ADVERTISEMENT

ಅಲೆಯ ಹಿಂದಿನ ಕೈ

ಡಾ. ಗುರುರಾಜ ಕರಜಗಿ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಏಸುಸ್ವಾಮಿ ಸಮುದ್ರದ ತೀರದಲ್ಲಿ ನಿಂತಿದ್ದ. ಆಗ ತಾನೇ ಬೆಳಗಾಗುತ್ತಿತ್ತು. ಪಸರಿಸುತ್ತಿದ್ದ ಬೆಳಕಿನಲ್ಲಿ ಸಮುದ್ರದ ರುದ್ರರಮಣೀಯ ದೃಶ್ಯ ಮನೋಹರವಾಗಿ ಕಾಣುತ್ತಿತ್ತು. ತೆರೆಗಳ ಗಾತ್ರ, ಚಲನೆ ಕಣ್ಣಿಗೆ ಸುಂದರವಾಗಿ ಕಂಡರೂ ಭಯಂಕರವಾಗಿದ್ದವು. ಸಮುದ್ರದ ಮೇಲಿಂದ ಬೀಸಿ ಬಂಧ ತಂಗಾಳಿ ಚೇತೋಹಾರಿಯಾಗಿತ್ತು. ನೀಲೀ ಆಗಸದಲ್ಲಿ ಅಲ್ಲಲ್ಲಿ ಬೆಣ್ಣೆಯ ಮುದ್ದೆಗಳಂತೆ ಬಿಳೀ ಮೋಡಗಳು ಚಲಿಸುತ್ತಿದ್ದವು.

ಆಗ ಅಲ್ಲಿಗೆ ಏಸುಸ್ವಾಮಿಯ ಶಿಷ್ಯನೊಬ್ಬ ಬಂದ. ಆತ ಸ್ವಾಮಿಯ ಮುಖವನ್ನೇ ನೋಡುತ್ತ ನಿಂತ. ಅವನ ಮೊಗದಲ್ಲೇನೋ ದುಗುಡ ಒಡೆದು ಕಾಣುತ್ತಿತ್ತು. ಏಸುಸ್ವಾಮಿ ಕೇಳಿದ,  `ಯಾಕಪ್ಪಾ, ಏನೋ ಚಿಂತೆಯಲ್ಲಿ ಇದ್ದಂತಿದೆ?~

`ಸ್ವಾಮೀ, ನಾನು ನಿಮ್ಮ ಸಂಪರ್ಕಕ್ಕೆ ಬಂದಾಗಿನಿಂದ ನಿಮ್ಮ ದಾಸನೇ ಆಗಿಬಿಟ್ಟಿದ್ದೇನೆ. ಆದರೂ ನನಗೆ ನಿಮ್ಮ ಶಕ್ತಿಯ ಅರಿವಾಗಲಿಲ್ಲವೆನನಿಸುತ್ತದೆ. ನೀವು ಸಮುದ್ರದ ತೆರೆಗಳ ಮೇಲೆ ನಡೆದು ಹೋಗಿದ್ದನ್ನು ಕೇಳಿದ್ದೇನೆ. ಅದು ಹೇಗೆ ಸಾಧ್ಯ? ನನಗಿನ್ನೂ ನಂಬಲು ಸಾಧ್ಯವಾಗುತ್ತಿಲ್ಲ~ ಎಂದ.

`ನಿನ್ನಲ್ಲಿ ಶ್ರದ್ಧೆ ಇದ್ದರೆ, ಭಗವಂತನ ಅಪಾರವಾದ ಕರುಣೆಯಲ್ಲಿ ನಂಬಿಕೆಯಿದ್ದರೆ, ಅವನ ಕಣ್ಣುಗಳಿಂದ ಸದಾ ಸೂಸುವ ಅಭಯದ ಕಿರಣಗಳು ನಿನ್ನನ್ನು ತಟ್ಟಿದರೆ ಯಾವುದು ಅಸಾಧ್ಯ? ಒಬ್ಬ ಸಮರ್ಥ ಮೀನುಗಾರನ ದೋಣಿ ಯಾವ ಭಯವಿಲ್ಲದೇ ತೆರೆಗಳ ಮೇಲೆ ಸಾಗಿ ಹೋಗುವಂತೆ ನೀನೂ ನಡೆದು ಹೋಗಬಹುದು~ ಎಂದ ಏಸುಸ್ವಾಮಿ.

`ಇಲ್ಲ ಸ್ವಾಮೀ, ನನಗೆ ನಿಮ್ಮಲ್ಲಿ ಸಂಪೂರ್ಣ ನಂಬಿಕೆಯಿದೆ, ಭಗವಂತನ ಶಕ್ತಿಯಲ್ಲಿ ನಂಬಿಕೆ ಇದೆ. ಆ ನಂಬಿಕೆ ನನ್ನಲ್ಲಿ ಶಕ್ತಿಯನ್ನು ತುಂಬುತ್ತದೆ~ ನುಡಿದ ಶಿಷ್ಯ.

`ಹಾಗಾದರೆ ಬಾ, ಈ ಭಯಂಕರವಾದ ತೆರೆಗಳ ಮೇಲೆ ನಡೆದುಹೋಗೋಣ~ ಎಂದು ಏಸುಸ್ವಾಮಿ ನೀರಿಗಿಳಿದು ನಡೆಯತೊಡಗಿದ. ಶಿಷ್ಯ ಅವನನ್ನು ಹಿಂಬಾಲಿಸಿದ.

ಮುಂದೆ ಒಂದು ಭಾರೀ ಪರ್ವತದಂತಹ ತೆರೆ ಎದ್ದು ಬಂದಿತು. ಅದು ಎಲ್ಲರನ್ನೂ ಮುಳುಗಿಸಿಯೇ ಬಿಡುತ್ತದೆ ಎನ್ನುವಷ್ಟು ಭಯಂಕರವಾಗಿತ್ತು. ಏಸುಸ್ವಾಮಿಯ ಮುಖದಲ್ಲಿ ಯಾವ ಆತಂಕವೂ ಇಲ್ಲ! ಆತ ನಿಧಾನವಾಗಿ ಪುಟ್ಟ ಬೆಟ್ಟವನ್ನು ಏರುವವರಂತೆ ನಡೆದು ಅದನ್ನು ದಾಟಿದ.

ಹಿಂದೆ ಬರುತ್ತಿದ್ದ ಶಿಷ್ಯನಿಗೆ ಭಯವಾಯಿತು. ಯಾಕೆಂದರೆ ಏಸುಸ್ವಾಮಿ ತೆರೆಯನ್ನು ದಾಟಿ ಆ ಕಡೆಗೆ ಹೋಗಿದ್ದರಿಂದ ಕ್ಷಣಕಾಲ ಈತನಿಗೆ ಸ್ವಾಮಿ ಕಾಣುತ್ತಿರಲಿಲ್ಲ. ತಕ್ಷಣವೇ ಈತನ ಕಾಲು ನೀರಿನೊಳಗೆ ಮುಳುಗತೊಡಗಿದವು. ನೀರು ಸೊಂಟದ ಮಟ್ಟ, ಕುತ್ತಿಗೆಯ ಮಟ್ಟ ಬಂದಿತು. ಆತ ಜೋರಾಗಿ ಕೂಗಿಕೊಂಡ. `ಸ್ವಾಮೀ, ಸ್ವಾಮೀ, ನನ್ನನ್ನು ಕಾಪಾಡಿ, ನಾನು ಮುಳುಗಿ ಹೋಗುತ್ತಿದ್ದೇನೆ.~

ಏಸುಸ್ವಾಮಿ ನಿಧಾನವಾಗಿ ತಿರುಗಿ ಈತನನ್ನು ಕಂಡು ಕೇಳಿದ, `ಯಾಕೆ ಭಯಪಡುತ್ತೀಯಾ? ಏನಾಯಿತು?~

`ಸ್ವಾಮೀ ಈ ಭಯಂಕರವಾದ ಅಲೆಯನ್ನು ಕಂಡೊಡನೆ ನನಗೆ ವಿಪರೀತ ಭಯವಾಯಿತು. ಇದು ನನ್ನ ಮುಳುಗಿಸಿಯೇ ಬಿಡುತ್ತದೆಂಬ ನಂಬಿಕೆ ಬಲವಾಯಿತು. ನಾನು ಮುಳುಗುತ್ತಿದ್ದೇನೆ. ದಯವಿಟ್ಟು ಕೈ ಹಿಡಿದು ಕಾಪಾಡಿ~ ಶಿಷ್ಯನ ಧ್ವನಿಯಲ್ಲಿ ಜೀವ ಭಯ, ಆತಂಕ.

ಆಗ ಮುಗುಳ್ನಕ್ಕು ಏಸುಸ್ವಾಮಿ ಹೇಳಿದ,  `ಮಗೂ ನಿನಗೆ ಅಲೆಯ ಶಕ್ತಿಯಲ್ಲಿ ನಂಬಿಕೆ ಬಲವಾದಾಗ ಭಗವಂತನ ಶಕ್ತಿಯಲ್ಲಿ ನಂಬಿಕೆ ಕರಗಿ ಹೋಯಿತೇ? ನೀನು ಕೇವಲ ಅಲೆಯನ್ನು ನೋಡುತ್ತಿದ್ದೆ ಆದರೆ ಅದರ ಹಿಂದಿದ್ದ, ಆ ಅಲೆಯನ್ನೇ ಸೃಷ್ಟಿಸಿದ ಭಗವಂತನ ಕೈ ಕಾಣಲಿಲ್ಲವೇ? ಅದನ್ನು ಭದ್ರವಾಗಿ ಹಿಡಿದುಕೊಂಡಿದ್ದರೆ ಅವನೇ ನಿರ್ಮಿಸಿದ ಅಲೆ ನಿನ್ನನ್ನು ಹೆಗಲಮೇಲೆ ಪ್ರೀತಿಯಿಂದ ಹೊತ್ತು ಒಯ್ಯುತ್ತಿತ್ತು. ಆಗಲಿ ಬಾ~ ಎಂದು ಅವನ ಕೈ ಹಿಡಿದು ಮರಳಿ ದಂಡೆಗೆ ಕರೆದುಕೊಂಡು ಬಂದ.

ನಂಬಿಕೆ ಅಗಾಧ ಕಾರ್ಯಗಳನ್ನು ಮಾಡಿಸುತ್ತದೆ. ನಾವು ಯಾವುದನ್ನು ಬಲವಾಗಿ ನಂಬುತ್ತೇವೋ ಅದೇ ನಮಗೆ ದೇವರಾಗುತ್ತದೆ, ನಮ್ಮಲ್ಲಿ ಶಕ್ತಿ ತುಂಬುತ್ತದೆ, ಹೃದಯದಲ್ಲಿ ಶಕ್ತಿ ಕುಸಿದು, ಅಸಹಾಯಕ ಸ್ಥಿತಿಗೆ ಬಂದಾಗ ನಮ್ಮನ್ನು ಮೇಲಕ್ಕೆತ್ತಿ ಕಾಪಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT