ADVERTISEMENT

ಕೇಂದ್ರ ಬಜೆಟ್‌ನಲ್ಲಿ ಕಾಣದ ಲಿಂಗತ್ವ ಬದ್ಧತೆ

ಸಿ.ಜಿ.ಮಂಜುಳಾ
Published 6 ಫೆಬ್ರುವರಿ 2017, 19:35 IST
Last Updated 6 ಫೆಬ್ರುವರಿ 2017, 19:35 IST
ಕೇಂದ್ರ ಬಜೆಟ್‌ನಲ್ಲಿ ಕಾಣದ ಲಿಂಗತ್ವ ಬದ್ಧತೆ
ಕೇಂದ್ರ ಬಜೆಟ್‌ನಲ್ಲಿ ಕಾಣದ ಲಿಂಗತ್ವ ಬದ್ಧತೆ   

‘ವಸಂತ ಋತು ಆಶಾವಾದದ ಕಾಲ’ ಎಂಬಂತಹ ಮಾತುಗಳನ್ನು  ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಬಾರಿಯ ಬಜೆಟ್ ಮಂಡನೆ ಸಂದರ್ಭದಲ್ಲಿ ಹೇಳಿದ್ದರು. ಆದರೆ ಈ ಆಶಾವಾದ, ನಿರೀಕ್ಷೆಗಳು  2017–18ರ ಸಾಲಿನ ಬಜೆಟ್‌ನಲ್ಲಿ ಪ್ರತಿಫಲಿಸಿವೆಯೇ?

ಕಳೆದ ವರ್ಷ ನವೆಂಬರ್‍ 8ರಂದು ₹1000 ಹಾಗೂ ₹500 ನೋಟುಗಳ ರದ್ದತಿಯ ನಂತರ ಮಂಡಿಸಿದ ಬಜೆಟ್ ಬಗ್ಗೆ  ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಿದ್ದವು.  ಭಾರತವನ್ನು ಪರಿವರ್ತಿಸುವ (ಟ್ರಾನ್ಸ್ಫಾರ್ಮ್), ಸಶಕ್ತಗೊಳಿಸುವ (ಎನರ್ಜೈಸ್) ಹಾಗೂ ಸ್ವಚ್ಛಗೊಳಿಸುವ (ಕ್ಲೀನ್) ಸಂಕಲ್ಪವನ್ನು ಈ ಬಜೆಟ್ ಹೊಂದಿದೆ ಎಂದೂ ಜೇಟ್ಲಿ ಹೇಳಿಕೊಂಡಿದ್ದಾರೆ. 

‘ಇದು ಉತ್ತಮ ಭಾರತ ನಿರ್ಮಾಣಕ್ಕಾಗಿ ಮಂಡಿಸಿದ ಬಜೆಟ್. ಮಹಿಳಾ ಸಬಲೀಕರಣಕ್ಕೆ ಗಮನ ಕೇಂದ್ರೀಕರಿಸುವ ಬಜೆಟ್’ ಎಂಬುದು ರಾಷ್ಟ್ರದ ಜನಸಂಖ್ಯೆಯ ಶೇ 48ರಷ್ಟು ಮಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವಾಗಿತ್ತು. ಈ ಬಜೆಟ್‌ನಲ್ಲಿ ಮಹಿಳೆಯರಿಗಾಗಿ ಅನೇಕ ಯೋಜನೆಗಳನ್ನು ಪ್ರಕಟಿಸಲಾಗಿದೆ ನಿಜ. ಹಾಗೆಂದಾಕ್ಷಣ ಇದು ಲಿಂಗತ್ವ ಸಮಾನತೆಗೆ ಪೂರಕವಾಗಿರುವ ಬಜೆಟ್ ಎಂದು ಅರ್ಥೈಸಬಹುದೆ?

ADVERTISEMENT

ಲಿಂಗತ್ವ ಸಮಾನತೆಗೆ ಪೂರಕವಾಗಿರುವ ಬಜೆಟ್ ಅಥವಾ ‘ಜೆಂಡರ್ ಬಜೆಟಿಂಗ್’ ಎಂಬ ಪರಿಕಲ್ಪನೆ ಭಾರತಕ್ಕೆ ಹೊಸದಲ್ಲ. 2005ರಿಂದಲೂ ಈ ಪರಿಕಲ್ಪನೆ ಅಸ್ತಿತ್ವದಲ್ಲಿದೆ. ಸಂಪನ್ಮೂಲಗಳು, ಸೌಲಭ್ಯಗಳನ್ನು ಪಡೆದುಕೊಳ್ಳುವುದು ಈಗಲೂ ಮಹಿಳೆಗೆ ದೊಡ್ಡ ಸವಾಲು. ಈ ಸಮಸ್ಯೆಯನ್ನು ಪ್ರತಿಬಿಂಬಿಸಿ ನಿರ್ವಹಿಸಬೇಕು ಎಂಬುದೇ ‘ಜೆಂಡರ್ ಬಜೆಟಿಂಗ್’ ಉದ್ದೇಶ. ಭಾರತದ ಕನಿಷ್ಠ 16 ರಾಜ್ಯಗಳು ಪ್ರತಿ ವರ್ಷ ಈ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳುತ್ತಿವೆ.  ಈ ಬಜೆಟ್‌ನಲ್ಲೂ  ಅದಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ.

2017-18ರ ಬಜೆಟ್ ಸಿದ್ಧತೆಯಲ್ಲೇ ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂಬುದು ದಾಖಲೆ. ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಹಿರಿಯ ಸಿಬ್ಬಂದಿಯಲ್ಲಿ ಶೇ 41ರಷ್ಟು ಮಂದಿ ಮಹಿಳೆಯರಿದ್ದರು. ಒಟ್ಟಾರೆ ಬಜೆಟ್ ಸಂಬಂಧಿ ಕಾರ್ಯದಲ್ಲಿ ಶೇ 52ರಷ್ಟನ್ನು ಈ ಮಹಿಳೆಯರೇ ನಿರ್ವಹಿಸಿದ್ದಾರೆ ಎಂಬುದು ಹೆಚ್ಚುಗಾರಿಕೆ. ವಿವಿಧ ಕೇಂದ್ರ ಸಚಿವಾಲಯಗಳು ಹಾಗೂ ಇಲಾಖೆಗಳಿಗೆ ಸೇರಿದ ಹೆಚ್ಚುವರಿ ಕಾರ್ಯದರ್ಶಿ  ಹಾಗೂ ಜಂಟಿ ಕಾರ್ಯದರ್ಶಿಗಳ ಶ್ರೇಣಿಯ 34 ಹಣಕಾಸು ಸಲಹೆಗಾರರಲ್ಲಿ 14 ಮಂದಿ ಮಹಿಳೆಯರಿದ್ದುದು ವಿಶೇಷ.

ಕಳೆದ ಸಾಲಿನ ಕೇಂದ್ರ ಮುಂಗಡಪತ್ರಕ್ಕೆ ಹೋಲಿಸಿದರೆ ಈ ಬಾರಿ ಹಲವು ಯೋಜನೆಗಳು ಹಾಗೂ ಮಹಿಳಾ ಕೇಂದ್ರಿತ ನೀತಿಗಳಿಗೆ ಸಾಕಷ್ಟು ಗಮನ ಹರಿಸಲಾಗಿದೆ. ಕಳೆದ ವರ್ಷ ಅಡುಗೆ ಅನಿಲಕ್ಕೆ ಸಂಬಂಧಿಸಿದಂತೆ ವಿಶೇಷ ಯೋಜನೆ ಬಿಟ್ಟರೆ ಮಹಿಳೆಗಾಗಿ ಬಜೆಟ್‌ನಲ್ಲಿ ಹೆಚ್ಚಿನದೇನೂ ಇರಲಿಲ್ಲ ಎಂಬುದು ಟೀಕೆಗಳಿಗೂ ಗುರಿಯಾಗಿತ್ತು.

ಸರ್ವರ ಜೊತೆ ಸರ್ವರ ಅಭಿವೃದ್ಧಿ  (‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’) ಎಂಬುದು ಹೆಣ್ಣುಮಗು ಹಾಗೂ ಮಹಿಳೆಯಿಂದ ಆರಂಭವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದ ವೇಳೆ ಹೇಳಿದ್ದು ವಿಶೇಷವಾಗಿತ್ತು.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ  ಈ ಬಾರಿ ನೀಡಿರುವ ಬಜೆಟ್ ಅನುದಾನದಲ್ಲಿ ಶೇ 26ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ನೀಡಲಾಗಿದ್ದ ಅನುದಾನ ₹17,640 ಕೋಟಿ. ಅದು ಈ ಬಾರಿ ₹22,095 ಕೋಟಿಗೆ ಏರಿಕೆಯಾಗಿದೆ. ಹಾಗೆಯೇ ವಿವಿಧ ಸಚಿವಾಲಯಗಳಲ್ಲಿ ವಿವಿಧ ಯೋಜನೆಗಳಡಿ ಮಹಿಳೆಯರ  ಕ್ಷೇಮಾಭಿವೃದ್ಧಿಗಾಗಿ  ಈ ಬಜೆಟ್‌ನಲ್ಲಿ ಹಂಚಿಕೆ ಮಾಡಲಾದ ಹಣ ₹1.86 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ನೀಡಲಾಗಿದ್ದ ಹಣ  ₹1.56 ಲಕ್ಷ ಕೋಟಿ. ಇದರಲ್ಲಿ ಬಹುದೊಡ್ಡ ಮೊತ್ತ ಗರ್ಭಿಣಿ ಸ್ತ್ರೀಯರ ನೆರವಿನ ಯೋಜನೆಗಳಿಗೆ ಬಳಕೆಯಾಗಲಿದೆ. ಹೊಸ ವರ್ಷದ ಮುನ್ನಾದಿನ ಮಾಡಿದ ಭಾಷಣದಲ್ಲೇ ಪ್ರಧಾನಿ ಮೋದಿಯವರು ಈ ಯೋಜನೆಯನ್ನು ಪ್ರಕಟಿಸಿದ್ದರು. ಈ ಕುರಿತು ಬಜೆಟ್‌ನಲ್ಲೂ ಮರು ಪ್ರಸ್ತಾಪಿಸಲಾಗಿದೆ.

ರಾಷ್ಟ್ರದ ಎಲ್ಲಾ 650 ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಗರ್ಭಿಣಿಯರಿಗೆ ₹6000 ಹಣಕಾಸು ನೆರವನ್ನು ಅವರ ಬ್ಯಾಂಕ್‌ ಖಾತೆಗಳಿಗೆ  ವರ್ಗಾಯಿಸಲಾಗುತ್ತದೆ. ಈ ಹಣ ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲಿಸಲು, ಪೌಷ್ಟಿಕ ಆಹಾರ ಖರೀದಿಸಲು, ಬಾಣಂತನದ ಆರೈಕೆ ಹಾಗೂ ಮಗುವಿಗೆ ಅಗತ್ಯವಿರುವ ಆಹಾರ, ಲಸಿಕೆ ಮತ್ತಿತರ ವೆಚ್ಚ ಭರಿಸಲು ಸಹಕಾರಿಯಾಗಲಿದೆ. ‘ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ’ ಅಡಿ ಜಾರಿ ಮಾಡಲಾಗುವ ಈ ಯೋಜನೆಗೆ ₹2700 ಕೋಟಿ ತೆಗೆದಿರಿಸಲಾಗಿದೆ.

ಆದರೆ ಈ ನೆರವು ಪಡೆದುಕೊಳ್ಳಲು ಷರತ್ತುಗಳಿವೆ.   ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವುದಲ್ಲದೆ ಮಕ್ಕಳಿಗೆ ಲಸಿಕೆ ಹಾಕಿಸಿರಬೇಕಾದುದು ಕಡ್ಡಾಯ. ಗರ್ಭಾವಸ್ಥೆಯಲ್ಲಿ ಸಾಂಸ್ಥಿಕ ಆರೋಗ್ಯ ಸೇವಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಮಹಿಳೆಯರು ಮುಂದಾಗಬೇಕು ಎಂಬುದು ಈ ಯೋಜನೆಯ ಹಿಂದಿರುವ ಆಶಯ. ತಾಯಿ ಹಾಗೂ ಶಿಶುಮರಣ ತಪ್ಪಿಸುವ ಪ್ರಯತ್ನ ಇದು ಎಂದು ಮೋದಿಯವರೂ ಹೇಳಿದ್ದಾರೆ.

ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆ ಗುಣಮಟ್ಟ ಸುಧಾರಣೆ ಹಾಗೂ ಮನೆಗಳಲ್ಲಿನ ಹೆರಿಗೆ ಸುರಕ್ಷಿತವಾಗಿಸುವುದರ ಬಗ್ಗೆ ಗಮನ ಕೇಂದ್ರೀಕರಿಸದಿರುವುದು ವಾಸ್ತವಿಕತೆಯನ್ನು ಮರೆಮಾಚುವ ಯತ್ನವಾಗಿದೆ. ಆರೋಗ್ಯ ಸೇವೆಯನ್ನೇ ಪಡೆದುಕೊಳ್ಳಲು ಸಾಧ್ಯವಿಲ್ಲದ ಅಪಾರ ಸಂಖ್ಯೆಯ ಮಹಿಳೆಯರ ಸಮಸ್ಯೆಗಳನ್ನು ಈ ಯೋಜನೆ ಕಡೆಗಣಿಸಿದೆ.

₹500 ಕೋಟಿ ಬಜೆಟ್ ಹಂಚಿಕೆಯೊಂದಿಗೆ 14 ಲಕ್ಷ  ಅಂಗನವಾಡಿ ಕೇಂದ್ರಗಳಲ್ಲಿ ಗ್ರಾಮ ಮಟ್ಟದಲ್ಲಿ ‘ಮಹಿಳಾ ಶಕ್ತಿ ಕೇಂದ್ರ’ಗಳನ್ನು ಆರಂಭಿಸುವ ಭರವಸೆಯನ್ನು ಸರ್ಕಾರ ನೀಡಿದೆ. ಮಹಿಳೆಯರಲ್ಲಿ ಸ್ವಾವಲಂಬನೆ ಹೆಚ್ಚಳಕ್ಕೆ ಈ ಕೇಂದ್ರಗಳು ಸಹಕಾರಿಯಾಗುವ ನಿರೀಕ್ಷೆ ಇದೆ.

ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೂ ಗಮನ ಹರಿಸಲಾಗುತ್ತಿದೆ. ಇದು ಮಹಿಳೆ ಆರೋಗ್ಯ ಹಾಗೂ ಭದ್ರತೆ ಸುಧಾರಣೆಗೆ ನೆರವಾಗಲಿದೆ. ಸ್ವಚ್ಛತೆಯ ಸೌಲಭ್ಯಗಳ ಕೊರತೆ ಮಹಿಳೆಯರ ಮೇಲೆ ಅಪಾರ ಹೊರೆ ಹೊರಿಸುತ್ತಿದೆ ಎಂಬುದರತ್ತ ಬಜೆಟ್ ಹಿಂದಿನ ದಿನ ಮಂಡಿಸಲಾದ ‘ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆ’ ಗಮನ ಸೆಳೆದಿತ್ತು. ಶೌಚಾಲಯಗಳ ಕೊರತೆಯಿಂದ ಹೆಣ್ಣುಮಕ್ಕಳ ಖಾಸಗಿತನದ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದಾದ್ದರಿಂದ ಇದನ್ನು ಗಂಭೀರವಾದ ನೀತಿನಿರೂಪಣೆಯ ಅಂಶವಾಗಿ ಪರಿಗಣಿಸಬೇಕಾದ ಅಗತ್ಯವನ್ನು ಈ ಸಮೀಕ್ಷೆ ಪ್ರತಿಪಾದಿಸಿದೆ.

ಪ್ರಧಾನಮಂತ್ರಿಯವರ ಪ್ರಿಯ ಯೋಜನೆಯಾದ ‘ಬೇಟಿ ಬಚಾವೊ ಬೇಟಿ ಪಢಾವೊ’ ಯೋಜನೆಗೆ  ಈ ವರ್ಷ ₹200 ಕೋಟಿ ಅನುದಾನ ಘೋಷಿಸಲಾಗಿದೆ. ಈ ಮೊತ್ತದಲ್ಲಿ ಕಳೆದ ವರ್ಷಕ್ಕಿಂತ ಐದು ಪಟ್ಟು ಹೆಚ್ಚಳವಾಗಿದೆ.

‘ನಿರ್ಭಯಾ ನಿಧಿ’ಗೆ ಈ  ವರ್ಷ ಮತ್ತೆ ₹500 ಕೋಟಿ ನೀಡಲಾಗಿದೆ. 2013ರಲ್ಲಿ ₹1000 ಕೋಟಿಯೊಂದಿಗೆ ಸ್ಥಾಪನೆಯಾದ ಈ ನಿಧಿಗೆ ಪ್ರತಿ ವರ್ಷ ₹1000 ಕೋಟಿ ಹಣ ನೀಡಲಾಗಿದೆ. ಮಹಿಳೆಯರ ಸುರಕ್ಷತೆ ಹಾಗೂ ಭದ್ರತೆ ಯೋಜನೆಗಳಿಗೆ ಈ ಹಣ ವಿನಿಯೋಗಿಸಬೇಕೆಂಬುದು ಇದರ ಉದ್ದೇಶ. ಆದರೆ ಕಳೆದ ಮೂರು ವರ್ಷಗಳಿಂದಲೂ ಈ ನಿಧಿ ಬಳಕೆಯಾಗದೆ ಉಳಿದಿದೆ ಎಂಬುದು ವಿಪರ್ಯಾಸ.

ದಿನನಿತ್ಯ ಎಂಬಂತೆ ಮಹಿಳೆ ಮೇಲಿನ ಕಿರುಕುಳಗಳು, ಅಪರಾಧಗಳು ಅನೇಕ ಹಳ್ಳಿ, ಪಟ್ಟಣಗಳಿಂದ  ವರದಿಯಾಗುತ್ತಲೇ ಇವೆ. ಹೀಗಾಗಿ ಮಹಿಳೆ ಸುರಕ್ಷತೆಗಾಗಿ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯ ಇದೆ ಎಂಬುದು ಸ್ಪಷ್ಟ. ಸಾರ್ವಜನಿಕ ರಸ್ತೆ ಸಾರಿಗೆಯಲ್ಲಿ ಮಹಿಳೆ ಸುರಕ್ಷತೆ ಬಗ್ಗೆ ಯೋಜನೆ ರೂಪಿಸಲು ಸರ್ಕಾರ ಮುಂದಾಗಿದ್ದರೂ ಅದು ಈವರೆಗೆ ಕೈಗೂಡಿಲ್ಲ. ಎಂದರೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವಲ್ಲಿ ಆಡಳಿತ ಯಂತ್ರದ ನಿಷ್ಕ್ರಿಯತೆಗೆ ಇದಕ್ಕಿಂತ ದೊಡ್ಡ ಉದಾಹರಣೆ ಇಲ್ಲ. 

ಎಂನರೇಗಾ ಯೋಜನೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ48ರಿಂದ  ಶೇ55ಕ್ಕೆ ಏರಿಕೆಯಾಗಿದೆ ಎಂದು ಸ್ವತಃ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೇ ಹೇಳಿದ್ದಾರೆ. ಹೀಗಾಗಿ ನರೇಗಾ ಯೋಜನೆಗೆ ಈ ವರ್ಷ  ಬಜೆಟ್‍ ನಲ್ಲಿ ₹48,000 ಕೋಟಿ ಅನುದಾನ ನೀಡಲಾಗಿದೆ. ಕಳೆದ ವರ್ಷ ₹ 38,500 ಕೋಟಿ ನೀಡಲಾಗಿತ್ತು. ಆದ್ದರಿಂದ ಇದು ದೊಡ್ಡ ಏರಿಕೆ ಎಂದೇ ಬಿಂಬಿಸಲಾಗುತ್ತಿದೆ. ಆದರೆ ಕಳೆದ ವರ್ಷವೇ  ಬಜೆಟ್‌ನಲ್ಲಿ ನಿಗದಿಯಾಗಿದ್ದ  ₹38,500 ಕೋಟಿಗಿಂತ ಹೆಚ್ಚು ವ್ಯಯಿಸಲಾಗಿತ್ತು.

ಹೀಗಾಗಿ ಕಳೆದ ವರ್ಷವೇ ಮತ್ತೆ ₹9000 ಕೋಟಿಯನ್ನು ಸೇರಿಸಲಾಗಿತ್ತು. ಅಂದರೆ, ಕಳೆದ ವರ್ಷವೇ ನರೇಗಾಗೆ ₹47,500 ಕೋಟಿ ಸಿಕ್ಕಿತ್ತು. ಇದರಿಂದಾಗಿ  ಈಗ ಏರಿಕೆ ಕೇವಲ ₹500 ಕೋಟಿ ಅಷ್ಟೆ.  ಆದರೆ ಈ ಕ್ಷೇತ್ರದಲ್ಲಿ ಇರುವ  ಉದ್ಯೋಗ ಬೇಡಿಕೆಯನ್ನು ಪೂರೈಸಬೇಕಾದರೆ ಇನ್ನೂ ಹೆಚ್ಚು ಹಣ ಬೇಕು. ಏಕೆಂದರೆ ಉದ್ಯೋಗ ಅರಸುತ್ತಿರುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಹೀಗಾಗಿ ಇದು ಮಹಿಳೆಯರಿಗೇ ನಿರ್ದಿಷ್ಟವಾಗಿ ಲಾಭದಾಯಕ ಎಂದೂ ಪರಿಗಣಿಸಲಾಗದು. ಈ ಯೋಜನೆ ಅನುಷ್ಠಾನದಲ್ಲಿ ಸುತ್ತಿಕೊಂಡಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕಾದುದೂ ಅಷ್ಟೇ ಮುಖ್ಯ ಸಂಗತಿ.

ಇವೆಲ್ಲಾ ಒಳ್ಳೆಯ ಯೋಜನೆಗಳು ಎಂಬುದು ನಿಜ. ಆದರೆ ಇವಿಷ್ಟೇ ಸಾಕೆ ಎಂಬುದು ಪ್ರಶ್ನೆ.  ಹೆಚ್ಚಿನ ಯೋಜನೆಗಳು ತಾಯಿಯಾಗಿ ಅಥವಾ ಗೃಹಿಣಿಯರಾಗಿರುವ ಮಹಿಳೆಯರಿಗೆ ನೆರವು ನೀಡುತ್ತವೆ. ಆದರೆ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸಲು ಕೆಲವೇ ಯೋಜನೆಗಳಷ್ಟೇ ಇವೆ. ಕೌಶಲ ವೃದ್ಧಿ ಅಥವಾ ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಮಹಿಳೆಯರಿಗೆ ತುಂಬಾ ಹೆಚ್ಚಿನ ಯೋಜನೆಗಳಿಲ್ಲ. ಇದು ಎಷ್ಟು ಸರಿ?

ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಂಶೋಧನೆಯ ಪ್ರಕಾರ, ಉದ್ಯೋಗ ಕ್ಷೇತ್ರದಲ್ಲಿ ಪುರುಷರಷ್ಟೇ ಮಹಿಳೆಯರ ಪಾಲ್ಗೊಳ್ಳುವಿಕೆಯು ಸಾಧ್ಯವಾದಾಗ ಮಾತ್ರ ಭಾರತದ ಜಿಡಿಪಿ 27%ಗೆ ಏರಿಕೆಯಾಗುತ್ತದೆ. ವಿಶ್ವ ಬ್ಯಾಂಕ್ ವರದಿಯ ಪ್ರಕಾರ ಶೇ 27ರಷ್ಟು ಮಹಿಳೆಯರು ಮಾತ್ರ ಉದ್ಯೋಗ ಕ್ಷೇತ್ರದಲ್ಲಿದ್ದಾರೆ.  ಜೊತೆಗೆ ಮಕ್ಕಳು ಹುಟ್ಟಿದ ನಂತರ ಶೇ 18ರಿಂದ 34 ರಷ್ಟು  ಮಹಿಳೆಯರು ಮಾತ್ರ ಉದ್ಯೋಗಗಳಿಗೆ ಹಿಂದಿರುಗುತ್ತಾರೆ. ಇಂತಹ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಗ್ರಹಿಸಬೇಕು.

ಮಹಿಳೆಯರು ಉದ್ಯೋಗಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಲ್ಲದೆ ಉದ್ಯೋಗಗಳಲ್ಲಿ  ಮುಂದುವರಿಯಲು ಅಗತ್ಯವಾದ ಮೂಲ ಸೌಕರ್ಯಗಳ ಜೊತೆಗೆ ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಬೇಕಾದುದೂ ಇಂದಿನ ಅಗತ್ಯ. ಆದಾಯ ತೆರಿಗೆಯಲ್ಲಿ ಮಹಿಳೆಯರಿಗೆ ರಿಯಾಯಿತಿ, ಆಲೋಚಿಸಬಹುದಾದ ವಿಚಾರ. ಏಕೆಂದರೆ ವೇತನ ಪಡೆಯುವ ಮಹಿಳೆಯರ ಸಂಖ್ಯೆಯೇ ಅತ್ಯಂತ ಕಡಿಮೆ. ಹಾಗೆಯೇ ದುಡಿಯುವ ಮಹಿಳೆಯರನ್ನು ಹೆಚ್ಚಾಗಿ ಕಾಡುವ ಸಂಗತಿ ಎಂದರೆ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ. ಇಂತಹ ವಿಚಾರಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕಾದ ಹೊಣೆ ನೀತಿನಿರೂಪಕರಿಗಿದೆ.

ಷಾಪ್ಸ್ ಅಂಡ್ ಎಸ್ಟಾಬ್ಲಿಷ್‌ಮೆಂಟ್  ಮಸೂದೆ, ಮಹಿಳೆಯರ ಉದ್ಯೋಗಕ್ಕೆ ಹೆಚ್ಚುವರಿ ಅವಕಾಶಗಳನ್ನು ತೆರೆಯಲು ಉದ್ದೇಶಿಸಿರುವುದು ಪ್ರಸ್ತುತವಾದದ್ದು.
ಡಿಜಿಟಲ್ ಕಂದರವನ್ನು ಮುಚ್ಚುವುದಕ್ಕಾಗಿ ವಿದ್ಯಾರ್ಥಿಗಳಿಗೆ ಅದರಲ್ಲೂ  ವಿಶೇಷವಾಗಿ ಹೆಣ್ಣುಮಕ್ಕಳಿಗೆ  ಉಚಿತ ಡಿಜಿಟಲ್ ಕಲಿಕೆಗೆ  ‘ಸ್ವಯಂ’ ವೇದಿಕೆಯನ್ನು ಆರಂಭಿಸಲಾಗಿದೆ. ದುಡಿಯುವ ಮಹಿಳೆಯರ ಹಾಸ್ಟೆಲ್‌ಗಳಿಗಾಗಿ ₹50 ಕೋಟಿ ಹಂಚಿಕೆ ಮಾಡಲಾಗಿದೆ.

‘ಗ್ರೀನ್ ಫೀಲ್ಡ್’ ಉದ್ಯಮಗಳ ಸ್ಥಾಪನೆಗಾಗಿ ಮಹಿಳಾ ಉದ್ಯಮಿಗಳಿಗೆ ನೆರವಾಗಲು ‘ಸ್ಟಾಂಡ್ ಅಪ್ ಇಂಡಿಯಾ ಸ್ಕೀಮ್’ ಅನ್ನು ಈ ವರ್ಷ ಏಪ್ರಿಲ್‌ನಲ್ಲಿ  ಮಹಿಳಾ ಉದ್ಯಮಿಗಳಿಗಾಗಿ ಆರಂಭಿಸಲಾಗುತ್ತಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿ ಸಾಲ ನೀಡಿಕೆ ಗುರಿಯನ್ನು ₹ 2.44 ಲಕ್ಷ ಕೋಟಿಗೆ ಏರಿಸಲಾಗಿದೆ. ಇದೂ ಕೂಡ ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗದವರು ಹಾಗೂ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವಂತಹದ್ದು.

ಇಷ್ಟೆಲ್ಲಾ ಮಾತನಾಡಿದರೂ ಹೆಚ್ಚಿನ  ಮಹಿಳೆಯರು ಕೆಲಸ ಮಾಡುವ ಅಸಂಘಟಿತ ವಲಯದ ಮಹಿಳೆಯರ ಬಗ್ಗೆ ಬಜೆಟ್‌ನಲ್ಲಿ ಯಾವ ಪ್ರಸ್ತಾಪಗಳೂ ಇಲ್ಲ. 1974ರಲ್ಲಿ ಮಹಿಳೆಯರ ಸ್ಥಾನಮಾನ ಕುರಿತಂತಹ ವರದಿ ‘ಸಮಾನತೆಯತ್ತ’ ಪ್ರಕಟವಾದಾಗಲಿಂದಲೂ ಸಾರ್ವಜನಿಕ ವೆಚ್ಚದಲ್ಲಿ ಲಿಂಗ ದೃಷ್ಟಿಕೋನದ ಅಗತ್ಯ ಪ್ರತಿಪಾದಿಸುತ್ತಲೇ ಬರಲಾಗುತ್ತಿದೆ. ಆರ್ಥಿಕತೆಯಲ್ಲಿ ಮಹಿಳೆಯ ಸಕ್ರಿಯ  ಪಾಲ್ಗೊಳ್ಳುವಿಕೆಗೆ ಬಜೆಟ್ ಬದ್ಧತೆಯೊಳಗೆ ಲಿಂಗತ್ವದ ದೃಷ್ಟಿಕೋನ ದೊಡ್ಡ ಮಟ್ಟದಲ್ಲೇ ಅಂತರ್ಗತವಾಗಬೇಕಾದುದು ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.