ಕಾರಣಗಳು ಏನಾದರೂ ಇರಲಿ, ಮಹಿಳೆಯರು ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಅಂದರೆ ಅವರಿಗೆ ಸಂಬಂಧಿಸಿದ, ಸಾವಿರಾರು ವರ್ಷಗಳಷ್ಟು ಹಳೆಯದಾದ ಸಂಗತಿಗಳು ಈಗ ಹೊಸದಾಗಿ ಸುದ್ದಿಯಾಗುತ್ತಿವೆ. ಶಬರಿಮಲೆ ದೇವಾಲಯ, ಶನಿಶಿಂಗ್ಣಾಪುರದ ಬಯಲು ಆಲಯ, ದರ್ಗಾ ಮುಂತಾದ ಆರಾಧನಾ ಸ್ಥಳಗಳಿಗೆ ತಮಗೆ ಏಕೆ ಪ್ರವೇಶ ಕೊಡುವುದಿಲ್ಲ ಎಂದು ಪ್ರಶ್ನೆ ಮಾಡುವ ಮೂಲಕ ಮಹಿಳೆಯರು ಸುದ್ದಿ ಚಾವಡಿಗೆ ಬಂದಿದ್ದಾರೆ. ಶತಮಾನಗಳು ಉರುಳಿದರೂ, ದೇಶ ಏನೆಲ್ಲ ಬದಲಾದರೂ ತಮಗೆ ಸಂಬಂಧಿಸಿದ ನಿಷೇಧಗಳ ಸಂಪ್ರದಾಯದ ಬೆಟ್ಟ ಮಾತ್ರ ಏಕೆ ಒಂದಿಷ್ಟೂ ಕರಗಿಲ್ಲ ಎಂದು ಅವರು ಪ್ರಶ್ನಿಸುತ್ತಿದ್ದಾರೆ.
‘ಮಹಿಳೆಯರು ಮನೆಯಲ್ಲೇ ಪೂಜೆಗೀಜೆ ಮಾಡಿಕೊಳ್ಳಲಿ ಬಿಡಿ’ ಎಂದು ಇದಕ್ಕೆ ಮಧ್ಯಪ್ರದೇಶದ ಸಚಿವ ಬಾಬುಲಾಲ್ ಗೌರ್ ಈ ವಿಚಾರ ಕೇಳಿದ್ದಕ್ಕೆ ರೇಗಿದ್ದಾರೆ. ಎಷ್ಟಾದರೂ ಮಹಿಳೆಗೆ ಮನೆಯೇ ದೇವಾಲಯ ಎಂದು ಅವರು ನಂಬಿರಬಹುದು. ಮಸೀದಿ, ಚರ್ಚು, ದೇವಾಲಯ ಕಟ್ಟುವ ಬದಲು ಶೌಚಾಲಯಗಳನ್ನು ಕಟ್ಟಿ, ದೇಶ ಸ್ವಚ್ಛವಾಗಿರುತ್ತದೆ ಎಂದು ಮಂಗಳೂರಿನಲ್ಲಿ ಸಾಣೇಹಳ್ಳಿ ಮಠದ ಸ್ವಾಮಿಗಳು ಕಳಕಳಿ ತೋರಿದ್ದಾರೆ. ಒಟ್ಟಿನಲ್ಲಿ, ದೇಶದ ಅನೇಕ ಪ್ರದೇಶಗಳಲ್ಲಿ ಮಹಿಳೆಯರಿಗೆ ಅತ್ತ ದೇವಾಲಯವೂ ಇಲ್ಲ, ಇತ್ತ ಶೌಚಾಲಯವೂ ಇಲ್ಲ!
ಮಹಿಳೆಯರು ಅದಕ್ಕೂ ಇದಕ್ಕೂ ಇರುವಂತೆ ಇನ್ನೊಂದಕ್ಕೂ ಸುದ್ದಿಯಲ್ಲಿದ್ದಾರೆ; ಅಥವಾ ಆ ಸಂದರ್ಭ ಸುದ್ದಿಯಲ್ಲಿರುವಂತೆ ನೋಡಿಕೊಳ್ಳಬೇಕಾಗಿದೆ. ಗುಜರಾತ್‌ನಲ್ಲಿ ಮಹನೀಯರೊಬ್ಬರು ತಮ್ಮ ಮಗನ ಮದುವೆಗೆ ಆಶೀರ್ವಾದ ಮಾಡಲು ಬನ್ನಿ ಎಂದು ಒಬ್ಬಿಬ್ಬರಲ್ಲ, ಹದಿನೇಳು ಸಾವಿರ ವಿಧವೆಯರನ್ನು ಆಮಂತ್ರಿಸಿದ್ದರು. ಇದಕ್ಕಾಗಿ ಬೇರೆ ಬೇರೆ ಊರುಗಳಲ್ಲಿರುವ ವಿಧವೆಯರನ್ನು ಹುಡುಕಿ ತರಲು ಕಾರ್ಯಕರ್ತರ ದೊಡ್ಡ ತಂಡ ರಚಿಸಿದ್ದರಂತೆ.
ಪರಿಸರ, ನೀರು ಸಂರಕ್ಷಣೆ ಮಾಡುವ ಜೀತುಭಾಯ್ ಪಟೇಲ್ ಎಂಬ ಈ ಹಸಿರು ಚಳವಳಿಗಾರ, ಕೆಂಪು ಕುಂಕುಮಕ್ಕೆ ಎರವಾದ ಅಷ್ಟೊಂದು ಸಾವಿರ ಮಹಿಳೆಯರನ್ನು ಆಹ್ವಾನಿಸಿ ಒಬ್ಬ ಸಾಮಾಜಿಕ ಚಳವಳಿಗಾರ ಆದದ್ದೂ ಒಂದು ಮಂಗಳಕರ ಸುದ್ದಿ ಎನ್ನುವುದು ಬಿಟ್ಟರೆ ಹೆಚ್ಚು ವಿವರ ತಿಳಿದಿಲ್ಲ. ‘ಇದರಿಂದ ಏನಾಗಿಬಿಡುತ್ತೆ, ಇದೇನು ಮಹಾ ದೊಡ್ಡ ಕೆಲಸ’ ಎನ್ನುವ ಮಾತುಗಳು ಇದ್ದೇ ಇರುತ್ತವೆ. ಏನಾದರಾಗಲಿ, ಮಹಿಳೆಯರಿಗೆ ವಿಧಿಸಿರುವ ಕಟ್ಟುಪಾಡುಗಳನ್ನು ಮೀರುವ ಇಂಥ ನಿರ್ಧಾರ, ಸಾಮಾಜಿಕ ಪರಿವರ್ತನೆಯ ಹಾದಿಯಲ್ಲಿ ಬಹಳ ದೊಡ್ಡ ಹೆಜ್ಜೆ ಎಂದು ಭಾವಿಸುವುದರಲ್ಲಿ ತಪ್ಪಿಲ್ಲ.
ಒಬ್ಬ ಮಹಿಳೆಯನ್ನು ಅವಳ ವಿವಾಹ ಮತ್ತು ವೈವಾಹಿಕ ಸ್ಥಾನಮಾನದಿಂದ ಗುರುತಿಸುವುದು, ಅವಳ ಗಂಡ ಸತ್ತಿದ್ದರೆ ಅವಳನ್ನು ‘ವಿಧವೆ’ ಎಂದು ಕರೆಯುವುದು ತೀರಾ ಅನಗತ್ಯ, ಅನಪೇಕ್ಷಣೀಯ ಮತ್ತು ಅವಮಾನಕರ. ನಮ್ಮ ಸಮಾಜದಲ್ಲಿ ಗಂಡಸು ಒಬ್ಬ ಗಂಡಸು ಮಾತ್ರ. ಆದರೆ ಹೆಂಗಸು ಅವನ ಹೆಂಡತಿ ಇಲ್ಲವೇ ಅವನ ವಿಧವೆ ಮಾತ್ರ. ವಿಧವೆ ಎಂದು ಕರೆಯುವುದನ್ನು ಒಪ್ಪಲಾಗದಿದ್ದರೂ ಮಹಿಳೆಯರ ಪೈಕಿ ವಿಧವೆಯರ ಸಾಮಾಜಿಕ ಮತ್ತು ಧಾರ್ಮಿಕ ಸಮಸ್ಯೆಗಳು ಮತ್ತಷ್ಟು ಕ್ಲಿಷ್ಟವಾಗಿರುವುದರಿಂದ, ಅವುಗಳನ್ನು ಕುರಿತ ಚರ್ಚೆಗಳಲ್ಲಿ ಹಾಗೆ ಗುರುತಿಸುವುದು ಅನಿವಾರ್ಯ. ಆದ್ದರಿಂದಲೇ ಅವರನ್ನು ಸಮಾನವಾಗಿ ಕಾಣುವ ಪ್ರಯತ್ನಗಳು ಸಾಮಾಜಿಕ ಪರಿವರ್ತನೆಯ ಸಂಕೇತಗಳಾಗಿ ಕಾಣುವುದರಲ್ಲಿ ಅನುಮಾನವೇ ಬೇಡ.
ಇಂಥ ಸಂಕೇತಗಳು ಕಾಲಕಾಲಕ್ಕೆ ಅಲ್ಲಲ್ಲಿ ಕಾಣುತ್ತಿವೆ ಎನ್ನುವುದನ್ನೂ ನೆನಪಿಸಿಕೊಳ್ಳಬೇಕು. ಕರ್ನಾಟಕದಲ್ಲೇ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ನವರಾತ್ರಿ ಸಂದರ್ಭದಲ್ಲಿ ಪ್ರತೀವರ್ಷ ತಮ್ಮ ಮಠದಿಂದ ನಡೆಸುವ ಶರಣ ಸಂಸ್ಕೃತಿ ಉತ್ಸವದ ಉದ್ಘಾಟನೆಯಲ್ಲಿ ವಿಧವೆಯರಿಂದ ದೀಪ ಬೆಳಗಿಸಿದ್ದರು. ಮಹಿಳೆಯರಿಗೆ ಪ್ರವೇಶ ನಿಷೇಧಿಸಿದ್ದ ಗಡಿಭಾಗದ ಒಂದು ಪರಮೇಶ್ವರ ದೇವಾಲಯಕ್ಕೆ ಅವರೇ ಮಹಿಳೆಯರ ತಂಡದೊಡನೆ ಪ್ರವೇಶಿಸಿದರು, ಆ ತಂಡದಲ್ಲಿ ವಿಧವೆಯರೂ ಇದ್ದರು. ಅಲ್ಲದೆ, ಅವರ ಮಠದಲ್ಲಿರುವ ‘ಕರ್ತೃ ಗದ್ದುಗೆ’ಗೆ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಆ ನಿಷೇಧ ತೆಗೆದುಹಾಕಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದಾಗ ವಿಧವೆಯರೂ ಅಲ್ಲಿಗೆ ಹೋಗಿಬರುವಂತಾಯಿತು.
ನಮ್ಮ ರಾಜ್ಯದಲ್ಲೇ ಒಂದು ದೇವಾಲಯದೊಳಗೆ ನಡೆದ ಸಾಮಾಜಿಕ ಪರಿವರ್ತನೆಯ ಮತ್ತೊಂದು ಪ್ರಯತ್ನವನ್ನೂ ಮರೆಯುವಂತೆಯೇ ಇಲ್ಲ. ಮಂಗಳೂರಿನ ಕುದ್ರೋಳಿಯಲ್ಲಿ ನಾರಾಯಣ ಗುರು ಅವರು 1912ರಲ್ಲಿ ಸ್ಥಾಪಿಸಿದ ಶ್ರೀ ಗೋಕರ್ಣನಾಥೇಶ್ವರ ದೇವಾಲಯವಿದೆ. ಕೆಳಸ್ತರದ ಮಹಿಳೆಯರ ಸಾಮಾಜಿಕ ಸಂಕಷ್ಟಗಳ ಪರಿಹಾರಕ್ಕೆ ಹಲವು ರೀತಿಗಳಲ್ಲಿ ಯೋಚಿಸಿದ ಗುರು ಅವರೆನ್ನುವುದು ಎಲ್ಲರಿಗೂ ಗೊತ್ತು.
ಮಂಗಳೂರು ಕುದ್ರೋಳಿ ದೇವಾಲಯದಲ್ಲಿ ವೈಭವದಿಂದ ದಸರಾ ಉತ್ಸವ ನಡೆಯುತ್ತದೆ. ದೇವಾಲಯದ ಉಸ್ತುವಾರಿ ವಹಿಸಿಕೊಂಡಿರುವ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಅವರ ನಿರ್ಧಾರದಿಂದಾಗಿ 2014ರಲ್ಲಿ ಈ ದೇವಾಲಯಕ್ಕೆ ಇಬ್ಬರು ವಿಧವೆ ಮಹಿಳೆಯರು ಅರ್ಚಕರಾಗಿ ನೇಮಕಗೊಂಡರು. ಅರ್ಚಕ ವೃತ್ತಿಗೆ ತರಬೇತಿ ಪಡೆದ ಇಬ್ಬರು ವಿಧವೆಯರು ಕುಂಕುಮ ಇಟ್ಟುಕೊಂಡು, ಮಲ್ಲಿಗೆ ಹೂ ಮುಡಿದು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿದರು.
‘ಮಹಿಳೆಯರು ವಿಚಾರವಂತರಾಗಬೇಕು, ಗುಡಿಯ ಅರ್ಚಕರಾಗುವುದು ಹಿಂದಕ್ಕೆ ಇಟ್ಟ ಹೆಜ್ಜೆ’ ಎಂದು ಹಲವರು ಹೇಳುವ ಮಾತಿನಲ್ಲೂ ಅರ್ಥವಿದೆ. ಆದರೆ ‘ಸಾಮಾಜಿಕ- ಧಾರ್ಮಿಕ ನಿಷೇಧಗಳನ್ನು ಮೀರುವುದು ಕೂಡ ಸಮಾನತೆಯ ಹಾದಿಯಲ್ಲಿ ಇಡುವ ಹೆಜ್ಜೆ. ಅದಕ್ಕೆ ಮುಂದಿನ ಹೆಜ್ಜೆ ಏನೆಂಬುದು ಗೊತ್ತೇ ಇದೆ’ ಎಂಬಂಥ ಪ್ರತಿಕ್ರಿಯೆಯಲ್ಲಿ ನಿಷೇಧಿತ ಪ್ರದೇಶಕ್ಕೆ ಪ್ರವೇಶ ಮಾಡುವುದರಿಂದಲೇ ದೊಡ್ಡ ಗೆಲುವು ಎಂಬ ಅರ್ಥವಿದೆ.
ಆದರೂ ಧಾರ್ಮಿಕ ವಲಯದಲ್ಲಿ ನಡೆಯುವ ಇಂಥ ಪ್ರತಿರೋಧಗಳಿಗೆ ಇರುವ ಸಾಮಾಜಿಕ ಮಹತ್ವ ಅಷ್ಟಿಷ್ಟಲ್ಲ. ಏಕೆಂದರೆ, ಮುಸ್ಲಿಮರ ದರ್ಗಾಗಳಲ್ಲಿ ಮತ್ತು ಕ್ರೈಸ್ತರ ಚರ್ಚ್‌ಗಳಲ್ಲಿ ಎಷ್ಟು ಮಂದಿ ಮಹಿಳೆಯರು ಅರ್ಚಕ ಸ್ಥಾನದ ಕರ್ತವ್ಯಗಳನ್ನು ನಿರ್ವಹಿಸುವ ಅವಕಾಶ ಪಡೆದಿದ್ದಾರೆ, ಅಲ್ಲಿ ಎಂಥ ಪುರುಷ ಪ್ರಾಧಾನ್ಯವಿದೆ ಎನ್ನುವುದು ಎಲ್ಲರಿಗೂ ಗೊತ್ತು. ಅಂಥ ಪರಿಸ್ಥಿತಿಯಲ್ಲಿ ದೇವಾಲಯಗಳಿಗೆ ಪ್ರವೇಶಿಸುವ ಮತ್ತು ಪೂಜೆ ಮಾಡುವ ಅವಕಾಶವನ್ನು ವಿಧವೆಯರು ಪಡೆದರೆ, ದಲಿತರ ದೇವಾಲಯ ಪ್ರವೇಶದ ಸಂದರ್ಭದಂತೆ ಅದನ್ನೂ ಸಾಮಾಜಿಕ ಪರಿವರ್ತನೆಯ ಚೌಕಟ್ಟಿನಲ್ಲಿಯೇ ವಿಶ್ಲೇಷಿಸಬೇಕಾಗುತ್ತದೆ.
‘ಸತ್ತ ಗಂಡನ ದೇಹದ ಪಕ್ಕ ಕೂತು ಎಷ್ಟು ಹೊತ್ತು ಅಳುತ್ತೀಯ, ಎದ್ದೇಳು’ ಎಂಬ ಮಾತು ಋಗ್ವೇದದಲ್ಲಿ ಬರುತ್ತದೆ. ಅವನೊಂದಿಗೆ ನೀನೂ ಚಿತೆಗೆ ಹಾರು ಎಂದೇನೂ ವೇದ ಹೇಳುವುದಿಲ್ಲ. ಮಹಾಭಾರತದಲ್ಲಿ ವಿಧವೆಯರ ಕಥೆಗಳನ್ನು ಬಿಡಿಸಿ ಹೇಳಿದರೆ ಅದೇ ಪ್ರತ್ಯೇಕ ಮಹಿಳಾಭಾರತವಾಗುತ್ತದೆ. ಬೇರೆಯವರದು ಇರಲಿ, ಕುಂತಿ-ಮಾದ್ರಿಯರ ಸಂಗತಿಯಂತೂ ವಿಶೇಷ. ಮಾದ್ರಿ ಅವಳದೇ ಕಾರಣಗಳಿಗಾಗಿ ಗಂಡನ ಚಿತೆಯನ್ನು ಅಪ್ಪಿಕೊಂಡರೆ, ಕುಂತಿ ಅಪ್ಪಟ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡು ತನ್ನ ಮಕ್ಕಳ ರಾಜಕಾರಣದಲ್ಲಿ ಪಾಲ್ಗೊಳ್ಳುತ್ತಾಳೆ.
ಕೃಷ್ಣನ ನಿರ್ದೇಶನದಲ್ಲಿ ಪಾಂಡವರು ಕೈಗೊಳ್ಳುವ ಯಾವ ರಾಜಕೀಯ ನಿರ್ಧಾರದಲ್ಲಿ ವಿಧವೆ ಕುಂತಿ ಜೊತೆಗಿರುವುದಿಲ್ಲ? ಅವಳ ಸೊಸೆ ದ್ರೌಪದಿಯದು ಎಷ್ಟು ಮಹತ್ವದ ಪಾಲು ಎನ್ನುವುದು ಬೇರೆ ಮಾತು. ಅನೇಕ ಕಾವ್ಯಗಳು ಹೇಳುವಂತೆ, ಶತ್ರುಗಳ ರಾಜ್ಯದಲ್ಲಿ ವಿಧವೆಯರು ಹೆಚ್ಚಬೇಕೆಂದು ವೀರರು ಪಣ ತೊಡುತ್ತಾರೆ. ಜಗತ್ತಿನ ಚರಿತ್ರೆಯಲ್ಲಿ ಹೆಚ್ಚು ಮಹಿಳೆಯರನ್ನು ವಿಧವೆಯರನ್ನಾಗಿ ಮಾಡಿರುವುದೂ ಅವರನ್ನು ಗಂಡನ ಚಿತೆಗೆ ದೂಡಿರುವುದೂ ಅವರನ್ನು ಸಿಂಹಾಸನದ ಮೇಲೆ ಕೂಡಿಸಿರುವುದೂ ಯುದ್ಧಗಳೇ. ಹಾಗೆಯೇ ದೇಶದ ರಾಜಕೀಯ ಚರಿತ್ರೆಯಲ್ಲೂ ಅನೇಕ ರಾಣಿಯರು- ಅದರಲ್ಲೂ ವಿಧವೆಯರು ರಾಜ್ಯ ಕಟ್ಟಲು, ಅದನ್ನು ಉಳಿಸಿಕೊಳ್ಳಲು, ಬ್ರಿಟಿಷರನ್ನು ಎದುರಿಸಲು ಪಟ್ಟಿರುವ ಕಷ್ಟಗಳನ್ನು ಮರೆಯುವಂತೆಯೇ ಇಲ್ಲ.
ಪುರುಷನ ಸುತ್ತಲೇ ಪ್ರಪಂಚ ಸುತ್ತುವುದರಿಂದ ಮಹಿಳೆಯರಿಗೆ ಒದಗುವ ಅನೇಕಾನೇಕ ಕಷ್ಟಗಳಲ್ಲಿ ವಿಧವೆಯರ ಪಾಡು ಹೇಳುವಂತೆಯೇ ಇಲ್ಲ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಇನ್ನೂ ಹಲವು ಹಿಂದುಳಿದ ದೇಶಗಳಲ್ಲಿ ಅವರಿಗೆ ಇಂದಿಗೂ ಜೀವನವೇ ಬಹಳ ದುರ್ಭರ. ಎಲ್ಲೆಡೆ ಅದು ಬರೀ ಧಾರ್ಮಿಕ ಪ್ರಶ್ನೆಯಲ್ಲ, ಆರ್ಥಿಕ- ಸಾಮಾಜಿಕ ಹಿತಾಸಕ್ತಿಗಳ ಫಲ. ಆದ್ದರಿಂದಲೇ ಮಹಿಳಾ ಅಧ್ಯಯನದಲ್ಲಿ ವಿಧವೆಯರ ಪರಿಸ್ಥಿತಿ ಕುರಿತು ವಿಶೇಷ ಆದ್ಯತೆ ಇರುತ್ತದೆ. ನಮ್ಮ ದೇಶದಲ್ಲಿ ವಿಧವೆಯರ ಸಂಕಷ್ಟಗಳ ಮಜಲುಗಳು ವರ್ಣನೆಗೆ ನಿಲುಕುವುದಿಲ್ಲ. ನಮ್ಮಲ್ಲಿ ಯಾವ ಸಮಾಜ ಸುಧಾರಕನೂ ವಿಧವೆಯರನ್ನು ಕುರಿತು ಕಳಕಳಿಯ ಆಲೋಚನೆ ಮಾಡದೇ ಇಲ್ಲ, ಅವರ ಏಳಿಗೆಗೆ ಪ್ರತ್ಯೇಕ ಪ್ರಯತ್ನಗಳನ್ನು ಮಾಡದೇ ಇಲ್ಲ ಎನ್ನುವುದೇ ಅವರ ಸಮಸ್ಯೆಯ ಸ್ವರೂಪವನ್ನು ಹೇಳುತ್ತದೆ.
ನಮ್ಮ ಚರಿತ್ರೆಯಲ್ಲಿ ಸಹಗಮನ ನಿಷೇಧ ಕುರಿತು ನಡೆದಿರುವ ಚಿಂತನೆಯೂ ಬಹಳ ವೈವಿಧ್ಯಮಯ. ಮುಘಲ್ ದೊರೆ ಹುಮಾಯೂನ್ ಅದರ ನಿಷೇಧಕ್ಕೆ ಪ್ರಯತ್ನಿಸಿದ್ದ. ಅಕ್ಬರ್ ಅದನ್ನು ನಿಷೇಧಿಸುವ ಕಾನೂನು ತಂದದ್ದಲ್ಲದೆ, ಸಹಗಮನದಿಂದ ಸತಿಯರನ್ನು ದೂರವಿಡಲು ಅವರಿಗೆ ಹಲವು ನೆರವುಗಳನ್ನು ನೀಡಿದ. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಅದರ ನಿಷೇಧಕ್ಕೆ ಕಾಳಜಿ ತೋರಿದ್ದರು.
ರಾಜಾ ರಾಮಮೋಹನ ರಾಯ್ ಸತಿಪದ್ಧತಿ ವಿರೋಧಿಸಿ ಕಟ್ಟಿದ ಚಳವಳಿ, ಬ್ರಿಟಿಷ್ ಆಡಳಿತದಲ್ಲಿ ವಿಲಿಯಂ ಬೆಂಟಿಂಕ್ 1829ರಲ್ಲಿ ಅದಕ್ಕೆ ಕಾನೂನು ಮೂಲಕ ಹೇರಿದ ನಿಷೇಧ, ನಮ್ಮ ಸಾಮಾಜಿಕ ಚರಿತ್ರೆಯ ಮುಖ್ಯ ಭಾಗ. 1917ರಲ್ಲೇ ಕೊಲ್ಹಾಪುರದ ಛತ್ರಪತಿ ಶಾಹೂ ಮಹಾರಾಜ ವಿಧವೆಯರ ಮರುಮದುವೆಗೆ, ಅದರಲ್ಲಿ ವಿವಾಹದ ಎಲ್ಲ ವಿಧಿಗಳ ಪಾಲನೆಗೆ ಕಾನೂನಿನ ಬೆಂಬಲ ಕೊಟ್ಟರು. ಅದನ್ನು ನೋಂದಣಿ ಮಾಡುವುದೂ ಅವರ ಸಂಸ್ಥಾನದಲ್ಲಿ ಕಡ್ಡಾಯವಾಯಿತು.
‘ಕೆಲವು ವಿಧವೆಯರು ತಾವೇ ಚಿತೆಗೆ ಬಿದ್ದು ಸತ್ತಿರುವುದು ನಿಜವಿರಬಹುದು. ಆದರೆ ಹಾಗೆ ಮಾಡುವಾಗಲೂ ಸಂತರು ಅದಕ್ಕೆ ಸಮ್ಮತಿ ಕೊಟ್ಟಿರಲಿಲ್ಲ... ಗಂಡ ಸತ್ತರೆ ಮೃತ್ಯುವಿನಲ್ಲೂ ಅವನನ್ನೇ ಅನುಸರಿಸಿ ಹೋದ ಸ್ತ್ರೀಯರು ಇಂಡಿಯಾ ದೇಶ ಒಂದರಲ್ಲೇ ಅಲ್ಲ ಇರುವುದು. ಇದು ಎಲ್ಲಾ ದೇಶಗಳಲ್ಲೂ ನಡೆದಿದೆ. ಇದು ಯಾವ ದೇಶದಲ್ಲಿ ಆದರೂ ಒಂದು ಅಸಾಧಾರಣ ಧರ್ಮಾಂಧತೆ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಮುಂದಿನ ರೂಪ್ ಕನ್ವರ್ ಪ್ರಸಂಗ, 1987ರ ಸತಿಪದ್ಧತಿ ನಿಷೇಧ ಕಾನೂನಿನ ಮರುಜಾರಿ ಆಧುನಿಕ ಭಾರತದ ಎಂಥ ತಲ್ಲಣಗಳ ಫಲಗಳೆನ್ನುವುದು ಎಲ್ಲರಿಗೂ ಗೊತ್ತು.
ಈಗಲೂ ಸಮಾಜದಲ್ಲಿ ಯಾವುದೇ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಸಂಘರ್ಷಗಳು ನಡೆಯಲಿ, ಅವು ಮಹಿಳೆಯರ ಮೇಲೆ ಅದರಲ್ಲೂ ವಿಧವೆಯರ ಮೇಲೆ ಬೀರುವ ಪರಿಣಾಮ ಪ್ರತ್ಯೇಕ ಗಮನಕ್ಕೆ ಅರ್ಹವಾಗಿರುತ್ತದೆ. ಅಂತೆಯೇ ಕಾನೂನಿನಲ್ಲಿ ಯಾವ ಸುಧಾರಣೆ ಬರಲಿ ಅದು ವಿಧವೆಯರ ಸ್ಥಿತಿಗತಿಯನ್ನು ಸುಧಾರಿಸುವ ಶಕ್ತಿ ಹೊಂದಿರುತ್ತದೆ. ಆದರೆ ಅದರ ಜಾರಿ ಅದನ್ನು ಕುರಿತ ಜಾಗೃತಿ ಇದಕ್ಕೆ ಬಹಳ ಮುಖ್ಯ. ದೇಶದ ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚಕಾರ ಎತ್ತದಿದ್ದರೂ ಶಾಸಕನೋ ಸಂಸದನೋ ಸತ್ತರೆ ಅವನ ವಿಧವೆಗೆ ಇನ್ನಿಲ್ಲದ ಆದ್ಯತೆ ಬಂದುಬಿಡುತ್ತದೆ.
ಹಾಗೆಯೇ ಹುಸಿ ಧಾರ್ಮಿಕತೆಯ ಅಬ್ಬರ ವಿಧವೆಯರನ್ನು ವಿವಿಧ ರೀತಿಗಳಲ್ಲಿ ಅವಮಾನಿಸುತ್ತಿದೆ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಅವಿಧವಾ ನವಮಿ, ವಟಸಾವಿತ್ರಿ ಹುಣ್ಣಿಮೆ, ಭೀಮನ ಅಮಾವ್ಯಾಸೆ, ಕರ್ವಾ ಚೌತ್ ಮುಂತಾದ ಹಬ್ಬಗಳಿಗೆ ಸಿಗುತ್ತಿರುವ ವಿಪರೀತ ಸಾರ್ವಜನಿಕ ಪ್ರಾಶಸ್ತ್ಯವು ಪುರುಷ ಪ್ರಾಧಾನ್ಯವನ್ನು ಕಾಪಾಡುವ ಹುನ್ನಾರದಂತೆಯೇ ಕಾಣುತ್ತದೆ. ಹಣಕಾಸಿನ ಅನುಕೂಲ, ಉದ್ಯೋಗ ಎಲ್ಲವೂ ಇದ್ದರೂ ವಿಧವೆಗೆ ಎದುರಾಗುವ ಕೌಟುಂಬಿಕ ಮತ್ತು ಸಾಮಾಜಿಕ ಸವಾಲುಗಳು ಹಲವಾರು. ಆದರೆ ಗಂಡನನ್ನು ಕಳೆದುಕೊಂಡಿದ್ದರಿಂದ ಬದುಕಿನ ನೆಲೆನೆಮ್ಮದಿಗಳನ್ನೂ ಕಳೆದುಕೊಂಡು ವೃಂದಾವನವನ್ನು ಸೇರುವ ವಿಧವೆಯರದು ಬೇರೆಯದೇ ವ್ಯಥೆಯ ಕಥೆ.
ಶ್ರೀಕೃಷ್ಣನ ವೃಂದಾವನ ಎಂದರೆ ಈಗ ವಿಧವೆಯರ ಊರು. ಅಲ್ಲಿನ ಸರ್ಕಾರಿ ಮತ್ತು ಖಾಸಗಿ ಆಶ್ರಯಧಾಮಗಳಲ್ಲಿ, ಷೆಡ್‌ಗಳಲ್ಲಿ ಸುಮಾರು ಇಪ್ಪತ್ತು ಸಾವಿರ ವಿಧವೆಯರು ಇದ್ದಾರಂತೆ. ಸೌಲಭ್ಯಗಳು ಸಿಗದೇ ಇರುವುದರಿಂದ ಹಲವರಿಗೆ ವೇಶ್ಯಾವೃತ್ತಿಯೇ ಜೀವನೋಪಾಯ. ಸಾಮಾಜಿಕ ಸುಧಾರಣೆಯ ಯಾವ ಕಾನೂನುಗಳ ನೆರಳೂ ಅವರ ಬದುಕಿನ ಮೇಲೆ ಹಾಯುವುದಿಲ್ಲ. ಬದುಕುವುದು ಹೋಗಲಿ, ಈ ಬಡ ವಿಧವೆಯರು ಸತ್ತರೆ ಅವರನ್ನು ಸುಡಲು ಸೌದೆಯೂ ಸಿಗುವುದಿಲ್ಲ. ಆದ್ದರಿಂದ ಅವರ ಕೈಕಾಲುಗಳನ್ನು ಕಡಿದು ಗೋಣಿಚೀಲದಲ್ಲಿ ಮೂಟೆ ಕಟ್ಟಿ ನದಿಗೆ ಎಸೆಯಲಾಗುತ್ತದಂತೆ. ವಿಧವೆಯರ ಬದುಕು ಮತ್ತು ಸಾವು ಎರಡರ ಬಗ್ಗೆಯೂ ನಾವು ಹೇಳುವುದು ಇನ್ನೇನಿದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.