ಸಾಲದ ಅಂಕಿಗಳನ್ನು ತೊದಲಿಕೊಂಡು ಉಚ್ಚರಿಸುವುದೂ ಕಷ್ಟ. ಹಾಗಾಗಿ ನಷ್ಟ ಮಾಡಿಕೊಂಡ ಬ್ಯಾಂಕುಗಳುಸದ್ಯಕ್ಕೆ ಬಚಾವು.  ದೇಶದ ಇಂಥ ಅದ್ಭುತ ಆರ್ಥಿಕ ವಾಟ್ಸಾಪ್‌ಗಳ (ಅಂದರೆ ವಿದ್ಯಮಾನಗಳ) ಬಗ್ಗೆ ಮೊಬೈಲ್‌ನಲ್ಲಿ ಬರುವ ವಾಟ್ಸಾಪ್ ಮೆಸೇಜುಗಳು ಏನೇನೆಲ್ಲಾ ಹೇಳುತ್ತವೆ:

ಮಲ್ಯ ಬ್ಯಾಂಕ್ ಸಾಲಗಾರರ ಪೈಕಿ ಇನ್ನೂ ಬಚ್ಚಾ ಅಂತೆ, ಅವರಿಗಿಂತ ಕಚ್ಚಾ ಸಾಲಗಾರರ ಪಟ್ಟಿಯೇ ಇದೆಯಂತೆ. ರಿಲಯನ್ಸ್‌ನ ಅನಿಲ್ ಅಂಬಾನಿ, ವೇದಾಂತ ಸಮೂಹದ ಅನಿಲ್ ಅಗರ್‌ವಾಲ್, ಎಸ್ಸಾರ್‌ನ ಶಶಿ ಮತ್ತು ರವಿ ರೂಯ್ಯ, ಅದಾನಿ ಸಮೂಹದ ಗೌತಮ್ ಅದಾನಿ, ಜೇಪಿ ಗ್ರೂಪ್‌ನ ಮನೋಜ್ ಗೌರ್, ಜೆಎಸ್‌ಡಬ್ಲ್ಯುನ ಸಜ್ಜನ್ ಜಿಂದಾಲ್, ಜಿಎಂಆರ್ ಸಮೂಹದ ಜಿಎಂ ರಾವ್, ಲ್ಯಾನ್ಕೋನ ಎಲ್.ಎಂ. ರಾವ್, ವಿಡಿಯೋಕಾನ್‌ನ ವೇಣುಗೋಪಾಲ್, ಜಿವಿಕೆ ಗ್ರೂಪ್‌ನ ಜಿವಿಕೆ ರೆಡ್ಡಿ ಇವರೆಲ್ಲ ಸಾವಿರಾರು ಕೋಟಿ ಸಾಲದ ಸರದಾರರಂತೆ. ಬ್ಯಾಂಕುಗಳಿಂದ ಈ ಸಾಲಗಳ ವಸೂಲಾತಿ ಅಸಾಧ್ಯವಾದ್ದರಿಂದ ಮುಂದಿನ ಮುಂಗಡ ಪತ್ರದಲ್ಲಿ ಅರ್ಥ ಸಚಿವ ಅರುಣ್ ಜೇಟ್ಲಿ ಅವರು ಭಾರತದ ಪ್ರಜೆಗಳ ಮೇಲೆ ಹೊಸ ‘ಸೆಸ್’ ವಿಧಿಸಿ ನಷ್ಟ ತುಂಬಿಕೊಳ್ಳುತ್ತಾರಂತೆ ಎಂಬ ತಮಾಷೆಯೂ ಇದೆ. ವಿಜಯ್ ಮಲ್ಯ ಅಂಥವರು ಆಡಿಸಿ ನೋಡು ಬೀಳಿಸಿ ನೋಡು ಎಂದು ದೇಶದ ಬ್ಯಾಂಕ್ ವ್ಯವಸ್ಥೆಯನ್ನು ಆಡಿಸಿ ಬೀಳಿಸಿದ್ದರೂ ಇದು ‘ಉರುಳಿಹೋಗದು’ ಎಂದು ಇವರು ಹೇಳಬಹುದು. ಜೇಟ್ಲಿ ಆಟ ಬಲ್ಲವರಾರು, ಬಜೆಟ್‌ನ ನೋಟ ಬಲ್ಲವರಾರು!

ಏಕೆಂದರೆ ಎನ್‌ಡಿಎ ಸರ್ಕಾರದ ‘ಧನ್ ಕೀ ಬಾತ್’ ದು ಬೇರೆ ಮಾತು. ಚುನಾವಣೆಗೆ ಮೊದಲು ವಿದೇಶಿ ಬ್ಯಾಂಕುಗಳ ‘ಕಪ್ಪು ಹಣ’ ತಂದು ದೇಶದ ಎಲ್ಲ ಬಡ ಪ್ರಜೆಗಳ ಬ್ಯಾಂಕ್ ಖಾತೆಗೆ ತುಂಬುತ್ತೇವೆ ಎಂದು ಅವರ ಪಕ್ಷ ಹೇಳಿದ್ದು ತಪ್ಪಾಯಿತು. ‘ಕಪ್ಪು ಹಣ’ ದ ಮಾತನ್ನು ಬಾಯಿ ತಪ್ಪಿ ಆಡಿದ ‘ತಪ್ಪು ಹಣ’ ಎಂದು ಮರೆವಿನ ‘ಕಪ್ಪುಪಟ್ಟಿ’ಗೆ ಸೇರಿಸುವುದು ನಮಗೆ ಅನಿವಾರ್ಯವಾಯಿತು. ಆದರೆ ಬ್ಯಾಂಕುಗಳು ಈ ಸರದಾರರಿಗೆ ಸಾಲ ಕೊಟ್ಟು ವಸೂಲು ಮಾಡಲಾಗದೆ ಬೆಪ್ಪು ಹೋಗಿ ನಿಂತಿರುವ ಇಷ್ಟೊಂದು ಮೊತ್ತದ ಹಣವನ್ನು ಏನೆಂದು ಕರೆಯಬೇಕು? ‘ಬೆಪ್ಪು ಹಣ’ ಅಂತ ಹೆಸರಿಡಬಹುದೇ? ಅಥವಾ ಈ ಸರದಾರರು ಸಾಲ ಪಡೆದು ಬ್ಯಾಂಕುಗಳ ಕೈಗೆ ಚಿಪ್ಪು ಕೊಟ್ಟಿರುವುದರಿಂದ ‘ಚಿಪ್ಪು ಹಣ’ ಎಂದಾಗರಾಗದೇ?

ನಮ್ಮ ದೇಶದ ಅನರ್ಥಶಾಸ್ತ್ರಜ್ಞರು ಈ ಕುರಿತು ಏನು ಬೇಕಾದರೂ ಜಿಜ್ಞಾಸೆ ಮಾಡಿಕೊಳ್ಳಲಿ, ದೇಶದ ಪ್ರತಿಯೊಬ್ಬ ಪ್ರಜೆಯೂ ಕಾಂಗ್ರೆಸ್, ಎನ್‌ಡಿಎ, ಮತ್ತೆ ಕಾಂಗ್ರೆಸ್, ಮತ್ತೆ ಎನ್‌ಡಿಎ ಹೀಗೆ ಎಲ್ಲ ಸರ್ಕಾರಗಳಿಂದ ಎಪ್ಪತ್ತು ವರ್ಷಗಳಿಂದ ಮತ್ತೆ ಮತ್ತೆ ಬೆಪ್ಪು ಆಗಿರುವುದೂ ಪ್ರತೀಬಾರಿ ಅವರ ಕೈಗೆ ಚಿಪ್ಪು ಬಂದಿರುವುದೂ ನಿಜವೇನಿಜ. ‘ಕೊಟ್ಟವನು ಕೋಡಂಗಿ, ಇಸ್ಕೊಂಡೋನು ಈರಭದ್ರ’ ಎಂಬ ಮಾತು ನಮ್ಮ ಹಿರಿಯರು ತಮ್ಮ ಅನುಭವದ ಬ್ಯಾಂಕಿನಲ್ಲಿ ಭದ್ರವಾಗಿ ಇಟ್ಟಿರುವ ಎಫ್‌ಡಿ ಮಾತು. ಬ್ಯಾಂಕುಗಳ ಈ ಮಲ್ಯ ಪ್ರೇಮಪುರಾಣಕ್ಕೆ ಇದು ಎಷ್ಟು ಚೆನ್ನಾಗಿ ಅನ್ವಯಿಸುತ್ತದಲ್ಲ!

ಕೇಂದ್ರ ಸರ್ಕಾರ ಈ ಕುರಿತು ಏನು ಹೇಳಿದರೂ ಅದಕ್ಕೆ ನಯಾಪೈಸೆ ಬೆಲೆ ಇರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಈ ‘ಧನ್ ಕೀ ಬಾತ್’ ಕುರಿತು ತಮ್ಮ ‘ಮನ್ ಕೀ ಬಾತ್’ ನಲ್ಲಿ ಇನ್ನು ಹೆಚ್ಚಿಗೆ ಏನೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ಹಣಕಾಸಿನ ಮಾತು ಬೆಳ್ಳಿ; ಸಾಲದ ಮಾತು ಮೌನ ಬಂಗಾರ.
ವಿಜಯ್ ಮಲ್ಯ ಎಂಬ ಕನ್ನಡದ ಕಲಿ ಓಡಿ ಹೋಗುವ ಹೇಡಿ ಅಲ್ಲ ಎಂದು ನಮ್ಮ ಮಾಜಿ ಪ್ರಧಾನಮಂತ್ರಿಗಳು ಕನ್ನಡದಲ್ಲಿ ಒಂದೇ ಕಣ್ಣಿನಲ್ಲಿ ಕಂಬನಿ ಸುರಿಸಿದರು. ಇನ್ನೊಂದು ಕಣ್ಣಿನ ಕಂಬನಿ ಮಣ್ಣಿನ ಮಗನಾದ ರೈತನ ಕಷ್ಟಕ್ಕೆ ಮೀಸಲು ಎನ್ನುವುದು ಗೊತ್ತು. ‘ಬ್ಯಾಂಕ್ ಸಾಲ’ ಎನ್ನುವುದು ಇಬ್ಬರ ವಿಚಾರಕ್ಕೂ ನಿಜವಾದ್ದರಿಂದ ಇದು ಪರವಾಗಿಲ್ಲ.

ನಮಗೆ ‘ಪಿತೃ ದೇವೋಭವ’ ಗೊತ್ತಿತ್ತು, ಆದರೆ ‘ಕನ್ನಡ ಪುತ್ರ ದೇವೋಭವ’ ಅಂತಿರುವುದು ಗೊತ್ತಿರಲಿಲ್ಲ. ಆದರೆ ಮಲ್ಯ ಮಾತ್ರ ತಮ್ಮ ‘ಘರ್‌ವಾಪಸಿ’ ಬಗ್ಗೆ ಈಗಲೇ ಖಚಿತವಾಗಿ ಏನೂ ಹೇಳುತ್ತಿಲ್ಲ: ‘ನಾನು ಈಗ ಭಾರತಕ್ಕೆ ಬರಲು ಸಾಧ್ಯವಿಲ್ಲ. ನನಗೆ ಒಳ್ಳೆಯ ಕಾಲ ಬಂದಾಗ ಬರುವ ಯೋಚನೆ ಮಾಡುತ್ತೇನೆ’ ಎಂದು ಓಡಿಹೋಗಿರುವ ಮಾತೇ ಆಡಿದ್ದಾರೆ. ಪಾಪ, ಅವರಿಗೂ ‘ಅಚ್ಛೇ ದಿನ್’ ಬರಬೇಕಂತೆ. ಅವರ ಅಪರಾಧ ಪಾಪ ‘ಪಿಂಟ್ ಸೈಜ್’ ಅಲ್ಲ, ‘ಬ್ಯಾರೆಲ್ ಸೈಜ್’ಗೂ ದೊಡ್ಡದು.  ಮಾರ್ಚ್ ಹದಿನೆಂಟು ಮಲ್ಯರ ದೇಶದ ನಂಟು ಕೂಡ ಪರೀಕ್ಷೆಗೆ ಒಳಪಡುತ್ತದೆ ಎನ್ನುವುದು ಹೈದರಾಬಾದ್ ನ್ಯಾಯಾಲಯದ ಹಾಗೆ ಜನರ ನಿರೀಕ್ಷೆಯೂ ಆಗಿದೆ.

ಮದ್ಯದ ದೊರೆ ಆಡಿದ ನಾನಾ ಬಗೆಯ ಆಟಗಳನ್ನು ನೋಡುತ್ತಿದ್ದ ಮಾಧ್ಯಮ ನಿಜವಾಗಿ ಅಂಗಣದ ಅಂಚಿನಲ್ಲಿ ನಿಂತು ಅಂಪೈರ್ ಆಗಬೇಕಿತ್ತು, ಅವರು ತಪ್ಪೆಸಗಿದಾಗಲೆಲ್ಲಾ ಜೋರಾಗಿ ಸೀಟಿ ಊದಿ ‘ಔಟ್’ ಎಂದು ಕೂಗಬೇಕಿತ್ತು. ಆದರೆ ಮಾಧ್ಯಮದ ಹಲವರು ಮಲ್ಯ ಅವರ ಅಂಗಣಕ್ಕೇ ಹೋಗಿ ಔಟಾದರು.

ಈಗ ಕಲ್ಲು ಎಸೆದರೆ ಹಳ್ಳಕ್ಕೆ ಬಿದ್ದ ಈ ತೋಳ ಸುಮ್ಮನಿರುವುದಿಲ್ಲ- ‘ಏನು ನನ್ನ ಮೇಲೆ ಈಗ ಕೂಗಾಡುತ್ತೀರಾ? ನನ್ನ ವಿಮಾನಗಳನ್ನು ಬಳಸಿ, ವಿದೇಶ ಪ್ರವಾಸಗಳನ್ನು ಮಾಡಿ, ಆತಿಥ್ಯ, ಉಡುಗೊರೆಗಳನ್ನು ಸ್ವೀಕರಿಸಿ ಈಗ ನನ್ನ ಮೇಲೆ ಸುಳ್ಳುಗಳನ್ನು ಹೇಳುತ್ತೀರಾ? ನನ್ನಿಂದ ಯಾರ್‍ಯಾರು ಏನೇನು ಪಡೆದಿರಿ ಅಂತ ನನ್ನ ಬಳಿ ಪಟ್ಟಿ ಇದೆ. ಹುಷಾರ್!’ ಎಂದು ಮಲ್ಯ ಟ್ವಿಟರ್‌ನಲ್ಲಿ ಗರ್ಜಿಸಿದ್ದಾರೆ.

ಸರ್ಕಾರಗಳಿಗೆ, ಬ್ಯಾಂಕ್‌ಗಳಿಗೆ ಮಾತ್ರ ಅವರು ಚಿಯರ್ಸ್ ಹೇಳುತ್ತಾರೆ ಅನ್ನುವಂತಿಲ್ಲ. ಮಲ್ಯ ಅವರ ವ್ಯವಹಾರಗಳ ಬಾರ್ ಒಳಗಿನ ಮಂದಬೆಳಕಿನಲ್ಲಿ ಯಾರ್‍ಯಾರು ಇದ್ದಾರೆ ಸರಿಯಾಗಿ ಕಾಣಿಸುತ್ತಿಲ್ಲ. ಛೇ, ಎಂಥದು ಮಾರಾಯ್ರೇ, ವಿಜಯ ಮಲ್ಯ ಎದುರು ಎಲ್ಲರದೂ ಪರಾಜಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.