ಅವರೊಬ್ಬ ಪಶುವೈದ್ಯರು. ಈಗ ಅವರಿಗೆ ಬಹಳ ಒಳ್ಳೆಯ ಅವಕಾಶಗಳು ದೊರೆಯುತ್ತಿದ್ದವು. ಶ್ರಿಮಂತರು ಹೆಚ್ಚಾದಂತೆ ಶ್ರಿಮಂತ ನಾಯಿಗಳೂ ಹೆಚ್ಚಾಗುತ್ತವೆ. ಶ್ರಿಮಂತ ನಾಯಿಗಳು ಎಂದರೆ ಶ್ರಿಮಂತರು ಸಾಕಿದ ನಾಯಿಗಳು. ಅವುಗಳಿಗೆ ದೊರೆಯುವ ಭಾಗ್ಯ ಸಾಮಾನ್ಯನಿಗೆಲ್ಲಿ ದೊರಕೀತು? ಕೆಲವರು ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಒಂದು ಕುಟುಂಬ ವೆಂಕಟೇಶರದು.
ಅವರು ಒಂದು ಕಂಪನಿಯಲ್ಲಿ ದೊಡ್ಡ ಅಧಿಕಾರಿ. ಸದಾ ಕೆಲಸದಲ್ಲೇ ಇರುತ್ತಾರೆ. ಅವರ ಹೆಂಡತಿ ಸುಧಾ ಮನೆಗೆಲಸದೊಂದಿಗೆ ಅವರು ಪ್ರೀತಿಯಿಂದ ಸಾಕಿದ `ವಿಠ್ಠೂ'ವನ್ನು ನೋಡಿಕೊಳ್ಳಬೇಕು. `ವಿಠ್ಠೂ' ಅವರು ಪ್ರೀತಿಯಿಂದ ಸಾಕಿದ ಸುಂದರ ಅಲ್ಸೇಷಿಯನ್ ನಾಯಿ. ವೆಂಕಟೇಶ-ಸುಧಾ ಅವರ ಮಗ `ವಿನೂ' ಹುಟ್ಟಿದ ದಿನವೇ `ವಿಠ್ಠೂ'ನೂ ಹುಟ್ಟಿದ್ದು. ಅವನಿಗೊಸ್ಕರ, ಅವನ ಜೊತೆ ಆಡಲೆಂದೇ ಆ ನಾಯಿಯನ್ನು ದಂಪತಿಗಳು ಸಾಕಿಕೊಂಡಿದ್ದರು. ಅದು ಬೇಗ ಬೆಳೆದು ದೈತ್ಯನಂತಾಯಿತು. ಹೊರಗಿನವರಿಗೆ ಅದನ್ನು ಕಂಡರೆ ಭಾರಿ ಭಯ.
ಆದರೆ, ಮನೆಯವರಿಗೆ ಅದೊಂದು ಮಗುವೇ. ವಿನೂವಿಗಂತೂ ಅದು ಎಡೆಬಿಡದ ಸಂಗಾತಿ. ದಿನದ ಬಹಳಷ್ಟು ಕಾಲ ಅದರೊಂದಿಗೇ ಆಟ. ಅದರ ಬೆನ್ನ ಮೇಲೆಯೇ ಕುಳಿತು ಸವಾರಿ ಮಾಡುತ್ತಿದ್ದ. ದಿನ ಕಳೆದವು. ವಿಠ್ಠೂನಿಗೆ ಈಗ ಹನ್ನೊಂದು ವರ್ಷ. ನಾಯಿಗೆ ಇಷ್ಟು ಆಯುಷ್ಯವೆಂದರೆ ಮುಪ್ಪಿನ ಕಾಲ. ಅದಕ್ಕೆ ಆಗಾಗ ಆರೋಗ್ಯ ಕೆಡಲಾರಂಭಿಸಿತು. ಇತ್ತೀಚಿಗೆ ಒಂದು ತಿಂಗಳಿಂದ ಪೂರ್ತಿ ಆಹಾರವನ್ನೇ ಬಿಟ್ಟಿತು.
ಈ ಪಶುವೈದ್ಯರು ಹೋಗಿ ವಿಠ್ಠೂವನ್ನು ನೋಡಿ ಬಂದರು. ಅವರಿಗೆ ತಿಳಿಯಿತು. ಇನ್ನೂ ವಿಠ್ಠೂ ಬಹಳ ಕಾಲ ಉಳಿಯಲಾರದು. ಇನ್ನೂ ಉಳಿದಷ್ಟು ದಿನ ಅದಕ್ಕೆ ನೋವು ಹೆಚ್ಚೇ ಹೊರತು ಬಿಡುಗಡೆಯಿಲ್ಲ, ದಿನದಿನಕ್ಕೂ ಅದರ ಸಂಕಟ ಹೆಚ್ಚಾಯಿತು. ಆಗ ಪಶುವೈದ್ಯರು ವೆಂಕಟೇಶರಿಗೆ ಹೇಳಿದರು, `ಇನ್ನು ಮುಂದೆ ಬರುಬರುತ್ತ ನಾಯಿಯ ಕಷ್ಟ ಹೆಚ್ಚಾಗುತ್ತದೆ. ಇದಕ್ಕೆ ಒಂದೇ ಹಾದಿಯೆಂದರೆ ದಯಾಮರಣ.
ದಿನವೂ ಮರಣವನ್ನು ಎದುರು ನೋಡುತ್ತಿರುವ ಈ ನಾಯಿಗೆ ಒಂದು ಇಂಜೆಕ್ಷನ್ ನೀಡಿದರೆ ಅದಕ್ಕೆ ಒಂದು ಚೂರೂ ನೋವಾಗದಂತೆ ನಿದ್ದೆಯಲ್ಲಿ ಇದ್ದಂತೆಯೇ ಮರಣ ಹೊಂದುತ್ತದೆ. ಇದು ಒಳ್ಳೆಯ ಹಾದಿ. ನೀವೂ ವಿಚಾರ ಮಾಡಿ ತಿಳಿಸಿ. ವೆಂಕಟೇಶ-ಸುಧಾರಿಗೆ ಒಂದೇ ಚಿಂತೆಯೆಂದರೆ ಇದನ್ನು ವಿನೂ ಹೇಗೆ ತೆಗೆದುಕೊಂಡಾನು? ಅವರ ತಲೆ ಬಿಸಿಯಾಯಿತು. ಆದರೆ ತೀರ್ಮಾನ ಮಾಡಲೇಬೇಕಲ್ಲ? ಮರುದಿನವೇ ದಯಾಮರಣ ನೀಡುವುದೆಂದು ನಿರ್ಧಾರವಾಯಿತು.
ಮರುದಿನ ನಿಶ್ಯಕ್ತವಾಗಿ ಮಲಗಿದ ವಿಠ್ಠೂನ ಸುತ್ತ ವೆಂಕಟೇಶ, ಸುಧಾ ಮತ್ತು ವಿನೂ ಕುಳಿತಿದ್ದರು. ವೈದ್ಯರು ನಿಧಾನವಾಗಿ ಸೂಜಿಮದ್ದು ನೀಡಿದರು. ಎಲ್ಲರೂ ಸಾವಕಾಶವಾಗಿ ನಾಯಿಯ ಮೈಮೇಲೆ ಕೈಮಾಡಿಸುತ್ತಿದ್ದಂತೆಯೇ ಅದರ ಪ್ರಾಣ ಹೋಯಿತು. ಎಲ್ಲರಿಗೂ ತುಂಬ ದುಃಖವಾಯಿತು. ಆಶ್ಚರ್ಯವೆಂದರೆ ವಿನೂ ತುಂಬ ವಿಚಲಿತನಾದಂತೆ ತೋರಲಿಲ್ಲ. ಮರುದಿನ ರಾತ್ರಿ ಊಟಕ್ಕೆ ಕುಳಿತಾಗ ನಾಯಿಯ ಬಗ್ಗೆ ಮಾತು ಬಂತು. ಆಗ ವೆಂಕಟೇಶ ದುಃಖದಿಂದ ಅದೇಕೋ ನಾಯಿಗಳಿಗೂ ಮನುಷ್ಯರಷ್ಟು ದೀರ್ಘ ಆಯುಷ್ಯ ಬರಲಿಲ್ಲ ಎಂದರು. ಈ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ವಿನೂ ತಕ್ಷಣವೇ ಹೇಳಿದ, `ನನಗೆ ಗೊತ್ತು'. ಎಲ್ಲರೂ ಆಶ್ಚರ್ಯದಿಂದ ಅವನ ಕಡೆಗೆ ತಿರುಗಿ ನೋಡಿದರು.
ಆತ ಹೇಳಿದ, `ಮನುಷ್ಯರೆಲ್ಲ ಹುಟ್ಟಿದ್ದು ಚೆನ್ನಾಗಿ ಜೀವನವನ್ನು ನಡೆಸಲು ಕಲಿಯಲೆಂದು, ಎಲ್ಲರನ್ನೂ ಪ್ರೀತಿಸಲೆಂದು, ಎಲ್ಲರಿಗೂ ಒಳ್ಳೆಯವರಾಗಿರಲೆಂದು ಅಲ್ಲವೇ? ಮನುಷ್ಯರಿಗೆ ಇವನ್ನೆಲ್ಲ ಕಲಿಯಲು ಬಹಳ ವರ್ಷಗಳು ಬೇಕು. ಅದರೆ ನಮ್ಮ ವಿಠ್ಠೂವಂತಹ ನಾಯಿ ಬಹಳ ಬೇಗನೇ ಕಲಿತುಬಿಡುತ್ತದೆ. ಅದಕ್ಕೇ ಬಹಳ ವರ್ಷ ಬದುಕುವುದಿಲ್ಲ'. ಎಂಥ ಮಾತು ! ಒಂದು ನಾಯಿ ಹತ್ತು-ಹನ್ನೆರಡು ವರ್ಷದಲ್ಲಿ ಕಲಿಯಬಹುದಾದ ಎಲ್ಲ ಒಳ್ಳೆಯ ಗುಣಗಳನ್ನು ಕಲಿಯಲು ಮನುಷ್ಯನಿಗೆ ಎಪ್ಪತ್ತು-ಎಂಬತ್ತು ವರ್ಷ ಬೇಕಾಗುತ್ತದೆಯೇ? ಕೆಲವರಿಗೆ ಅಷ್ಟು ವರ್ಷ ಕಳೆದರೂ ಈ ಗುಣಗಳು ಅಂಟುವುದಿಲ್ಲವಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.